ಅಂಜಿಕ್ಯುನಿ ಹಳ್ಳಿಯ ನಿಗೂಡ ರಹಸ್ಯ

– ಕೆ.ವಿ.ಶಶಿದರ.

ಅಂಜಿಕ್ಯುನಿ ಕೆನಡಾ Anjikuni Canada

1930 ನವೆಂಬರ್ ಚಳಿಗಾಲದ ಹುಣ್ಣಿಮೆಯ ದಿನ ರಾತ್ರಿ ಜೋ ಲೇಬೆಲ್ಲೆ ಎಂಬಾತ ಅಂಜಿಕ್ಯುನಿ ಹಳ್ಳಿಗೆ ಬೇಟಿ ನೀಡಿದ. ಅಂಜಿಕ್ಯುನಿ ಕೆನಡಾ ದೇಶದ ನುನಾವುಟ್‍ನ ಕಿವಲ್ಲಿಕ್ ಪ್ರಾಂತ್ಯದ ಅಂಜಿಕ್ಯುನಿ ಸರೋವರದ ದಡದಲ್ಲಿರುವ ಒಂದು ಪುಟ್ಟ ಹಳ್ಳಿ. ಹಳ್ಳಿಗೆ ಕಾಲಿಡುತ್ತಲೇ ಜೋ ಲೇಬೆಲ್ಲನಿಗೆ ಆಶ್ಚರ‍್ಯ ಕಾದಿತ್ತು. ಅದು ಅತ್ಯಂತ ನಿರ‍್ಜನ ಪ್ರದೇಶದಂತೆ, ಜೀವದ ಯಾವುದೇ ಸುಳಿವಿಲ್ಲದಂತೆ ಕಂಡಿತು. ಒಬ್ಬನೇ ಒಬ್ಬ ವ್ಯಕ್ತಿಯಾಗಲಿ, ಪ್ರಾಣಿಗಳಾಗಲಿ ಅಲ್ಲಿ ಕಾಣಲಿಲ್ಲ!

ಈ ಹಿಂದೆ ಜೋ ಲೇಬೆಲ್ಲೆ ತನ್ನ ಪ್ರವಾಸದ ಸಮಯದಲ್ಲಿ ಆಶ್ರಯಕ್ಕಾಗಿ ಹಲವು ಬಾರಿ ಈ ಹಳ್ಳಿಗೆ ಬಂದಿದ್ದ. ಅವನ ಅಂದಾಜಿನಂತೆ ಸುಮಾರು 2000 ದಿಂದ 2500 ಜನ ಇಲ್ಲಿ ವಾಸಿಸುತ್ತಿದ್ದರು. ಜೋ ಲೇಬೆಲ್ಲೆಗೆ ಹಳ್ಳಿಯ ಜನ ಅತ್ಯಂತ ಸ್ನೇಹಪರ ಸ್ವಾಗತವನ್ನು ಕೋರುತ್ತಿದ್ದರು. ಇಂದು ಅಲ್ಲಿ ಯಾರೊಬ್ಬರೂ ಕಾಣದಿರುವುದು ಅವನಿಗೆ ಬಯ ಮಿಶ್ರಿತ ಆಶ್ಚರ‍್ಯವನ್ನು ಉಂಟುಮಾಡಿತ್ತು.

ಆದರೂ ಜೋ ಹಳ್ಳಿಯ ಪ್ರತಿಯೊಂದು ಗುಡಿಸಲನ್ನು ಹುಡುಕಿ ನೋಡಿದ. ಪ್ರತಿಯೊಂದು ಗುಡಿಸಿಲಿನಲ್ಲೂ ತಯಾರಿಸಿದ್ದ ಅಡುಗೆ ಹಾಗೂ ದಿನಸಿ ಇರುವುದನ್ನು ಗಮನಿಸಿದ. ಆರಿದ ಒಲೆಯ ಮೇಲೆ ತಯಾರಾಗಿದ್ದ ತಿನಿಸು ಸಹ ಮಡಕೆಯಲ್ಲಿ ಹಾಗೇ ಇತ್ತು. ಗುಡಿಸಲ ವಾಸಿಗಳ ಬಟ್ಟೆ ಬರೆ ಯತಾ ಸ್ತಿತಿಯಲ್ಲೇ ಇದ್ದವು. ಮುಂಬಾಗಿಲಿನ ಗೋಡೆಗೆ ಒರಗಿಸಿಟ್ಟ ರೈಪಲ್ ಸಹ ಹಾಗೆ ಇತ್ತು. ಸಾಮಾನ್ಯವಾಗಿ ಇಲ್ಲಿಯ ಜನ ಹೊರಗೆ ಹೋಗುವಾಗ ರೈಪಲ್ ಒಯ್ಯದೆ ಹೋಗುತ್ತಿರಲಿಲ್ಲ. ಅಂಜಿಕ್ಯುನಿಯಲ್ಲಿದ್ದ ಉತ್ತರ ಅಮೇರಿಕಾದ ಎಸ್ಕಿಮೋಗಳು ಎಲ್ಲಿ ಹೋದರು ಎಂಬುದನ್ನು ತಿಳಿಯಲು ಯಾವು ಸುಳಿವು ಸಿಗಲಿಲ್ಲ. ಹಿಮದ ಮೇಲೆ ಎಲ್ಲಿಯೂ ಅವರ ಹೆಜ್ಜೆ ಗುರುತುಗಳು ಕಾಣಲಿಲ್ಲ.

ಹಳ್ಳಿಗರಶ್ಟೇ ಅಲ್ಲ, ಸ್ಮಶಾನದಲ್ಲಿದ್ದ ಹೆಣಗಳೂ ಕಾಣೆಯಾಗಿದ್ದವು!

ಹಳ್ಳಿಯ ಈ ನಿಶ್ಯಬ್ದ ವಾತಾವರಣದಿಂದ ಆಗಾತಗೊಂಡ ಜೋ ಕೂಡಲೇ ಹತ್ತಿರದ ಅಂಚೆ ಕಚೇರಿಗೆ ಹೋಗಿ ಕೆನಡಾದ ಮೌಂಟೆನ್ ಪೋಲೀಸರಿಗೆ ಸುದ್ದಿ ಮುಟ್ಟಿಸಿದ. ಕೂಡಲೇ ಕೆಲಸಕ್ಕಿಳಿದ ಪೋಲೀಸರು ಹಳ್ಳಿಗೆ ಬಂದು ಇಡೀ ಹಳ್ಳಿಯನ್ನು ಸಂಪೂರ‍್ಣವಾಗಿ ಹುಡುಕಿದರು. ಅವರಿಗೆ ದೊರೆತ ವಿವರ ಇನ್ನೂ ಬಯಾನಕವಾಗಿತ್ತು. ಜನ, ಪ್ರಾಣಿಗಳು ಮಾತ್ರವಲ್ಲದೇ ಸ್ಮಶಾನದಲ್ಲಿ ಸಮಾದಿಯಾಗಿದ್ದ ಹೆಣಗಳೂ ಕಾಣೆಯಾಗಿದ್ದವು!

ಅಂಜಿಕ್ಯುನಿ ಹಳ್ಳಿಯಿಂದ ಸ್ವಲ್ಪ ದೂರದಲ್ಲೇ, ಮಂಜಿನಲ್ಲಿ ಜಾರುಬಂಡಿಗಳನ್ನು ಎಳೆಯುವ ಸುಮಾರು ಏಳು ನಾಯಿಗಳು ಹಸಿವಿನಿಂದ ಸತ್ತು, ಮಂಜಿನಲ್ಲೇ ಸಮಾದಿಯಾಗಿರುವುದು ಅವರಿಗೆ ಪರಿಶೀಲನೆಯ ವೇಳೆಯಲ್ಲಿ ಕಂಡುಬಂತು. ಪಕ್ಕದ ಹಳ್ಳಿಯಲ್ಲಿನ ಎಸ್ಕಿಮೋಗಳು ಕೆಲದಿನಗಳ ಹಿಂದೆ ಅಂಜಿಕ್ಯುನಿಯಲ್ಲಿ ನೀಲಿದೀಪ ಕಂಡಿದ್ದಾಗಿಯೂ, ಕೊಂಚ ಹೊತ್ತಿನ ಬಳಿಕ ಕತ್ತಲಲ್ಲಿ ಕರಗಿಹೋಯಿತು ಎಂತಲೂ ತಿಳಿಸಿದರು. ಇದು ನಿಜವೋ ಅತವಾ ಕಟ್ಟು ಕತೆಯೋ ದೇವರೇ ಬಲ್ಲ.

ಪೋಲೀಸರು ನಡೆಸಿದ ತನಿಕೆಗಳು ಹೀಗೆ ಹೇಳುತ್ತಿವೆ

ಅಂಜಿಕ್ಯುನಿ ಹಳ್ಳಿಯ ಜನ ಮತ್ತು ಪ್ರಾಣಿಗಳು ಜೋ ಲೇಬೆಲ್ಲೆ ಅಲ್ಲಿಗೆ ಬರುವುದಕ್ಕೆ ಕನಿಶ್ಟ ಎರಡು ತಿಂಗಳ ಹಿಂದೆಯೇ ಕಣ್ಮರೆಯಾಗಿರಬಹುದು. ಹಳ್ಳಿಗರ ಕಣ್ಮರೆಗೆ ಬೇರೆಯದೇ ಕಾರಣ ಇರಬಹುದು. ಜೋ ಲೇಬೆಲ್ಲೆ ಅಂಜಿಕ್ಯುನಿಗೆ ಈ ಹಿಂದೆ ಎರಡು ಮೂರು ಬಾರಿ ಹೋಗಿದ್ದು ಸುಳ್ಳು. ಅಲ್ಲಿನ ನಿವಾಸಿಗಳು ಎಶ್ಟು ಎಂಬುದೂ ಸಹ ಅವರಿಗೆ ಅಂದಾಜಿಲ್ಲ. ಒಟ್ಟಾರೆಯಾಗಿ ಇಲ್ಲಿ ಯಾವುದೋ ಪವಾಡ ನಡೆದಿದೆ ಎಂಬುದೆಲ್ಲಾ ಸುಳ್ಳು ಎಂದು ಪೋಲೀಸರ ತನಿಕೆಯಲ್ಲಿ ಉಲ್ಲೇಕಿಸಲಾಗಿದೆ.

ಹಾಗಾದರೆ ಕೆನೆಡಿಯನ್ ಮೌಂಟನ್ ಪೋಲೀಸರಿಗೆ ಕಾಲಿ ಮನೆಗಳು, ಅದರಲ್ಲಿ ತಯಾರಿಸಿಟ್ಟಿದ್ದ ಆಹಾರ ಪದಾರ‍್ತಗಳು, ದಿನಸಿಗಳು, ಬಟ್ಟೆಬರೆಗಳು, ಗೋಡೆಯ ಮೂಲೆಗೆ ಒರಗಿಸಿಟ್ಟ ರೈಪಲ್‍ಗಳು ಅಂಜಿಕ್ಯುನಿಯ ಮನೆ ಮನೆಯಲ್ಲೂ ಕಂಡಿದ್ದು ಸುಳ್ಳೇ? ಅಲ್ಲಿನ ಜನ ಹೋದದ್ದಾದರೂ ಎಲ್ಲಿಗೆ? ಅಶ್ಟೂ ಜನ ಒಮ್ಮೆಲೆ ಹೋಗುವಂತ ಪರಿಸ್ತಿತಿ ಬರಲು ಕಾರಣವೇನು? ಇಲ್ಲವೇ ಅವರನ್ನು ಬಲವಂತವಾಗಿ ಬೇರೆ ಯಾರಾದರೂ ಕರೆದೊಯ್ದರೇ? ಹಾಗಾದಲ್ಲಿ ಇವರಿಂದ ಯಾವುದೇ ತೆರನಾದ ಪ್ರತಿರೋದ ಇರಲಿಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳು ಪುಂಕಾನುಪುಂಕವಾಗಿ ಇಂದಿಗೂ ಕೇಳಲ್ಪಡುತ್ತಿವೆ. ಉತ್ತರ ಮಾತ್ರ ಶೂನ್ಯ. ಪ್ರಶ್ನೆಗಳು ಪ್ರಶ್ನಾರ‍್ತಕವಾಗಿಯೇ ಉಳಿದಿವೆ. ಆದ್ದರಿಂದ ಅಂಜಿಕ್ಯುನಿ ಹಳ್ಳಿ ಕಾಲಿಯಾಗಿದ್ದು ಬಿಡಿಸಲಾಗದ ಹಲವಾರು ರಹಸ್ಯಗಳಲ್ಲಿ ಒಂದಲ್ಲವೇ?

(ಮಾಹಿತಿ ಸೆಲೆ: mysteriousfacts.comunexplained-mysteries.comanomalyinfo.com )
(ಚಿತ್ರ ಸೆಲೆ: mysteriousfacts.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: