ಮತ್ತೆ ಮಗುವಾಗುವಾಸೆ

– ಸುರಬಿ ಲತಾ.

child play, childhood life, playing as kid, ಮಗುವಾಗಿ ಆಟವಾಡುವುದು, ಮಕ್ಕಳ ಆಟ

ಮತ್ತೆ ಮಗುವಾಗುವಾಸೆ
ಅಮ್ಮನ ಸೆರಗಿನ ಅಂಚು
ಹಿಡಿದು ರಚ್ಚೆ ಹಿಡಿವಾಸೆ
ಅವಳ ತಬ್ಬಿ ಕನಸ ಕಾಣುವಾಸೆ

ಅಪ್ಪನ ಬೆನ್ನೇರಿ ಕೂಸುಮರಿಯಾಗಿ
ನಕ್ಕು ನಲಿವಾಸೆ
ಅಣ್ಣನ ಬಳಿ ತುಂಟಾಟದಿ
ಕೆನ್ನೆಯುಬ್ಬಿಸುವಾಸೆ

ಪುಟ್ಟ ಪುಟ್ಟ ದೋಣಿಯ
ಪಂದ್ಯ ನೋಡುವಾಸೆ
ಹರಿವ ನೀರಲಿ ಮುಳುಗೇಳುವ
ಮೀನು ನೋಡುವಾಸೆ

ಇರುಳಲಿ ಚುಕ್ಕಿಗಳ ಲೆಕ್ಕವಿಡುವಾಸೆ
ಚಂದಿರನ ಕಂಡು ಮುಡಿ ಏರಿಸುವಾಸೆ
ತಾಯಿಯ ಕೈಯ ತುತ್ತ ಜಗಿಯುವಾಸೆ
ಗುಮ್ಮನ ಕಟ್ಟು ಕತೆಯ ಆಲಿಸುವಾಸೆ

ಗೆಳೆಯರೊಡನೆ ಕುಂಟಾಟವಾಡುವಾಸೆ
ಅಮ್ಮ ಕೊಟ್ಟ ಪುರಿಯ ಹಂಚಿ ತಿನ್ನುವಾಸೆ
ಶಾಲೆಗೆ ಕುಣಿದು ಓಡುವ ಆಸೆ
ಗುರುವಿನ ಸಿಹಿ ಬೈಗಳ ಕೇಳುವಾಸೆ

ಕಣ್ಣ ತುಂಬಿ ಅಪ್ಪನ ಕೊರಳ ಬಳಸಿ
ದೂರುಗಳ ಪಟ್ಟಿ ಕೊಡುವಾಸೆ
ಸಂತೈಸುವ ಮಾತು ಕೇಳಿ
ಕೋರಿಕೆಗಳ ಸಲ್ಲಿಸುವಾಸೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: