ಅಜ್ಜಿಗೆ ಇದ್ಯಾವುದೂ ಹೊಸದಲ್ಲ, ನಿತ್ಯ ಇದ್ದದ್ದೇ

– ಸುನಿಲ್ ಮಲ್ಲೇನಹಳ್ಳಿ.

old lady, vegetable sellet, ತರಕಾರಿ ಮಾರುವ ಅಜ್ಜಿ

ಮಾರುಕಟ್ಟೆಯ ಒಂದು ಮೂಲೆಯಲಿ
ಅಜ್ಜಿಯೋರ‍್ವಳು ಹಾಕಿಕೊಂಡಿರುವ
ಬಾಡಿ ಹೋದ ತರಕಾರಿಯಂತೆ; ನನ್ನ ಕವನ!

ಬಣ್ಣ, ಬಣ್ಣದ ತಾಜಾ ತರಕಾರಿ, ಹಣ್ಣು ಹಂಪಲು
ಮಾರುಕಟ್ಟೆಯ ಎಲ್ಲಡೆ ತುಂಬಿ ತುಳುಕುವಾಗ,
ಅಜ್ಜಿಯ‌ ಬಾಡಿ ಹೋದ ತರಕಾರಿ ಮಳಿಗೆಗೆ
ಗಿರಾಕಿಗಳು ಬರುವುದಾದರೂ ಯಾವಾಗ?

ಅದೋ ಗಿರಾಕಿಯೋರ‍್ವ ಬಂದ, ಒಂದೊಂದೇ
ತರಕಾರಿಯ ಮುಟ್ಟಿ, ಹಿಸುಕಿ; ‘ಅಜ್ಜಿ, ತುಂಬಾ
ಬಾಡಿದಾವೆ ತರಕಾರಿ’ ಎಂದು ಹೇಳಿ ಹೋದ.
ಅಜ್ಜಿಗೆ ಇದ್ಯಾವುದೂ ಹೊಸದಲ್ಲ, ನಿತ್ಯ ಇದ್ದದ್ದೇ

ನೇಸರ ನೆತ್ತಿ ಮ್ಯಾಲೆ ಆಗಲೇ ಬಂದಾಯಿತು;
ಮಾರುಕಟ್ಟೆಯಲಿ ಎಲ್ಲರಿಗೂ ಊಟದ ಗಳಿಗೆ
ಐದು ಪೈಸೆ ವ್ಯಾಪಾರವಿಲ್ಲದೆ, ಊಟ ಮಾಡಲು
ಬಾರದು ಮನಸ್ಸು ಬಡಕಲು ಮೈಯ ಅಜ್ಜಿಗೆ

ಪಕ್ಕಾ ಚೌಕಾಸಿ ಗಿರಾಕಿಯೋರ‍್ವ ಬಂದೇ ಬಿಟ್ಟ
‘ಮೂಲಂಗಿ ಹೆಂಗಜ್ಜಿ ಕೇಜಿಗೆ?’ ಎಂದು ಕೇಳಿಬಿಟ್ಟ
ಇಪ್ಪತ್ತು ಇದೆ, ಹದಿನೈದಕ್ಕೆ ಹಾಕಿಕೊಡ್ತಿನಿ.
‘ಹೋಗಜ್ಜಿ, ಹತ್ತು ರೂಪಾಯಿಗೆ ಕೊಡು’..
ಅಜ್ಜಿ ಯಾವ ಮರುಮಾತಿಲ್ಲದೆ ತೂಗಿ ಕೊಟ್ಟಳು

ಒಬ್ಬನಾದರೂ‌ ವ್ಯಾಪಾರ ಮಾಡಿದನಲ್ಲ
ತುಸು ನಿರಾಳದಿಂದ ಸೊಸೆ ಕಟ್ಟಿಕೊಟ್ಟ
ಊಟದ ಡಬ್ಬಿಯ‌ ಮುಚ್ಚಳ ತೆಗೆದಳು ಅಜ್ಜಿ
ಹೌದು ಅದೇ ಅನ್ನ, ನಿನ್ನೆ ರಾತ್ರಿಯದು, ಬೆಳಗ್ಗೆ
ತಿಂಡಿಗೂ ಅದೇ, ಈಗ ಊಟಕ್ಕೂ ಅದೇ
ಅಜ್ಜಿಗೆ ಇದ್ಯಾವುದೂ ಹೊಸದಲ್ಲ, ನಿತ್ಯ ಇದ್ದದ್ದೇ

ಅಗೋ ವಸೂಲಿಗೆಂದು ಬಂದ ಪೋಲೀಸಪ್ಪ
‘ಒಂದಾಣೆ ವ್ಯಾಪಾರ ಆಗಿಲ್ಲ ಸಂಜೆ ಬರೋಗಪ್ಪ’
ದಿನಾ ನಿಂದು ಇದೇ ಗೋಳು, ‘ನಾಳೆ ನೀನು ಇಲ್ಲಿ
ಅಂಗಡಿ ಇಡದ ಹಾಗೆ ಮಾಡ್ತೀನಿ’ ಎಂದು, ಹೊರಟ
ಅಜ್ಜಿಗೆ ಇದ್ಯಾವುದೂ ಹೊಸದಲ್ಲ, ನಿತ್ಯ ಇದ್ದದ್ದೇ

ಸಂಜೆ ಐದಾಯಿತು ಮಾರುಕಟ್ಟೆ ತುಂಬ ಜನ
ಆದರೆ ಅಜ್ಜಿಯ ಅಂಗಡಿಗೆ ಗಿರಾಕಿ ಬರುತ್ತಿಲ್ಲ
ಬಂದರೂ ತರಕಾರಿಯ ಮುಟ್ಟಿ, ಹಿಸುಕಿ;
ಬಾಡಿದಾವೆ ಎನ್ನುವವರು ಮಾತ್ರ ಕಡಿಮೆಯಿಲ್ಲ
ಅಜ್ಜಿಗೆ ಇದ್ಯಾವುದೂ ಹೊಸದಲ್ಲ, ನಿತ್ಯ ಇದ್ದದ್ದೇ

ಸಂಜೆಯಾಗುತ್ತಲೇ ಜನರ ಸಂಕ್ಯೆ ಇಳಿಯುತ್ತಿದೆ
ತರಕಾರಿಯ ಗಂಟು ಮೂಟೆಯ ಸಮೇತ
ತನ್ನ ಮನೆಯತ್ತಾ ಹೆಜ್ಜೆ ಹಾಕಿದಳು ಅಜ್ಜಿ
ಪಾಪ ಬಂಡವಾಳವಿಲ್ಲದ ಬಡಪಾಯಿ ಅಜ್ಜಿ
ಇಂದಲ್ಲವೆಂದರೂ, ನಾಳೆಯಾದರೂ ಚೆನ್ನಾಗಿ
ಆದೀತು ವ್ಯಾಪಾರ, ಎನ್ನುವ ನಂಬಿಕೆಯಲಿ

(ಚಿತ್ರ ಸಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: