ಹಿಟ್ಟಿನ ಹೋಳಿಗೆ

ಸುನಿತಾ ಹಿರೇಮಟ.

ಮಾವಿನ ಹಣ್ಣಿನ ಸುಗ್ಗಿ ಅಂದರೆ ಸೀಕರಣೆ ಸವಿಯುವ ದಿನಗಳು. ಸೀಕರಣೆ ಜೊತೆಗೆ ತಿನ್ನಲು ಬಳ್ಳಾರಿ ಕಡೆ ಹೆಚ್ಚಾಗಿ ಮಾಡುವುದು ಹೋಳಿಗೆ ಇಲ್ಲವೇ ಹಿಟ್ಟಿನ ಹೋಳಿಗೆ. ಹಿಟ್ಟಿನ ಹೋಳಿಗೆ ಮಾಡುವುದು ಬಹು ಸುಲಬ. ಇದಕ್ಕೆ ಬೇಕಾಗುವ ಸಾಮಾನುಗಳು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವಂತಹವೇ.

ಬೇಕಾಗುವ ಸಾಮಾನುಗಳು

  • ಅಕ್ಕಿ ಹಿಟ್ಟು – 2 ಬಟ್ಟಲು
  • ಮೈದಾ ಹಿಟ್ಟು – 2 ಬಟ್ಟಲು (ಮೈದಾ ಬದಲಿಗೆ 2-3 ಬಾರಿ ಜರಡಿ ಹಿಡಿದ ಗೋದಿ ಹಿಟ್ಟನ್ನೂ ಬಳಸಬಹುದು)
  • ಉಪ್ಪು – 1 ಚಿಟಿಕೆ

ಮಾಡುವ ಬಗೆ

ಮೈದಾ ಹಿಟ್ಟನ್ನು ತಣ್ಣನೆಯ ನೀರಿನಲ್ಲಿ ಕಲಸಿ, ನಾದಿಕೊಳ್ಳಿ. ಹಿಟ್ಟು ಒಂದು ಗಂಟೆ ನೆನೆದರೆ ಸಾಕು, ಹೋಳಿಗೆಗೆ ಕಣಕ ತಯಾರು. ಒಂದು ಬಟ್ಟಲು ಕುದಿಯುವ ನೀರಿಗೆ ಚಿಟಿಕೆ ಉಪ್ಪು, ಅಕ್ಕಿ ಹಿಟ್ಟನ್ನು ಹಾಕಿ ತಿರುವಿ, ಸಣ್ಣನೆ ಉರಿಯಲ್ಲಿ ಹದವಾಗಿ ಬೇಯಿಸಿ, ಇದು ಹೋಳಿಗೆಗೆ ಬೇಕಾದ ಹೂರಣ. ಹೂರಣ ತಣ್ಣಗಾದ ನಂತರ ಕೈಗೆ ಎಣ್ಣೆ ಸವರಿ ಚೆನ್ನಾಗಿ ನಾದಿ. ಹೂರಣವನ್ನು ಕಣಕದಲ್ಲಿ ತುಂಬಿ, ಬಾಳೆ ಎಲೆ ಇಲ್ಲವೇ ಹೋಳಿಗೆ ತಗಡಿನ ಮೇಲೆ ತೆಳ್ಳಗೆ ಲಟ್ಟಿಸಿ. ಸಣ್ಣನೆ ಉರಿಯಲ್ಲಿ ಎರಡೂ ಕಡೆ ಬೇಯಿಸಿ.

ಹಿಟ್ಟಿನ ಹೋಳಿಗೆಯನ್ನು ಬದನೇಕಾಯಿ ಹೋಳುಗಾಯಿ ಪಲ್ಯ, ಕೆಂಪು ಮೆಣಸಿನಕಾಯಿ ಚಟ್ನಿ, ಮಾವಿನ ಹಣ್ಣಿನ ಸೀಕರಣೆ ಜೊತೆ ತಿನ್ನಲು ಹಬ್ಬ.

(ಚಿತ್ರ ಸೆಲೆ: ಸುನಿತಾ ಹಿರೇಮಟ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: