ಕರುಣೆಯ ಕಡಲಾದೆನೆಂದು ಬೀಗುತ್ತಿದ್ದಾಗ

– ವಿನು ರವಿ.

ತರಕಾರಿ ಮಾರುವ ಮುದುಕಿ, vegetable selling old lady

ಸುಡುವ ದಗೆ ಕಡಿಮೆಯಾದಂತೆ
ಪ್ರಕರತೆಯನ್ನು ಕಳೆಯುತ್ತಾ
ಪಡುವಣದಿ ಸುಕ್ಕಾಗತೊಡಗಿದಾ ಸೂರ‍್ಯ

ತಂಪಾಗ ಬಯಸುತ್ತಾ
ತುಸು ಹೆಚ್ಚೇ ಗಿಜಿಗುಡುತ್ತಿದ್ದಾ
ವಾಹನಗಳ ಬಾರಕೆ
ಒಳಹೋದ ಕೆನ್ನೆಯಾ
ಮುದುಕಿಯಾ ತೆರದಿ
ಒಳಸರಿಯಲು ಅವಸರಿಸಿದಂತೆ
ಕಾಣುತ್ತಿದ್ದಾ ರಸ್ತೆ

ಕಾಲ್ನಡಿಗೆಯಾ ಸುಕವನನುಬವಿಸುತ್ತಾ
ಮೌನವನ್ನೇ ಜೊತೆಗಾರನನ್ನಾಗಿಸಿ
ರಸ್ತೆಯಂಚಲೇ
ಹೆಜ್ಜೆ ಹಾಕುತ್ತಾ ಹೊರಟವಳಿಗೆ

ಒಂದಿಶ್ಟೇ ತರಕಾರಿಗಳನ್ನು
ಒಪ್ಪವಾಗಿ ಜೋಡಿಸಿ
ಕೂತ ಆ ಮುದುಕಿ
ಚಿತ್ರ ಬರೆದಂತೆ ಮುಗುಮ್ಮಾಗಿ
ಕೂತಿದ್ದಳು

ಸುಕ್ಕಾದ ಶರೀರವನ್ನು
ಇನ್ನೂ ಮುದುರಿ ಮೈ
ತುಂಬಾ ಸೆರಗೊದ್ದು
ಕೂತವಳ ಕಣ್ಣಲಿ
ಯಾವ ಬಾವಗಳೂ ಕಾಣಲಿಲ್ಲ

ಮುಂದೆ ಹೋದ ಹೆಜ್ಜೆಗಳು
ಒಂದೆರಡು ತಾಸು ಕಳೆದು
ಮತ್ತೆ ಮುದುಕಿಯಾ
ತರಕಾರಿ ಅಂಗಡಿಯ ನಿಲ್ದಾಣಕೆ
ಬಂದಿಳಿದವು

ಸುಮ್ಮನೆ ಕುಳಿತವಳ ಕಣ್ಣಲಿ
ನಾ ತರಕಾರಿ ಕೊಳ್ಳುವ
ಸಡಗರ ತೋರಿದಾಗ…
ತುಸು ಆಸೆ ಮಿಂಚಿ
ಮಾತು ಹಂಬಲವಾಗತೊಡಗಿತು

ಚೌಕಾಸಿ ಮಾಡದೆ ಕೊಳ್ಳುವ
ಆಸೆಯಾಗಿ ಒಂದಿಶ್ಟು
ತರಕಾರಿ ಬ್ಯಾಗಿಗಿಳಿಸಿ
ಹಣ ನೀಡಲು ಕೈ ಚಾಚಿದರೆ
ಕೈ ತುಂಬಿದಾ ದುಡ್ಡನ್ನು
ಕಣ್ಗೊತ್ತಿದಾ ಆಕೆ
ನಿಮ್ಮದೇ ಮೊದಲ ಬೋಣಿ ಕಣ್ರವ್ವ… ಎಂದಾಗ

ಒಳಗೊಳಗೆ ಕರುಣೆಯ
ಕಡಲಾದೆನೆಂದು ಬೀಗುತ್ತಿದ್ದ
ಮನಕೆ ಮುದುಕಿಯ
ಕಾಯಕದ ತಾಳ್ಮೆ ಕಣ್ಮುಂದೆ
ಬೆಳೆದು ನಿಂತಂತಾಗಿ ಮತ್ತಶ್ಟು
ಮೌನಿಯಾಗಿ ಸದ್ದಿಲ್ಲದೆ
ನಾ ಹೆಜ್ಜೆ ಸರಿಸಿದೆ…

(ಚಿತ್ರ ಸಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: