ರುಚಿಕರವಾದ ‘ಕುದಿಸಿದ ಕಡುಬು’

–  ಸವಿತಾ.

ಕುದಿಸಿದ ಕಡುಬು kudisida kadubu

ಬೇಕಾಗುವ ಸಾಮಾನುಗಳು

1 ಬಟ್ಟಲು ಕಡಲೇಬೇಳೆ
1 ಬಟ್ಟಲು ಬೆಲ್ಲದ ಪುಡಿ
1/2 ಬಟ್ಟಲು ಗೋದಿ ಹಿಟ್ಟು
1/4 ಬಟ್ಟಲು ಮೈದಾ ಹಿಟ್ಟು
1/4 ಬಟ್ಟಲು ಚಿರೋಟಿ ರವೆ
ಸ್ವಲ್ಪ ಉಪ್ಪು (ಬೇಕಾದಲ್ಲಿ)
4 ಏಲಕ್ಕಿ ಪುಡಿ
1 ಚಮಚ ಗಸಗಸೆ
ಕರಿಯಲು ಎಣ್ಣೆ

ಮಾಡುವ ಬಗೆ

ಗೋದಿ ಹಿಟ್ಟು, ಮೈದಾ ಹಾಗೂ ಚಿರೋಟಿ ರವೆಯನ್ನು ಒಂದು ಅಗಲ ಪಾತ್ರೆಗೆ ಹಾಕಿ. ಕಾಯಿಸಿಟ್ಟ ಎಣ್ಣೆ ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕಲಸಿದ ಹಿಟ್ಟನ್ನು ಎರಡು ಗಂಟೆಗಳ ಕಾಲ ಹಾಗೆಯೇ ತೆಗೆದಿಡಿ.

ಅದೇ ಹೊತ್ತಿನಲ್ಲಿ ಕಡಲೆಬೇಳೆಯನ್ನು ತೊಳೆದು, ನೀರು ಹಾಕದೇ ಎರಡು ಇಲ್ಲವೇ ಮೂರು ಕೂಗು ಕುಕ್ಕರಿನಲ್ಲಿ ಕುದಿಸಿ. ಕುಕ್ಕರಿನಲ್ಲಿ ಬೆಂದ ಕಡಲೆಬೇಳೆ ತಣ್ಣಗಾದ ಬಳಿಕ ಅದಕ್ಕೆ ಬೆಲ್ಲದ ಪುಡಿ ಸೇರಿಸಿ, ಮಿಕ್ಸರ್ ನಲ್ಲಿ ರುಬ್ಬಿ ಹೂರಣವನ್ನು ತಯಾರು ಮಾಡಿ. ಬೆಲ್ಲ ಕರಗಿ ಕಡಲೆಬೇಳೆ ಜೊತೆ ಚೆನ್ನಾಗಿ ಸೇರಿಕೊಳ್ಳಲು ರುಬ್ಬಿದ ಹೂರಣವನ್ನು ಒಂದು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಸ್ವಲ್ಪ ಬಿಸಿಮಾಡಿ. ಹೂರಣವೇನಾದರು ನೀರು ನೀರಾಗಿದ್ದರೆ ತೆಳು ಮಸ್ಲಿನ್ ಬಟ್ಟೆಯಲ್ಲಿ ಹಿಂಡಿ, ನೀರು ತೆಗೆದು ಹೂರಣವನ್ನು ಗಟ್ಟಿ ಮಾಡಿಕೊಳ್ಳಬಹುದು.

ಗಟ್ಟಿಯಾದ ಹೂರಣಕ್ಕೆ ಏಲಕ್ಕಿ ಪುಡಿ, ಗಸಗಸೆ ಸೇರಿಸಿ ಚೆನ್ನಾಗಿ ಕಲಸಿ ಕಡುಬಿಗೆ ತುಂಬಲು ಉಂಡೆ ಮಾಡಿ ಇಟ್ಟುಕೊಳ್ಳಿ. ಮೊದಲಿಗೆ ಕಲಸಿಟ್ಟ ಕಣಕದ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿ ಸ್ವಲ್ಪ ಹಿಟ್ಟು ತೆಗೆದುಕೊಂಡು ಎಲೆ ಲಟ್ಟಿಸಿರಿ. ಬಳಿಕ ಅದರ ಅಂಚಿಗೆ ನೀರು ಹಚ್ಚಿ, ನಡುವೆ ಹೂರಣ ಇಟ್ಟು ಎರಡು ಬದಿ ಅಂಚುಗಳನ್ನು ಜೋಡಿಸಿ ಒತ್ತಿ. ಹೀಗೆ ತಯಾರಾದ ಕಡುಬನ್ನು,  ಕುದಿಯುವ ನೀರಿಗೆ ಒಂದು ಚಮಚ ಎಣ್ಣೆ ಹಾಕಿ, ಬಳಿಕ ಕಡುಬು ಹಾಕಿ ಕುದಿಸಿ ತೆಗೆದರೆ ಕುದಿಸಿದ ಕಡುಬು ಸಿದ್ದವಾಗುತ್ತದೆ.

( ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: