ಸ್ರುಶ್ಟಿಯ ಶಾಪವು ನಮಗೆ…

– ಶಾಂತ್ ಸಂಪಿಗೆ.

ಸ್ರುಶ್ಟಿಯ ಶಾಪವು ನಮಗೆ
ಬೀದಿಲಿ ಹುಟ್ಟಿದೆವು
ನಿಕ್ರುಶ್ಟದ ಬದುಕನು ನೀಗಲು
ಗುರಿ ಇಲ್ಲದೆ ಸಾಗಿಹೆವು

ತುತ್ತಿನ ಚೀಲವ ತುಂಬಲು
ಎಲ್ಲರ ಬೇಡುವೆವು
ಅವಮಾನದಿ ಮನವು ನೊಂದರು
ಗತಿಯಿಲ್ಲದೆ ಬದುಕಿಹೆವು

ಎಲ್ಲರ ತರಹ ಬದುಕಲು
ನಮಗೂ ಆಸೆ ಇದೆ
ಸ್ವತಂತ್ರವಾಗಿ ಸುಂದರ ಬದುಕು
ಕಟ್ಟುವ ಬಯಕೆಯಿದೆ

ದಿಕ್ಕು ಕಾಣದ ಪಾಪಶಿಶುಗಳ
ಶಿಕ್ಶಣಕೆಲ್ಲಿ ನೆರವಿದೆ
ಬರವಸೆಯ ಬೆನ್ನೆಲುಬಿಲ್ಲದೆ
ಚಿಗುರುವ ಮುನ್ನವೆ ಬಾಡಿದೆ

ಸ್ರುಶ್ಟಿಯ ನಿಯಮದಿ ಮಾತು
ಬಂದರು ಮೌನವಾಗಿರಲೇಬೇಕು
ಸಾವಿರ ಜನರ ನಿಂದನೆಗೆ
ನಾವು ಕಿವುಡರಾಗಿರಲೇಬೇಕು

ಪ್ರೀತಿ ಸ್ನೇಹವೆನ್ನುವ ಬಂದಗಳ
ಕನಸಲಿ ಹುಡುಕುತಲಿರಬೇಕು
ಆಲಿಸುವರಿಲ್ಲದೆ ಅವಮಾನಿಸುವರೆಡೆಯಲಿ
ನಿತ್ಯ ಮೌನವಾಗಿರಲೇಬೇಕು

ಎಲ್ಲಾ ಜನರು ನಮ್ಮನ್ನೇಕೆ
ಕೀಳಾಗಿ ಕಾಣುವರು
ಮನುಶ್ಯರೆನ್ನುವ ಬಾವನೆಯಿಲ್ಲದೆ
ನಿಂದಿಸಿ ದೂರುವರು

ಹತ್ತಿರ ಹೋದರೆ ಅವಮಾನಿಸುತ
ಹೊರ ದೂಡುವರು
ನಮ್ಮ ತಪ್ಪಿಲ್ಲದೆ ಎಲ್ಲಾ ಶಿಕ್ಶೆಗು
ಏಕೆ ಗುರಿಮಾಡುವರು

ಬೂಮಿ ತುಂಬ ಅನಾತರೆನ್ನುವ
ಮನುಜರಿರುವರು
ಅವರಿಗು ನಾವು ಬದುಕಲು ಬಿಡೆವು
ಎಂತಹ ನಾಗರಿಕರು

ಬಡವರ ಬದುಕಿಗೆ ಕರುಣೆಯ ತೋರದ
ಕಲ್ಲು ಹ್ರುದಯದವರು
ಹಸಿದ ಹೊಟ್ಟೆಗೆ ಅನ್ನವ ನೀಡದೆ
ಅವರು ಬದುಕುವರು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: