ಕೋಳಿಗಳೇಕೆ ಬೆಳಗಿನ ಹೊತ್ತು ಕೂಗುತ್ತವೆ?

– ವಿಜಯಮಹಾಂತೇಶ ಮುಜಗೊಂಡ.

ತನ್ನ ಕೋಳಿ ಕೂಗುವುದರಿಂದಲೇ ದಿನ ಬೆಳಗಾಗುವುದೆಂದು ನಂಬಿದ್ದ ಜಂಬದ ಮುದುಕಿಯ ಕತೆ ಯಾರಿಗೆ ಗೊತ್ತಿಲ್ಲ? ಹಳ್ಳಿಗಳಲ್ಲಿ ಕೋಳಿಗಳು ಅಲಾರಂಗಳಿದ್ದಂತೆ. ನಸುಕಿನಲ್ಲಿ ಕೋಳಿ ಕೂಗುವುದನ್ನು ಕೇಳಿಯೇ ದಿನ ಬೆಳಗಾಗುತ್ತಿದೆಯೆಂದು ಹಳ್ಳಿಗಳಲ್ಲಿ ಈಗಲೂ ಗುರುತಿಸುತ್ತಾರೆ. ಅಂದಹಾಗೆ ಕೋಳಿಗಳೇಕೆ ನಸುಕಿನಲ್ಲಿ ಕೂಗುತ್ತವೆ? ಜಂಬದ ಅಜ್ಜಿ ಅಂದುಕೊಂಡ ಹಾಗೆ ಕೋಳಿ ಕೂಗುವುದರಿಂದ ಬೆಳಗಾಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ, ಕೋಳಿ ಕೂಗುವುದಕ್ಕೂ ಬೆಳಗಾಗುವುದಕ್ಕೂ ಇರುವ ನಂಟಿನ ಕುರಿತು ಹೆಚ್ಚು ತಿಳಿದಿರುವುದಿಲ್ಲ. ಕೋಳಿ ಕೂಗುವುಕ್ಕೂ ಬೆಳಗಾಗುವುದಕ್ಕೂ ಏನಾದರೂ ನಂಟಿದೆಯಾ?

ಜಗತ್ತಿನ ಹಲವೆಡೆ ಕಂಡುಬರುವ ಕೋಳಿಗಳ ಈ ನಡವಳಿಕೆ ಇತ್ತೀಚಿನ ತನಕ ಒಂದು ಗುಟ್ಟಾಗಿಯೇ ಉಳಿದಿತ್ತು. 2013ರಲ್ಲಿ ಜಪಾನಿನ ನಗೋಯಾ ಕಲಿಕೆವೀಡಿನಲ್ಲಿ ನಡೆದ ಅರಕೆಗಳಿಂದ ಕೋಳಿಗಳೇಕೆ ನಸುಕಿನಲ್ಲಿ ಕೂಗುತ್ತವೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ.

ಕೋಳಿ ಕೂಗುವುದು ಬೆಳಿಗ್ಗೆ ಮಾತ್ರ ಅಲ್ಲ

ಹಾಗೆ ನೋಡಿದರೆ ತಮ್ಮ ಸುತ್ತ ನಡೆಯುವ ಹಲವು ಆಗುಹಗಳಿಗೆ ತಕ್ಕಂತೆ ಕೋಳಿಗಳು ಯಾವಾಗಲೂ ಕೂಗುತ್ತವೆ. ಯಾವುದೋ ಸದ್ದು ಕೇಳಿಸಿದಾಗ, ಕೋಳಿಗೂಡಿಗೆ ಏನಾದರೂ ನುಗ್ಗಿದಾಗ, ತಮ್ಮ ಹಿಂಡಿನ ಜೊತೆಗಾರರಿಗೆ ಅಪಾಯದ ಮುನ್ಸೂಚನೆ ನೀಡಲು, ತನ್ನ ಜೊತೆಗಾರರನ್ನು ಸೇರಿದಾಗ – ಹೀಗೆ ದಿನದ ಎಲ್ಲಾ ಹೊತ್ತಿನಲ್ಲಿಯೂ ಕೋಳಿಗಳು ಕೂಗುತ್ತವೆ. ಹೀಗೆ ಎಲ್ಲಾ ಹೊತ್ತಿನಲ್ಲಿ ಕೂಗಿದರೂ ಕೋಳಿಗಳ ಬೆಳಗಿನ ಕೂಗು ತುಸು ವಿಶೇಶವೇ.

ಕೋಳಿಯ ಕೂಗಿನ ಬಗ್ಗೆ ಈ ಮೊದಲಿದ್ದ ತಿಳುವಳಿಕೆ ಏನು?

ಎಲ್ಲ ಹೊತ್ತಿನಲ್ಲೂ ಕೋಳಿಗಳು ಕೂಗಲು ಬೆಳಕಿನಲ್ಲಾಗುವ ಬದಲಾವಣೆಯೇ ಕಾರಣವೆಂದು ಹಕ್ಕಿಯರಿಗರು (ornithologists) ಮೊದಲು ತಿಳಿದಿದ್ದರು. ಕೋಳಿಗೂಡಿಗೆ ಬೆಳಕು ಬಿದ್ದಾಗ ಇಲ್ಲವೇ ಕತ್ತಲಾದಾಗ, ಗಾಡಿಗಳ ಬೆಳಕನ್ನು ಕಂಡು ಕೋಳಿಗಳು ಕೂಗುತ್ತವೆ ಎಂದು ಅಂದುಕೊಳ್ಳಲಾಗಿತ್ತು. ಕೋಳಿ ಕೂಗುವ ಹೊತ್ತಿನ ಕುರಿತ ಇದ್ದ ಇಂತಹ ತಿಳುವಳಿಕೆಯ ನಡುವೆ ನಗೋಯಾ ಕಲಿಕೆವೀಡಿನಲ್ಲಿ ನಡೆದ ಅರಕೆ ಮುಂಜಾವಿನ ಕೋಳಿ ಕೂಗಿನ ಬಗ್ಗೆ ಅಚ್ಚರಿಯ ವಿಶಯ ಹೊರಹಾಕಿದೆ.

ಅರಕೆಯಿಂದ ಕಂಡುಬಂದ ಅಚ್ಚರಿಯ ವಿಶಯ

ನಗೋಯಾ ಕಲಿಕೆವೀಡಿನ ಉಸಿರಿಯರಿಮೆಯ(physiology) ಅರಕೆಮನೆಯಲ್ಲಿ ಕೆಲಸ ಮಾಡುತ್ತಿರುವ ತಕಾಶಿ ಯೋಶಿಮುರಾ ಅವರ ಮುಂದಾಳ್ತನದಲ್ಲಿ ಅರಕೆಯೊಂದನ್ನು ನಡೆಸಲಾಯಿತು. ನಸುಕಿನಲ್ಲಿ ಕೋಳಿ ಕೂಗುವ ಹಿನ್ನೆಲೆಯನ್ನು ತಿಳಿಯಲು, ಕೋಳಿಗಳನ್ನು ಹಲವು ಪ್ರಯೋಗಗಳಿಗೆ ಒಳಪಡಿಸಲಾಯಿತು. ಈ ಮೊದಲಿದ್ದ ತಿಳುವಳಿಕೆಯ ಹಾಗೆ ಅರಕೆಮನೆಯಲ್ಲಿದ್ದ ಕೋಳಿಗಳು ಅಲ್ಲಿ ನಡೆಯುವ ಹಲವು ಆಗುಹಗಳಿಗೆ ತಕ್ಕಂತೆ ಕೂಗುತ್ತಿದ್ದವು. ಹಾಗೆಯೇ ನಸುಕಿನ ಹೊತ್ತಿನಲ್ಲೂ ಕೂಗುತ್ತಿದ್ದವು. ಮೊದಲ ಎರಡು ವಾರಗಳವರೆಗೆ ಹನ್ನೆರಡು ಗಂಟೆಗಳ ಹೊತ್ತು ಬೆಳಕು ಮತ್ತು ಹನ್ನೆರಡು ಗಂಟೆಗಳ ಹೊತ್ತು ಕತ್ತಲಿರುವ ಪರಿಸರದಲ್ಲಿ ಬಿಡಲಾಯಿತು. ಬೆಳಗಾಗುವುದನ್ನು ಮೊದಲೇ ತಿಳಿದಿರುವಂತೆ ಎರಡು ಗಂಟೆ ಮುಂಚೆಯೇ ಕೋಳಿಗಳು ಕೂಗಲು ಶುರುಮಾಡಿದ್ದವು. ಗುಂಪಿನಲ್ಲಿ ಗಟ್ಟಿಮುಟ್ಟಾದ ಹುಂಜ ಮೊದಲು ಕೂಗುತ್ತಿತ್ತು ಮತ್ತು ಇನ್ನುಳಿದುವುಗಳು ಅದನ್ನು ಹಿಂಬಾಲಿಸುತ್ತಿದ್ದವು. ಗುಂಪಿನ ನಾಯಕನಂತಿರುವ ಬಲಿಶ್ಟವಾದ ಕೋಳಿ ಮೊದಲು ಕೂಗುವುದು ಇಲ್ಲಿ ಕಂಡುಕೊಂಡ ಒಂದು ಅಚ್ಚರಿಯ ಸಂಗತಿ.

ಕೋಳಿಗಳಿಗೆ ಬೆಳಗಾಗುವುದು ಮೊದಲೇ ಗೊತ್ತಾಗುತ್ತದೆ

ಇದೇ ತಂಡ ನಡೆಸಿದ ಮತ್ತೊಂದು ಪ್ರಯೋಗದಲ್ಲಿ ಕೋಳಿಗಳನ್ನು ದಿನಕ್ಕೆ 24 ಗಂಟೆಗಳ ಹೊತ್ತು ಕತ್ತಲಿನ ಕೋಣೆಗಳಲ್ಲಿ ಕೂಡಿಹಾಕಲಾಯಿತು. ಪೂರ‍್ತಿ ದಿನ ಕತ್ತಲಿನ ಕೋಣೆಯಲ್ಲಿದ್ದ ಕೋಳಿಗಳು ಸರಿಯಾಗಿ ಬೆಳಗಾಗುವ ಮೊದಲು ಕೂಗುತ್ತಿದ್ದವು. ಬೆಳಕಿನ ಅರಿವಿಲ್ಲದಿದ್ದರೂ ಕೋಳಿಗಳು ಪ್ರತಿದಿನ ನಸುಕಿನ ಹೊತ್ತಿಗೆ ಕೂಗತೊಡಗಿದ್ದವು. ಕೋಳಿ ಕೂಗುವುದರ ಹಿಂದೆ ಬೆಳಕಿನ ಬದಲಾವಣೆಯ ಪರಿಣಾಮ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿತ್ತು.

ಬೇರೆ ಬೇರೆ ಹೊತ್ತಿನಲ್ಲಿ ಕೋಳಿಗೂಡಿಗೆ ಬೆಳಕು ಹಾಯಿಸುವ ಮತ್ತು ಸದ್ದುಮಾಡುವ ಮೂಲಕ ಅರಕೆಗೆ ಒಳಪಟ್ಟ ಕೋಳಿಗಳ ದಿಕ್ಕುತಪ್ಪಿಸಿ, ಅವುಗಳ ನಡವಳಿಕೆಯನ್ನು ತಿಳಿಯಲು ಪ್ರಯತ್ನಿಸಲಾಯಿತು. ಇದಾಗಿಯೂ ಕೋಳಿಗಳ ನಡವಳಿಕೆಯಲ್ಲಿ ಅಂತಹ ಬದಲಾವಣೆ ಕಾಣಲಿಲ್ಲ. ಎಂದಿನಂತೆ ಸಹಜವಾಗಿಯೇ ನಸುಕಿನ ಹೊತ್ತಿನಲ್ಲಿ ಕೂಗುತ್ತಿದ್ದವು. ಕೋಳಿಗಳು ಹೊರಗಿನ ಪರಿಣಾಮಕ್ಕಿಂತ ಹೆಚ್ಚಾಗಿ ತಮ್ಮೊಳಗಿನ ಹೊತ್ತಿನ ಏರ‍್ಪಾಟಿಗೆ(internal clock) ತಕ್ಕಂತೆ ನಡೆದುಕೊಳ್ಳುವುದು ಕಂಡುಬಂತು.

ನಸುಕಿನಲ್ಲಿ ಕೋಳಿ ಕೂಗುವುದಕ್ಕೆ ಕಾರಣ ಅವುಗಳೊಳಗಿನ ಹೊತ್ತಿನ ಏರ‍್ಪಾಟು ಎಂದು ತಿಳಿದಿದೆ. ಆದರೆ ಈ ಹೊತ್ತಿನ ಏರ‍್ಪಾಟಿಗೆ ಬೆಳಗಾಗುವುದು ಮುಂಚೆಯೇ ಹೇಗೆ ಗೊತ್ತಾಗುತ್ತದೆ ಎನ್ನುವುದು ಅಚ್ಚರಿಯೇ ಸರಿ.

(ಮಾಹಿತಿ ಮತ್ತು ಚಿತ್ರ ಸೆಲೆ: todayifoundout.com, pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: