ಪ್ರೆಂಚ್ ಕುದುರೆ “ಕ್ಯಾಪ್ಚರ್” ರಸ್ತೆ ದೊರೆ ಆಗಬಲ್ಲುದೇ?

– ಜಯತೀರ‍್ತ ನಾಡಗವ್ಡ.

ಬಲುದಿನಗಳಿಂದ ಬೀದಿಗಿಳಿಯಲು ಅಣಿಗೊಂಡಿದ್ದ ರೆನೋರವರ ಕ್ಯಾಪ್ಚರ್ ಬಂಡಿ ಕೊನೆಗೂ ಹೊರಬಂದಿದೆ. ಇದನ್ನು ಕ್ರಾಸೋವರ್‌ನಂತೆ ಕಾಣುವ ಆಟೋಟದ ಬಳಕೆ ಬಂಡಿಯೆನ್ನಲಡ್ಡಿಯಿಲ್ಲ(SUV). ಕಳೆದ ಒಂದೆರಡು ವರುಶಗಳಲ್ಲಿ ಯಾವುದೇ ಹೊಸ ಬಂಡಿಯನ್ನು ರೆನೋ ಬೀದಿಗಿಳಿಸಿರಲಿಲ್ಲ. ಈ ಬರದಿಂದ ಹೊರಬಂದು ಕ್ಯಾಪ್ಚರ್(Captur) ಬಂಡಿಯನ್ನು ಬಾರತಕ್ಕೆ ಪರಿಚಯಿಸಿದೆ. ಕ್ಯಾಪ್ಚರ್ ಬಂಡಿ ರೆನೋದವರಿಗೆ ಹೊಸದೇನಲ್ಲ, ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರುಗಳಿಸಿರುವ ಈ ಬಂಡಿಯನ್ನು ಬಾರತದಲ್ಲೂ ತಂದು,ಯುರೋಪ್‌ನ ಗೆಲುವನ್ನೇ ಮರುಕಳಿಸುವ ಗುರಿ. ಬನ್ನಿ ಹಾಗಿದ್ದರೆ, ರೆನೋ ಕ್ಯಾಪ್ಚರ್ ಬಂಡಿಯ ಮೇಲೆ ಒಂದು ಕಿರು ನೋಟ ಹಾಯಿಸೋಣ.

ಬಿಣಿಗೆ ಮತ್ತು ಸಾಗಣಿ(Engine and Transmission):

ಕ್ಯಾಪ್ಚರ್ ಬಂಡಿಯ ಪೆಟ್ರೋಲ್ ಮತ್ತು ಡೀಸೆಲ್ ಬಿಣಿಗೆಗಳೆರಡೂ ಹೊಸದಾಗಿ ಬೆಳವಣಿಗೆಗೊಳಿಸಿದ್ದಲ್ಲ. ಡಸ್ಟರ್‌ ಬಂಡಿಯಲ್ಲಿ ಕಂಡುಬರುವ ಹೆಚ್4ಕೆ(H4K) ಪೆಟ್ರೋಲ್ ಮತ್ತು ಕೆ9ಕೆ(K9K) ಡೀಸೆಲ್ ಬಿಣಿಗೆಗಳು ಕ್ಯಾಪ್ಚರ್‌ನಲ್ಲಿರಲಿವೆ. ಹೆಚ್4ಕೆ ಬಿಣಿಗೆ 1.5 ಲೀಟರ್ ಅಳತೆಯದ್ದು, ಇದು 106 ಪಿಎಸ್ ಕುದುರೆಬಲದ ಕಸುವು ಹಾಗೂ 142 ನ್ಯೂಟನ್ ಮೀಟರ್ ತಿರುಗುಬಲ ನೀಡಿದರೆ, ಡೀಸೆಲ್‌ನ 1.5 ಲೀಟರ್ ಕೆ9ಕೆ ಬಿಣಿಗೆ 110 ಪಿಎಸ್ ಕುದುರೆಬಲದ ಕಸುವು ನೀಡಿ, 240 ನ್ಯೂಟನ್ ಮೀಟರ್ ತಿರುಗುಬಲ ಉಂಟು ಮಾಡುತ್ತದೆ. ಪೆಟ್ರೋಲ್ ಬಿಣಿಗೆ ಜೊತೆ 5-ವೇಗದ ಹಾಗೂ ಡೀಸೆಲ್ ಬಿಣಿಗೆ ಜೊತೆ 6-ವೇಗದ ಓಡಿಸುಗನ ಹಿಡಿತದ ಸಾಗಣಿ ಜೋಡಿಸಲಾಗಿದೆ.

ಮೈಮಾಟ:

ಕ್ಯಾಪ್ಚರ್ ನೋಡುತ್ತಿದ್ದಂತೆ ಇದೊಂದು ಗಟ್ಟಿಮುಟ್ಟಾದ ಆಟೋಟದ ಬಂಡಿಯೆಂದು ಹೇಳಬಹುದು.ಡಸ್ಟರ್ ಬಂಡಿಯನ್ನೇ ಮೂಲವಾಗಿಟ್ಟು ಇದನ್ನು ತಯಾರಿಸಲಾಗಿದ್ದರೂ, ಎಲ್ಲಿಯೂ ಡಸ್ಟರ್ ಹೋಲಿಕೆ ಕಂಡು ಬರುವುದಿಲ್ಲ. ಆಯಗಳ ಬಗ್ಗೆ ಮೊದಲನೆಯದಾಗಿ ನೋಡಿದರೆ, ಕ್ಯಾಪ್ಚರ್ 210 ಮಿಲಿ ಮೀಟರ್ ಎತ್ತರದ ನೆಲತೆರವು(Ground Clearance) ಪಡೆದುಕೊಂಡಿದೆ. ಇದೇ ಸಾಲಿಗೆ ಸೇರಲ್ಪಡುವ ಹಲವು ಕೂಟಗಳ ಯಾವುದೇ ಮಾದರಿ ಕಾರುಗಳಲ್ಲೂ ಇಶ್ಟೊಂದು ಎತ್ತರದ ನೆಲತೆರವು ಕಾಣಸಿಗುವುದಿಲ್ಲ. ಇದು ಕ್ಯಾಪ್ಚರ್ ಬಂಡಿಯ ಗಮನಸೆಳೆಯುವ ಅಂಶ ಆಗಲಿದೆ. 17 ಇಂಚಿನ ಗಾಲಿ ಮತ್ತು ಅದಕ್ಕೆ ತಕ್ಕಂತೆ ಹಿರಿದಾದ ಗಾಲಿ ಕಮಾನುಗಳು(Wheel Arches) ಕ್ಯಾಪ್ಚರ್‌ನ ಅಂದ ಹೆಚ್ಚಿಸಿವೆ. ದೊಡ್ಡದಾದ LED ಮುಂದೀಪಗಳು(head lamps), ಇದಕ್ಕೆ ಜೊತೆಯಾಗಿ ಔಡಿ ಕಾರುಗಳಲ್ಲಿರುವಂತೆ ಪುಟಾಣಿ ದೀಪದ ಸಾಲು. ಬಂಡಿಯನ್ನು ಎಡ-ಬಲಕ್ಕೆ ತಿರುಗಿಸಲು ತೋರುಕ(Indicator) ಆನ್ ಮಾಡಿದಾಗ ಈ ಸಾಲು ದೀಪಗಳು ಹೊತ್ತಿಕೊಳ್ಳುವುದು-ಆರುವುದು ಮಾಡುತ್ತಲೇ ಇರುತ್ತವೆ. ನೀರಲ್ಲಿ ಕಲ್ಲೆಸೆದಾಗ ಒಂದರ ಮೇಲೊಂದು ಅಲೆಗಳು ಉಂಟಾಗುವ ಕಿರುದೆರೆಯಂತೆ(Ripple) ಹಿಂಬದಿಯ LED ದೀಪಗಳು ಹೊಳೆಯುತ್ತ ನೋಡುಗರಿಗೆ ಎದ್ದು ಕಾಣುತ್ತವೆ.

ಬಂಡಿಯ ಆಯಗಳು ಇಂತಿವೆ. ಉದ್ದ 4329 ಮಿ.ಮೀ., ಅಗಲ 1813 ಮಿ.ಮೀ, ಎತ್ತರ 1619 ಮಿ.ಮೀ ಮತ್ತು ಗಾಲಿಗಳ ನಡುವಿನ ದೂರ 2673 ಮಿ.ಮೀ. 392 ಲೀಟರ್‌ಗಳಶ್ಟು ದೊಡ್ಡ ಸರಕು ಚಾಚಿನಲ್ಲಿ(Boot Space) 3-4 ದೊಡ್ಡ ಚೀಲಗಳು ಸಲೀಸಾಗಿ ಕುಳಿತುಕೊಳ್ಳುತ್ತವೆ. ಉರುವಲು ಚೀಲದ ಗಾತ್ರ 50 ಲೀಟರ್‌ಗಳಾಗಿರುತ್ತದೆ. ಮುತ್ತಿನಂತ ಬಿಳಿ, ಕಿತ್ತಳೆ, ಬೂದು, ಕಂದು ಮತ್ತು ಬೆಳ್ಳಿ – ಹೀಗೆ 5 ಬಗೆಯ ಬಣ್ಣಗಳಲ್ಲಿ ಕ್ಯಾಪ್ಚರ್ ದೊರಕಲಿದೆ. ಇದಲ್ಲದೇ ಮೇಲ್ಸೂರನ್ನು(Roof), ಕಪ್ಪು ಇಲ್ಲವೇ ಬಿಳಿ ಬಣ್ಣಗಳಿಗೆ ಬದಲಾಯಿಸಿ, ಕೊಳ್ಳುಗರು ತಮಗಿಶ್ಟದ ಇಬ್ಬಗೆ ಬಣ್ಣಗಳಲ್ಲಿ(Dual Tone) ಪಡೆಯಬಹುದು. ಕೊಳ್ಳುಗರು ಬಂಡಿಗೆ ಕೆಲವು ಆಯ್ದ ಸ್ಟಿಕ್ಕರ್ ಹಚ್ಚಿಸಿಕೊಂಡು ತಮಗಿಶ್ಟದಂತೆ ಒಗ್ಗಿಸಿಕೊಳ್ಳಬಹುದಾದ(Customize) ಆಯ್ಕೆಯನ್ನು ನೀಡಲಾಗಿದೆ.

ಕ್ಯಾಪ್ಚರ್ ಒಳಹೊಕ್ಕರೆ, ಅಚ್ಚುಕಟ್ಟಾದ ಈಡುಗಾರಿಕೆ(Design) ಕಂಡು ಬರುತ್ತದೆ. ಚಿಟ್ಟೆಯಾಕಾರದ ತೋರುಮಣೆ(Dashboard) ನೋಡಲು ಚೆಂದವಾಗಿದೆ. ಡಸ್ಟರ್, ಕ್ವಿಡ್ ಬಂಡಿಗಳಲ್ಲಿ ಕಾಣಸಿಗುವ 7 ಇಂಚಿನ ತಿಳಿನಲಿ ಏರ‍್ಪಾಟು(Infotainment System), ಕ್ಯಾಪ್ಚರ್ ಬಂಡಿಯಲ್ಲೂ ಅಳವಡಿಸಲಾಗಿದೆ. ಹಾಡು, ರೇಡಿಯೋ, ಕರೆ, ಸಂದೇಶ, ದಾರಿತೋರುಕದಂತ(Navigation) ಎಲ್ಲ ಮಾಹಿತಿಗಳನ್ನು ಒದಗಿಸುವ ಈ ತಿಳಿನೆಲೆ ಏರ‍್ಪಾಟಿಗೆ ನಿಮ್ಮ ಅಲೆಯುಲಿಯನ್ನು ಜೋಡಿಸಿಕೊಳ್ಳಬಹುದಾದರೂ ಅಂಡ್ರಾಯ್ಡ್ ಆಟೋ(Android Auto), ಆಪಲ್ ಕಾರ್‌ಪ್ಲೇ(Apple CarPlay) ನಡೆಸೇರ‍್ಪಾಟುಗಳು(OS) ಇದರಲ್ಲಿ ಇಲ್ಲದೇ ಇರುವುದು ದೊಡ್ಡ ಕೊರತೆ. ತಂಪಾದ ಸರಕುಗೂಡು(Cooled Glovebox) ಸೇರಿದಂತೆ ಇತರೆ ಸರಕುಗೂಡುಗಳು ಚಿಕ್ಕದಾಗಿರುವುದರಿಂದ ಬಂಡಿಯ ಒಳಗೆ ಹೆಚ್ಚಿನ ವಸ್ತುಗಳನ್ನಿಡಲಾಗದು. ಮುಂದಿನ ಹಾಗೂ ಹಿಂದಿನ ಬಾಗಿಲುಗಳಿಗೆ ಬಾಟಲಿ ಸೇರುವೆಗಳನ್ನು(Bottle Holder) ಒದಗಿಸಲಾಗಿದೆ. ಕೂರುಮಣೆಗೆ ಒಳ್ಳೆಯ ಗುಣಮಟ್ಟದ ನಯವಾದ ಕೂರುಮಣೆಯ ಜವಳಿ(Seat Upholstery) ಹೊಂದಿಸಲಾಗಿದೆ. ಹಿಂಬದಿಯಲ್ಲೂ ಕುಳಿರ‍್ಗಾಳಿ ಏರ‍್ಪಾಟಿನ ಕಿಂಡಿಗಳನ್ನು(AC Vents) ನೀಡಿದ್ದಾರೆ. ಹಿಂಬದಿಯ ತೋಳು ಊರುಕದಲ್ಲಿ(Arm Rest) ಕಪ್ ಸೇರುವೆಗಳಿದ್ದು, ಕಾಪಿ/ಟೀ ಕಪ್‌ಗಳನ್ನು ಇದರಲ್ಲಿಟ್ಟು ಸಾಗಬಹುದು. ಮುಂಬದಿಯ ಓಡಿಸುಗನ ಬಳಿಯಿರುವ ತೋಳು ಊರುಕವನ್ನು ಮಡಚಲಾಗದು, ಕೆಲವೊಮ್ಮೆ ಇದು ಕಿರಿಕಿರಿ ಎನ್ನಿಸಬಹುದು. ಹಿಂಬದಿಯ ಪಯಣಿಗರಿಗೆ ಕೂರಲು ತಕ್ಕಮಟ್ಟಿಗೆ ಜಾಗವಿದೆ, ಆದರೂ ಇನ್ನೂ ಕೊಂಚ ಜಾಗ ಒದಗಿಸಬಹುದಿತ್ತೆನೋ ಎಂದು ಅನ್ನಿಸದಿರದು. ಇಂದಿನ ಹೆಚ್ಚಿನ ಆಟೋಟದ ಬಳಕೆಯ ಬಂಡಿಗಳಲ್ಲಿ ಕಂಡುಬರುವ ಗುಂಡಿ ಮೂಲಕ ತೆಗೆದು-ಮುಚ್ಚಬಲ್ಲ ಬೆಳಕಿಂಡಿ(Sunroof), ಕ್ಯಾಪ್ಚರ್ ಬಂಡಿಯಲ್ಲಿಲ್ಲ. ಗುರುತಿನ ಚೀಟಿ ಇಲ್ಲವೇ ಕ್ರೆಡಿಟ್ ಕಾರ‍್ಡ್ ನಂತಿರುವ ಬೀಗದ ಕೈ ಗಮನ ಸೆಳೆಯುತ್ತದೆ. ಕೂಡಣಕ್ಕೆ USB ಕಿಂಡಿ, ಹಿಂಬದಿಯಲ್ಲೂ ಅಲೆಯುಲಿ ಮುಂತಾದ ಚೂಟಿಗಳಿಗೆ ಹುರುಪು ತುಂಬಲು ಕಿಂಡಿ ನೀಡಲಾಗಿದೆ. 4-ಉಲಿಕಗಳುಳ್ಳ ಹಾಡುಗಾರಿಕೆ ಪೆಟ್ಟಿಗೆ(4-Speaker Music System) ಕ್ಯಾಪ್ಚರ್‌ಗೆ ಅಳವಡಿಸಲಾಗಿದೆ.

ವಿಶೇಶ ಮತ್ತು ಕಾಪಿನ ಏರ‍್ಪಾಟುಗಳು:

ಕ್ಯಾಪ್ಚರ್‌ನ ಸುಯ್ಯ್ ಅಂಕೆ ಏರ‍್ಪಾಟು ಹೆದ್ದಾರಿಗಳಲ್ಲಿ ದೂರದ ಪಯಣಗಳಿಗೆ ನೆರವಿಗೆ ಬರುತ್ತದೆ. ಗಾಳಿ ಚೀಲಗಳು(Air Bags), ಸಿಲುಕಿನ ತಡೆತದ ಏರ‍್ಪಾಟು(Anti-Lock Braking System), ನಿಲುಗಡೆಗೆ ಹಿಂಬದಿಯ ತಿಟ್ಟಕ(Reverse Parking Camera), ಗುಡ್ಡ-ಬೆಟ್ಟಗಳನ್ನೇರುವಾಗ ನೆರವು ಒದಗಿಸುವ ಏರ‍್ಪಾಟು (Hill Start System). ಇದಲ್ಲದೇ ಮುಂಬದಿಯ ಓಡಿಸುಗ ಮತ್ತು ಪಯಣಿಗನ ಎತ್ತರಕ್ಕೆ ತಕ್ಕಂತೆ ಜೋಡಿಸಬಹುದಾದ ಕೂರು ಪಟ್ಟಿ(Front passengers height adjustable seat belts), ಕದಲ್ಗಾಪು(Immobilizer), ಓಡಿಸುಗನಿಗೆ ತಕ್ಕಂತೆ ವಾಲಿಸಬಹುದಾದ ತಿಗುರಿ(Tilt Adjustable Steering) ಮುಂತಾದವುಗಳನ್ನು ಕ್ಯಾಪ್ಚರ್ ಬಂಡಿಯಲ್ಲಿ ಜೋಡಿಸಲಾಗಿದೆ. ತನ್ನಿಂದ ತಾನೇ ಕೆಲಸ ಮಾಡಬಲ್ಲ ಒರೆಸುಕಗಳು(automatic wipers), ಮುಂದೀಪಗಳು(automatic headlamps) ಮತ್ತು ಗಾಳಿಪಾಡು ಹಿಡಿತದಲ್ಲಿಡುವ ಏರ‍್ಪಾಟು (auto climate control) ಕೂಡ ಕ್ಯಾಪ್ಚರ್ ಬಂಡಿಯಲ್ಲಿರಲಿವೆ.

ಪಯ್ಪೋಟಿ ಮತ್ತು ಹೋಲಿಕೆ:

ಕ್ಯಾಪ್ಚರ್ ಬಂಡಿ ಹ್ಯುಂಡಾಯ್ ಕ್ರೇಟಾ ಮತ್ತು ಜೀಪ್ ಕಂಪಾಸ್‌ಗಳೊಂದಿಗೆ ಸೆಣಸಲಿದೆ. ಬಿಣಿಗೆಗಳತ್ತ ಕಣ್ಣು ಹಾಯಿಸಿದಾಗ ಕ್ರೇಟಾ ಮತ್ತು ಕಂಪಾಸ್ ಬಂಡಿಗಳ ಬಿಣಿಗೆಗಳು ಹೆಚ್ಚಿನ ಕಸುವು ಮತ್ತು ತಿರುಗುಬಲ ನೀಡಿ ಬಲಶಾಲಿ ಎನ್ನಿಸುತ್ತವೆ. ಸಾಗಣಿಗಳ ಹೋಲಿಕೆಯಲ್ಲಿ ಮೂರು ಬಂಡಿಗಳು ಒಂದೇ ಮಟ್ಟದಲ್ಲಿವೆ, ಆದರೆ ಕ್ರೇಟಾದಲ್ಲಿ ತನ್ನಿಡಿತದ ಸಾಗಣಿಯ ಆಯ್ಕೆಯನ್ನು ಕೂಡ ನೀಡಲಾಗಿದೆ.

ಆಯಗಳ ಹೋಲಿಕೆ ನೋಡಿದಾಗ, ಕ್ರೇಟಾಗಿಂತ ಹೆಚ್ಚು ಉದ್ದ, ಅಗಲವಾಗಿರುವ ಕ್ಯಾಪ್ಚರ್, ಕಂಪಾಸ್ ಬಂಡಿಗಿಂತ ತುಸು ಕಿರಿದೆನಿಸುತ್ತದೆ. ಕ್ರೇಟಾ ಮತ್ತು ಕಂಪಾಸ್ ಬಂಡಿಗಳು ಕ್ಯಾಪ್ಚರ್‌ಗಿಂತ ಕೊಂಚ ಎತ್ತರವಾಗಿವೆ. ಕ್ಯಾಪ್ಚರ್ ಬಂಡಿ, ಉಳಿದೆರಡು ಬಂಡಿಗಳಿಗಿಂತ ಹೆಚ್ಚಿನ ಗಾಲಿಗಳ ನಡುವಿನ ದೂರ ಹೊಂದಿದೆ.

ಬೆಲೆ:

ಮೆಲ್ಲಗೆ ಬಾರತೀಯ ಕೊಳ್ಳುಗರ ನಾಡಿಮಿಡಿತ ಅರಿಯುತ್ತಿರುವ ರೆನೋ ಕೂಟ, ಕ್ಯಾಪ್ಚರ್‌ಗೆ 10 ರಿಂದ 14 ಲಕ್ಶ ಬೆಲೆ ನಿಗದಿಪಡಿಸಿದೆ. ಪೆಟ್ರೋಲ್, ಡೀಸೆಲ್‌ನ ವಿವಿದ ಬಗೆಗಳ ಬೆಲೆಯನ್ನು ಕೆಳಕಂಡ ಪಟ್ಟಿಯಲ್ಲಿ ಕಾಣಬಹುದು. ಒಂದೊಮ್ಮೆ ಕ್ರ‍ೇಟಾ ಮತ್ತು ಕಂಪಾಸ್ ಬಂಡಿಗಳ ಬೆಲೆಗೆ ಹೋಲಿಸಿದರೆ, ಕ್ಯಾಪ್ಚರ್ ತುಸು ಅಗ್ಗವೆನಿಸುತ್ತದೆ. ಕ್ಯಾಪ್ಚರ್ ಬಾರತದ ಮಾರುಕಟ್ಟೆಯನ್ನು ಕ್ಯಾಪ್ಚರ್ ಮಾಡಲಿದೆಯೇ? ಎಂಬುದನ್ನು ಕಾದು ನೋಡಬೇಕು.

(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com, renault.co.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: