ಬುಲೆಟ್ ಆಂಟ್ ಗ್ಲೌವ್ – ಬ್ರೆಜಿಲ್‍ನಲ್ಲಿರುವ ವಿಚಿತ್ರ ಸಂಪ್ರದಾಯ

– ಕೆ.ವಿ.ಶಶಿದರ.

ಬುಲೆಟ್ ಆಂಟ್ ಗ್ಲೌವ್ Bullet ant glove

ವಿಶ್ವ ಮಾನವನಲ್ಲಿ ಎಣಿಕೆಗೆ ಸಿಗದಶ್ಟು ಜಾತಿ, ದರ‍್ಮ, ಪಂಗಡಗಳಿವೆ. ಪ್ರತಿಯೊಂದು ಜಾತಿ, ದರ‍್ಮ, ಪಂಗಡಗಳೂ ತನ್ನದೇ ಆದ ಸಂಪ್ರದಾಯವನ್ನು ಹೊಂದಿರುವುದು ವಿಶಿಶ್ಟ. ಅಂತಹ ವಿಶಿಶ್ಟ ಸಂಪ್ರದಾಯಗಳಲ್ಲೊಂದು ಬ್ರೆಜಿಲ್‍ನಲ್ಲಿದೆ. ಅದೇ ಬುಲೆಟ್ ಆಂಟ್ ಗ್ಲೌವ್.

ಬ್ರೆಜಿಲ್‍ನ ಇಪ್ಪತ್ತಾರು ರಾಜ್ಯಗಳಲ್ಲಿ ಒಂದಾದ ಹಾಗೂ ಹಲವಾರು ದೊಡ್ಡ ನಗರಗಳಿಗೆ ನೆಲೆಯಾಗಿರುವ ಅಮೆಜೋನಾಸ್, ಸೊಂಪಾದ ಮಳೆಕಾಡು ಹಾಗೂ ದಟ್ಟವಾದ ಮರಗಿಡಗಳಿಂದ ಸುತ್ತುವರೆದಿರುವ ಪ್ರದೇಶ. ಇಲ್ಲಿನ ದಟ್ಟ ಕಾಡಿನ ನಡುವೆ ಅನೇಕ ಬುಡಕಟ್ಟು ಜನಾಂಗದವರು ಆದುನಿಕತೆಯ ಗಂದವೇ ಇಲ್ಲದೆ, ತಮ್ಮದೇ ಆದ ಜೀವನ ಶೈಲಿಯಲ್ಲಿ ತಮ್ಮ ಪಂಗಡದ ಹಿರಿಯರ ಮಾರ‍್ಗದರ‍್ಶನದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಸ್ಯಾಟರೆ-ಮಾವೆ ಎಂಬ ಪಂಗಡ ಅಮೆಜೋನಾಸ್‍ನಲ್ಲಿ ತಳವೂರಿರುವ ಅನೇಕ ಪಂಗಡಗಳಲ್ಲಿ ಅತಿ ದೊಡ್ಡದು, ಸುಮಾರು ಹತ್ತು ಸಾವಿರ ಸದಸ್ಯರನ್ನು ಹೊಂದಿದೆ. ಹೊರಗಿನ ನಾಗರೀಕತೆಯ ಪ್ರಬಾವದಿಂದ ಮುಕ್ತವಾಗಿರುವ ಸ್ಯಾಟರೆ-ಮಾವೆ ಪಂಗಡದವರು ಅಮೇರಿಕಾದ ಸ್ತಳೀಯರ ಸಮ್ರುದ್ದ ಇತಿಹಾಸವನ್ನು ತಿಳಿಸುವ ಕೊಂಡಿಯಾಗಿದ್ದಾರೆ. ಈ ಪಂಗಡದವರ ಅನನ್ಯ ಜೀವನ ಶೈಲಿ ಮತ್ತು ಸಂಪ್ರದಾಯದ ಬಗ್ಗೆ ಸಿಕ್ಕಿರುವ ಮಾಹಿತಿ ತುಂಬಾ ಕಡಿಮೆ.

ಇವರು ಕ್ರುಶಿಯ ಬಗ್ಗೆ ಅಶ್ಟಾಗಿ ಕಾಳಜಿ ವಹಿಸಿದವರಲ್ಲ. ಮಾವೆ ಯೋದರಿಗೆ ಮತ್ತು ಬೇಟೆಗಾರರಿಗೆ ತಮ್ಮ ಬುಡಕಟ್ಟಿನ ಸದಸ್ಯರ ಯೋಗಕ್ಶೇಮದ ಬಗ್ಗೆ ಬಹಳ ಆಸ್ತೆ. ನೆರೆಹೊರೆಯವರಿಂದ ಹಾಗೂ ನರಬಕ್ಶಕರಿಂದ ಪಂಗಡದ ಇತರೆ ಸದಸ್ಯರನ್ನು ಕಾಪಾಡುವುದು ಹಾಗೂ ಅವಲಂಬಿತರಿಗೆ ಆಹಾರ ಪದಾರ‍್ತಗಳನ್ನು ಪೂರೈಸುವುದು ಇವರ ಪ್ರಮುಕ ಕೆಲಸ. ಶಕ್ತಿ ಮತ್ತು ದೈರ‍್ಯ ಇದರ ಪ್ರಾತಮಿಕ ಅವಶ್ಯಕತೆ. ಹಾಗಾಗಿ ಯೋದ ಹಾಗೂ ಬೇಟೆಗಾರರಿಗೆ ಪಂಗಡದಲ್ಲಿ ವಿಶೇಶ ಗೌರವ ಹಾಗೂ ಸ್ತಾನಮಾನ. ಬುಡಕಟ್ಟು ಜನಾಂಗದವರ ವಿಶೇಶವೆಂದರೆ ಯುವಕರನ್ನು ಶಕ್ತ ಯೋದರನ್ನಾಗಿಸುವ ಉದ್ದೇಶದಿಂದ ಚಿಕ್ಕಂದಿನಿಂದಲೂ ಅವರ ಮನಸ್ಸನ್ನು ಪರಿವರ‍್ತಿಸುವ ಕೆಲಸವನ್ನು ಪಂಗಡದ ಹಿರಿಯರು ಅದರಲ್ಲೂ ತಾಯಂದಿರು ನಿರಂತರವಾಗಿ ಮಾಡುತ್ತಲೇ ಬರುತ್ತಾರೆ. ಯುವಕರೂ ಅಶ್ಟೆ, ಯೋದ ಎಂಬ ಗೌರವ ಸಂಪಾದಿಸಲು ಹಾತೊರೆಯುತ್ತಾರೆ.

ಸ್ಯಾಟರೆ-ಮಾವೆ ಪಂಗಡದಲ್ಲಿ ಯುವಕರು ಯೋದರಾಗುವುದು ಅಶ್ಟು ಸುಲಬದ ಮಾತಲ್ಲ

ಯೋದರಾಗುವುದಕ್ಕೆ ಮುನ್ನ ಅವರು ಒಳಪಡಬೇಕಿರುವ ಆಚರಣೆ ಅವರ ಜನಾಂಗದಲ್ಲೇ ಅತಿ ಪವಿತ್ರ. ಹಿರಿಯರ ಸ್ತಾನಮಾನ ಪಡೆಯಲು ಬಯಸುವ ಯುವಕರು ಈ ಆಚರಣೆಯನ್ನು ಯಶಸ್ವಿಯಾಗಿ ದಾಟಿ ಬರಬೇಕು. ಕಾಡಿನಲ್ಲಿ ಅವರು ಎದುರಿಸಬೇಕಾದ ಅತಿ ಕೆಟ್ಟ ಗಳಿಗೆಯನ್ನು ತಾಳಿಕೊಳ್ಳುವ ಹಾಗೂ ಅತಿ ಸಂಯಮದಿಂದ ಸಂಕಶ್ಟವನ್ನು ಎದುರಿಸುವ ಸಾಮರ‍್ತ್ಯವನ್ನು ಒರಗೆ ಹಚ್ಚುವುದೇ ಈ ಆಚರಣೆಯ ಮೂಲ ಉದ್ದೇಶ. ತಡೆಯಲಾರದಂತ ದೈಹಿಕ ನೋವು ಎದುರಾದಾಗಲೂ ಶಾಂತ ಸ್ವಬಾವವನ್ನು ಕಾಪಾಡಿಕೊಳ್ಳುವುದು ಮತ್ತು ಯಾವುದೇ ತೆರನಾದ ಬಾವನೆಗಳನ್ನು ವ್ಯಕ್ತಪಡಿಸದ ಮುಕಚರ‍್ಯೆ ಹೊಂದಿರುವುದು ಬಹುಮುಕ್ಯ. ಹಿರಿಯರ ಪಟ್ಟ ಅಲಂಕರಿಸುವವರು ಕಶ್ಟ ಸಹಿಶ್ಣುಗಳಾಗಿರಬೇಕು.

ಮಾವೆ ಪಂಗಡದ ಯುವಕರಲ್ಲಿ ಈ ಎಲ್ಲಾ ಗುಣಗಳು ಮೈಗೂಡಿರುವ ಬಗ್ಗೆ ನಿರ‍್ದರಿಸಲು ಅವರು ನಡೆಸುವ ಸಾಂಪ್ರದಾಯಿಕ ಪರೀಕ್ಶೆಯೇ ‘ಬುಲೆಟ್ ಆಂಟ್ ಗ್ಲೌವ್” ಪರೀಕ್ಶೆ.

ಏನಿದು ಬುಲೆಟ್ ಆಂಟ್ ಗ್ಲೌವ್?

ಅಮೆಜಾನ್ ಮಳೆಕಾಡು ಅತಿ ಹೆಚ್ಚು ವಿಶಪೂರಿತ ಇರುವೆಯ ತಳಿಗೆ ನೆಲೆ. ಜೀವಶಾಸ್ತ್ರದಲ್ಲಿ ಅವನ್ನು ಪಾರಾಪೊನೆರಾ ಕ್ಲವಟಾ ಎನ್ನುತ್ತಾರೆ. ಇದರ ಒಂದು ಕುಟುಕು ಬುಲೆಟ್ ಹೊಡೆತದಶ್ಟೇ ತೀಕ್ಶ್ಣವಾದ ನೋವಿನಿಂದ ಕೂಡಿರುವ ಕಾರಣ ಇದರ ಅಡ್ಡ ಹೆಸರು ‘ಬುಲೆಟ್ ಇರುವೆ’. ಬುಲೆಟ್ ಇರುವೆಯ ಒಂದು ಕುಟುಕು ನೀಡುವ ನೋವು ಅತಿ ಬಯಂಕರವಾದ ಕಾರಣ ‘ಎಸ್‍ಎಸ್‍ಪಿಐ’ (ಸ್ಮಿತ್ ಸ್ಟಿಂಗ್ ಪೆಯ್ನ್ ಇಂಡೆಕ್ಸ್) ನಲ್ಲಿ ಮೊದಲನೇ ಸ್ತಾನವನ್ನು ಅಲಂಕರಿಸಿದೆ. ಈ ಇಂಡೆಕ್ಸ್ ಅನ್ನು ಜಾರಿಗೆ ತಂದವರು ಜಸ್ಟಿನ್ ಸ್ಮಿತ್. ಹೈಮನೋಪ್ಟೆರನ್‍ಗಳು (ಜೇನ್ನೊಣ, ಕಣಜ, ಕಟ್ಟಿರುವೆ ಮುಂತಾದವು) ಕುಟುಕಿದಾಗ ಆಗುವ ನೋವಿನ ತೀವ್ರತೆಯ ಅನುಕ್ರಮವಾಗಿ ಈ ಇಂಡೆಕ್ಸ್ ನಲ್ಲಿ ಪಟ್ಟಿ ಮಾಡಿದ್ದಾರೆ. ಬುಲೆಟ್ ಇರುವೆಯ ಕುಟುಕಿನ ತೀವ್ರತೆ ಎಲ್ಲಾ ಕೀಟಗಳ ಕುಟುಕಿಗಿಂತ ಅತಿ ಹೆಚ್ಚು ನೋವಿನದ್ದು.

ಇದನ್ನೇ ಮಾವೆ ಜನಾಂಗದವರು ತಮ್ಮ ಪರೀಕ್ಶೆಗೆ ಆಯ್ದುಕೊಂಡ ಕೀಟ. ಮಾವೆ ಜನಾಂಗದಲ್ಲಿ ಯೋದರಾಗ ಬಯಸುವ ಯುವಕರು ಇಂತಹ ನೂರಾರು ಬುಲೆಟ್ ಇರುವೆಯ ಕುಟಕನ್ನು ಸಹಿಸುವ ಶಕ್ತಿಯನ್ನು ಹೊಂದಿರುವುದು ಅವಶ್ಯಕ. ಯುವಕರು/ಹುಡುಗರು (ಕನಿಶ್ಟ ಹನ್ನೆರೆಡು ವರ‍್ಶ ತುಂಬಿರಬೇಕು) ಯೋದರಾಗುವ ಪ್ರಕ್ರಿಯೆಯೇ ಈ ಜನಾಂಗದಲ್ಲಿ ಒಂದು ಅಸಾದಾರಣ ಆಚರಣೆ. ಈ ಸಮಾರಂಬದ ತಯಾರಿಯಲ್ಲಿ ಪಂಗಡದ ಹಿರಿಯರು ಕಾಡಿನಲ್ಲೆಲ್ಲಾ ತಿರುಗಾಡಿ ನೂರಾರು ಬುಲೆಟ್ ಇರುವೆಗಳನ್ನು ಕೂಡಿಹಾಕುತ್ತಾರೆ. ಬಳಿಕ ಗಿಡಮೂಲಿಕೆಯ ರಸವನ್ನು ಬಳಸಿ ಅವನ್ನು ತಾತ್ಕಾಲಿಕ ಪ್ರಜ್ನಾಹೀನ ಸ್ತಿತಿಗೆ ತರುತ್ತಾರೆ. ಪ್ರಜ್ನಾಹೀನ ಸ್ತಿತಿಯಲ್ಲಿರುವ ಬುಲೆಟ್ ಇರುವೆಗಳನ್ನು ಬಿದಿರಿನಿಂದ ತಯಾರಿಸಿದ ಜೋಡಿ ಕೈಗವಸುಗಳಿಗೆ ತುಂಬುತ್ತಾರೆ.

ಬುಲೆಟ್ ಆಂಟ್ Bullet Ant

ಯೋದರಾಗ ಬಯಸುವ ಯುವಕರ/ಹುಡುಗರ ಕೈಗಳಿಗೆ ಬುಲೆಟ್ ಇರುವೆ ತುಂಬಿರುವ ಕೈಗವಸನ್ನು ಹಾಕಲಾಗುವುದು. ಪ್ರಜ್ನಾವಸ್ತೆಗೆ ಬರುವ ಬುಲೆಟ್ ಇರುವೆಗಳ ಮೊದಲ ಕೆಲಸವೇ ಕುಟುಕುವುದು. ಅದರ ಪ್ರತಿ ಕುಟುಕೂ ಸಹ ಯುವಕ/ಹುಡುಗರಿಗೆ ಯಮಯಾತನೆಯ ಅನುಬವ. ಇಂತಹ ನೂರಾರು ಬುಲೆಟ್ ಇರುವೆಗಳು ಒಂದರ ನಂತರ ಮತ್ತೊಂದು ಕುಟುಕಲು ಪ್ರಾರಂಬಿಸಿದರೆ ಕೈಗವಸನ್ನು ಕಿತ್ತು ಬಿಸಾಡುವ ಯೋಚನೆ ಬರದಿರಲು ಸಾದ್ಯವಿಲ್ಲ.

ಇಶ್ಟೆಲ್ಲಾ ನೋವಾದರೂ ಅವರು ಕೈಯನ್ನು ಗವಸಿನಿಂದ ಹೊರತೆಗೆಯುವಂತಿಲ್ಲ. ಬರ‍್ತಿ ಹತ್ತು ನಿಮಿಶಗಳ ಕಾಲ ಗವಸಿನಲ್ಲಿಯೇ ಇಟ್ಟಿರಬೇಕು. ಇರುವೆಗಳ ಕುಟುಕಿನಿಂದ ಅನುಬವಿಸುವ ನೋವನ್ನು ಚೀರಾಟದಿಂದಾಗಲಿ, ಹಾವಬಾವದಿಂದಾಗಲಿ ಅತವಾ ಬೇರಾವುದೇ ರೀತಿಯಲ್ಲೂ ಹೊರಹಾಕುವಂತಿಲ್ಲ. ಸ್ತಿತಪ್ರಜ್ನನಂತೆ ನೋವನ್ನು ಸಹಿಸಿಕೊಂಡಿರಬೇಕು. ಇದೇ ಯುವಕ/ಹುಡುಗನ ಮನಶಕ್ತಿಯನ್ನು ದ್ರುಡೀಕರಿಸುವ ಪರೀಕ್ಶೆ.

ಈ ಅಗ್ನಿ ಪರೀಕ್ಶೆಯ ಸಮಯದಲ್ಲಿ ಬುಡಕಟ್ಟು ಜನಾಂಗದವರು ಯುವಕನ/ಹುಡುಗನ ಗಮನವನ್ನು ನೋವಿನಿಂದ ಬೇರೆಡೆಗೆ ಸೆಳೆಯಲು ಹಾಡು ಮತ್ತು ಕುಣಿತಗಳಿಂದ ಯತ್ನಿಸುತ್ತಾರೆ. ಇದೇ ಅವರಿಗೆ ನೋವಿನಿಂದ ಸಿಗಬಹುದಾದ ಕ್ಶಣಿಕ ಪರಿಹಾರ. ಕೈಗವಸುಗಳನ್ನು ತೆಗೆದ ಬಳಿಕವೂ ಹಲವು ಗಂಟೆಗಳ ಕಾಲ ಬುಲೆಟ್ ಇರುವೆಯ ನಂಜಿನ ಪ್ರಬಾವಕ್ಕೆ ಅವರು ತತ್ತರಿಸುತ್ತಾರೆ. ಒಬ್ಬ ಯುವಕ ಪೂರ‍್ಣ ಯೋದನಾಗಲು ಇಂತಹ ಪ್ರಕ್ರಿಯೆಗೆ ಅನೇಕ ಬಾರಿ ಒಳಗಾಗಬೇಕು. ಕೆಲವೊಮ್ಮೆ ಹದಿನೆಂಟು ಇಪ್ಪತ್ತು ಬಾರಿ ಆದರೂ ಆಶ್ಚರ‍್ಯವಿಲ್ಲ.

ಯಾವ ಪ್ರಕ್ರಿಯೆಯ ಸಮಯದಲ್ಲಿ ಆತನ ಕಣ್ಣಿಂದ ಒಂದೇ ಒಂದು ಹನಿ ನೀರು ಜಿನುಗುವುದಿಲ್ಲವೋ ಆಗ ಆತ ಕಶ್ಟ ಸಹಿಶ್ಣುನಾದಂತೆ. ಪರೀಕ್ಶೆಯಲ್ಲಿ ಉತ್ತೀರ‍್ಣನಾದಂತೆ. ಆತನ ಕನಸು ನನಸಾದಂತೆ. ತಾನು ಚಿಕ್ಕಂದಿನಿಂದಲೂ ಬಯಸಿದ ಯೋದ ಎಂಬ ಗೌರವಕ್ಕೆ ಪಾತ್ರನಾಗುತ್ತಾನೆ. ಪಂಗಡದಲ್ಲಿ ಹಿರಿಯರ ಶ್ರೇಣಿಗೆ ಬಡ್ತಿ ಪಡೆಯುತ್ತಾನೆ.

(ಮಾಹಿತಿ ಸೆಲೆ: odditycentral.com, sites.psu.edu)
(ಚಿತ್ರ ಸೆಲೆ: amazon-travel-brazil.comallthatsinteresting.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: