ವಿಶ್ವದ ಅತಿ ಚಿಕ್ಕ ವಾರಪತ್ರಿಕೆ – ಟೆರ‍್ರಾ ನೊಸ್ಟ್ರಾ

– ಕೆ.ವಿ.ಶಶಿದರ.

ಟೆರ್ರಾ ನೊಸ್ಟ್ರ್ರಾ

ಪ್ರತಿದಿನ ಬೆಳಗ್ಗೆ, ಪ್ರಪಂಚದಾದ್ಯಂತ ಕೋಟ್ಯಾಂತರ ಮಂದಿ, ಹಲವಾರು ಬಗೆಯ ಸುದ್ದಿಗಳನ್ನು ಓದಿ ಅರಗಿಸಿಕೊಳ್ಳುತ್ತಾರೆ. ಕೆಲವರಂತೂ ಬೆಳಗಿನ ಸಮಯದಲ್ಲಿ ದಿನಪತ್ರಿಕೆ ಕಾಣದಿದ್ದಲ್ಲಿ ಚಡಪಡಿಸುತ್ತಾರೆ. ಅಂದಿನ ದಿನದ ಕೆಲಸಗಳೆಲ್ಲಾ ಹಾಳು. ಪ್ರತಿಕೆಯ ಗೀಳನ್ನು ಹಚ್ಚಿಕೊಂಡವರು ಬಹಳಶ್ಟಿದ್ದಾರೆ.

ಕೆಲವರು ಉಪಹಾರದ ವೇಳೆ ದಿನಪತ್ರಿಕೆಗಳನ್ನು ಓದಿದರೆ ಮತ್ತೆ ಕೆಲವರು ಕೆಲಸ ಮಾಡುವ ಜಾಗಕ್ಕೆ ತೆರಳುವ ಹೊತ್ತಿನಲ್ಲಿ ಓದುತ್ತಾರೆ. ಎಶ್ಟೇ ಸ್ಮಾರ‍್ಟ್ ಪೋನ್‍ಗಳು ಬಂದರೂ ಸುದ್ದಿಹಾಳೆಗಳನ್ನು ಓದುವ ಮಜ ಇ-ಓದಿನಲ್ಲಿ ದೊರಕುವುದಿಲ್ಲ ಎಂಬುದು ಹಲವರ ಅಬಿಪ್ರಾಯ. ಆದರೆ, ತೋರುಬೆರಳ ತುದಿಯಶ್ಟು ಪುಟ್ಟದಾದ ವಾರಪತ್ರಿಕೆಯನ್ನು ಎಶ್ಟು ಮಂದಿ ಓದಿದ್ದಾರೆ ಅತವಾ ಕಂಡಿದ್ದಾರೆ?

ವಿಶ್ವ ಸಾಮಾಜಿಕ ನ್ಯಾಯದ ದಿನದ ನೆನಪಿಗಾಗಿ ಈ ವಿಶೇಶ ಪತ್ರಿಕೆಯನ್ನು ಮುದ್ರಿಸಲಾಯಿತು

ವರ‍್ಲ್ಡ್ ರೆಕಾರ‍್ಡ್ ಅಕಾಡೆಮಿಯ ಪ್ರಕಾರ ವಿಶ್ವದಲ್ಲೇ ಅತಿ ಪುಟ್ಟ ವಾರಪ್ರತಿಕೆ ಎಂಬ ಕ್ಯಾತಿಯನ್ನು ಹೊಂದಿರುವುದು ಟೆರ‍್ರಾ ನೊಸ್ಟ್ರಾ ವಾರಪತ್ರಿಕೆ. ಇದರ ಅಳತೆ ಕೇವಲ 25 x 18 ಮಿಲಿಮೀಟರ್. ವಿಶ್ವ ಸಾಮಾಜಿಕ ನ್ಯಾಯದ ದಿನಕ್ಕೆ(20, ಪೆಬ್ರವರಿ 2012) ಹೊಂದುವಂತೆ ಈ ವಾರಪತ್ರಿಕೆಯನ್ನು ಪೋರ‍್ಚುಗಲ್‍ನ ಪೊಂಟಾ ಡೆಲ್ಗಾಡಾ ಸಿಟಿಯಿಂದ ಪ್ರಕಟಿಸಲಾಯಿತು.

ಈ ಪುಟ್ಟ ವಾರಪತ್ರಿಕೆ ಮುದ್ರಣವಾಗಿದ್ದು ಪೋರ‍್ಚುಗಲ್ ದ್ವೀಪ ಸಮೂಹದಲ್ಲಿನ ಅಜೊರೆಸ್ ಪ್ರಾಂತ್ಯದಲ್ಲಿರುವ ಸಾವೊ ಮಿಗುಯೆಲ್ ದ್ವೀಪದ ಪೊಂಟಾ ಡೆಲ್ಗಾಡಾದಲ್ಲಿ. ಸಾಮಾನ್ಯವಾಗಿ ಟೆರ‍್ರಾ ನೊಸ್ಟ್ರಾ ಪೊಂಟಾ ಡೆಲ್ಗಾಡಾದಿಂದ ಪ್ರಕಟವಾಗುತ್ತಿದ್ದದು ಟ್ಯಾಬ್ಲಾಯ್ಡ್ (ಸಣ್ಣ ಪತ್ರಿಕೆ) ರೂಪದಲ್ಲಿ.

ಸಾಮಾಜಿಕ ನ್ಯಾಯದ ದಿನದ ನೆನಪಿಗಾಗಿ, ಟೆರ‍್ರಾ ನೊಸ್ಟ್ರಾ ಪತ್ರಿಕೆಯ ಪ್ರಕಾಶಕರು ಒಂದು ನಿರ‍್ದಿಶ್ಟ ಆಕಾರದ ವಿಶೇಶ ವಾರಪತ್ರಿಕೆಯನ್ನು ಹೊರತರಲು ಆಲೋಚಿಸಿದ್ದರು. ಸಾವಿರಾರು ಪತ್ರಿಕೆಗಳನ್ನು ಅಚ್ಚು ಹಾಕಲು ಸಾಮಾನ್ಯವಾಗಿ ಮುಲ್ಲರ್ ಮಾರ‍್ಟಿನಿ ಕಂಪನಿಯ ಉಪಕರಣಗಳ ಏರ‍್ಪಾಟನ್ನು ಹೊಂದಿರುತ್ತಾರೆ. ಅದೇ ಏರ‍್ಪಾಟನ್ನು ಟೆರ‍್ರಾ ನೊಸ್ಟ್ರಾ ಪ್ರಕಾಶಕರೂ ಹೊಂದಿದ್ದರು. ಇರುವ ಉಪಕರಣಗಳನ್ನೇ ಬಳಸಿಕೊಂಡು ಅತಿ ಚಿಕ್ಕ ಪತ್ರಿಕೆಯನ್ನು ಅಚ್ಚುಹಾಕಿ ಹೊರಬಿಡಲಾಯಿತು.

ಬರಿಗಣ್ಣಿನಿಂದ ಈ ಪತ್ರಿಕೆಯನ್ನು ಓದಲು ಆಗುವುದಿಲ್ಲ, ಬೂತಗನ್ನಡಿ ಬೇಕು!

ಈ ವಿಶೇಶ ಆವ್ರುತ್ತಿಯ ಪ್ರಮುಕ ಶೀರ‍್ಶಿಕೆಯಾಗಿದ್ದುದು “ಎ ಹಗ್ ಟು ದ ವರ‍್ಲ್ಡ್”. ಅಲ್ಲದೇ, ಅಜೊರೆಸ್‍ನ ವಲಸಿಗರ ಬಗ್ಗೆ ಹಲವಾರು ಕತೆಗಳನ್ನೂ ಒಳಗೊಂಡಿತ್ತು. 32 ಪುಟಗಳ ಟೆರ‍್ರಾ ನೊಸ್ಟ್ರಾದ ಈ ಆವ್ರುತಿಯ ಬೆಲೆ 2.5 ಯೂರೊ. ಇದರಲ್ಲಿನ ಮುದ್ರಣವನ್ನು ಓದಲು ಆರರಿಂದ ಎಂಟು ಪಟ್ಟು ದೊಡ್ಡದಾಗಿಸುವ ಸಣ್ಣ ಬೂತ ಕನ್ನಡಿಯ ಅವಶ್ಯಕತೆಯಿದೆ.

ಈ ಪುಟ್ಟ ವಾರಪತ್ರಿಕೆಯ ಮಾರಾಟದಿಂದ ಬಂದ ಅಶ್ಟೂ ಹಣವನ್ನು, ಸ್ತಳೀಯ ಅಂಗವಿಕಲರಿಗೆ ಮೀಸಲಾದ ಸಂಸ್ತೆ ಅಸೋಸಿಕಾವ ಪೋರ‍್ಚುಗೀಸ ಡೆ ಡಿಪಿಸಿಯೆನ್ಟಸ್‍ ನ ಏಳಿಗೆಗೆ, ದೇಣಿಗೆಯಾಗಿ ನೀಡುವ ಸದುದ್ದೇಶವನ್ನು ಮುದ್ರಣ ಸಂಸ್ತೆ ಹೊಂದಿತ್ತು. ಈ ಅಂಗವಿಕಲರ ಸಂಸ್ತೆಯು ದೇಣಿಗೆಯಿಂದ ಬಂದ ಹಣವನ್ನು ಬಳಕೆ ಮಾಡಿಕೊಂಡು ಕಣ್ಣಿಲ್ಲದ ಲೇಕಕ ಪ್ರಾನ್ಸಿಸ್ಕೊ ಕ್ವೆರ‍್ಟಾರವರ ಸಾಹಿತ್ಯ ಕ್ರುತಿಗಳ ಪ್ರಕಟಣೆಯನ್ನು ಸಾದ್ಯವಾಗಿಸಿತು.

3000 ಪ್ರತಿಗಳಶ್ಟು ಮುದ್ರಣ ಕಂಡ ಈ ಪುಟ್ಟ ವಾರ ಪ್ರತಿಕೆ 18.27 x 25.35 ಎಂಎಂ (0.72 x 0.99 ಇಂಚು) ಅಳತೆಯಲ್ಲಿ ಪ್ರಕಾಶನದ ಬಾಗ್ಯ ಪಡೆಯಿತು. ಮೊದಲು ದೊಡ್ಡದಾಗಿ ಮುದ್ರಿಸಿ ಅದನ್ನು ಕುಗ್ಗಿಸಿ ಸಣ್ಣ ಪತ್ರಿಕೆ ಮಾಡಲು ವರ‍್ಲ್ಡ್ ರೆಕಾರ‍್ಡ್ ಅಕಾಡೆಮಿಯ ನಿಯಮದಲ್ಲಿ ಅವಕಾಶವಿಲ್ಲ. ಬರಿ ಕಣ್ಣಿನಿಂದ ಅತವಾ ಬೂತ ಕನ್ನಡಿಯ ಸಹಾಯದಿಂದ ಓದಲು ಸ್ಪುಟವಾಗಿ ಕಾಣುವಂತಿರಬೇಕು ಎಂಬುದು ಅದರ ನಿಯಮಗಳಲ್ಲಿ ಒಂದು.

ಪೆಬ್ರವರಿ 2012ರಲ್ಲಿ ನೋವಾ ಗ್ರಾಪಿಕಾದಲ್ಲಿ ಮುದ್ರಣ ಬಾಗ್ಯ ಪಡೆದ ಟೆರ‍್ರಾ ನೊಸ್ಟ್ರಾ ವಾರಪತ್ರಿಕೆಯ ತೂಕ ಕೇವಲ ಒಂದು ಗ್ರಾಂ. ಪೋರ‍್ಚುಗೀಸ್ ನುಡಿಯನ್ನು ಓದಬಲ್ಲ ಯಾರೇ ಆದರು ಈ ಪತ್ರಿಕೆಯನ್ನು ಓದಬಹುದು.

(ಮಾಹಿತಿ ಸೆಲೆ: worldrecordacademy.comeditorandpublisher.comguinnessworldrecords.comsplashcreations.net )
(ಚಿತ್ರ ಸೆಲೆ: worldrecordacademy.com,  editorandpublisher.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: