ಶಾಂಗೈ ಸುತ್ತ ಒಂದು ಸುತ್ತು (ಕಂತು-2)

– ಜಯತೀರ‍್ತ ನಾಡಗವ್ಡ.

ಯು ಗಾರ‍್ಡನ್(Yu Garden), Shanghai, ಶಾಂಗೈ

ಯು (ಯುಯುಆನ್) ಗಾರ‍್ಡನ್

ಶಾಂಗೈ ಕುರಿತ ಹಿಂದಿನ ಬರಹದಲ್ಲಿ ಕೆಲವು ಜಾಗಗಳ ಬಗ್ಗೆ ತಿಳಿಸಲಾಗಿತ್ತು. ಶಾಂಗೈನಲ್ಲಿ ನೋಡಲೇಬೇಕಾದ ಇನ್ನಶ್ಟು ಜಾಗಗಳ ಕುರಿತು ಹೇಳದೇ ಹೋದರೆ ಸುತ್ತಾಟ ಪೂರ‍್ತಿಯೆನಿಸಲಿಕ್ಕಿಲ್ಲ.

ಯು ಗಾರ‍್ಡನ್(Yu Garden)

Yuyuan Garden, Dragon Wall, ಯು ಗಾರ‍್ಡನ್ ಡ್ರ್ಯಾಗನ್, ಕೆತ್ತನೆಯಿರುವ ಗೋಡೆ

ಡ್ರ್ಯಾಗನ್ ಕೆತ್ತನೆಯಿರುವ ಗೋಡೆ (ಯು ಗಾರ‍್ಡನ್)

ಯು ಗಾರ‍್ಡನ್ ಇಲ್ಲವೇ ಯುಯುಆನ್ ಗಾರ‍್ಡನ್ ಎಂದು ಕರೆಯಲ್ಪಡುವ ಈ ತಾಣ ಶಾಂಗೈನ ಹಳೆಯದಾದ ಬಾಗ. ಯು ಗಾರ‍್ಡನ್‌ಗೆ ಬಂಡೆಗಲ್ಲುಗಳ ತೋಟವೆನ್ನಬಹುದು. ಇದನ್ನು ಮಿಂಗ್ ಅರಸುಮನೆತನದ(Ming Dynasty) ಪಾನ್ ಯುಂಡುವಾನ್(Pan Yunduan) 1559ರ ಹೊತ್ತಿಗೆ ಅವನ ತಂದೆಗಾಗಿ ಕಟ್ಟಿಸಿದ. ವರುಶಗಳು ಕಳೆದಂತೆ ಮಿಂಗ್ ಅರಸು ಮನೆತನದವರಿಂದ ಬೇರೆ ಅರಸರ ಪಾಲಾಗುತ್ತ ಸಾಗಿದ ಈ ತೋಟ, 1961ರ ಹೊತ್ತಿಗೆ ಚೀನಾ ಸರಕಾರದ ಪಾಲಾಗಿ, ಮಂದಿಗೆ ನೋಡಲು ತೆರೆದುಕೊಂಡಿತು. ಸುಮಾರು 5 ಎಕರೆಯಶ್ಟು ದೊಡ್ಡದಾದ ಈ ಗಾರ‍್ಡನ್ಅನ್ನು ಸ್ಯಾನ್‌ಸುಯಿ ಹಾಲ್, ವಾನ್‌ಹುವಾ ಚೇಂಬರ್, ಡಿಯಾನ್‌ಚುನ್ ಹಾಲ್, ಹುಜಿಂಗ್ ಹಾಲ್, ಯುಹುವಾ ಹಾಲ್ ಮತ್ತು ಇನ್ನರ್ ಗಾರ‍್ಡನ್ ಎಂಬ 6 ಮುಕ್ಯ ಬಾಗಗಳಾಗಿ ಬೇರ‍್ಪಡಿಸಲಾಗಿದೆ. ಪ್ರತಿ ಬಾಗವು ಡ್ರ್ಯಾಗನ್ ಕೆತ್ತನೆಯಿರುವ ಗೋಡೆಗಳಿಂದ ಬೇರ‍್ಪಡಿಸಿರುವುದು ವಿಶೇಶ.

ಸ್ಯಾನ್‌ಸುಯಿ ಹಾಲ್‌ನಲ್ಲಿ 12 ಮೀಟರ್ ಎತ್ತರದ ಕಲ್ಲಿನ ಬಂಡಿಯ ಕೆತ್ತನೆಯಿದೆ. ಈ ಕೆತ್ತನೆಯಲ್ಲಿ ಕಮರಿ(Cliff,Gorge), ಸುರುಳಿಯಂತೆ ಸುತ್ತುವ ಗುಹೆ ಮುಂತಾದವನ್ನು ಕಾಣಬಹುದು. ವಾನ್‌ಹುವಾ ಚೆಂಬರ್ ಹತ್ತು ಸಾವಿರ ಹೂವುಗಳ ಮನೆಯಾಗಿತ್ತಂತೆ. ಡಿಯಾನ್‌ಚುನ್ ಹಾಲ್ 1820 ರಲ್ಲಿ ಕಟ್ಟಲಾದ ಈ ಬಾಗ, ಚೀನಾದ ಪ್ರಮುಕ ಬಂಡಾಯ ರಾಜಕೀಯ ಪಡೆ “ಸ್ಮಾಲ್ ಸ್ವೋರ‍್ಡ್ ಸೊಸೈಟಿ”ಯ(Small Sword Society) ನೆಲೆಯಾಗಿತ್ತು. ಯುಹುವಾ ಕೋಣೆಯೊಳಗೆ ರೋಸ್‌ವುಡ್ ಕಟ್ಟಿಗೆಯಿಂದ ಮಾಡಲ್ಪಟ್ಟ ಅಂದಿನ ಹೊತ್ತಿನ ಮರಮುಟ್ಟುಗಳನ್ನು(Furniture) ಕಾಣಬಹುದು. ಇನ್ನರ್ ಗಾರ‍್ಡನ್ ಒಳಗೆ ಚಿಕ್ಕ ಪುಟ್ಟ ಹೊಂಡಗಳಿವೆ. ಈ ಹೊಂಡದಲ್ಲಿ “ಕೊಯಿ(Koi)” ಹೆಸರಿನ ಕೇಸರಿ, ಬಿಳಿ, ಹಳದಿ ಬಣ್ಣದ ಮೀನುಗಳು ಕಂಡು ಬರುತ್ತವೆ.

ಯು ಗಾರ‍್ಡನ್ ಹೋಗುವ ದಾರಿಯಲ್ಲಿ ಚೀನಿಯರ ಪಗೋಡಾ ಶೈಲಿಯ ಮಾರುಕಟ್ಟೆ ಮೂಲಕವೇ ಸಾಗಬೇಕು. ಇಲ್ಲಿ ಬಟ್ಟೆ-ಬರೆ, ಆಟಿಕೆಗಳು, ಒಡವೆ, ಕಲಾ ಕುಸುರಿಯ ಸರಕು ಮಾರುವ ಅಂಗಡಿಯ ಸಾಲುಗಳು, ಕುರುಕಲು ತಿಂಡಿ ತಿನಿಸಿನ ಹೋಟೆಲ್‌ಗಳು ಎದುರಾಗುತ್ತವೆ. ಮುಂದೆ ಸಾಗಿದಂತೆ ಯು ಗಾರ‍್ಡನ್‌ನ ಮುಂಬಾಗಿಲು ಕಾಣಸಿಗುತ್ತದೆ. ಒಂದು ರೀತಿಯಲ್ಲಿ ಯು ಗಾರ‍್ಡನ್ ಮಾರುಕಟ್ಟೆ ಮದ್ಯದಲ್ಲಿರುವ ಬಂಡೆಗಲ್ಲಿನ ತೋಟವೇ ಸರಿ. ಶಾಪಿಂಗ್ ಒಲವಿಗರು ಇಲ್ಲಿ ತಮಗಿಶ್ಟವಾದ ನೆನೆಹಗಳನ್ನು(souvenir) ಕೊಳ್ಳಬಹುದು. ಈ ಮಾರುಕಟ್ಟೆ ಹಳಮೆಯದ್ದಾದ್ದರಿಂದ ಎಲ್ಲೆಡೆ ಪಗೋಡಾ ಶೈಲಿಯ ಕಟ್ಟಡಗಳಿಂದ ಕೂಡಿದೆ. ಹೆಚ್ಚಿನ ಅಂಗಡಿಗಳ ಮುಂದೆ ಆಕಾಶ ದೀಪಗಳನ್ನು ಸಾಲು ಸಾಲಾಗಿ ಹಾಕಿ ಸಿಂಗರಿಸಿರುತ್ತಾರೆ, ಸಂಜೆ ಹೊತ್ತಿನಲ್ಲಿ ಇವನ್ನು ಬೆಳಗಿಸಿ ಹಬ್ಬದ ವಾತಾವರಣವನ್ನೇ ಉಂಟು ಮಾಡಿರುತ್ತಾರೆ. ಯು ಗಾರ‍್ಡನ್ ಬದಿಯಲ್ಲಿ ಮಿಂಗ್ ಅರಸರು ಕಟ್ಟಿಸಿದ ಹಳಮೆಯ ಗುಡಿಯೂ ಇದೆ. ಅದರ ಪಕ್ಕದಲ್ಲೇ ಹಳಮೆಯ ಚಹಾದ ಮನೆ(Tea House) ಕೂಡ ಸಿಗುತ್ತದೆ. ಚೀನಿಯರ ಚಹಾದ ಹಳಮೆಯನ್ನು ಇದು ತೋರಿಸುತ್ತದೆ.

ನಾನ್‌ಜಿಂಗ್ ರೋಡ್(Nanjing Road)

ಶಾಂಗೈನ ದೊಡ್ಡ ಮಾರುಕಟ್ಟೆ ನಾನ್‌ಜಿಂಗ್ ಬೀದಿ Nanjing Road

ನಾನ್‌ಜಿಂಗ್ ಬೀದಿ ಮಾರುಕಟ್ಟೆ

ನಾನ್‌ಜಿಂಗ್ ಬೀದಿ ಶಾಂಗೈ ಊರಿನ ದೊಡ್ಡ ಮಾರುಕಟ್ಟೆ. 5.5 ಕಿ.ಮೀ.ಉದ್ದ ಚಾಚಿಕೊಂಡಿರುವ ಈ ಮಾರುಕಟ್ಟೆ ಜಗತ್ತಿನ ಬಲು ಉದ್ದದ ಹಾಗೂ ಜನಜಂಗುಳಿಯಿಂದ ತುಂಬಿರುವ ಮಾರುಕಟ್ಟೆಗಳಲ್ಲಿ ಮೊದಲ ಸ್ತಾನ ಪಡೆದಿದೆ. ದಿನಾಲೂ 10 ಲಕ್ಶ ಮಂದಿ ಇಲ್ಲಿಗೆ ಬರುತ್ತಾರೆಂಬ ಅಂದಾಜಿದೆ. ನಾನ್‌ಜಿಂಗ್ ಬೀದಿಯನ್ನು ನಾನ್‌ಜಿಂಗ್ ರೋಡ್ ವೆಸ್ಟ್ ಮತ್ತು ಈಸ್ಟ್ ಎಂದು ಎರಡು ಬಾಗಗಳಾಗಿ ಬೇರ‍್ಪಡಿಸಲಾಗಿದೆ. ಎರಡು ಬೀದಿಯೂದ್ದಕ್ಕೂ ಎಲೆಕ್ಟ್ರಾನಿಕ್ ಸರಕಿನ ಮಳಿಗೆಗಳು, ಅಲೆಯುಲಿ, ಚೂಟಿಯುಲಿ ಅಂಗಡಿಗಳೇ ಅಂಗಡಿಗಳು. ಈಸ್ಟ್ ಬಾಗ ಶಾಂಗೈನ ದೊಡ್ಡ ಹಾಗೂ ಹಳೆಯ ಡಿಪಾರ‍್ಟಮೆಂಟಲ್ ಸ್ಟೋರ‍್ಸ್ ಗಳು, ಬ್ರಿಟಿಶ್ ಸೇರಿದಂತೆ ಪಡುವಣ ದೇಶಗಳ ಶೈಲಿಯ ಕಾಪಿ-ತಿಂಡಿ ಮನೆಗಳಿಂದ ಕೂಡಿದೆ. ಈಸ್ಟ್ ಬಾಗದ ಕೊನೆಯಿಂದ ಕಾಲ್ನಡಿಗೆಯಲ್ಲೇ ‘ದಿ ಬಂಡ್‘ಗೆ ಹೋಗಬಹುದು.

ಇನ್ನೂ ನಾನ್‌ಜಿಂಗ್‍ ಬೀದಿಯ ಎಡಗಡೆ ಜಗತ್ತಿನ ಹೆಸರುವಾಸಿ ಬಟ್ಟೆ ಬರೆ, ಚಾಕ್ಲೇಟ್, ಕಾಪಿ, ಬರ‍್ಗರ್-ಪಿಜ್ಜಾ, ಗಡಿಯಾರ, ಕೈಚೀಲ, ವಜ್ರ-ಪ್ಲಾಟಿನಂ ಒಡವೆ ಮಾರಾಟದ ಮಳಿಗೆಗಳಿವೆ. ಚೀನಿಯರ ರೇಶ್ಮೆಯ ಶಾಲು, ಚೀನಿಯರು ಊಟಕ್ಕೆ ಬಳಸುವ ಕಡ್ಡಿಗಳು, ಪಿಂಗಾಣಿ ಸರಕುಗಳು, ಆಕಾಶ ದೀಪಗಳು ಕೂಡ ಇದೇ ಬೀದಿಯಲ್ಲಿ ಮಾರಲ್ಪಡುತ್ತವೆ. ನಾನ್‌ಜಿಂಗ್ ಬೀದಿಯ ಮದ್ಯದಲ್ಲಿ ಮಾತ್ರ ಬಂಡಿಗಳು ಓಡಾಡಲು ಅನುವು ಮಾಡಿಕೊಡಲಾಗಿದೆ. ಈಸ್ಟ್ ಮತ್ತು ವೆಸ್ಟ್ ಬಾಗಕ್ಕೆ ಕಾಲ್ನಡಿಗೆಯಲ್ಲೇ ಸಾಗುತ್ತ ಶಾಪಿಂಗ್ ಮಾಡಬೇಕು. ಸಾಗಿದಶ್ಟು ದೂರದವರೆಗೂ ಕಾಣುವ ಬೀದಿಯ ಇಕ್ಕೆಲಗಳಲ್ಲಿ ದೊಡ್ಡ ಮಳಿಗೆಗಳು, ಮಾಲ್‌ಗಳು ಅವುಗಳ ಮೇಲೆ ಮೂಡಿಬರುವ LED ಬಯಲರಿಕೆಯ(Advertisement) ತಿಟ್ಟಗಳನ್ನು ನೋಡುತ್ತ ಸಾಗುತ್ತಿದ್ದರೆ ಹೊತ್ತು ಕಳೆದದ್ದೇ ಗೊತ್ತಾಗುವುದಿಲ್ಲ. ವೆಸ್ಟ್ ಮತ್ತು ಈಸ್ಟ್ ಎರಡು ಬದಿಯಲ್ಲೂ ಸಾಕಶ್ಟು ರೆಸ್ಟೋರೆಂಟ್‌, ಕೆಪೆಗಳಿದ್ದು ಇಲ್ಲಿಗೆ ಬೇಟಿ ನೀಡುವವರನ್ನು ಕೈ ಬೀಸಿ ಕರೆಯುತ್ತವೆ. ಕ್ರಿಸ್‌ಮಸ್, ಚೀನಿಯರ ಹೊಸ ವರುಶ, ಈಸ್ಟರ್ ಮುಂತಾದ ಹಬ್ಬ ಹರಿದಿನಗಳಲ್ಲಿ ಇಲ್ಲಿನ ಕೆಲವು ಮಳಿಗೆಯವರು ಪಟಾಕಿ ಸಿಡಿಸಿ ಮೆರುಗು ಹೆಚ್ಚಿಸುತ್ತಾರೆ.

ಇದಲ್ಲದೇ ಹಲವು ಒಡವೆಮನೆಗಳು, ತೋಟಗಳು, ಅರಿಮೆ ಮತ್ತು ಚಳಕ ತೋರುವ ಕಲೆಮನೆಗಳು, ಹೆಸರುವಾಸಿ ಮೇಡಮ್ ಟುಸ್ಸಾಡ್ಸ್ ಒಡವೆಮನೆ ಶಾಂಗೈನಲ್ಲೂ ಇದೆ. ಆಸಕ್ತಿಯುಳ್ಳವರು ಈ ಜಾಗಗಳಿಗೆ ಬೇಟಿ ನೀಡಬಹುದಾಗಿದೆ. ಶಾಂಗೈಗೆ ಹೋದಾಗ ನೋಡಿ ಅನುಬವಿಸಲೇಬೇಕಾದದ್ದು ಇಲ್ಲಿನ ಸೆಳೆಗಲ್ಲ ತೇಲುವಿಕೆಯ ರೈಲು(Maglev Train). ಶಾಂಗೈನ ಪುಡೊಂಗ್ ಬಾನೋಡ ತಾಣದಿಂದ(Pudong Airport) ಲೊಂಗ್‌ಯಾಂಗ್ ರೋಡ್‌ವರೆಗೆ(Longyang Road) ಈ ಒಂದು ದಾರಿಯಲ್ಲಿ ಮಾತ್ರ ರೈಲು ಓಡಾಡುವುದರಿಂದ ಬಾನೋಡ ತಾಣಕ್ಕೆ ಹೋಗಿ ಬಂದು ಮಾಡುವರು ಇದನ್ನು ಬಳಸಬಹುದು. ಜರ‍್ಮನಿ, ಬ್ರಿಟನ್ ಬಿಟ್ಟರೆ ಸೆಳೆಗಲ್ಲ ತೇಲುವಿಕೆಯ ರೈಲು ಓಡಾಟ ಕಾಣಸಿಗುವುದು ಶಾಂಗೈನಲ್ಲಿ ಮಾತ್ರ. ಗಂಟೆಗೆ ಸುಮಾರು 430 ಕಿ.ಮೀ.ಗಳ ವೇಗದಿಂದ ಸಾಗುವ ಈ ರೈಲಿನ ಅನುಬವ ಪಡೆದು ಶಾಂಗೈನಿಂದ ಮರಳಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.orgpl.wikipedia.org, wikimedia.orgflickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: