ಅಡುಗೆ ಮಾಡುವವರಿಗಾಗಿ ಇಲ್ಲಿವೆ 11 ಸಕ್ಕತ್ ಸಲಹೆಗಳು

– ಪ್ರತಿಬಾ ಶ್ರೀನಿವಾಸ್.

ಅಡುಗೆ ಮನೆಯನ್ನು ಚೊಕ್ಕವಾಗಿಡಲು ಹಾಗೂ ಅಡುಗೆಯ ಕೆಲಸವನ್ನು ಸುಲಬವಾಗಿಸಲು ಇದೋ ಇಲ್ಲಿದೆ‌ ಕೆಲವು ಸಲಹೆಗಳು…

1. ತೊಗರಿಬೇಳೆಯನ್ನು ಬೇಯಿಸುವಾಗ ಒಂದು ಚಮಚ ಅಡುಗೆ ಎಣ್ಣೆಯನ್ನು ಹಾಕಿದರೆ ತೊಗರಿಬೇಳೆ ಉಕ್ಕುವುದಿಲ್ಲ ಮತ್ತು ಚೆನ್ನಾಗಿ ಬೇಯುತ್ತದೆ.

ತೊಗರಿ ಬೇಳೇ

2. ಇಡೀ ಆಲೂಗಡ್ಡೆಯನ್ನು ಉಪ್ಪು ಹಾಕಿ ಬೇಯಿಸಿದರೆ ಸಿಪ್ಪೆಯನ್ನು ಸುಲಬವಾಗಿ ತೆಗೆಯಬಹುದು.

3. ಹಾಲನ್ನು ಕಾಯಿಸುವ ಪಾತ್ರೆಯಲ್ಲಿ ಮೊದಲು ನೀರಿನ ತೇವ ಇದ್ದು ಆಮೇಲೆ ಹಾಲು ಕಾಯಿಸಿದರೆ, ಹಾಲಿನ ಕೆನೆ ಪಾತ್ರೆಗೆ ಅಂಟುವುದಿಲ್ಲ ಹಾಗು ಸುಲಬವಾಗಿ ಪಾತ್ರೆ ತೊಳೆಯಬಹುದು. ಹಾಗಾಗಿ, ಪಾತ್ರೆಯನ್ನು ಒಮ್ಮೆ ನೀರಿನಲ್ಲಿ ತೊಳೆದು ಆಮೇಲೆ ಅದಕ್ಕೆ ಹಾಲನ್ನು ಹಾಕಿ ಕಾಯಿಸುವ ಅಬ್ಯಾಸ ಇಟ್ಟುಕೊಳ್ಳಿ.

ಹಾಲು ಕಾಯಿಸಿವುದು

4. ಕೆಲವೊಮ್ಮೆ ಅಡುಗೆ ಮಾಡುವಾಗ ತಿಳಿಯದೆ ಸಾಂಬಾರಿಗೆ ಜಾಸ್ತಿ ಉಪ್ಪು ಹಾಕಿ ಬಿಡುತ್ತೇವೆ. ಉಪ್ಪು ಜಾಸ್ತಿ ಆದ ಹೊತ್ತಿನಲ್ಲಿ ಆಲೂಗಡ್ಡೆಯನ್ನು 2 ಬಾಗ ಮಾಡಿ ಹಾಕಿದರೆ ಉಪ್ಪಿನ ಅಂಶ ಕಡಿಮೆ ಆಗುತ್ತದೆ.

5. ಅಡುಗೆ ಮಾಡಲೆಂದು ಕತ್ತರಿಸಿಟ್ಟ ಬದನೆಕಾಯಿ ಕಪ್ಪಾಗುತ್ತಿದ್ದರೆ ಹೀಗೆ ಮಾಡಿ – ನೀರಿನ ಜೊತೆ 2 ಚಮಚ ಹಾಲು ಹಾಕಿ ಕತ್ತರಿಸಿಟ್ಟ ಬದನೆಕಾಯಿಯನ್ನು ನೆನೆಸಿಡಿ, ಆಗ ಅದು ಕಪ್ಪಾಗುವುದಿಲ್ಲ.

6. ವಡೆ, ಚಕ್ಕುಲಿಯಂತಹ ಪದಾರ‍್ತಗಳನ್ನು ಬಿಸಿ ಎಣ್ಣೆಯಲ್ಲಿ ಕರಿಯುವಾಗ ಎಣ್ಣೆ ಸಿಡಿಯುತ್ತಿದ್ದರೆ ಅದಕ್ಕೆ 1 ಚಮಚ ತುಪ್ಪ ಹಾಕಿ. ಆಗ ಎಣ್ಣೆ ಸಿಡಿಯುವುದಿಲ್ಲ.

7. ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುವುದು ಸಾಮಾನ್ಯ. ಕಣ್ಣೀರು ಇಲ್ಲದೆ ಈರುಳ್ಳಿಯನ್ನು ಹೆಚ್ಚಬೇಕೆಂದರೆ ಈರುಳ್ಳಿ ಹೆಚ್ಚುವ 15 ನಿಮಿಶ ಮೊದಲು ಅದನ್ನು ತಣ್ಣೀರಿನಲ್ಲಿ ನೆನೆಸಿಡಿ. ತಣ್ಣೀರು, ಓಡಿಸಲಿದೆ ಈರುಳ್ಳಿಯಂದ ಬರುವ ಕಣ್ಣೀರು!

ಈರುಳ್ಳಿ ಹೆಚ್ಚುವುದು

8. ಇರುವೆ ಹಾಗೂ ನೊಣಗಳು ಮನೆಯಲ್ಲಿ ಇದ್ದರೆ ತುಂಬಾ ಕಿರಿ ಕಿರಿ ಅನಿಸುತ್ತದೆ. ಅದಕ್ಕೆ ನೆಲ ಒರೆಸುವ ನೀರಿಗೆ ಕರ‍್ಪೂರ ಹಾಕಿ ನೆಲ ಒರೆಸಿದರೆ ಮನೆಯಲ್ಲಿ ನೊಣಗಳ ಕಾಟ ಕಡಿಮೆಯಾಗುತ್ತದೆ. ಅದೇ ಬಗೆಯಲ್ಲಿ ನೆಲ ಒರೆಸುವಾಗ ನೀರಿಗೆ ಅರಿಶಿನ ಪುಡಿ ಹಾಕಿ ಒರೆಸಿದರೆ ಇರುವೆಗಳೂ ಸುಳಿಯುವುದಿಲ್ಲ.

9. ಸಕ್ಕರೆ ಕಂಡರೆ ಇರುವೆಗೆ ಎಲ್ಲಿಲ್ಲದ ಒಲವು. ಸಕ್ಕರೆ ಡಬ್ಬ‌ ಇಟ್ಟಲ್ಲಿ ಇರುವೆಗಳ ದಂಡು ಮುತ್ತುವುದು ತುಂಬಾ ಸಾಮಾನ್ಯ. ಅಡುಗೆ ಮನೆಗೆ ಇರುವೆ ನುಗ್ಗಿದರಂತೂ ದೊಡ್ಡ ತಲೆನೋವು. ಸಕ್ಕರೆ ಡಬ್ಬಕ್ಕೆ ಇರುವೆಗಳು ಬರುವುದನ್ನು ತಡೆಯಲು 6-7 ರಶ್ಟು ಲವಂಗವನ್ನು ಸಕ್ಕರೆ ಡಬ್ಬಕ್ಕೆ ಹಾಕಿಬಿಡಿ, ಅಶ್ಟೆ.

10. ಗ್ಯಾಸ್ ಸ್ಟವ್‍ನ ಬಿಡಿಬಾಗಗಳನ್ನು ಮತ್ತು ಮಿಕ್ಸಿಯನ್ನು ತೊಳೆಯುವಾಗ ಚೂರು ಅಡುಗೆಸೋಡ ಹಾಕಿ ಉಜ್ಜಿದರೆ ಅವು ಪಳಪಳ ಹೊಳೆಯುತ್ತವೆ. ಹಾಗೆಯೇ, ಬಿಸಿ ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಅಡುಗೆ ಮನೆಯ ಟೈಲ್ಸ್ ಒರೆಸಿದರೆ ನೆಲ ಹೊಳೆಯುತ್ತದೆ.

11. ಕಸದ ಬುಟ್ಟಿಯಲ್ಲಿ ತುಂಬಾ ಕೆಟ್ಟ ವಾಸನೆ ಬರುತ್ತಿದ್ದರೆ ಬುಟ್ಟಿಗೆ 2 ಚಮಚ ಅಡುಗೆ ಸೋಡ ಹಾಕಿ ಸಾಕು, ಅದರ ವಾಸನೆ ಹೋಗುತ್ತದೆ.

(ಚಿತ್ರ ಸೆಲೆ: wikimedia/Sugar antpixabay/onion, pixabay/milk, pixabay/dal)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: