ಚಿಣ್ಣರ ಪ್ರೀತಿಯ ‘ಶಿನ್‌ಚಾನ್’ ಕಾರ‍್ಟೂನ್ ಶೋ

– ಪ್ರಶಾಂತ. ಆರ್. ಮುಜಗೊಂಡ.

ಕಾರ‍್ಟೂನ್ಸ್ ಅಂದರೆ ನಮೆಲ್ಲರಿಗೂ ನೆನಪಾಗುವುದು ನಮ್ಮ ಬಾಲ್ಯ. ಚಿಕ್ಕವರಿದ್ದಾಗ ಶಾಲೆಯಿಂದ ಬಂದ ಕೂಡಲೆ ಗಡಿಬಿಡಿಯಲ್ಲಿ ಶೂ ತೆಗೆದು ಕಾಲ್ಚೀಲವನ್ನು ತೆಗೆಯದೇ, ಸ್ಕೂಲ್ ಬ್ಯಾಗನ್ನು ಎಲ್ಲೋ ಒಂದು ಕಡೆ ಬಿಸಾಡಿ, ಯುನಿಪಾರಂನಲ್ಲೆ ಕುರ‍್ಚಿಯನ್ನು ಹತ್ತಿ ನಿಂತು, ಕೈಗೆ ಎಟುಕದ ಟಿವಿ ಸ್ವಿಚ್ಚು ಹಾಕಿ, ಒಂದತ್ತು ನಿಮಿಶ ಅಮ್ಮ ಮುಚ್ಚಿಟ್ಟ ರಿಮೋಟು ಹುಡುಕುವುದರೊಳಗೆ ಸ್ವಲ್ಪ ಹೊತ್ತಿನ ಶೋ ತಪ್ಪಿಹೋಗುತ್ತಲ್ಲಾ ಅಂತ ಒದ್ದಾಟ ಶುರುವಾಗಿಬಿಡುತ್ತಿತ್ತು. ಕೊನೆಗೆ ಕಾಡಿ-ಬೇಡಿ ರಿಮೋಟು ಪಡೆಯಲು ಅಮ್ಮನ ಹತ್ತಿರ ಹೋದರೆ, ತುಸು ಹೊತ್ತು ನಮ್ಮಂತೆಯೇ ರಿಮೋಟ್ ಕೊಡಲು ಒಲ್ಲೆ ಎಂದು ಹಟ ಹಿಡಿಯುವ ಅಮ್ಮನ ಮೇಲೆ ಕೊಂಚ ಸಿಟ್ಟು ಮಾಡಿಕೊಂಡು ಕುಳಿತು ಬಿಡುತ್ತಿದ್ದೆವು. ಮುಕ ಉಬ್ಬಿಸಿ ಕುಳಿತುಕೊಂಡ ನಮಗೆ, ಅಮ್ಮ ಬಂದು ಹಲವು ಶರತ್ತುಗಳನ್ನು ಹಾಕಿ ಕೊನೆಗೆ ರಿಮೋಟ್ ಕೈಯಲ್ಲಿಟ್ಟಾಗ ಆದ ಸಂತಸಕ್ಕೆ ಅಳತೆಯೇ ಇಲ್ಲ.

ತರ-ತರಹದ ಹಲವಾರು ಕಾರ‍್ಟೂನ್‌ಗಳು ನಮ್ಮ ಬಾಲ್ಯದ ಸಮಯವನ್ನು ಕಳೆಯುವುದರಲ್ಲಿ ಸಹಾಯ ಮಾಡಿರುವುದಂತು ದಿಟ. ನಾವು ಕಳೆದ ನಮ್ಮ ಬಾಲ್ಯದ ಸಮಯಗಳಿಗೆ ಬಣ್ಣ ಹಚ್ಚಿರುವ ಬಗೆ-ಬಗೆಯ ಕಾರ‍್ಟೂನ್ ಶೋಗಳಲ್ಲಿ ಶಿನ್‌ಚಾನ್ ಕೂಡ ಒಂದು. ಅವನ ಹಟ-ತುಂಟಾಟ, ಅಮ್ಮ-ಅಪ್ಪನಿಗೆ ಕಾಡುವ ಪರಿ, ಗೆಳೆಯರೊಂದಿಗೆ ಅವನ ಆಟ-ಪಾಟ, ಇವನ ತೊಂದರೆಗಳಿಂದ ಬೇಸತ್ತು ಸಾಕು ಸಾಕಾಗಿ ದೂರವಾದ ಗೆಳೆಯರ ಹತ್ತಿರ ಇವನೇ ಹೋಗಿ ಮತ್ತೆ-ಮತ್ತೆ ಚುಡಾಯಿಸುವ ಬಗೆಯೊಂದಿಗೆ ಅವನ ನಗುವ ಹಿ.ಹಿ.ಹಿ.ಹಿ… ಸದ್ದಂತೂ ಎಂತವಹರಿಗೂ ತುಸು ಹೊತ್ತು ನಗುವಿಂದಾಚೆ ಬರದಂತೆ ಮಾಡಿ ಬಿಡುತ್ತಿತ್ತು. ಇವನ ಈ ಎಲ್ಲ ತರಲೆ-ತಾಪತ್ರೆಗಳಿಗೆ ಕೋಪಗೊಂಡ ಅಮ್ಮ, “ಶಿನ್ಚಾ…..ನ್…” ಅಂತ ಕೂಗಿ ತಲೆಯ ಮೇಲೆ ಉಬ್ಬು ಬರುವಂತೆ ಹೊಡೆಯುವ ದ್ರುಶ್ಯ ಮತ್ತಶ್ಟು ಮನರಂಜನೆಯ ಕಡೆ ಎಳೆದುಕೊಂಡು ಹೋಗುತ್ತಿತ್ತು. ಇವರೆಲ್ಲರ ನಡವಳಿಕೆಗಳ ನಡುವೆ, ತಾನು ನಾಯಿ ಎಂಬುದನ್ನು ಮರೆತಂತೆ ಆಡುವ ಶಿನ್‌ಚಾನ್‌ನ ಪ್ರೀತಿಯ ನಾಯಿ ಸಿರೋ ಮತ್ತೊಂದು ನಗು ತರಿಸುತ್ತಿದ್ದ ಪಾತ್ರ. ಶಿನ್‌ಚಾನ್‌ನ ಈ ತೊಂದರೆ-ತುಂಟಾಟಗಳು ಎಲ್ಲರಿಗೂ ಸಾಕಾಗಿ ಹೋದರೆ, ಇವನಿಗೇ ಕಾಟ ಕೊಡಲು ಹುಟ್ಟಿದ ಇವನ ತಂಗಿ ಹಿಮಾವಾರಿ, ಅಣ್ಣನಿಗಿಂತಲೂ ನಾನೇನೂ ಕಮ್ಮಿಯಿಲ್ಲ ಎಂಬ ಹಟದವಳು.

ಮ್ಯಾಗಜೀನ್‌ನಲ್ಲಿ ಶಿನ್‌ಚಾನ್

1990 ರಲ್ಲಿ ಜಪಾನಿನ ಮಂಗಾ ಆಕ್ಶನ್ ಎಂಬ ವಾರದ ಮ್ಯಾಗಜೀನ್‌ನಲ್ಲಿ ಮೊದಲ ಬಾರಿಗೆ ನಗಿಸುವ ಕತೆಗಳಾಗಿ(comics) ಹೊರಬಂದ ಕ್ರೇಯಾನ್ ಶಿನ್‌ಚಾನ್, ಅಲ್ಲಿಂದ ಸತತವಾಗಿ 20 ವರುಶಗಳ ಕಾಲ ಮೂಡಿ ಬಂದಿತ್ತು. 2008 ಸೆಪ್ಟಂಬರ್‌ನಲ್ಲಿ ಇದರ ಲೇಕಕರಾದ ಯೊಶಿತೊ ಉಶಿ ಅವರ ಮರಣದ ಕಾರಣದಿಂದ ಶಿನ್‌ಚಾನ್ ಕೊನೆಯಾಯಿತು. ನಂತರ ಹೊಸದೊಂದು ಮಂಗಾ ಸರಣಿಯೊಂದಿಗೆ 2010 ರಲ್ಲಿ ಉಶಿ ಅವರ ತಂಡದ ಸದಸ್ಯರ ಸಹಾಯದೊಂದಿಗೆ ನ್ಯೂ ಕ್ರೇಯಾನ್ ಶಿನ್‌ಚಾನ್ ಎಂಬ ಸಂಚಿಕೆಯೊಂದಿಗೆ ಮತ್ತೊಮ್ಮೆ ಆರಂಬವಾಯಿತು. ಸುಮಾರು 100 ಮಿಲಿಯನ್ ಮಂಗಾ ಪ್ರತಿಗಳು ವಿಶ್ವದಲ್ಲೆಡೆ ಇದುವರೆಗೆ ಮಾರಾಟವಾಗಿವೆ.

ಟಿವಿಯಲ್ಲಿ ಶಿನ್‌ಚಾನ್

ಟಿವಿ ಪರದೆಯ ಮೇಲೆ ಶಿನ್‌ಚಾನ್ ಮೊದಲು ತೆರೆ ಕಂಡಿದ್ದು ಜಪಾನಿನ ಅಸಾಹಿ ಚಾನೆಲ್‌ನಲ್ಲಿ. 1992 ರಿಂದ ಇಂದಿನವರೆಗೂ ಈ ಕಾರ‍್ಟೂನ್ ಟಿವಿ ಪರದೆಯ ಮೇಲೆ ಬರುತ್ತಿದ್ದು, ಬೇರೆ ಬೇರೆ ದೇಶಗಳ ಹಲವಾರು ಟೆಲಿವಿಶನ್ ನೆಟವರ‍್ಕ್‌ಗಳೊಂದಿಗೆ ವಿಶ್ವದಾದ್ಯಂತ ಪ್ರಸಾರವಾಗುತ್ತಿದೆ. ಬೇರೆ ಬೇರೆ ನುಡಿಯನ್ನಾಡುವ ಎಳೆಯರಿಗೆ ತಮ್ಮ-ತಮ್ಮ ನುಡಿಯಲ್ಲಿಯೇ ಶಿನ್‌ಚಾನ್ ಕಾರ‍್ಟೂನ್ ದೊರಕಲೆಂದು 30ಕ್ಕೂ ಹೆಚ್ಚು ಬಾಶೆಗಳಲ್ಲಿ ಡಬ್ ಆಗಿದೆ. ತಮಿಳು, ತೆಲಗು, ಹಿಂದಿಯಂತಹ ಬಾರತದ ನುಡಿಗಳಲ್ಲಿಯೂ ಡಬ್ ಆಗಿದ್ದು, ಕನ್ನಡನಾಡಿನ ಎಳೆಯರಿಗೆ ಕನ್ನಡ ನುಡಿಯಲ್ಲಿ ಈ ಕಾರ‍್ಟೂನ್ ಇನ್ನೂ ಡಬ್ ಆಗಿ ದೊರೆತೇ ಇಲ್ಲ. ಒಟ್ಟು 940 ಎಪಿಸೋಡ್‌ಗಳು, 25 ಚಲನಚಿತ್ರಗಳು ಹೊರಬಂದಿದ್ದು, ಅತೀ ಹೆಚ್ಚು ಗಳಿಕೆ ಮಾಡಿರುವ ಆನಿಮೇಟೆಡ್ ಮೂವಿಗಳಲ್ಲಿ ಶಿನ್‌ಚಾನ್ 24 ನೇ ಸ್ತಾನದಲ್ಲಿದೆ.

ಶಿನ್‌ಚಾನ್ ರೈಲು

ಜಪಾನಿನ ಕಾಸುಕಾಬ್ ಪಟ್ಟಣದ, ಟೋಕಿಯೊ ಮೆಟ್ರೊ ಹಂಜೊಮನ್ ಮತ್ತು ಟೋಕಿಯೊ ಡೆನ್ ಎನ್ಟೊಶಿ ಲೈನುಗಳ ನಡುವೆ ಓಡಾಡುವ ಒಟ್ಟು ಹತ್ತು ಮೆಟ್ರೊ ರೈಲುಗಳ ಮೇಲೆ ಶಿನ್‌ಚಾನ್‌ನ ಪಾತ್ರಗಳ ಚಿತ್ರಗಳಿವೆ. 2016 ರ ನವೆಂಬರ್ 3 ರಂದು ಆರಂಬವಾದ ಶಿನ್‌ಚಾನ್ ರೈಲುಗಳ ಓಡಾಟದ ಮುಕ್ಯ ಉದ್ದೇಶ ‘ಕಾಸುಕಾಬ್’ ಪಟ್ಟಣದ ಪ್ರವಾಸೋದ್ಯಮವನ್ನು ಬೆಳೆಸುವುದಾಗಿದೆ. ಹಳದಿ, ನೀಲಿ, ಕೆಂಪು, ಹಸಿರು ಮತ್ತು ಇನ್ನಿತರ ಬಣ್ಣಗಳ ಹಿನ್ನೆಲೆಯಲ್ಲಿ ಶಿನ್‌ಚಾನ್‌ ಚಿತ್ರಗಳಿರುವ ರೈಲುಗಳು ಆ ದಾರಿಯಲ್ಲಿ ಪ್ರಯಾಣಿಸುವ ಚಿಣ್ಣರಿಗೆ, ದೊಡ್ಡವರಿಗೆ ಹೊಸತೊಂದು ಅನುಬವ ಕೊಡುತ್ತಿವೆ.

ಶಿನ್‌ಚಾನ್ ನಿಜವಾದ ಕತೆಯಾ?

ತನ್ನ ತಂಗಿಯನ್ನು ಕಾರು ಅಪಗಾತದಿಂದ ಉಳಿಸಲು ಹೋಗಿ ತನ್ನ ಬದುಕನ್ನೇ ಕಳೆದುಕೊಂಡ ಪುಟ್ಟ ಬಾಲಕ ಶಿನ್‌ಚಾನ್ ಎಂದೂ, ಸಾವಿನ ಬಳಿಕ ಶಿನ್‌ಚಾನ್ ನೆನಪು ಮರುಕಳಿಸಿ ಅವನ ತಾಯಿ ಮೂಡಿಸಿದ್ದ ಬಗೆ ಬಗೆಯ ಚಿತ್ರಗಳೇ ಈ ಕಾರ‍್ಟೂನ್ ಹುಟ್ಟಿಗೆ ಕಾರಣವೆಂದು ಹಲವಾರು ಸುದ್ದಿಗಳು ಅಂತರ‍್ಜಾಲದಲ್ಲಿವೆ. ಆದರೆ ಈ ಎಲ್ಲಾ ಸುದ್ದಿಗಳು ಸುಳ್ಳಾಗಿದ್ದು ಶಿನ್‌ಚಾನ್ ಎಂಬುದು ಕಾಲ್ಪನಿಕ ಪಾತ್ರವಾಗಿದೆ ಎನ್ನುವುದು ಇನ್ನೊಂದು ವಾದ. ಇದರ ಬರಹಗಾರರಾದ ಯೊಶಿತೊ ಉಶಿ ತಮ್ಮ ಎಳೆವಯಸ್ಸಿನ ಕೆಲವು ನೆನಪುಗಳಿಗೆ ಮತ್ತಶ್ಟು ಬಣ್ಣ ಹಚ್ಚಿ, ತಾವು ಚಿಕ್ಕವರಿದ್ದಾಗ ಮಾಡಬೇಕು ಅಂದುಕೊಂಡು, ಮಾಡದಿರುವ ಹಲವು ತುಂಟ ಕೆಲಸಗಳನ್ನು ಶಿನ್‌ಚಾನ್ ಎಂಬ ಕಾರ‍್ಟೂನಿನ ಮೂಲಕ ತೋರಿಸಿದ್ದಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.orgtokyorailwaylabyrinth.blogspot.in, quora.com, realshinchan.quora.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks