ಜರ‍್ಮನಿಯ ಕಡಲಿನಲ್ಲೊಂದು ದೀಪಸ್ತಂಬದ ಹೋಟೆಲ್

– ಕೆ.ವಿ.ಶಶಿದರ.

ರೊಟರ್ ಸ್ಯಾಂಡ್

ಜರ‍್ಮನಿಯಲ್ಲೇ ಒಂಟಿಯಾದ ಹೋಟೆಲ್ ಎಂದು ಪ್ರಕ್ಯಾತವಾಗಿರುವುದು ರೊಟರ್ ಸ್ಯಾಂಡ್ ಹೋಟೆಲ್. ಲೋಯರ್ ಸ್ಯಾಕ್ಸೊನಿಯ ಬ್ರೆಮೆರ‍್ಹವೆನ್ ಕಡಲತೀರದಿಂದ ಸುಮಾರು 30 ಮೈಲು ದೂರದ ಕಡಲ ನೀರಿನ ನಡುವಲ್ಲಿದೆ ಈ ಹೋಟೆಲ್. ಕಡಲ ದೀಪಸ್ತಂಬವನ್ನು ಹೋಟೆಲ್‍ನ ಅವಶ್ಯಕತೆಗೆ ತಕ್ಕಂತೆ ಹೊಸದಾಗಿಸಿ ಕಟ್ಟಲಾಗಿದೆ.

ಹಳೆಯದಾದ ಈ ಕಡಲ ದೀಪಸ್ತಂಬಕ್ಕೆ 130ಕ್ಕೂ ಹೆಚ್ಚು ವರ‍್ಶಗಳ ಇತಿಹಾಸವಿದೆ. ಇದರ ಉಪಯೋಗ ನಿಂತಮೇಲೆ ಹಲವಾರು ವರ‍್ಶಗಳ ಬಳಿಕ ಹೊಸದಾಗಿಸಿರುವ ರೊಟರ್ ಸ್ಯಾಂಡ್ ಹೋಟೆಲ್, ಕಳೆದ 15 ವರ‍್ಶಗಳಿಂದ ಅತಿತಿಗಳನ್ನು ಸ್ವಾಗತಿಸುತ್ತಿದೆ. 1885ರಲ್ಲಿ ಕಟ್ಟಲಾದ ಈ ಕಡಲ ದೀಪಸ್ತಂಬ ಅಂದಿನ ದಿನಕ್ಕೆ ತಾಂತ್ರಿಕವಾಗಿ ಅತಿ ವಿಸ್ಮಯಕಾರಿಯಾದ ಕಟ್ಟಡ. 22 ಮೀಟರ್ ಆಳದ ಸಮುದ್ರತಳದಲ್ಲಿ ಇದರ ಬುನಾದಿಯಿದೆ. ಇಶ್ಟು ಆಳದಲ್ಲಿ ಕಟ್ಟಲಾದ ಮೊದಲ ಕಟ್ಟಡ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಕೆಂಪು, ಬಿಳಿ, ಮತ್ತು ಕಪ್ಪು ಬಣ್ಣದ ಪಟ್ಟೆಗಳಿಂದ ಕೂಡಿದ ಈ ದೀಸಸ್ತಂಬವನ್ನು ಕಂಡಲ್ಲಿ ನಾವಿಕರ ಮುಕದಲ್ಲಿ ಮಂದಹಾಸ ಕಾಣುತ್ತಿತ್ತು. ಬಂದರು ನಗರ ತಲುಪುತ್ತಿರುವ ಮೊದಲ ಸೂಚನೆ ಇದಾಗಿತ್ತು.

ದೀಪಸ್ತಂಬ ಕೆಲಸ ನಿಲ್ಲಿಸಿತು. ಅದೇ ಹೊಸ ಹೋಟೆಲ್ ಆಯಿತು!

75ಕ್ಕೂ ಹೆಚ್ಚು ವರ‍್ಶಗಳ ಕಾಲ ಸಾವಿರಾರು ನಾವಿಕರಿಗೆ ದಾರಿದೀಪವಾಗಿದ್ದ ಈ ಕಡಲ ದೀಪಸ್ತಂಬದ ಸ್ಟೀಲ್ ಅಡಿಪಾಯ ಹಾಳಾದ್ದರಿಂದ 1964ರಿಂದಾಚೆಗೆ ರೊಟರ್ ಸ್ಯಾಂಡ್ ತನ್ನ ಕೆಲಸವನ್ನು ನಿಲ್ಲಿಸಿತು. ಜರ‍್ಮನಿಯ ಸ್ಮಾರಕಗಳ ಸಂರಕ್ಶಣಾ ಪ್ರತಿಶ್ಟಾನ (ಡಿಎಸ್‍ಡಿ) 1987ರಲ್ಲಿ ನಡೆಸಿದ ಕಟ್ಟಡದ ಅತ್ಯದ್ಬುತ ರಕ್ಶಣಾ ಕಾರ‍್ಯಾಚರಣೆಯಲ್ಲಿ ಈ 31 ಮೀಟರ್ ಎತ್ತರದ ರೊಟರ್ ಸ್ಯಾಂಡ್ ಕಡಲ ದೀಪಸ್ತಂಬವನ್ನು ಹೊಸದಾಗಿಸಿ ಪುನರ್ ಸ್ತಾಪಿಸಿತು.

1999ರಲ್ಲಿ ಕಡಲ ದೀಪಸ್ತಂಬದ ಹೋಟೆಲ್‍ಗೆ ಮೊಟ್ಟಮೊದಲ ಪ್ರವಾಸಿಗರೊಬ್ಬರು ಬಂದರು, ಅದಾದ ಬಳಿಕ ಈ ಹೋಟೆಲ್ ಪ್ರತಿದಿನ ಸಾವಿರಾರು ನೋಡುಗರನ್ನು ಬರಮಾಡಿಕೊಂಡಿದೆ. ರಾತ್ರಿಯಿಡೀ ಇದರಲ್ಲೇ ತಂಗಲು ಇಶ್ಟಪಟ್ಟವರ ಸಂಕ್ಯೆಯೂ ಬಹಳಶ್ಟಿದೆ. ಮೊದಮೊದಲು ದೀಪಸ್ತಂಬದ ರಕ್ಶಕರನ್ನು ಮೇಲಕ್ಕೇರಿಸಲು ದೊಡ್ಡ ದೊಡ್ಡ ಬುಟ್ಟಿಗಳಿಗೆ ಹಗ್ಗವನ್ನು ಕಟ್ಟಿ ಅದರಲ್ಲಿ ಅವರನ್ನು ಕೂಡಿಸಿ ಮೇಲಕ್ಕೆ ಎಳೆದುಕೊಳ್ಳಲಾಗುತ್ತಿತ್ತು. ಹೊಸದಾಗಿಸಿದ ಬಳಿಕ ನಾವೆಗೂ ಪ್ರವೇಶದ್ವಾರಕ್ಕೂ ನಡುವೆ ಇರುವ ಜಾಗದಲ್ಲಿ ತಾತ್ಕಾಲಿಕ ಕಾಲ್ನಡಿಗೆ ಸೇತುವೆಯನ್ನು ಬಳಸುವ ಕೆಲಸ ಆರಂಬವಾಯಿತು. ಇದು ನೋಡುಗರಿಗೆ ವರದಾನವಾಯಿತು.

ಹೆಚ್ಚೆಂದರೆ ಆರು ಜನ ರಾತ್ರಿಹೊತ್ತು ಈ ದೀಪಸ್ತಂಬದ ಹೋಟೆಲ್‍ನಲ್ಲಿ ತಂಗಲು ಸೂಕ್ತ ವ್ಯವಸ್ತೆಯನ್ನು ಕಲ್ಪಿಸಲಾಗಿದೆ. ಆರೂ ಜನರು ಮಲಗಲು ಸಾದ್ಯವಾಗುವಶ್ಟು ದೊಡ್ಡ ಬೆಡ್ ರೂಂ, ಸಂಯೋಜಿತ ಅಡುಗೆ ಮನೆ, ವಿರಾಮ ಕೋಣೆ ಹಾಗೂ ಸ್ನಾನಗ್ರುಹಗಳು ಇದರಲ್ಲಿ ಇವೆ.

ಇಲ್ಲಿ ಉಳಿಯಬೇಕೆಂದರೆ ಒಂದಲ್ಲ ಎರಡೆರಡು ಗುಂಡಿಗೆ ಇರಬೇಕು!

ಇಲ್ಲಿ ಬಂದು ಉಳಿಯಲು ಬಯಸುವವರು ತಮ್ಮ ತಮ್ಮ ಸ್ಲೀಪಿಂಗ್ ಬ್ಯಾಗ್ ಮತ್ತು ಟವೆಲ್‍ಗಳನ್ನು ತಾವೇ ತರಬೇಕು. ತಮ್ಮ ಅಡುಗೆಯನ್ನು ತಾವೇ ಬೇಯಿಸಿಕೊಳ್ಳಬೇಕು. ಅದಕ್ಕೆ ಅವಶ್ಯವಿರುವ ಎಲ್ಲಾ ಪದಾರ‍್ತಗಳು ಅಡುಗೆ ಮನೆಯಲ್ಲಿ ಸಿಗುತ್ತವೆ. ಇಲ್ಲಿನ ಒಂದೇ ಒಂದು ಪ್ರಮುಕ ಕೊರತೆ ವಿದ್ಯುತ್ ಹಾಗೂ ರೂಂ ಹೀಟರ್‍ಗಳಿಲ್ಲ ಎನ್ನುವುದು.

ರೊಟರ್ ಸ್ಯಾಂಡ್ ಹೋಟೆಲ್

ರಾತ್ರಿಯ ನಿಶ್ಯಬ್ದತೆಯಲ್ಲಿ ಸಮುದ್ರದ ಅಲೆಗಳು ಅಪ್ಪಳಿಸುವ ಸಪ್ಪಳ ಹಾಗೂ ಆ ಹೊಡೆತಕ್ಕೆ ದೀಪಸ್ತಂಬ ಅಲುಗಾಡಿದಾಗ ಎಂತಹವರಿಗೂ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಎತ್ತ ನೋಡಿದರೂ ಗಾಡಾಂದಕಾರ ಕತ್ತಲು. ಸಮುದ್ರದ ಅಲೆಗಳ ಬೋರ‍್ಗರೆತ ಕೇಳಲು ಎಶ್ಟು ಅಪ್ಯಾಯಮಾನವೋ ಅಶ್ಟೂ ಬಯಂಕರ. ಎರಡೆರಡು ಗುಂಡಿಗೆ ಇರುವವರು ಮಾತ್ರ ಇಲ್ಲಿ ರಾತ್ರಿ ಉಳಿಯುವುದು ಸೂಕ್ತ.

ವಿರಾಮ ಕೋಣೆಯಿಂದ ಶೌಚಾಲಯಕ್ಕೆ ಹೋಗಲು ಸುತ್ತು ಮೆಟ್ಟಲುಗಳಿವೆ. ಇದರ 70 ಮೆಟ್ಟಲುಗಳ ಮೂಲಕ ಇಳಿಯಲಾಗಲಿ ಹತ್ತಲಾಗಲಿ ಮೈಯೆಲ್ಲಾ ಕಣ್ಣಾಗಿರಬೇಕು. ಆಯ ತಪ್ಪಿದಲ್ಲಿ ಜೀವಕ್ಕೆ ಕುತ್ತು. ಕುಡಿತದ ನಂತರ ಈ ಮೆಟ್ಟಲನ್ನು ಉಪಯೋಗಿಸುವುದು ಅಸಾದ್ಯ. ಅದ್ದರಿಂದ ಇದು ‘ನೋ ಡ್ರಿಂಕಿಂಗ್ ಜೋನ್’. ಇಲ್ಲಿಗೆ ನೋಡುಗರನ್ನು ಕರೆತರುವ ದೋಣಿಗಳು ಓಡಾಡುವುದು ಏರಿಳಿತಗಳು ಇಲ್ಲದ ಶಾಂತ ಸಮುದ್ರದಲ್ಲಿ ಮಾತ್ರ. ಹಾಗಾಗಿ ಜೂನ್‍ನಿಂದ ಸೆಪ್ಟಂಬರ್‍ವರೆಗೆ ದೋಣಿಗಳ ಬುಕ್ಕಿಂಗ್ ನಡೆಯುತ್ತವೆ. ಪರಿಸ್ತಿತಿ ಹಾಗೂ ವಾತಾವರಣವನ್ನು ಅವಲೋಕಿಸಿದ ನಂತರವೇ ದೋಣಿಯ ಸಂಚಾರ. ಪ್ರತಿಕೂಲ ವಾತಾವರಣದ ಕಾರಣ ಯಾವುದೇ ಕ್ಶಣದಲ್ಲಾದರೂ ಪ್ರಯಾಣವನ್ನು ರದ್ದುಗೊಳಿಸುವ ಹಕ್ಕು ದೋಣಿಯ ಕ್ಯಾಪ್ಟನ್‍ದು.

ದೋಣಿಯ ಓಡಾಟ ರದ್ದುಗೊಂಡಾಗ ರೊಟರ್ ಸ್ಯಾಂಡ್ ಹೋಟೆಲ್‍ನಲ್ಲಿ ರಾತ್ರಿ ತಂಗಿದ್ದವರು ಅಲ್ಲಿಯೇ ಉಳಿಯ ಬೇಕಾದ್ದು ಅನಿವಾರ‍್ಯ. ವಾತಾವರಣ ತಿಳಿಗೊಂಡು, ಪರಿಸ್ತಿತಿ ಸುದಾರಿಸಿ, ದೋಣಿಗಳು ಚಾಲನೆಯಾಗುವವರೆಗೂ ಅವರುಗಳು ಕಾಯಲೇ ಬೇಕು. ರೊಟರ್ ಸ್ಯಾಂಡ್ ಹೋಟೆಲ್ ನೋಡಿ ಹಿಂದಿರುಗಲು, ಹೋಟೆಲ್‍ನಲ್ಲಿಯೇ ಒಂದು ರಾತ್ರಿ ಎರಡು ಹಗಲು ಅತವಾ ಎರಡು ರಾತ್ರಿ ಮೂರು ಹಗಲು ತಂಗಲು ವಿವಿದ ಮೊತ್ತದ ಹಣವನ್ನು ನಿಗದಿ ಪಡಿಸಿಲಾಗಿದೆ. ಅಲ್ಲೇ ಉಳಿಬೇಕಾದಲ್ಲಿ ದುಬಾರಿ ಹಣ ತೆರಬೇಕು.

2010ರ ನವೆಂಬರ್ 1ರಂದು ರೊಟರ್ ಸ್ಯಾಂಡ್ ತನ್ನ 125ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತು. ಬಳಿಕ ಜರ‍್ಮನಿಯ ಪ್ರವಾಸೋದ್ಯಮ ಮಂಡಳಿಯು ಲಕ್ಶಾಂತರ ಯುರೋ ಕರ‍್ಚು ಮಾಡಿ ರೊಟರ್ ಸ್ಯಾಂಡ್‍ನ್ನು ಮತ್ತೆ ಹೊಸದಾಗಿಸಿದೆ.

(ಮಾಹಿತಿ ಸೆಲೆ: booklighthouse.com, amusingplanet.com,  )
(ಚಿತ್ರ ಸೆಲೆ:  booklighthouse.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: