ಬಹ್ರೇನ್ ಮರಳುಗಾಡಿನಲ್ಲೊಂದು ಹಚ್ಚ ಹಸಿರಿನ ಮರ!

– ಕೆ.ವಿ.ಶಶಿದರ.

ಮರುಬೂಮಿ ಮರ The Tree of Life

ಪ್ರಕ್ರುತಿಯಲ್ಲಿ ಬೇದಿಸಲು ಅಸಾದ್ಯವಾದಂತಹ ಹಲವು ವಿಸ್ಮಯಗಳಿವೆ. ವೈಜ್ನಾನಿಕ ಸಿದ್ದಾಂತಗಳ ತಳಹದಿಯನ್ನು ಮೀರಿನಿಂತ ಇವು ಮಾನವನ ಬುದ್ದಿಮತ್ತೆಗೆ ಸಡ್ಡು ಹೊಡೆದಂತಿವೆ. ಬಹ್ರೇನ್‍ನ ಮರುಬೂಮಿಯ ಹ್ರುದಯಬಾಗದ ಮರಳ ರಾಶಿಯ ನಡುವೆ ಸರಿಸುಮಾರು 400 ವರ‍್ಶಗಳಿಂದ ವಿರಾಜಮಾನವಾಗಿರುವ ‘ದ ಟ್ರೀ ಆಪ್ ಲೈಪ್’ ಇಂತಹ ವಿಸ್ಮಯಗಳಲ್ಲಿ ಒಂದು.

ಸುಡುಬಿಸಿಲನ್ನು ಎದುರಿಸಿ ಬೆಳೆದಿರುವ ಮರ!

ದ ಟ್ರೀ ಆಪ್ ಲೈಪ್ ಅತವಾ ಶರಾಜತ್-ಆಲ್-ಹಯಾತ್ ಎಂದು ಸ್ತಳೀಯವಾಗಿ ಕರೆಯಲಾಗುವ ಈ ಮರ ಬಹ್ರೇನ್‍ನ ಜಬೆಲ್ ದುಕಾನ್ ಎಂಬಲ್ಲಿಂದ ಎರಡು ಕಿ.ಮೀ ದೂರದಲ್ಲಿರುವ, 25 ಮೀಟರ್ ಎತ್ತರದ ಮರಳು ದಿಬ್ಬದ ಮೇಲಿದೆ. ಈ ಮರದ ಬೇರುಗಳು ಚಿನ್ನದಂತೆ ಹೊಳೆಯುವ ಮರಳ ಸಾಗರದಲ್ಲಿ ಆಳವಾಗಿ ಬೇರೂರಿವೆ. ಇಂತಹ ಕಟಿಣ ಪರಿಸ್ತಿತಿಯಲ್ಲಿ ನೂರಾರು ವರ‍್ಶಗಳಿಂದ ಈ ಮರ ಬದುಕುಳಿದಿರುವುದರಿಂದ ಬಹ್ರೇನ್‍ರ ಪಾಲಿಗೆ ದಂತಕತೆಯಾಗಿದೆ.

ಈ 400 ವರ‍್ಶ ವಯಸ್ಸಿನ ಮೆಸ್ಕೈಟ್ ಮರವು (ಜಾಲಿ ಮರದ ಜಾತಿಗೆ ಸೇರಿದ ಮರ) ವಿಜ್ನಾನಿಗಳಿಗೆ ಹಾಗೂ ಜೀವಶಾಸ್ತ್ರಜ್ನರಿಗೆ ಇಂದಿಗೂ ಸಹ ಸವಾಲಾಗೇ ಉಳಿದಿದೆ. ವಿಜ್ನಾನಿಗಳು ಹಾಗೂ ಜೀವಶಾಸ್ತ್ರಜ್ನರು ಈ ವಿದ್ಯಮಾನದ ರಹಸ್ಯವನ್ನು ವಿವರಿಸಲು ಹಲವಾರು ಸಿದ್ದಾಂತಗಳನ್ನು ಮುಂದಿಟ್ಟರೂ ಯಾವುದು ಒಪ್ಪಿತವಾಗಿಲ್ಲ. ಹಾಗೂ ಈ ಸಿದ್ದಾಂತಗಳು ‘ದ ಟ್ರೀ ಆಪ್ ಲೈಪ್‍ನ’ ನಿಗೂಡತೆಗೆ ನಿಕರವಾದ ಉತ್ತರ ನೀಡುವಲ್ಲಿ ಸಂಪೂರ‍್ಣ ಎಡವಿದ್ದಾವೆ.

ಇದರ ಬೇರುಗಳು ಸುಮಾರು 175 ಅಡಿ ಆಳದವರೆಗೆ ಹೋಗಿವೆ

ಮಸ್ಕೈಟ್ ಜಾತಿಯ ಮರದ ಒಂದು ಲಕ್ಶಣವೆಂದರೆ ಇವುಗಳ ಬೇರುಗಳು ಬಹಳ ಆಳದವರೆಗೆ ಹೋಗಲು ಶಕ್ತವಾಗಿವೆ. 175 ಅಡಿಯವರೆಗೂ ನೀರನ್ನು ಅರಸುತ್ತಾ ಬೇರುಗಳು ಹೋಗಿರುವ ದಾಕಲೆಗಳಿವೆ. ದ ಟ್ರೀ ಆಪ್ ಲೈಪ್‍ನ ಬೇರೂ ಸಹ ಆಳವಾಗಿ ಬೇರೂರಿ ಬಹುಶಹ ಈ ಮರದ ನೀರಿನ ಅವಶ್ಯಕತೆಯನ್ನು ನೂರಾರು ವರ‍್ಶಗಳಿಂದ ಪೂರೈಸುತ್ತಿರಬಹುದೆಂದು ಅಂದಾಜಿಸಲಾಗಿದೆ.

ಸರ‍್ವೆ ಸಾಮಾನ್ಯವಾಗಿ ಇಂತಹ ವಿಸ್ಮಯಗಳಿಗೆ ಸ್ತಳೀಯರು ತಮ್ಮದೇ ಆದ ವಿವರಣೆಯನ್ನು ಹೊಂದಿರುತ್ತಾರೆ. ಆ ವಿವರಣೆಗಳಿಗೆ ಯಾವುದೇ ವೈಜ್ನಾನಿಕ ತಳಹದಿಯಿರುವುದಿಲ್ಲ ಹಾಗೂ ಅವರುಗಳು ಇದು ಅತಿಮಾನುಶ ಶಕ್ತಿಯ ಪ್ರತೀಕವೆಂದು ನಂಬಿ ಪೂಜ್ಯಬಾವದಿಂದ ನೋಡುತ್ತಾರೆ. ದ ಟ್ರೀ ಆಪ್ ಲೈಪ್ ಸಹ ಇದಕ್ಕೆ ಹೊರತಾಗಿಲ್ಲ. ಸ್ತಳೀಯರು ಈ ಸ್ತಳವನ್ನು ಈಡನ್ ಗಾರ‍್ಡನ್‍ನ ಸ್ತಳವೆಂದು ನಂಬಿದ್ದಾರೆ. ಅದರೆ ಬೆಡೋಯಿನ್ಸ್ ಎಂಬ ಅಲ್ಲಿನ ಮತ್ತೊಂದು ಪಂಗಡ ‘ಎನ್ಕಿ’ ಎಂಬ ಸುಮೇರಿಯನ್ ನೀರಿನ ಅದಿದೇವತೆಯ ಆಶೀರ‍್ವಾದದಿಂದ ಈ ಮರ ಬದುಕುಳಿದಿದೆ ಎಂದು ನಂಬಿದೆ.

ಇದು ಪ್ರವಾಸಿ ತಾಣವೂ ಹೌದು

ಬಹ್ರೇನ್‍ನಲ್ಲಿನ ಅತಿ ಪ್ರಸಿದ್ದ ಆಕರ‍್ಶಣೆಯ ಸ್ತಳಗಳಲ್ಲಿ ದ ಟ್ರೀ ಆಪ್ ಲೈಪ್ ಸಹ ಒಂದು. ಪ್ರವಾಸಿಗರು ಈ ಸ್ತಳ ತಲುಪಲು ಸಾಕಶ್ಟು ಪೂರ‍್ವ ತಯಾರಿ ಮಾಡಿಕೊಳ್ಳಬೇಕಿದೆ. ಮರುಬೂಮಿಯ ಸುಡುಬಿಸಿಲಿನಲ್ಲಿ, ಕಾದ ಮರಳಿನ ಮೇಲೆ ಸಾಕಶ್ಟು ದೂರ ಹೋಗಬೇಕಿರುವುದರಿಂದ ಕುಡಿಯಲು ಸಾಕಶ್ಟು ನೀರು, ಯಾವುದೇ ತೊಂದರೆಯಿರದ ಗಟ್ಟಿ ವಾಹನ ಮತ್ತು ವಾಹನದ ಇಂದನವನ್ನು ಗಮನಿಸಿಕೊಳ್ಳುವುದು ಬಹುಮುಕ್ಯ. ಮರುಬೂಮಿಯಲ್ಲಿ ಗಾಡಿಯನ್ನು ಓಡಿಸಿ ಅಬ್ಯಾಸವಿದ್ದವರನ್ನು ಚಾಲಕರಾಗಿ ಪಡೆಯುವುದು ಅತ್ಯಂತ ಸ್ವಾಗತಾರ‍್ಹ ಕ್ರಮ. ಇಲ್ಲವಾದಲ್ಲಿ ಮರಳು ಗುಂಡಿಯಲ್ಲಿ ಗಾಡಿ ಸಿಲುಕಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.

(ಮಾಹಿತಿ ಸೆಲೆ: bahrain.com, nautil.us, amusingplanet.com, worldtoptop.com )
(ಚಿತ್ರ ಸೆಲೆ: wiki)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.