‘ಚಿಪೊಟ್ಲೇ’ಯನ್ನು ಮೀರಿಸಿದ ಕೈ ರುಚಿ ಅಮ್ಮನದ್ದು!

– ಸುನಿಲ್ ಮಲ್ಲೇನಹಳ್ಳಿ.

ಚಿಪೊಟ್ಲೇ, Chipotle

 

ಹದಿನೈದು ದಿನಗಳಿಗೊಮ್ಮೆಯಾದರೂ ಅಮ್ಮ ತಪ್ಪಿಸದೆ ಮಾಡುವ ಮೊಳಕೆ ಹುರುಳಿಕಾಳಿನ ಗಟ್ಟಿಸಾರನ್ನು ಚಪಾತಿ ಅತವಾ ರಾಗಿ ಮುದ್ದೆ ಜೊತೆ ಊಟ ಮಾಡುವಾಗ, ಅಮೇರಿಕಾದಲ್ಲಿ ಹೆಚ್ಚು ಜನಪ್ರಿಯವಾಗಿರುವ ‘ಚಿಪೊಟ್ಲೇ’ (Chipotle) ಅನ್ನುವ ಪಾಸ್ಟ್‌ಪುಡ್ ಹೋಟೆಲ್ ಮತ್ತು ಅಲ್ಲಿ ತಿನ್ನಲು ಸಿಗುವ ಮೆಕ್ಸಿಕನ್ ಶೈಲಿಯ ಬರಿಟೋ (Burrito), ಟ್ಯಾಕೋ (Taco) ಎಂಬುವ ತಿನಿಸುಗಳು ನನಗೆ ನೆನಪಿಗೆ ಬರುತ್ತವೆ.

ಉದ್ಯೋಗ‌ ನಿಮಿತ್ತ ಅಮೇರಿಕದಲ್ಲಿ ನಾನು ಎರಡೂವರೆ ವರ‍್ಶ ಇದ್ದಾಗ, ಈ ಚಿಪೊಟ್ಲೇಯಲ್ಲಿ ಸಿಗುವ ಬರಿಟೋ, ಟ್ಯಾಕೋಗಳ ಸವಿರುಚಿಯನ್ನು ಹತ್ತಾರು ಬಾರಿಯಾದರೂ ತಿಂದಿರುವೆನು. ಇಲ್ಲಿ ಮುಕ್ಯವಾಗಿ, ಒಂದು ಬಟ್ಟಲಶ್ಟು ಅನ್ನವನ್ನು, ಒಂದೆರಡು ತರಹದ ಬೇಯಿಸಿದ ಕಾಳುಗಳು,‌ ಚೀಸ್, ಟೊಮೇಟೊ ಸಲ್ಸಾ (Salsa), ಬೆಣ್ಣೆಹಣ್ಣಿನ ತಿರುಳು (Butter Fruit), ಬೇಯಿಸಿದ ಮೆಕ್ಕೆಜೋಳದ ಕಾಳುಗಳು, ಹಸಿ ಈರುಳ್ಳಿ ಹಾಗೂ ಸೊಪ್ಪಿನ ಎಲೆ ಚೂರುಗಳು ಜೊತೆ ಮಿಶ್ರಮಾಡಿ, ಅಗಲವಾದ ಚಪಾತಿಯಲ್ಲಿ ಸುತ್ತಿ, ತಿನ್ನಲು ಕೊಡುತ್ತಾರೆ, ಇದೇ ಬರಿಟೋ! ಬೇಕಾದರೆ ರುಚಿಗೆಂದು ಅಲಿವ್ (Olive) ಮತ್ತು ಹಾಲೊಪಿನೊ (Jalopeno) ತುಣುಕುಗಳನ್ನು ಸಹ ಕೇಳಿ ಹಾಕಿಸಿಕೊಳ್ಳಬಹುದು.

ಬರಿಟೋ, Burrito

ಇದೇ ರೀತಿ, ಮೇಲೆ ಹೆಸರಿಸಿದ ಆಹಾರ ಪದಾರ‍್ತಗಳನ್ನು ಚಪಾತಿ ಬದಲಾಗಿ ಗರಿ, ಗರಿಯಾದ ಹಪ್ಪಳದಲ್ಲಿ ಹಾಕಿಕೊಡುವುದನ್ನು ‘ಟ್ಯಾಕೋ’ ಎಂದು ಕರೆಯುತ್ತಾರೆ. ಈ ಮೊದಲೆ ಹೇಳಿದ ಹಾಗೆ ಬರಿಟೋ, ಟ್ಯಾಕೋಗಳೇ ಚಿಪೊಟ್ಲೇಯ ಬಹು ಜನಪ್ರಿಯ ತಿನಿಸುಗಳು. ಕಾರಪ್ರಿಯರಾದ ಬಾರತೀಯರಿಗೆ ಚಿಪೊಟ್ಲೇಯಲ್ಲಿ ಸಿಗುವ ಆಹಾರ ಪದಾರ‍್ತಗಳು ಸ್ವಲ್ಪವಾದರೂ ಇಶ್ಟವಾಗುತ್ತವೆ. ಏಕೆಂದರೆ ಬರಿಟೋ, ಟ್ಯಾಕೋಗಳಲ್ಲಿರುವ ಬೇಯಿಸಿದ ಕಾಳುಗಳು, ಸಲ್ಸಾ (ಟೊಮ್ಯಾಟೊ, ಈರುಳ್ಳಿ ಮತ್ತು ಮೆಣಸಿನಕಾಯಿಗಳಿಂದ ಮಾಡಿರುತ್ತಾರೆ), ಅಲಿವ್, ಹಾಲೊಪಿನೊ ತುಣುಕುಗಳು,ಇವು ವಿಶೇಶವಾದ ರುಚಿಯನ್ನು ಕೊಡುತ್ತವೆ. ಹಾಲೊಪಿನೊ ಅಂದರೆ ಬೇರೇನೂ ಅಲ್ಲ; ಹಸಿರು ಮೆಣಸಿನಕಾಯಿ ಅಶ್ಟೇ. ಆದರೆ, ಆ ಮೆಣಸಿನಕಾಯಿಯೂ ನಮ್ಮಲ್ಲಿ ಬಳಸುವ ಮೆಣಸಿನಕಾಯಿಯಶ್ಟೂ ಕಾರವಾಗಿ ಇರುವುದಿಲ್ಲ ಮತ್ತು ಅದನ್ನು ವಿನೆಗರ‍್‌ನಲ್ಲಿ ನೆನಸಿರುತ್ತಾರೆ. ಅಲಿವ್ ತುಣುಕುಗಳನ್ನು ಸಹ ವಿನೆಗರ‍್‌ನಲ್ಲಿ ನೆನೆಸಿರುತ್ತಾರೆ.

ಮೆಕ್ಸಿಕನ್ ಶೈಲಿಯ ಆಹಾರ‌ಗಳೇ ಪ್ರದಾನವಾಗಿರುವ‌ ಈ ಚಿಪೊಟ್ಲೇಯ ಇತಿಹಾಸವನ್ನು ಕೆದಕುತ್ತಾ‌ ಹೋದರೆ; 1993ರಲ್ಲಿ ಸ್ಟೀವ್ ಎಲ್ಸ್ (Steve Ells) ಎಂಬುವನ್ನು ಕೊಲೊರಾಡೋ (Colorado) ರಾಜ್ಯದ, ಡೆನ್ವರ್ (Denver) ವಿಶ್ವವಿದ್ಯಾಲಯದ ಅಂಗಳದಲ್ಲಿ ಚಿಪೊಟ್ಲೇ ‌ಹೆಸರಿನ ಹೊಟೇಲ್ ಶುರುಮಾಡುತ್ತಾನೆ. ಈ ಹೋಟೆಲ್ ಪ್ರಾರಂಬಿಸಲು ಬೇಕಾದ ಬಂಡವಾಳವನ್ನು ಸ್ವತಹ ತನ್ನ‌ ತಂದೆಯಿಂದ ಸಾಲವಾಗಿ ಸ್ಟೀವ್ ಎಲ್ಸ್ ಪಡೆದಿರುತ್ತಾನೆ. ಆರಂಬದ ದಿನಗಳಲ್ಲಿ ದಿನಕ್ಕೆ ಕೇವಲ 110 ಬರಿಟೋ ಮಾರಿದರೆ ಸಾಕು; ತನ್ನ ಹೋಟೆಲ್ ವ್ಯವಹಾರವನ್ನು ಲಾಬದಾಯಕವಾಗಿ ನಡೆಸಬಹುದೆಂಬುದು ಸ್ಟೀವ್ ಎಲ್ಸ್‌ನ ಲೆಕ್ಕಾಚಾರವಾಗಿರುತ್ತೆ. ಆದರೆ, ಪ್ರಾರಂಬಿಸಿದ ತಿಂಗಳೊಳಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ದೊರೆತು, ದಿನವೊಂದಕ್ಕೆ 1000 ಬರಿಟೋಗಳನ್ನು ಮಾರುವಂತಾಗುತ್ತೆ!

ಈವೊಂದು ಅಬೂತಪೂರ‍್ವ ಯಶಸ್ಸಿನಿಂದ ಪ್ರೇರಿತನಾದ ಸ್ಟೀವ್ ಎಲ್ಸ್, ಕೆಲವೇ ವರುಶಗಳಲ್ಲಿ ಅಮೇರಿಕಾದ ಇನ್ನಿತರ ಕಡೆಯೂ ಚಿಪೊಟ್ಲೇ ಹೋಟೆಲ್ ಅನ್ನು ಆರಂಬಿಸುತ್ತಾನೆ. ಹೀಗೆ ಮುಂದುವರೆದ ಚಿಪೊಟ್ಲೇಯ ಯಶೋಗಾತೆ, ಜನಪ್ರಿಯತೆ ಇಂದಿಗೂ ಸಹ ಇಳಿಮುಕ ಕಾಣದೆ ಮುಂದುವರೆದಿದೆ. ಅಮೇರಿಕದಾದ್ಯಂತ ಸುಮಾರು 1600ಕ್ಕೂ ಹೆಚ್ಚು ಚಿಪೊಟ್ಲೇ ಸರಪಳಿಯ ಹೋಟೆಲ್‌ಗಳು ಕೆಲಸ ಮಾಡುತ್ತಿವೆ. ಈಗಲೂ ಬರಿಟೋ, ಟ್ಯಾಕೋಗಳೆ ಇವುಗಳೆಲ್ಲದರಲ್ಲೂ ಪ್ರದಾನ ತಿಂಡಿ-ತಿನಿಸುಗಳು. ಸ್ಟೀವ್ ಎಲ್ಸ್‌ನ ಕನಸು, ದೂರದ್ರುಶ್ಟಿಯ ಪಲವಾಗಿ 45 ಸಾವಿರಕ್ಕೂ ಹೆಚ್ಚು ಜನರಿಂದು ಚಿಪೊಟ್ಲೇಯಲ್ಲಿ ಕೆಲಸ ನಿರ‍್ವಹಿಸುತ್ತಿರುವರು. ಅಲ್ಲದೆ ತನ್ನ ವ್ಯವಹಾರಕ್ಕೆ ಬೇಕಾದ ಆಹಾರ-ದಾನ್ಯಗಳನ್ನು ಟ್ಯಾಕೋ, Tacoಚಿಪೊಟ್ಲೇಯು ಸಾವಿರಾರು ರೈತರಿಂದ ನೇರವಾಗಿ ಕರೀದಿ ಮಾಡುತ್ತೆ ಹಾಗೂ ದಿನವೊಂದಕ್ಕೆ ಸುಮಾರು 750000ಕ್ಕೂ ಹೆಚ್ಚು ಗ್ರಾಹಕರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಚಿಪೊಟ್ಲೇ ಸರಪಳಿಯ ಹೋಟೆಲ್‌ಗಳಿಗೆ ಬೇಟಿಕೊಡುತ್ತಾರೆ!

ಈ ಲೇಕನದ ಮೂಲ ಪ್ರೇರಣೆ ಹಾಗೂ ಉದ್ದೇಶವನ್ನು ಹೇಳುವಲ್ಲಿ, ಚಿಪೊಟ್ಲೇಯ ಯಶೋಗಾತೆಯನ್ನು ಉದಾಹರಣೆಯಾಗಿ ನಿಮ್ಮ ಮುಂದೆ ಪ್ರಸ್ತುತ ಪಡಿಸಬೇಕಾಯಿತು. ಈ ಲೇಕನವನ್ನು ಬರೆಯುವುದಕ್ಕೆ ನನಗೆ ಬಹುವಾಗಿ ಪ್ರೇರಣೆಯಾದದ್ದು; ನನ್ನ ಅಮ್ಮ ಹಾಗೂ ನನ್ನ ಅಮ್ಮನಂತೆಯೇ ನಮ್ಮ ನಾಡಿನ ಅದೆಶ್ಟೋ ಗ್ರುಹಿಣಿಯರು ಮತ್ತು ಸ್ತಳೀಯವಾಗಿ ಪ್ರಚಲಿತವಿರುವ ಅಡುಗೆಗಳನ್ನು, ತಿಂಡಿ-ತಿನಿಸುಗಳನ್ನು ಬಣ್ಣಿಸಲಾಗದಶ್ಟು ರುಚಿಕಟ್ಟಾಗಿ, ಸ್ವಾದಿಶ್ಟವಾಗಿ ಮಾಡುವ ಅವರ ಪರಿ!

ಅದು ಒಗ್ಗರಣೆ ‌ಮೇಳೈಸಿದ ಮೊಳಕೆಯೊಡೆದ ಹುರುಳಿಕಾಳಿನ ಗಟ್ಟಿಸಾರು ಅತವಾ ಬಸ್ಸಾರೇ ಇರಲಿ, ಹಿಚಕವರೆ ಬೇಳೆ ಸಾರೇ ಆಗಲಿ, ಸೋರೆಕಾಯಿ ಮತ್ತು ಮೊಸರಿನಿಂದ ಮಾಡುವ ‘ಹಸಿವಾಳೆ’ಯೇ ಇರಲಿ, ಎಣ್ಣೆಗಾಯಿ ಪಲ್ಯವೇ ಆಗಲಿ, ಮೊಸರಿನ ಜೊತೆ ಕಲಸಿದ ನವಣಕ್ಕಿ ಚಿತ್ರಾನ್ನವಾಗಲಿ, ಜೋಳದ ರೊಟ್ಟಿಯ ಜೊತೆಯಲ್ಲಿನ ಶೇಂಗಾ ಪುಡಿಯೇ ಇರಲಿ, ವಿದ-ವಿದವಾದ ತರಕಾರಿ ಪಲ್ಯೆಗಳೇ ಆಗಲಿ, ಹೀಗೆ ಅಮ್ಮಂದಿರ ಕೈಚಳಕದಲ್ಲರಳುವ ಊಟ, ತಿಂಡಿ-ತಿನಿಸುಗಳ ಸವಿರುಚಿ ಹಾಗೂ ಸ್ವಾದಿಶ್ಟತೆಯು ಯಾವ ಪಿಜ್ಜಾ, ಬರ‍್ಗರ‍್‌, ಬರಿಟೋ, ಟ್ಯಾಕೋಗಳಿಗಿಂತ ಕಡಿಮೆ ಇರೋಲ್ಲ! ಆರೋಗ್ಯದ ದ್ರುಶ್ಟಿಯಿಂದ ಕೂಡ ನಮ್ಮ ಈ ಸ್ತಳೀಯ ಆಹಾರಗಳಿಗೆ ಸರಿಸಾಟಿಯಾದ ಆಹಾರ ಮತ್ತೊಂದಿಲ್ಲ.

ಈ ವಿಚಾರವಾಗಿ ಒಮ್ಮೆಯಾದರೂ ನಾವು ಅಲೋಚಿಸಿದಾಗ ಮಾತ್ರವೇ ನಮಗನ್ನಿಸುವುದು; ಅಮ್ಮಂದಿರ ‌ಕೈರುಚಿಗೆ ಎಶ್ಟು ಮೆಚ್ಚುಗೆ ವ್ಯಕ್ತಪಡಿಸಿದರು ಸಾಲದೆಂದು. ನನ್ನ ಪ್ರಕಾರ ಟಿವಿಯೊಳಗಿನ ಕಾರ‍್ಯಕ್ರಮದಲ್ಲಿ ಕಲರ‍್‌ಪುಲ್ ಅಡುಗೆ ಮಾಡುವವರಲ್ಲ ಮಾಸ್ಟರ್ ಚೆಪ್. ನಮ್ಮ‌ ಬೇಕು-ಬೇಡಗಳನ್ನು ಅಂದರೆ, ಊಟದಲ್ಲಿ ‌ನಮಗೆ ಕಾರ ಜಾಸ್ತಿ ಬೇಕೋ, ಉಪ್ಪು ಕಡಿಮೆ ಬೇಕೋ, ಹುಳಿ ಇರಬೇಕೋ ಇಲ್ಲವೇ ಬೇಡವೋ, ಯಾವ ತರಕಾರಿ ನಮಗಿಶ್ಟ ಅತವಾ ಯಾವುದು ಕಶ್ಟ, ಸಿಹಿ ತಿಂಡಿಗಳಲ್ಲಿ ಯಾವುದು ಇಶ್ಟ, ಕುಡಿಯೋಕೆ ಬರಿ ಮಜ್ಜಿಗೆ ಬೇಕೋ ಇಲ್ಲವೇ ಮಸಾಲೆ ಮಜ್ಜಿಗೆಯೋ, ಹೀಗೆ ನಮ್ಮ ಊಟದ ವಿಚಾರವಾಗಿ ಸರ‍್ವವನ್ನೂ ತಿಳಿದು, ಅದಕ್ಕೆ ತಕ್ಕಂತೆ ಅಡುಗೆ ಮಾಡುವ ಅಮ್ಮನೇ ನಮ್ಮ ಪಾಲಿನ ನಿಜವಾದ ಮಾಸ್ಟರ್ ಚೆಪ್. ಅಲ್ಲದೇ ನಮಗೆ ಅಡುಗೆ ಮಾಡುವಾಗ ಅಮ್ಮಂದಿರು ತೋರುವ ಶ್ರದ್ದೆ, ಉತ್ಸುಕತೆ, ಕಾಳಜಿ, ಎಚ್ಚರಿಕೆ ಹಾಗೂ ಅಡುಗೆಯ ರುಚಿಯಲ್ಲಿ ಏನಾದರೂ ಸ್ವಲ್ಪ ಎಡವಟ್ಟಾದರೆ, ತಮ್ಮನ್ನೇ ತಾವು ಬೈದುಕೊಳ್ಳುವ ಅವರ ಮನೋಬಾವ; ಇವುಗಳನ್ನು ಪ್ರಪಂಚದ ಯಾವ ಹೆಸರಾಂತ ಮಾಸ್ಟರ್ ಚೆಪ್ ತೋರಲು ಸಾದ್ಯವಿಲ್ಲ.

ನನ್ನ ಚಿಕ್ಕಜ್ಜಿಯೊಬ್ಬರಿರುವರು, ಅವರು ಮಾಡುವ ಚಿತ್ರಾನ್ನದ ಹುಳಿ, ಮಸಾಲ ಮಜ್ಜಿಗೆ, ಉದುರು ಗಿಣ್ಣು, ಜೋಳದ ರೊಟ್ಟಿ, ರೊಟ್ಟಿಗೆಂದು ಮಾಡುವ ಮೆಣಸಿನಕಾಯಿ ‌ಚಟ್ನಿ, ಕಡುಬು, ಕಡುಬಿಗೆಂದು ಮಾಡುವ ತರಕಾರಿ ಪಲ್ಯೆ, ಇವೆಲ್ಲವನ್ನು ಬಾಲ್ಯದಿಂದಲೂ ತಿಂದು ಬೆಳೆದವನು ನಾನು. ಈಗ, ಅವರ ಆ ಅಸಾಮಾನ್ಯ ‌ಕೈರುಚಿಯನ್ನು ನೆನಪಿಸಿಕೊಂಡಾಗಲೆಲ್ಲ ಬಾಯಲ್ಲಿ‌ ನೀರೂರುತ್ತೆ! ಈಚಿನ ದಿನಗಳವರೆಗೂ ಮನೆಮಂದಿಗೆ ಮತ್ತು ಹೊಲ, ತೋಟದ ಕೆಲಸಗಳಿಗೆ ಬರುವ ಹತ್ತಾರು ಜನ‌ರಿಗೆ ನಿತ್ಯವೂ ಅಡುಗೆ ಮಾಡಿದ ಪರಿಣಿತಿ ಅವರದು. ಒಂದು ಬಗೆಯ ಅವಿರತ ಪರಿಶ್ರಮದ ಮೂಲಕ ಪಡೆದ ಅಡುಗೆ ಅನುಬವ ಅವರದು ಎಂತಲೂ ಹೇಳಬಹುದು. ನನ್ನ ಚಿಕ್ಕಜ್ಜಿಯಂತೆಯೇ ಅವಿರತ ಪರಿಶ್ರಮದ ಮೂಲಕ‌ ರುಚಿಕಟ್ಟಾಗಿ ಅಡುಗೆ ಮಾಡುವ ಅನುಬವ‌ ಪಡೆದ ನೂರಾರು ಗ್ರುಹಿಣಿಯರಿರುವರು ನಮ್ಮ ನಾಡಲ್ಲಿ. ಅವರೆಲ್ಲ ಅಡುಗೆ ಮಾಡುವ ತಮ್ಮ ಈ ಅನುಬವನ್ನು, ಪರಿಣಿತಿಯನ್ನು ಅದುನಿಕ‌ ಶೈಲಿಯ ಹೋಟೆಲ್‌ಗಳ ಮೂಲಕ ವ್ಯವಹಾರವಾಗಿಸಿದ್ದರೆ; ಇಂದು ಅದೆಶ್ಟೋ ಚಿಪೊಟ್ಲೇ ಇಲ್ಲವೇ ಮ್ಯಾಕ್ ಡೊನಾಲ್ಡ್ ರೀತಿ ಬ್ರುಹತ್ ಸರಪಳಿಯ ಹೋಟೆಲ್‌ಗಳು ಇರುತ್ತಿದ್ದವು ನಮ್ಮ ನಾಡಲ್ಲಿ! ಆದರೆ, ನಮ್ಮಲ್ಲಿಯ ಜನರಲ್ಲಿ ತಮ್ಮ ಅಡುಗೆ ಪರಿಣಿತಿಯನ್ನು, ಅನುಬವವನ್ನು ಹಾಗೂ ಪ್ರತಿಬೆಯನ್ನು ವ್ಯವಹಾರವಾಗಿಸುವ ಮನೋಬಾವವಿನ್ನೂ ಬಹುವಾಗಿ ಬೆಳೆದಿಲ್ಲ. ಮನೆಮಂದಿಯವರಿಗೆ, ನೆಂಟರಿಶ್ಟರಿಗೆ ರುಚಿಕಟ್ಟಾಗಿ ಅಡುಗೆ ಮಾಡುವುದೇ ಗ್ರುಹಿಣಿಯರ ಪರಮ ಮನೋದರ‍್ಮವಾಗಿದೆ.

ವಿಪರ‍್ಯಾಸದ ಸಂಗತಿಯೆಂದರೆ ನಮ್ಮ ಸಾಂಪ್ರದಾಯಿಕ ಅಡುಗೆಗಳಿಗೆ ವ್ಯಾವಹಾರಿಕ ಮನ್ನಣೆ ದೊರಕದೆ ಹೋದರೆ ಕಾಲಗಟ್ಟದಲ್ಲಿ ಅವುಗಳನ್ನು ನಾವು ಮರೆತು ಹೋಗುವುದರಲ್ಲಿ ಸಂಶಯವಿಲ್ಲ. ಮೆಕ್ಸಿಕನ್ ಶೈಲಿಯ ಬರಿಟೋ, ಟ್ಯಾಕೋಗಳು ಸಹ ಸಾಂಪ್ರದಾಯಿಕ ತಿನಿಸುಗಳೇ! ಆದರೆ ಇವುಗಳಿಗೆ ವ್ಯಾವಹಾರಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿರುವುದರಿಂದ ಅಮೇರಿಕಾದಾದ್ಯಂತ ಚಿರಪರಿಚಿತವಾದ ತಿನಿಸಿಗಳಾಗಿವೆ.

(ಚಿತ್ರ ಸಲೆ: wikipediafoodnetwork, wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: