ಪ್ರೇಮ ಬರಹ – ಅಪರೂಪದ ಸಿನೆಮಾ

ಶಂಕರ್ ಲಿಂಗೇಶ್ ತೊಗಲೇರ್.

ಪ್ರೇಮಬರಹ, PremaBaraha

ಹೊಸದೊಂದು ಪ್ರೇಮ ಕಾವ್ಯವನ್ನ ಹೆಣೆದಿರುವ ಅರ‍್ಜುನ್ ಸರ‍್ಜಾ ಒಂದು ಚಂದದ ಸಿನೆಮಾವನ್ನು ಮಾಡಿದ್ದಾರೆ. ‘ಪ್ರೇಮ ಬರಹ’ – ಹಿಂದೆ ಅವರೇ ನಟಿಸಿದ್ದ ಕನ್ನಡ ಚಿತ್ರದ ಅದ್ಬುತ ಹಾಡೊಂದನ್ನ ನೆನಪಿಸುತ್ತದೆ. ಒಂದೊಳ್ಳೆಯ ಸಿನೆಮಾಗೆ ಬೇಕಿರುವ ಎಲ್ಲ ಅಂಶಗಳನ್ನೂ ಜೊತೆಯಲ್ಲಿಟ್ಟುಕೊಂಡು ಒಂದು ಪ್ರೇಮಕತೆಯನ್ನ ಹೇಳುತ್ತಾರೆ ಸರ‍್ಜಾ. ಕತೆ,  ಇಬ್ಬರು ಯುವ ರಿಪೋಟರ್ ಗಳು 1999 ರಲ್ಲಿ ನಡೆದ ಕಾರ‍್ಗಿಲ್ ಯುದ್ದವನ್ನ ತಮ್ಮ ತಮ್ಮ ಮಾದ್ಯಮಗಳಿಗೋಸ್ಕರ ವರದಿ ಮಾಡಲು ತೆರಳಿದಾಗ ಅವರ ನಡುವೆ ಹುಟ್ಟುವ ಪ್ರೀತಿಯ ಬಗ್ಗೆ. ಈ ಪ್ರೇಮಿಗಳನ್ನ ಒಂದು ಮಾಡುವುದು ಯುದ್ದ. ‘ಯುದ್ದ ನಡೆಯುವುದೇ ಮನಸ್ಸುಗಳನ್ನ ಒಂದು ಮಾಡಲೇನೋ’ ಎಂದು ಅನ್ನಿಸದಿರದು.

ದೇಶಪ್ರೇಮವನ್ನ ಮೂಲವಾಗಿಟ್ಟುಕೊಂಡು ಅದನ್ನು ಎಳೆ ಎಳೆಯಾಗಿ ಬಿಡಿಸಿ, ಹೆಣೆದು ಕಣ್ಣು ತುಂಬುವಂತೆ ಮಾಡಿರುವ ಅರ‍್ಜುನ್ ಸರ‍್ಜಾ  ನಿರ‍್ದೇಶನದಲ್ಲಿ ಗೆದ್ದಿದ್ದಾರೆ. ಈ ಚಿತ್ರವನ್ನು ತೇಟರ್ ನಲ್ಲಿ ನೋಡುತ್ತಿದ್ದಾಗ ಚಿತ್ರದ ಸನ್ನಿವೇಶಗಳು, ಕಡಿಮೆ ಅಂದರೂ ಐದಾರು ಬಾರಿ ಪ್ರೇಕ್ಶಕರ ಚಪ್ಪಾಳೆ ಗಿಟ್ಟಿಸಿದವು. ಐಶ್ವರ‍್ಯಾ ಅರ‍್ಜುನ್ ಅವರ ನಟನೆ ಚೆನ್ನಾಗಿದೆ, ಪರಿಪಕ್ವವಾಗಿದೆ. ಚಂದನ್ ಕೂಡಾ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ‍್ವಹಿಸಿದ್ದಾರೆ.

ಚಿತ್ರ ನೋಡಿದಾದ ಮೇಲೆ ನೆನಪಿನಲ್ಲಿ ಉಳಿಯುವ ಪಾತ್ರಗಳು ಬಹಳ. ಸುಹಾಸಿನಿ, ಐಶ್ವರ‍್ಯಳ ತಾತನ ಪಾತ್ರ, ಕಾರ‍್ಗಿಲ್ ನಲ್ಲಿ ಸಿಗುವ ಗಣೇಶ್, ಹುಬ್ಬಳ್ಳಿ ಮಂಡ್ಯದ ಯೋದರು, ಯುದ್ದದಲ್ಲಿ ಸೈನಿಕರೆಲ್ಲರಿಗೂ ಟೀ ಕೊಡುವ ಒಬ್ಬ ನಿವ್ರುತ್ತ ಯೋದ, ವೀರಮರಣವನ್ನಪ್ಪಿದ ಯೋದನ ತಂದೆಯಾಗಿ ಪ್ರಕಾಶ್ ರೈ. ಈ ಎಲ್ಲಾ ಪಾತ್ರಗಳೂ ತೇಟರಿನಿಂದ ಆಚೆ ಬಂದ ಮೇಲೂ ನೆನಪಿನಲ್ಲಿ ಉಳಿಯುತ್ತವೆ. ಅದರ ಎಲ್ಲಾ ಕ್ರೆಡಿಟ್ಟು ನಿರ‍್ದೇಶಕರಿಗೆ ಸಲ್ಲಬೇಕು.

ಅರೆರೆ, ಇನ್ನೊಬ್ಬರನ್ನ ಬಿಟ್ಬಿಟ್ಟೆ. ಅವರು ಮೊದಲಾರ‍್ದದಲ್ಲಿ ಸಿನಿಮಾವನ್ನ ಜಾಲಿಯಾಗಿ ನಿಲ್ಲಿಸಿರೋರು. ಅವರೇ ಸಾದು ಮಹಾರಾಜ್. ಜನರನ್ನ ಹೊಟ್ಟೆ ಹುಣ್ಣಾಗುವಂತೆ ನಗಿಸಿ ಸಿನಿಮಾದ ಮೊದಲಾರ‍್ದದ ತುಂಬೆಲ್ಲಾ ಪ್ರೇಕ್ಶಕರು ಅವರನ್ನ ನೋಡಲು ಕಾತರದಿಂದ ಕಾಯುವಂತೆ ಮಾಡುತ್ತಾರೆ. ಸಾದು ಕಾಮಿಡಿಯ ನಿಜವಾದ ಮಹಾರಾಜ ಅಂತ ಅನಿಸಿಬಿಡುತ್ತೆ.

ಇಶ್ಟೆಲ್ಲಾ ಹೇಳಿದ ಮೇಲೆ ಸಿನಿಮಾ ಹೇಗಿದೆ ಅಂತ ಕೇಳಲೇ ಬೇಡಿ, ಹೋಗಿ ನೋಡ್ಕೊಂಡು ಬನ್ನಿ. ಈ ತರಹದ ಸಿನೆಮಾಗಳು ಬರುವುದು ಅಪರೂಪ!

( ಚಿತ್ರ ಸೆಲೆ:  wikipedia )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.