ಪಗ್ ನಾಯಿಯನ್ನು ಸಾಕಲು ಬಯಸುವವರು ತಿಳಿದಿರಬೇಕಾದ ಸಂಗತಿಗಳು

– ನಾಗರಾಜ್ ಬದ್ರಾ.

ಪಗ್‍ಗಳು ಸುಮಾರು 2500 ವರುಶಗಳ ಹಿನ್ನೆಲೆಯನ್ನು ಹೊಂದಿವೆ. ಹಾಗೆಯೇ ಹಲವಾರು ಅರಸು ಮನೆತನಗಳ ನೆಚ್ಚಿನ ತಳಿಯೂ ಆಗಿತ್ತು. ಈಗಂತೂ ಎಲ್ಲರ ಅಚ್ಚುಮೆಚ್ಚಿನ ನಾಯಿಯಾಗಿದೆ.

ನೀವು ಕೂಡ ಪಗ್ ನಾಯಿಯನ್ನು ಸಾಕಬೇಕೆಂದು ಯೋಚಿಸುತ್ತಿದ್ದಿರಾ? ಹಾಗಾದರೆ ಕೆಳಗಿನ ಸಂಗತಿಗಳ ಮೇಲೆ ಚೂರು ಗಮನಹರಿಸಿದರೆ ಒಳ್ಳೆಯದು.

ಬಿಸಿಲಿನಲ್ಲಿ ತಿರುಗಾಡಿಸಬೇಡಿ. ಚೆನ್ನಾಗಿ ನೀರು ಕುಡಿಸುವುದನ್ನು ಮರೆಯದಿರಿ

ಪಗ್ ನಾಯಿ

ಇವು ಅಳತೆಯಲ್ಲಿ ತುಂಬಾ ಚಿಕ್ಕದಾಗಿರುವುದರಿಂದ ಮೈ ಬಿಸುಪನ್ನು ಕಾಪಾಡುವುದು ತುಂಬಾ ಮುಕ್ಯ ಕೆಲಸವಾಗಿದೆ. ಪಗ್‍ಗಳ ಮೈ ಬಿಸುಪು ಸಾಮಾನ್ಯವಾಗಿ 38 ಡಿಗ್ರಿ ಯಿಂದ 39 ಡಿಗ್ರಿ ನಡುವೆ ಇರುತ್ತದೆ. ಒಂದುವೇಳೆ ಈ ಬಿಸುಪು 41 ಡಿಗ್ರಿಗೆ ಏರಿದರೆ ಉಸಿರಾಟದ ತೊಂದರೆಗಳು ಹೆಚ್ಚಾಗಬಹುದು, ನೆರುಗಳ (organ) ತೊಂದರೆ ಕೂಡ ಸಂಬವಿಸಬಹುದು. ಆದ್ದರಿಂದ ಪಗ್‍ಗಳನ್ನು ಬೇಸಿಗೆಯ ಬಿಸಿಲಿನಲ್ಲಿ ಹೊರಗಡೆಗೆ ಕರೆದುಕೊಂಡು ಹೋಗಬೇಡಿ. ಹಾಗೆಯೇ ಕುಡಿಯಲು ಶುದ್ದವಾದ ನೀರನ್ನು ಸಾಕಶ್ಟು ಪ್ರಮಾಣದಲ್ಲಿ ಕೊಡಿ.

ಬೆನ್ನುಬಿಡದ ಅತಿಯಾದ ಬೊಜ್ಜು

ನಮ್ಮ ಹಾಗೇ ಪಗ್‍ಗಳಿಗೂ ಬೊಜ್ಜಿನ ಸಮಸ್ಯೆ ತುಂಬಾ ಇದೆ. ಪಗ್ ಎತ್ತರದಲ್ಲಿ ಚಿಕ್ಕದಾಗಿರುವುದರಿಂದ ಅದರ ತೂಕದ ಬಗ್ಗೆ ತುಂಬಾ ಗಮನಹರಿಸಬೇಕು. ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ಪ್ರಮಾಣದಲ್ಲಿ ತಿಂಡಿ-ತಿನಿಸನ್ನು ನೀಡಿ, ಆರೋಗ್ಯಕರ ತೂಕವನ್ನು ಹೊಂದಿರುವಂತೆ ನೋಡಿಕೊಳ್ಳಬೇಕು. ದಿನಾಲೂ ಸ್ವಲ್ಪ ಹೊತ್ತಿನವರೆಗೆ ಹೊರಗಡೆಗೆ ಅಲೆದಾಟಕ್ಕೆ ಕರೆದುಕೊಂಡು ಹೋಗಬೇಕು.

ಪಗ್‍ಗಳು ಚಿಕ್ಕ ವಯಸ್ಸಿನಲ್ಲಿಯೇ ಹಿಪ್ ಡಿಸ್‍‍ಪ್ಲೇಸಿಯಾ (hip dysplasia) ತೊಂದರೆಗೆ ಒಳಗಾಗುವ ಸಾದ್ಯತೆಗಳು ಹೆಚ್ಚಾಗಿರುತ್ತವೆ. (ಹಿಪ್ ಡಿಸ್‍‍ಪ್ಲೇಸಿಯಾ – ಸೊಂಟದ ಕೀಲಿನ ತೊಂದರೆ). ಆರ‍್ತೋಪೆಡಿಕ್ ಪೌಂಡೇಶನ್ ಪಾರ್ ಅನಿಮಲ್ಸ್ (Orthopedic Foundation for Animals) ನವರು ಸುಮಾರು 157 ಜಾತಿಯ ಉಸಿರಿಗಳನ್ನು ಆಯ್ಕೆಮಾಡಿಕೊಂಡು ಹಿಪ್ ಡಿಸ್‍‍ಪ್ಲೇಸಿಯಾಕ್ಕೆ ತುತ್ತಾಗುವುದರ ಕುರಿತು ಸಮೀಕ್ಶೆವೊಂದನ್ನು ನಡೆಸಿದರು. ಅದರಲ್ಲಿ ಹಿಪ್ ಡಿಸ್‍‍ಪ್ಲೇಸಿಯಾ ತೊಂದರೆಗೊಳಗಾದ ಉಸಿರಿಗಳ ಪೈಕಿ ಪಗ್ ಎರಡನೇ ಜಾಗದಲ್ಲಿದ್ದು, ಸುಮಾರು 64% ರಶ್ಟು ಪಗ್‍ಗಳಿಗೆ ಈ ತೊಂದರೆ ತಗುಲುವ ಸಾದ್ಯತೆ ಇರುತ್ತದೆ ಎಂದು ತಿಳಿದುಬಂದಿದೆ.

ಜೋಪಾನ! ಇವಕ್ಕೆ ಚೆನ್ನಾಗಿ ಈಜಾಡೋದಕ್ಕೆ ಬರುವುದಿಲ್ಲ

ಈಜಾಡುವ ಪಗ್ ನಾಯಿ

ಇವು ಒಳ್ಳೆ ಈಜುಗಾರರಲ್ಲ. ಪಗ್‍ಗಳ ಕಾಲುಗಳು ಅಳತೆಯಲ್ಲಿ ತುಂಬಾ ಕಿರುದಾಗಿರುವುದರಿಂದ ನೀರಿನಲ್ಲಿ ಈಜಾಡಲು ಕಾಲನ್ನು ಜೋರಾಗಿ ಬಡಿಯುತ್ತವೆ. ಅದರಿಂದ ಬೇಗನೆ ಹುರುಪನ್ನು ಕಳೆದುಕೊಂಡು, ಉಸಿರಾಟದ ತೊಂದರೆಗೆ ಒಳಗಾಗುವ ಸಾದ್ಯತೆಯಿರುತ್ತದೆ. ಹಾಗಾಗಿ ಪಗ್ ಅನ್ನು ಕೊಳದಲ್ಲಿ ಈಜಲು ಬಿಡಬೇಕೆಂದು ಯೋಚಿಸುತ್ತಿದ್ದರೆ, ಅದಕ್ಕೆ ನೀರಿನಲ್ಲಿ ತೇಲಲು ನೆರವಾಗುವ ತೇಲಿಸುವಂಗಿಯನ್ನು (life jacket) ತೊಡಿಸಿ ಈಜಲು ಬಿಡಿ.

ಪಗ್ ಈಜುವಾಗ ಸಾಕಶ್ಟು ಗಮನಹರಿಸಿ. ಪಗ್‍ಗಳ ಮೂಗು ತುಂಬಾ ಚಿಕ್ಕದಾಗಿರುವುದರಿಂದ ಇತರೆ ತಳಿಯ ನಾಯಿಗಳಿಗೆ ಹೋಲಿಸಿದರೆ ಬೇಗನೆ ಶೀತಕ್ಕೆ ಒಳಗಾಗುತ್ತವೆ. ಚಳಿಗಾಲದಲ್ಲಿ ಹೆಚ್ಚಾಗಿ ಹೊರಗಡೆ ಕರೆದುಕೊಂಡು ಹೋಗಬೇಡಿ. ಶೀತವಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಂಡು ಅವುಗಳನ್ನು ಪಾಲಿಸಿ.

ಮುದ್ದಾದ ಮುಕ, ಹಲವಾರು ಸೋಂಕುಗಳು ಮಾಯ!

ಪಗ್‍ನ ಮುಕವನ್ನು ಯಾವಾಗಲೂ ಚೊಕ್ಕವಾಗಿ ಇಡಬೇಕು. ಇದರ ಮುಕದ ಮೇಲಿರುವ ತೊಗಲಿನ ಮಡಿಕೆಗಳು ಬ್ಯಾಕ್ಟೀರಿಯಾಗಳನ್ನು ಹುಟ್ಟುಹಾಕುವ ಜಾಗಗಳಾಗಿದ್ದು ಸೋಂಕುಗಳು ಹಾಗೂ ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು.

ಪಗ್

ಹಿಂಬರಿಕೆ ಸೀನು (Reverse sneezing)

ಇದ್ದಕ್ಕಿದಂತೆಯೇ ನಿಮ್ಮ ಪಗ್‍ನ ಉಸಿರಾಟದ ಸಪ್ಪಳವು ಜೋರಾಗಿ ಕೇಳಿಸತೊಡಗಿದ್ದರೆ ಅದು ಹಿಂಬರಿಕೆ ಸೀನಿನ ಕುರುಹು ಆಗಿರಬಹುದು.  ಹಿಂಬರಿಕೆ ಸೀನು – ಇದು ನಾಯಿಗಳಲ್ಲಿ ಕಂಡು ಬರುವ ಉಸಿರಾಟದ ಆಗುಹ (event). ಇದಕ್ಕೆ ಸರಿಯಾದ ಕಾರಣ ಏನು ಎಂದು ಸದ್ಯದ ಮಟ್ಟಿಗೆ ತಿಳಿದಿಲ್ಲವಾದರೂ, ಗಂಟಲು ಇಲ್ಲವೇ ಸಯ್ನಸ್ ಗಳ ತುರಿಕೆ (irritation) ಇದ್ದಾಗ ಹಿಂಬರಿಕೆ ಸೀನು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಈ ಆಗುಹದ ಮುಕ್ಯ ಗುರುತು ಎಂದರೆ ಬಿರುಸಾಗಿ ಮತ್ತೆ-ಮತ್ತೆ ಉಸಿರನ್ನು ಮೂಗಿನ ಮೂಲಕ ಎಳೆದುಕೊಳ್ಳುವುದು; ಈ ಬಗೆಯಲ್ಲಿ ಉಸಿರನ್ನು ಎಳೆದುಕೊಳ್ಳುವಾಗ ಬುಸುಗುಟ್ಟುವ (snorting) ಸದ್ದು ಕೇಳಿಬರುತ್ತದೆ. ಪಗ್ ಗಳ ಮೂಗು ಚಿಕ್ಕದಾಗಿದ್ದು, ಹಿಂಬರಿಕೆ ಸೀನಿಗೆ ಗುರಿಯಾಗುವ ಸಾದ್ಯತೆ ಹೆಚ್ಚು. ಇದು ಪಗ್‍ಗಳಿಗೆ ಉಸಿರಾಟದ ತೊಂದರೆಗಳನ್ನು ಉಂಟುಮಾಡಿ, ಪ್ರಾಣಕ್ಕೆ ಕುತ್ತನ್ನು ಸಹ ತರಬಹುದು. ಹಿಂಬರಿಕೆ ಸೀನುವಾಗ ನಿಮ್ಮ ಪಗ್ ಉಸಿರುಗಟ್ಟಿದಂತೆ ಇಲ್ಲವೇ ನೋವಿನಲ್ಲಿರುವುದು ಕಂಡುಬರುತ್ತದೆ. ಆಗ ಅವುಗಳ ಮೂಗನ್ನು ಯಾವುದಾದರೂ ಬಟ್ಟೆಯಿಂದ ಮುಚ್ಚಿ ಬಾಯಿಯ ಮೂಲಕ ಉಸಿರಾಡಲು ನೆರವು ನೀಡಬೇಕು.

ಕುತ್ತಿಗೆ ಪಟ್ಟಿ ತರದಿರಲಿ ಜೀವಕ್ಕೆ ಕುತ್ತು

ನಾಯಿಗಳಿಗೆ ಕುತ್ತಿಗೆ ಪಟ್ಟಿಯನ್ನು ತುಂಬಾ ಬಿಗಿಯಾಗಿ ಕಟ್ಟಬಾರದು. ಇದರಿಂದ ಕಣ್ಣಿನ ನೋಟದ ತೊಂದರೆಗಳು ಉಂಟಾಗಬಹುದು. ಪಗ್ ಹಾಗೂ ಇತರೆ ಬ್ರಾಕಿಸಿಪಲಿಕ್ (brachycephalic) ತಳಿಗಳಲ್ಲಿ ಈ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದ್ದರಿಂದ ಕುತ್ತಿಗೆ ಪಟ್ಟಿಯನ್ನು ಆದಶ್ಟು ಸಡಿಲವಾಗಿರಲಿ.

ಓಟದಲ್ಲಿ ಇವು ತುಂಬಾ ಮೆಲ್ಲಗೆ

ನಾಯಿಗಳು ವೇಗವಾದ ಓಟಕ್ಕೆ ಹೆಸರುವಾಸಿ, ಗ್ರೇಹೌಂಡ್ (Greyhound) ಎಂಬ ತಳಿಯ ನಾಯಿಯು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಓಡುವ ನಾಯಿ. ಗ್ರೇಹೌಂಡ್ ಪ್ರತಿ ಗಂಟೆಗೆ 45 ಮೈಲುಗಳಶ್ಟು ವೇಗವಾಗಿ ಓಡುತ್ತದೆ ಎಂದು ಹೇಳಲಾಗುತ್ತದೆ. ಇಂತಹ ನಾಯಿಗಳನ್ನು ಸಾಮಾನ್ಯವಾಗಿ ಬೇಟೆಗೆ ಬಳಸಲಾಗುತ್ತದೆ. ಆದರೆ ಪಗ್‍ಗಳು ಪ್ರತಿ ಗಂಟೆಗೆ ಸುಮಾರು 3 ರಿಂದ 5 ಮೈಲಿಯಶ್ಟು ಮಾತ್ರ ಓಡಬಲ್ಲವು.

ನಿದ್ದೆಯಲ್ಲಿ ಕುಂಬಕರ‍್ಣನನ್ನು ಮೀರಿಸುತ್ತವೆ!

ನಿದ್ದೆಮಾಡುವ ಪಗ್

ಪಗ್ ಬೇರೆ ತಳಿಯ ನಾಯಿಗಳ ಹಾಗೇ ದಿನವಿಡೀ ಚಟುವಟಿಕೆಯಿಂದ ಇರುವುದಿಲ್ಲ. ದಿನದ ತುಂಬಾ ಹೊತ್ತು ನಿದ್ದೆಯಲ್ಲಿಯೇ ಕಳೆಯುತ್ತವೆ. ಒಂದು ದಿನದಲ್ಲಿ ಸುಮಾರು 14 ಗಂಟೆವರೆಗೆ ನಿದ್ದೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಪಗ್ ತಿಂಡಿತಿನಿಸನ್ನು ತಿನ್ನಲು ಬಿಟ್ಟರೆ, ಕೆಲವೊಂದು ಸಾಂದರ‍್ಬಿಕ ಸಂದರ‍್ಬದಲ್ಲಿ ಮಾತ್ರ ಎದ್ದೇಳುತ್ತವೆ. ತನ್ನ ಮುದ್ದಿನ ನಾಯಿಯೊಂದಿಗೆ ದಿನದ ಹೆಚ್ಚಿನ ಕಾಲಕಳೆಯಲು ಸಮಯವಿಲ್ಲದ ಮಂದಿಗಳಿಗೆ ಪಗ್ ಒಂದು ಒಳ್ಳೆಯ ಸಂಗಾತಿಯಾಗಿದೆ.

ಪಗ್ ಎಂಬ ಹೆಸರು ಮರ‍್ಮೊಸೆಟ್ಸ್ (Marmosets) ಎಂಬ ಒಂದು ವಿಶೇಶ ತಳಿಯ ಮಂಗಗಳಿಂದ ಬಂದಿದೆ. ಮರ‍್ಮೊಸೆಟ್ಸ್ ತೆಂಕಣ ಅಮೇರಿಕದ ಪಡುವಣ ಅಮೆಜಾನ್ ಮಳೆಕಾಡಿನಲ್ಲಿ ಕಂಡುಬರುವ ನ್ಯೂ ವರ‍್ಲ್ಡ್ ಮಂಗಗಳ ಒಂದು ತಳಿಯಾಗಿದೆ. ಅಮೆಜಾನ್ ಕಾಡಿನಲ್ಲಿ ಮಂದಿ ಈ ತಳಿಯ ಮಂಗಗಳನ್ನು ಸಾಕುಪ್ರಾಣಿಗಳಂತೆ ನೋಡಿಕೊಳ್ಳುತ್ತಿದ್ದರು. ಇವುಗಳನ್ನು ತುಂಬಾ ಇಶ್ಟಪಡುತ್ತಿದ್ದ ಅವರು ಪ್ರೀತಿಯಿಂದ ಪಗ್ ಎಂದು ಕರೆಯುತ್ತಿದ್ದರು. ಇಂದಿನ ಪಗ್ ತಳಿಯ ನಾಯಿಗಳ ಹಾಗೂ ಮರ‍್ಮೊಸೆಟ್ಸ್ ಎರಡರ ಮುಕದ ಲಕ್ಶಣಗಳನ್ನು ಒಂದೇ ಬಗೆಯಾಗಿದ್ದು, ಆದ್ದರಿಂದ ಇವುಗಳಿಗೆ ಪಗ್ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.

ಪಗ್‍ನ ಮೈಮಾಟ ಚಿಕ್ಕದಾಗಿದ್ದರು, ಕೀರ‍್ತಿ ಮಾತ್ರ ತುಂಬಾ ದೊಡ್ಡದಾಗಿದೆ. ಇವುಗಳ ಮುಗ್ದತೆಗೆ ಅರಸು ಮನೆತನದವರಿಂದ ಹಿಡಿದು ಸಾಮಾನ್ಯ ಮನುಶ್ಯರವರೆಗೆ ಎಲ್ಲರೂ ಮಾರು ಹೋಗಿದ್ದಾರೆ.

(ಮಾಹಿತಿ ಸೆಲೆ: wiki/pug, pugspost.comthedogdigest.comvetstreet.com, mentalfloss.com)
(ಚಿತ್ರ ಸೆಲೆ:  pexels.com, pixabay.com, wikimedia, maxpixel)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: