ಸೈಕಲ್‌ಗಳಿಗಾಗಿಯೇ ಮೀಸಲು ಈ ಹೆದ್ದಾರಿ

 ಆಶಿತ್ ಶೆಟ್ಟಿ.

ದೊಡ್ಡ ನಗರಗಳಲ್ಲಿ ದಿನೇ ದಿನೇ ಗಾಡಿಗಳ ದಟ್ಟಣೆ ಹೆಚ್ಚುತ್ತಿದೆ. ಇದರಿಂದಾಗಿ ಗಾಳಿ ಮಾಲಿನ್ಯ ಹೆಚ್ಚಾಗುತ್ತಿದೆ ಮತ್ತು ಮಂದಿಯ ಆರೋಗ್ಯ ಕೆಡುತ್ತಿದೆ. ದೆಹಲಿ ಇಂದು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಗಾಳಿ ಮಾಲಿನ್ಯವುಳ್ಳ ನಗರ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಇರುವ ಇಗ್ಗಾಲಿ ಗಾಡಿಗಳ ಎಣಿಕೆ 46.54 ಲಕ್ಶ ಮತ್ತು ಕಾರುಗಳ ಎಣಿಕೆ 13.01 ಲಕ್ಶ. ಇದು ಹೀಗೇ ಮುಂದುವರಿದರೆ ಬೆಂಗಳೂರು ಕೂಡ ದೆಹಲಿಯಂತಾಗುವ ದಿನಗಳು ದೂರವಿಲ್ಲ. ಗಾಡಿಗಳ ದಟ್ಟಣೆ ಕಮ್ಮಿ ಮಾಡಲು ಬೆಂಗಳೂರಿನ ‘ನಮ್ಮ ಮೆಟ್ರೋ’, ಮೈಸೂರಿನ ‘ಟ್ರಿನ್ ಟ್ರಿನ್’ ಸೈಕಲ್ ಹಂಚಿಕೆ ಹೀಗೆ ಹಲವು ಸಾರ‍್ವಜನಿಕ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಸೈಕಲ್ ಬಳಕೆಯತ್ತ ಹೆಚ್ಚುತ್ತಿರುವ ಒಲವು

ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲಿನ ಕಾಳಜಿಯಿಂದ ಜನರು ದೊಡ್ಡ ನಗರಗಳಲ್ಲಿ ಸೈಕಲ್ ಬಳಸುವತ್ತ ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ. ಗಾಡಿಗಳ ದಟ್ಟಣೆ ತೊಂದರೆ ಹೆಚ್ಚಿರುವ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಇದು ಕೂಡ ಸವಾಲು. ಇಂತಹ ಸವಾಲುಗಳನ್ನು ಬಗೆಹರಿಸಲು ಜಗತ್ತಿನ ಹಲವು ನಗರಗಳಲ್ಲಿ ಸೈಕಲ್ ಓಡಿಸುವವರಿಗಾಗಿಯೇ ಕಿರುದಾರಿ, ಸೈಕಲ್‌ಗಳಿಗೆಂದೇ ಮುಡಿಪಾಗಿಟ್ಟ ನಿಲ್ಲಿಸುವ ಜಾಗ ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಚೀನಾದಲ್ಲಿ ಹೀಗೊಂದು ಹೈವೇ

ಚೀನಾದಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದು ಸೈಕಲ್ ಸವಾರರಿಗೆ ಕಶ್ಟ. ಹೆಚ್ಚಿನ ವಾಹನ ಓಡಾಟ, ಗಾಳಿ ಮಾಲಿನ್ಯ ಸಮಸ್ಯೆಯಿಂದ ಬೇಸತ್ತ ಚೀನೀಯರಿಗೆ ಬೈಕ್ ಹಂಚಿಕೆಯಂತಹ ಯೋಜನೆಗಳು ಮತ್ತೆ ಸೈಕ್ಲಿಂಗ್ ಮೇಲೆ ಪ್ರೀತಿ ಹೆಚ್ಚಾಗುವಂತೆ ಮಾಡಿದೆ. ಚೀನಾದ ಕ್ಸಿಯಾಮೆನ್ ನಗರದಲ್ಲಿ 7.6 ಕಿಲೋಮೀಟರ್ ಉದ್ದದ ಸೈಕಲ್ ಹಾದಿಯನ್ನು ಕಟ್ಟಲಾಗಿದೆ. ಇದು ವಿಶ್ವದಲ್ಲೇ ಅತಿ ಎತ್ತರದ ಸೈಕಲ್ ಹಾದಿ. ಈ ಎತ್ತರದ ಸೈಕಲ್ ಹಾದಿಯ ಎರಡೂ ಕೊನೆಗಳಲ್ಲಿ ಸೈಕಲ್ ಬಾಡಿಗೆಗೆ ಕೊಡುವ ನಿಲ್ದಾಣಗಳಿವೆ. 4.8 ಮೀಟರ್ ಅಗಲವಿರುವ ಈ ಹಾದಿಯ ಮೇಲೆ ಒಮ್ಮೆಲೆ 2000 ಸೈಕಲ್‌ಗಳನ್ನು ಓಡಿಸಬಹುದಾಗಿದೆ. ಈ ಸೈಕಲ್ ಹಾದಿಯನ್ನು ಬಳಸಿ 11 ಬಸ್ ನಿಲ್ದಾಣ ಮತ್ತು 2 ಮೆಟ್ರೋ ನಿಲ್ದಾಣಗಳನ್ನು ತಲುಪಬಹುದು.

ಡ್ಯಾನಿಶ್ ಕಟ್ಟಡದರಿಗರ ಚಳಕ

ಈ ಸೈಕಲ್ ಹಾದಿಯನ್ನು ಕೋಪನ್‌ಹ್ಯಾಗನ್ನಿನ ಕಟ್ಟಡದರಿಮೆಯ ಸಂಸ್ತೆ ಡಿಸ್ಸಿಂಗ್+ವೇಟ್ಲಿಂಗ್ ಅವರು ಕಟ್ಟಿದ್ದು 5 ಮುಕ್ಯ ವಸತಿ ಪ್ರದೇಶಗಳು ಮತ್ತು 3 ವ್ಯಾಪಾರ ಕೇಂದ್ರಗಳನ್ನು ಒಳಗೊಳ್ಳುವಂತೆ ವಿನ್ಯಾಸಗೊಳಿಸಿದೆ. ರಾತ್ರಿಯಾಗುತ್ತಿದ್ದಂತೆ ಸೈಕಲ್ ಹಾದಿಯ ಮೇಲೆ ಬೆಳಕು ಬೀರುವಂತೆ 30,000 ದೀಪಗಳನ್ನು ಅಳವಡಿಸಲಾಗಿದೆ. ಮಿತಿ ಮೀರುವಶ್ಟು ಹೆಚ್ಚಿನ ಸೈಕಲ್‌ಗಳು ಹಾದಿಯ ಮೇಲೆ ಇದ್ದಾಗ ಹರಿವು ಹತೋಟಿಗೆ ತರಲು ತನ್ನಡೆತದ(automated) ಬಾಗಿಲುಗಳಿವೆ.

ಲಂಡನ್ ನಗರದಲ್ಲೂ 220 ಕಿ.ಮೀ. ಕಾರು ಮುಕ್ತ ಸೈಕಲ್ ಹಾದಿ ಮಾಡುವ ಪ್ರಸ್ತಾಪವಿದೆ. ಹೀಗೆ ಬೇರೆ ನಗರಗಳಲ್ಲಿ ಸೈಕಲ್ ಬಳಸುವತ್ತ ಜನರನ್ನು ಸೆಳೆಯಲು ಯೋಜನೆಗಳನ್ನು ಜಾರಿಗೆ ತರಬೇಕು, ಇದರಿಂದ ನಮಗೂ ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೂ ಒಳಿತು.

(ಮಾಹಿತಿ ಮತ್ತು ಚಿತ್ರ ಸೆಲೆ: weforum.orgbusinessinsider.inroad.cc)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: