ಕತೆ: ಆಳ

– ಎಸ್.ವಿ.ಪ್ರಕಾಶ್.

ನೈತಿಕತೆ, ಮೌಲ್ಯ,,Principles, integrity, ethics

( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ  ಪಡೆದ ಕತೆ )

“ಅದೇ ಅಣ್ಣ, ತುಂಬಾ ಒಳ್ಳೆ ಕಂಪ್ನಿ. ಅಲ್ ಸಿಕ್ಬುಟ್ಟ್ರೆ, ಆಮೇಲೇನೂ ಯೋಚ್ನೆ ಇರಲ್ಲ. ಒಂದೂವರೆ ವರ‍್ಶ ಎಕ್ಸ್ಪೀರಿಯನ್ಸ್ ಇದೆ ಅಂದ್ರೆ, ಏನಿಲ್ಲಾಂದ್ರು, ಇಪ್ಪತ್ತೈದೋ, ಮೂವತ್ತೋ ಕೊಟ್ಟೇ ಕೊಡ್ತಾರೆ. ನೀವು ಹೂಂ ಅಂದ್ರೆ ಮುನಿಯಪ್ನೋರತ್ರ ಮಾತಾಡ್ತಾರಂತೆ ವೀರೂ ಮಾವ”. ಅಲ್ಲಿ ತನಕ ಕ್ಲುಪ್ತವಾಗಿ ಸಾಗುತ್ತಿದ್ದ ಚರ‍್ಚೆಯನ್ನು ಕೊನೆಗಾಣಿಸಿ, ತನ್ನ ಮನಸ್ಸಿನಲ್ಲಿರುವುದೆಲ್ಲಾ ಸೇರಿ ಇಶ್ಟೆ, ಇನ್ನು ನಿಮ್ಮದೇ ನಿರ‍್ದಾರ ಎಂಬಂತೆ ತಂದೆಗೆ ಹೇಳಿ ಸುಮ್ಮನೆ ನಿಂತ ಶ್ರೀದರ. ‘ನೀವು ಹೂಂ ಅಂದ್ರೆ….’ ಎಂಬ ಮಾತನ್ನು ಅವನು ಎರಡನೆ ಸಲ ತೆಳುವಾದ ಆಕ್ಶೇಪಣೆಯ ದನಿಯಲ್ಲಿ ‘ಇದನ್ನು ಗಮನಿಸಿ’ ಎಂಬಂತೆ ಆಡಿದ್ದರಿಂದ ತುಸು ಬಿಗಿಯಾದ ಶ್ರೀಕಂಟಪ್ಪ ಮೇಶ್ಟ್ರು, ನಿಯಂತ್ರಿತ ಆರೋಹಣದ ದ್ವನಿಯಲ್ಲಿ, ಇಬ್ಬರ ನಡುವಿನ ಶೂನ್ಯವನ್ನು ತೀಕ್ಶ್ಣವಾಗಿ ದಿಟ್ಟಿಸುತ್ತಾ, “ಹೂಂ ಅನ್ನೋದು ಸರೀನಪ್ಪಾ, ಬೇರೆ ಹುಡುಗರ ಕೈಲಾಗೋದು ನಮ್ಮ ಕೈಯಲ್ ಯಾಕಾಗಲ್ಲಾಂತ ನಾನು ಕೇಳೋದು?, ನಿಂಜೊತೆ ಹುಡುಗರೆಲ್ಲಾ ತಮ್ಮಶ್ಟುಕ್ ತಾವೆ ಹೋಗಿ ಇನ್ಪೋಸಿಸ್ಸು, ವಿಪ್ರೋ ಅಂತೆಲ್ಲಾ ಸೇರ‍್ಕೊಂತಾ ಇರ‍್ಬೇಕಾದ್ರೆ ನಾವು ಮಾತ್ರ ಇನ್ನೊಬ್ಬರ ಮುಂದೆ ನಿಂತು ಕೈ ಕಟ್ಟಬೇಕು. ಅವುರ‍್ಗೆಲ್ಲಾ ಯಾರು ಹೂಂ ಅಂದೋರು?” ಎಂದರು.

“ಬೇರೆ ಹುಡುಗರ ಕೈಲಾಗಿ ನಮ್ಮ ಕೈಲಾಗದ್ದು” ತಂದೆಗೆ ಉತ್ತರ ತಿಳಿಯದ ಪ್ರಶ್ನೆಯಲ್ಲ, ಉತ್ತರ ನಿರೀಕ್ಶಿಸಿದ ಪ್ರಶ್ನೆಯೂ ಅಲ್ಲ. ಆದರೆ ಬಹಳಶ್ಟು ಸಾರಿ, ತಮಗೆ ಹಿಡಿಸದ ಅನಿವಾರ‍್ಯ ನಿರ‍್ದಾರಗಳಿಗೆ ಅವರು ಒಪ್ಪಿಗೆ ಸೂಚಿಸುತ್ತಿದ್ದುದು ಈ ತರಹದ ಪ್ರಶ್ನೆಗಳಿಂದಲೆ. ತಂದೆಯ ಈ ಸ್ವಬಾವದ ಅರಿವಿದ್ದ ಶ್ರೀದರ ಸ್ವಲ್ಪ ನಿರಾಳನಾದರೂ ಅವನ ಅನುಮಾನ ತೀರಲಿಲ್ಲ. ವಶೀಲಿ,ಶಿಪಾರಸ್ಸು, ಲಂಚಗುಳಿತನಗಳಂತಹ ಅನೀತಿಯ ವ್ಯವಹಾರಗಳನ್ನು ಸಾರ‍್ವಜನಿಕವಾಗಿ ತಮ್ಮ ಮಾತು ಕ್ರುತಿಗಳೆರಡರಲ್ಲೂ ವಿರೋದಿಸುತ್ತ ಬಂದಿದ್ದ ಅವರಿಗೆ ತಮ್ಮದೇ ಮಗನ ಕೆಲಸಕ್ಕೆ ಒಬ್ಬರ ಶಿಪಾರಸ್ಸು ಬಳಸುವ ಪ್ರಸ್ತಾಪವೇ ಅಸಹನೀಯವಾಗಿತ್ತು. ಅದರಲ್ಲೂ, ಈ ಪ್ರಸ್ತಾಪ ಬಂದಿರುವುದು ತಾವು ಸದಾ ನೈತಿಕ ಅಂತರವಿಟ್ಟೇ ವ್ಯವಹರಿಸುತ್ತಿದ್ದ ತಮ್ಮ ಬಾಮೈದನಾದ ವೀರೇಶನಿಂದ. ಹಾಗೆ ನೋಡಿದರೆ ಮೇಶ್ಟ್ರು ವೀರೇಶನ ಮುಂದೆ ನಿಂತು ಕೈ ಕಟ್ಟಬೇಕಿರಲಿಲ್ಲ. ಒಂದು ಕಾಲದಲ್ಲಿ ಅವರ ವಿದ್ಯಾರ‍್ತಿಯೂ ಆಗಿದ್ದ ವೀರೇಶನಿಗೆ ಬಾವನೆಂದರೆ ಗೌರವದ ಜೊತೆಗೆ ತನ್ನ ಹಿರಿಮೆಯನ್ನು ನಿರೂಪಿಸುವ ತೀವ್ರ ಹಂಬಲವೂ ಇತ್ತು. ತನ್ನ ಅಕ್ಕನಿಗೆ ಸಂಬಂದ ಬೆಳೆಸಿದ ಮೂರು ದಶಕಗಳ ನಂತರವೂ, ಅವರ ಬಗೆಗಿನ ಗುರು ಬಾವವು ಅಳಿಸಿಹೋಗದಿರುವುದಕ್ಕೆ ಕಾರಣ ಮೇಶ್ಟರ ವ್ಯಕ್ತಿತ್ವ.

ವರುಶದ ಹಿಂದೆ ರಾಮಸಂದ್ರದ ಸರ‍್ಕಾರಿ ಬಾಲಕರ ಹೈಸ್ಕೂಲಿನ ಸಮಾಜ ಶಾಸ್ತ್ರದ ಅದ್ಯಾಪಕರಾಗಿ ನಿವ್ರುತ್ತರಾಗಿದ್ದ ಶ್ರೀಕಂಟಪ್ಪ ಮೇಶ್ಟರದು ಜಿಲ್ಲೆಯ ಕೆಲವೇ ಕೆಲವು ಬುದ್ದಿಜೀವಿಗಳ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಹೆಸರು. ಅದ್ಯಾಪನದಲ್ಲಂತೂ ಎತ್ತಿದ ಕೈ. ಸರ‍್ಕಾರಿ ಹೈಸ್ಕೂಲಿನ ಕ್ಲಾಸುರೂಮುಗಳೆಂದರೆ ಕುರಿಗಳ ಮಂದೆಯಿದ್ದಂತೆ. ಪ್ರತಿ ಕ್ಲಾಸಿನಲ್ಲೂ ಸರಿಸುಮಾರು ಎಂಬತ್ತರಿಂದ ತೊಂಬತ್ತು ಮಂದಿ ಹುಡುಗರಿರುತ್ತಿದ್ದ ತರಗತಿಗಳನ್ನು ಬೆತ್ತದ ತುದಿಯಿಂದಲೇ ಮಾತನಾಡಿಸಿಯೂ ನಿಯಂತ್ರಿಸಲಾಗದೆ ಉಳಿದ ಶಿಕ್ಶಕರು ಹೈರಾಣಾಗುತ್ತಿದ್ದರೆ, ಶ್ರೀಕಂಟಪ್ಪ ಮೇಶ್ಟ್ರು ಮಾತ್ರ ಬೆತ್ತವನ್ನು ಕೈಯಿಂದಲೂ ಮುಟ್ಟಿದವರಲ್ಲ. ಒಂದು ಚಾಕ್‍ಪೀಸು ಮತ್ತು ಡಸ್ಟರುಗಳೊಡನೆ ಕ್ಲಾಸಿನೊಳಗಡೆ ಕಾಲಿಡುತ್ತಿದ್ದಂತೆ ಇಡಿಯ ರೂಮು ಸ್ತಬ್ದವಾಗುತ್ತಿತ್ತು. ಕೇವಲ ಗಾಂಬೀರ‍್ಯ ಮತ್ತು ತನ್ಮಯತೆಗಳಿಂದ ಇಡೀ ಕ್ಲಾಸ್‍ರೂಮನ್ನು ನಿಯಂತ್ರಿಸುತ್ತಿದ್ದ ಮೇಶ್ಟರ ಚರಿತ್ರೆಯ ಪಾಟವೆಂದರೆ ಹುಡುಗರಿಗೆ ರಸದೌತಣ. ಅಶೋಕನ ಆಡಳಿತದಿಂದ ಹಿಡಿದು ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಹಂತದವರೆಗೆ ಬರತಕಂಡದ ಇತಿಹಾಸದ ವಿವಿದ ಮಜಲುಗಳನ್ನು ವ್ಯಕ್ತಿ ವೈಶಿಶ್ಟ್ಯಗಳೊಂದಿಗೆ ಮತ್ತು ಸನ್ನಿವೇಶದ ಸ್ವಾರಸ್ಯದೊಂದಿಗೆ ವಿವರಿಸುತ್ತಿದ್ದರೆ, ಓದಿನಲ್ಲಿ ಆಸಕ್ತಿಯೇ ಇಲ್ಲದ ಪುಂಡು ಹುಡುಗರೂ ಸಹ ಕ್ಲಾಸು ಮುಗಿಯುವ ತನಕ ತುಟಿ ಬಿಚ್ಚುತ್ತಿರಲಿಲ್ಲ. ವಿಶಯ ಬೋದನೆಯಲ್ಲಿ ಮೇಶ್ಟರಿಗೆ ಸಿಲಬಸ್ಸಿನ ಇತಿಮಿತಿಗಳಾಗಲಿ, ಸಮಯದ ಪರಿವೆಯಾಗಲಿ ಇರುತ್ತಿರಲಿಲ್ಲ. ಎಶ್ಟೋ ಬಾರಿ ಅವದಿ ಮುಗಿದರೂ ಮುಂದುವರಿಯುತ್ತಿದ್ದ ಅವರ ಬೋದನೆಯನ್ನು ಬಂಗ ಮಾಡಲು ಇಚ್ಚಿಸದೆ ಮುಂದಿನ ತರಗತಿಯ ಶಿಕ್ಶಕರು ಐದು ಹತ್ತು ನಿಮಿಶ ಯಾವ ಮುಜುಗರವೂ ಇಲ್ಲದೆ ಹೊರಗೆ ಕಾಯುತ್ತಿದ್ದರು. ಇವರು ಹೊರಗೆ ಬಂದು “ಓಹ್.. ಸಾರಿ” ಎಂದರೆ, “ಪರವಾಗಿಲ್ಲ ಸಾರ್… ತೊಂದರೆ ಇಲ್ಲ” ಎನ್ನುತ್ತಿದ್ದರು.

ಚರಿತ್ರೆಯ ಹೊರತಾಗಿ ಅವರು ಬೋರ‍್ಡಿನ ಮೇಲೆ ಬೂಗೋಳವೆಂದೋ, ಅರ‍್ತಶಾಸ್ತ್ರವೆಂದೋ ಬರೆದರೆ ಹುಡುಗರೆಲ್ಲಾ ಅರ‍್ದ ನಿರಾಶೆಯಿಂದ ನಿಡುಸುಯ್ಯುತ್ತಿದ್ದರು. ಆದರೆ ನಿಶ್ಯಬ್ದತೆಯಲ್ಲಿ ವ್ಯತ್ಯಾಸವಿರುತ್ತಿರಲಿಲ್ಲ. ಮೇಶ್ಟರ ಬೋದನಾ ವೈಶಿಶ್ಟ್ಯದ ಉತ್ತುಂಗತೆಯನ್ನು ನೋಡಬೇಕೆಂದರೆ ಅವರ ಇಂಗ್ಲೀಶ್ ಮೀಡಿಯಂ ತರಗತಿಗಳಿಗೆ ಹೋಗಿ ಕೂರಬೇಕು. ರಾಮಸಂದ್ರದ ಸರ‍್ಕಾರಿ ಹೈಸ್ಕೂಲಿನ ಇಂಗ್ಲಿಶ್ ಮೀಡಿಯಮ್ಮಿಗೆ, ಮಿಡ್ಲ್ ಸ್ಕೂಲನ್ನು ಕನ್ನಡ ಮೀಡಿಯಂನಲ್ಲಿ ಮುಗಿಸಿದ ಹುಡುಗರೇ ಹೆಚ್ಚು ಸೇರುತ್ತಿದ್ದರು. ಅಲ್ಲದೆ ಶಾಲೆಯು, ರಾಮಸಂದ್ರದ ಮುಸ್ಲಿಂ ಮೊಹಲ್ಲಾಗಳ ಹತ್ತಿರದಲ್ಲೆ ಇದ್ದುದರಿಂದ, ದೊಡ್ಡ ಸಂಕ್ಯೆಯ ಮುಸ್ಲಿಂ ಹುಡುಗರೂ ಬಂದು ಸೇರುತ್ತಿದ್ದರು. ಕನ್ನಡ ಮತ್ತು ಇಂಗ್ಲಿಶ್ ಬಾಶೆಗಳ ಮೇಲೆ ಅಸಾದಾರಣ ಪ್ರಬುತ್ವವಿದ್ದ ಮೇಶ್ಟರಿಗೆ ಉರ‍್ದುವಿನ ಗ್ನಾನವಿಲ್ಲದಿದ್ದರೂ ಹಿಂದಿಯಲ್ಲಿ ಪ್ರಾವೀಣ್ಯತೆಯಿತ್ತು. ಇಂಗ್ಲಿಶ್ ಕನ್ನಡಗಳ ಸಮತೋಲಿತ ತರ‍್ಜುಮೆಗಳಲ್ಲಿ ಇಡೀ ಪಟ್ಯವನ್ನು ವಿಶಯದ ಹದ ತಪ್ಪದಂತೆ ಸಂವಹಿಸುತ್ತಿದ್ದ ಮೇಶ್ಟರು, ಕೊನೆಯ ಹತ್ತು ಹದಿನೈದು ನಿಮಿಶಗಳಲ್ಲಿ ಶುದ್ದ ಹಿಂದಿಗೆ ಹೊರಳಿ ಕ್ಲುಪ್ತವಾಗಿ ಮುಸ್ಲಿಂ ಹುಡುಗರಿಗೆ ಪ್ರತ್ಯೇಕವಾಗಿ ವಿವರಿಸುತ್ತಿದ್ದರು. ತಮ್ಮ ವಿಶಯವಾದ ಸಮಾಜ ಶಾಸ್ತ್ರವೇ ಅಲ್ಲದೆ ಸಾಹಿತ್ಯ ಮತ್ತು ಕಲೆಗಳ ಕುರಿತಾಗಿ ಕೂಡ ಆಳವಾದ ಅಬಿರುಚಿ ಮತ್ತು ವಿಸ್ತಾರವಾದ ಗ್ನಾನವನ್ನು ಹೊಂದಿದ್ದ ಮೇಶ್ಟರ ಗಣಿತ ಮತ್ತು ವಿಗ್ನಾನಗಳ ಪ್ರಾತಮಿಕ ಮಟ್ಟದ ಗ್ನಾನವು ಕೂಡ ನಿಚ್ಚಳವಾಗಿತ್ತು. ಗಣಿತದ ಶಿಕ್ಶಕರು ಬಂದಿರದಿದ್ದ ಒಂದು ದಿನ ಮೇರೆ ಮೀರಿದ್ದ ಹುಡುಗರ ಗಲಾಟೆಯನ್ನು ನಿಯಂತ್ರಿಸಲು, ಬಿಡುವಾಗಿದ್ದ ಮೇಶ್ಟರನ್ನು ಹೆಡ್‍ಮಾಸ್ತರು ಕಳಿಸಿದ್ದರು. ಒಳಗೆ ಬಂದ ಇವರು, ತಮ್ಮ ಚರಿತ್ರೆಯ ಪಾಟವನ್ನು ಬಿಟ್ಟು ಗಣಿತದ ಪುಸ್ತಕವನ್ನು ಕೈಗೆತ್ತಿಕೊಂಡು ಎಲ್.ಸಿ.ಎಮ್ ಮತ್ತು ಹೆಚ್.ಸಿ.ಎಪ್ ಗಳ ನಡುವಿನ ವ್ಯತ್ಯಾಸವನ್ನು ಗಣಿತದ ಮೇಶ್ಟ್ರಿಗಿಂತಲೂ ಚೆನ್ನಾಗಿ, ಇನ್ನು ಮರೆಯದಂತೆ ವಿವರಿಸಿ ಹೋಗಿದ್ದನ್ನು ಆ ಕಾಲದ ವಿದ್ಯಾರ‍್ತಿಗಳು ದಂತಕತೆಯಂತೆ ಇಂದಿಗೂ ಹೇಳುತ್ತಿರುತ್ತಾರೆ.

ಮೇಶ್ಟರ ವ್ಯಕ್ತಿತ್ವವು ಕೇವಲ ಈ ತರಹದ ಶಿಕ್ಶಕ ಪ್ರತಿಬೆಯಿಂದ ಮಾತ್ರ ತೂಕವನ್ನು ಪಡೆಯಲಿಲ್ಲ. ವೈಯುಕ್ತಿಕ ಬದುಕಿನಲ್ಲಿ ಅವರು ಆಚರಿಸುತ್ತಿದ್ದ ಮೌಲ್ಯಗಳೇ ಅದಕ್ಕೆ ಹೆಚ್ಚು ಕಾರಣ. ಸ್ವಂತ ಕರ‍್ಚಿನಲ್ಲಿ ಅವರು ಆಯೋಜಿಸುತ್ತಿದ್ದ ಶೈಕ್ಶಣಿಕ ಪ್ರವಾಸಗಳು, ಯಾವ ವಿಶಯದಲ್ಲೇ ಆಗಲಿ, ಅತಿ ಹೆಚ್ಚು ಅಂಕ ಗಳಿಸಿದ ಪ್ರತಿ ತರಗತಿಯ ಪ್ರತಿ ವಿದ್ಯಾರ‍್ತಿಗೂ ನೀಡುತ್ತಿದ್ದ
ಪ್ರೋತ್ಸಾಹದಾಯಕ ಬಹುಮಾನಗಳು, ಉಚಿತವಾಗಿ ನಡೆಸುತ್ತಿದ್ದ ಮನೆಪಾಟ, ಸಾಂಸ್ಕ್ರುತಿಕ ಕಾರ‍್ಯಕ್ರಮಗಳ ಮುಂದಾಳುತನ, ಇನ್ನೂ ಮುಂತಾಗಿ ಅವರ ಉತ್ಸಾಹವು ವ್ರುತ್ತಿ ಪ್ರವ್ರುತ್ತಿಗಳನ್ನು ಸಮನ್ವಯಗೊಳಿಸಿ, ತನ್ಮೂಲಕ ತನ್ನ ಕಾರ‍್ಯಕ್ಶೇತ್ರದ ಮಿತಿಯನ್ನು ಹೆಚ್ಚಿಸಿಕೊಂಡು ವಿವಿದ ಆಯಾಮಗಳಲ್ಲಿ ದುಡಿಯುತ್ತಿತ್ತು. ರಾಗವೇಂದ್ರ ಎಂಬ ಮೇಶ್ಟರ ಹಳೆಯ ವಿದ್ಯಾರ‍್ತಿಯೊಬ್ಬ, ಪಿ.ಯು.ಸಿ. ಯಾದ ನಂತರ ಸರಿಯಾದ ಅಂಕೆಯಿರದೆ ರೌಡಿ ಹುಡುಗರ ಜೊತೆ ಸೇರಿ ಅಪಾಯಕಾರಿಯಾಗಿ ತಯಾರಾಗುತ್ತಿದ್ದ. ಅವನ ಅಸಾದಾರಣ ಬುದ್ದಿ ಶಕ್ತಿಯ ಅರಿವಿದ್ದ ಮೇಶ್ಟರು, ಪಟ್ಟು ಹಿಡಿದು ಅವನ ಕೈಲಿ ಬಾರತೀಯ ಸೇನೆಯ “ಸೆಲೆಕ್ಶನ್ ಸರ‍್ವೀಸ್ ಬೋರ‍್ಡಿ”ನ ಇಂಟರ್ ವ್ಯೂ ಗೆ ಅಪ್ಲಿಕೇಶನ್ ಹಾಕಿಸಿ, ಬೆಂಗಳೂರಿಗೆ ಕರೆತಂದು, ಐದು ದಿನಗಳ ಆಯ್ಕೆ ಪ್ರಕ್ರಿಯೆಯ ಕೊನೆಯವರೆಗೂ ಅವನ ಜೊತೆಯೇ ಇದ್ದು ವಾಪಸ್ಸು ಕರೆ ತಂದಿದ್ದರು. ಆಯ್ಕೆಯೂ ಆದ ಹುಡುಗ, ಮೇಶ್ಟರ ವಿವೇಕದಿಂದ ತನ್ನ ಬದುಕಿನ ದಿಕ್ಕನ್ನೇ ಬದಲಿಸಿಕೊಂಡಿದ್ದ.

ಇಂತಹ ಗನವಾದ ಬದುಕನ್ನು ಬಾಳಿದ್ದ ಶ್ರೀಕಂಟಪ್ಪ ಮೇಶ್ಟರಿಗೆ ಸಣ್ಣ ಮಟ್ಟಿನ ಅತ್ರುಪ್ತಿಯಿದ್ದದ್ದು ತಮ್ಮ ಮಗ ಶ್ರೀದರನ ವಿಶಯದಲ್ಲಿ. ಪುಸ್ತಕದ ಓದಿನಲ್ಲಿ ತೀರಾ ಸಾದಾರಣ ಆಸಕ್ತಿ ಮತ್ತು ಬುದ್ದಿಮಟ್ಟವನ್ನು ಹೊಂದಿದ್ದ ಅವನು, ಆ ವಿಶಯದಲ್ಲಿ ಮೇಶ್ಟರ ಮಗನ ಚಿತ್ರಕ್ಕೆ ಹೊಂದುತ್ತಿರಲಿಲ್ಲ. ಆದರೆ ಅವನ ತಾಂತ್ರಿಕ ಕ್ರಿಯಾಶಕ್ತಿ ಮಾತ್ರ ಅಸಾದಾರಣವಾಗಿತ್ತು. ಏಳೆಂಟರ ವಯಸ್ಸಿಗೆ ಅವನ ಮನಸ್ಸು ತನ್ನ ಆಸಕ್ತಿಯನ್ನು ಕಂಡುಕೊಂಡಿತ್ತು. ಮನೆಯ ಹತ್ತಿರ ಇದ್ದ ಮೆಕ್ಯಾನಿಕ್ ಶಾಪುಗಳ ಹತ್ತಿರ, ಎಲೆಕ್ಟ್ರಿಕ್ ರಿಪೇರಿ ಅಂಗಡಿಗಳ ಹತ್ತಿರ ಹೋಗಿ ಗಂಟೆಗಟ್ಟಲೆ ನಿಂತುಬಿಡುತ್ತಿದ್ದ. ಹಳೆಯ ಟೇಬಲ್ ಪ್ಯಾನಿನ ಪುಟ್ಟ ಮೋಟರೊಂದನ್ನು ತಂದು ಅದಕ್ಕೆ ಬ್ಯಾಟರಿ ಜೋಡಿಸಿ, ಪುಟ್ಟ ಚಕ್ರಗಳಂತೆ ರಟ್ಟಿನಲ್ಲಿ ಕತ್ತರಿಸಿ ಅವನ್ನು ಕಾಲಿ ಬೆಂಕಿಪೊಟ್ಟಣ್ಣಕ್ಕೆ ಸಿಕ್ಕಿಸಿ, ಎಲ್ಲವನ್ನು ಒಟ್ಟಿಗೆ ಜೋಡಿಸಿ ನೆಲದ ಮೇಲೆ ಬಿಡುತ್ತಿದ್ದ. ಅದು ನಿದಾನವಾಗಿ ಚಲಿಸುವುದನ್ನು ತೋರಿಸಿ “ನೋಡು ಬುಲ್ಡೋಜರ‍್” ಎಂದು ತನ್ನ ಅಕ್ಕ ಕಾತ್ಯಾಯಿನಿಗೆ ತೋರಿಸುತ್ತಿದ್ದ. ಪಂಕ್ಚರ್ ಕಿಟ್ಟನ್ನು ತಂದು ತನ್ನ ಸೈಕಲ್ಲಿಗೆ ತಾನೆ ಪಂಕ್ಚರ್ ಹಾಕುತ್ತಿದ್ದ. ಹೈಸ್ಕೂಲು ತಲುಪುವ ಹೊತ್ತಿಗೆ, ಮನೆಯಲ್ಲೊಂದು ಮಿಕ್ಸಿ ಕೆಟ್ಟರೂ, ಅವನ ತಾಯಿ ಶಾಂತಮ್ಮ, ಅವನು ಮನೆಗೆ ಬರುವವರೆಗೂ ಕಾಯುತ್ತಿದ್ದರು.

ಶ್ರೀದರ ಹತ್ತನೇ ತರಗತಿಯಲ್ಲಿದ್ದಾಗ ಮೇಶ್ಟರು ಮನೆ ಕಟ್ಟಿಸಲು ಒಂದು ಪ್ಲಾನ್ ಹಾಕಿಸಿ ತಂದಿಟ್ಟಿದ್ದರು. ಮನೆಗೆ ಬಂದಿದ್ದ ಒಬ್ಬರು ಅದನ್ನು ನೋಡಿ, “ಏನೇ ಆಗಲಿ ದೈವ ಮೂಲೆಯಲ್ಲಿ, ಬೆಡ್‍ರೂಮ್ ಮಾತ್ರ ಬರ‍್ಲೇಬಾರದು, ಮನೇ ಮಕ್ಳಿಗೆ ಒಳ್ಳೇದಲ್ಲ” ಎಂದುಬಿಟ್ಟರು. ಅದರಲ್ಲೆಲ್ಲ ನಂಬಿಕೆಯಿರದ ಮೇಶ್ಟ್ರು ತಲೆಗೆ ಹಚ್ಚಿಕೊಳ್ಳಲ್ಲಿಲ್ಲ. ಆದರೆ ತೀರಾ ಸಂಪ್ರದಾಯಸ್ತರಾದ ಶಾಂತಮ್ಮ ಹೆದರಿಕೊಂಡರು. ಯಾವ ವಿಶಯದಲ್ಲೇ ಆದರೂ, ಮೇಶ್ಟರ ನಿರ‍್ದಾರವನ್ನು ತಿಳಿಯಲು ಮಾತ್ರವೆ ಪ್ರಶ್ನಿಸಿ, ಅದರಂತೆ ಒಪ್ಪಿ ನಡೆಯುವುದೇ ಅಬ್ಯಾಸವಾಗಿದ್ದ ಅವರು, ಈ ವಿಶಯದಲ್ಲಿ ಪತಿಯನ್ನು ಗೋಗರೆಯಲು ಶುರು ಮಾಡಿದರು. ಆದರೆ, ಅದನ್ನು ಬದಲಿಸಹೊರಟರೆ, ಪ್ಲಾನಿನಲ್ಲಿ ಒಂದಿಲ್ಲೊಂದು ಕೊರತೆ ಹುಟ್ಟಿ, ನೋಟದ ಹದವೇ ಕೆಡುವುದನ್ನು ಕಂಡ ಮೇಶ್ಟರು, ಮತ್ತೆ ಬದಲಿಸಲು ಒಪ್ಪಲಿಲ್ಲ. ಶಾಂತಮ್ಮ ಮಂಕಾದರು. ಅದನ್ನು ಕಂಡು ಮೇಶ್ಟರಿಗೂ ಕೇದವಾಗತೊಡಗಿತು. ಪತ್ನಿಯನ್ನು ಆ ಮುಕಬಾವದಲ್ಲಿ ನೋಡಿದ್ದು ಅವರಿಗೇ ನೆನಪಿರಲಿಲ್ಲ.

ಶಾಂತಮ್ಮನವರೆಂದರೆ ಸದಾ ಕಾಲ ಕಣ್ಣುಗಳಲ್ಲಿ ಮುಗ್ದ ಅಚ್ಚರಿಯನ್ನು ಸೂಸುತ್ತಾ, ಒಂದಿಲ್ಲೊಂದು ಕೆಲಸದ ಗಡಿಬಿಡಿಯಲ್ಲಿರುವ ಹೆಂಗಸು. ಕೈಯಲ್ಲೊಂದು ತಟ್ಟೆಯೋ, ಬಟ್ಟೆಯೋ ಮತ್ತಿನ್ನೇನೋ ಒಂದು ಇರದೆ ಅವರನ್ನು ನೋಡುವುದು ಕಶ್ಟ. ತುಸು ಬೋಳೇ ಸ್ವಬಾವದ ಅವರನ್ನು ತಂದೆಯಿರದ ಸಮಯದಲ್ಲಿ ಕೀಟಳೆ ಮಾಡಿ, ಬೇಸ್ತು ಬೀಳಿಸಿ, ಅವರ ಕೈಲಿ “ಹಾಕ್ತೀನ್ ನೋಡು ಮುಂಡೇದೆ” ಎಂದು ಬೈಸಿಕೊಳ್ಳಲು ಇಬ್ಬರು ಮಕ್ಕಳೂ ತುದಿಗಾಲಲ್ಲಿ ನಿಂತಿರುತ್ತಿದ್ದರು. ಪಬ್ಲಿಕ್ ಪರೀಕ್ಶೆಗಳ ಸಮಯದಲ್ಲಂತೂ ಅವರಿಗೆ ಕೈತುಂಬಾ ಕೆಲಸ. ಏನಿಲ್ಲೆಂದರೂ ಐದಾರು ಹುಡುಗರು ಪರೀಕ್ಶೆಗಳು ಮುಗಿಯುವ ತನಕ ಮೇಶ್ಟರ ಮನೆಯಲ್ಲೆ ಇರುತ್ತಿದ್ದರು. ಅವರ ಊಟ ತಿಂಡಿ ಯೋಗಕ್ಶೇಮಗಳನ್ನೆಲ್ಲಾ, ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದ ಶಾಂತಮ್ಮ ತಮ್ಮ ಮಕ್ಕಳನ್ನು ಗದರಿದಂತೆ ಅವರನ್ನೂ “ಹಾಕ್ತೀನ್ ನೋಡು..” ಎಂದು ಗದರುತ್ತಿದ್ದರು. ವೈಯುಕ್ತಿಕ ನೋವು ನಲಿವುಗಳು ಎಂದೂ ತಟ್ಟದಂತಿರುತ್ತಿದ್ದ ಅವರನ್ನು, ಓರಗೆಯ ಹೆಂಗಸರೆಲ್ಲಾ “ಚೂರೂ ಮೋಸವಿರದ ಹೆಂಗಸಪ್ಪಾ..” ಎಂದು ಮೆಚ್ಚಿ ಮಾತಾಡುತ್ತಿದ್ದರು. ಅವರ ಹ್ರುದಯವೈಶಾಲ್ಯಕ್ಕೆ ಒಂದು ಉದಾಹರಣೆಯೆಂದರೆ, ಮೇಶ್ಟರ ಅತಿದೂರದ ಸಂಬಂದಿಯಾದ ನಂಜುಂಡಯ್ಯ ಎಂಬುವರು ತಮ್ಮ ಇಳಿವಯಸ್ಸಿನಲ್ಲಿ, ಆಕ್ಸಿಡೆಂಟೊಂದರಲ್ಲಿ ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದರು. ಡಯಾಬಿಟಿಸ್‍ನಿಂದ ನರಳುತ್ತಾ ಮೈಸೂರಿನಲ್ಲಿ ಒಬ್ಬರೇ ಇದ್ದ ಅವರನ್ನು ಮೇಶ್ಟರು ತಮ್ಮ ಮನೆಯಲ್ಲೆ ಇರುವಂತೆ ಒಪ್ಪಿಸಿ ಕರೆದುಕೊಂಡು ಬಂದಿದ್ದರು. ಮೈಸೂರಿನಲ್ಲಿದ್ದ ಅವರ ಮನೆಯಿಂದ ಬಾಡಿಗೆ ಬರುತ್ತಿದ್ದುದಲ್ಲದೆ ಸಾಕಶ್ಟು ಸ್ತಿತಿವಂತರಾದ ನಂಜುಂಡಯ್ಯನವರ ಇರುವಿಕೆಯಿಂದ ಮೇಶ್ಟರಿಗೇನೂ ಹೊರೆಯಾಗಲಿಲ್ಲ. ಹೊರೆಯಾಗಿದ್ದೆಲ್ಲಾ ಶಾಂತಮ್ಮನವರಿಗೆ. ಆದರೆ ಅವರು ಮನಸ್ಸಿನೊಳಗೂ ಗೊಣಗದೆ ತಮ್ಮ ಕರ‍್ತವ್ಯವೆಂಬಶ್ಟು ಸಹಜವಾಗಿ ನಂಜುಂಡಯ್ಯನವರ ಶುಶ್ರೂಶೆಯನ್ನು ಮಾಡುತ್ತಿದ್ದರು.

ಇಂತಹ ಹೆಂಡತಿಯನ್ನು ನೋಯಿಸಲು ಇಚ್ಚಿಸದ ಮೇಶ್ಟರು ಮನೆಯ ಪ್ಲಾನನ್ನು ಬದಲಿಸುವ ಪ್ರಯತ್ನಲ್ಲಿದ್ದಾಗ, ಶ್ರೀದರ ತಾನೇ ಮಾಡಿದ್ದ ಪ್ಲಾನನ್ನು ತೋರಿಸಿದ. ಪೂರ‍್ವಾಬಿಮುಕವಾಗಿದ್ದ ಮುಕ್ಯದ್ವಾರವನ್ನು ಉತ್ತರಕ್ಕೆ ತಿರುಗಿಸಿ, ಸಮಸ್ಯೆಯಿದ್ದ ಬೆಡ್‍ರೂಮನ್ನು ಹಾಲ್ ಆಗಿ ಪರಿವರ‍್ತಿಸಿ ಮೆಟ್ಟಿಲುಗಳ ಸ್ತಳವನ್ನು ಸ್ವಲ್ಪ ಬದಲಾವಣೆ ಮಾಡಿದ್ದ ಅವನ ಪ್ಲಾನಿನಲ್ಲಿ ಮೇಶ್ಟರ ಎಲ್ಲಾ ಅವಶ್ಯಕತೆಗಳೂ ಪೂರೈಕೆಯಾಗುತ್ತಿದ್ದುದರ ಜೊತೆಗೆ, ಇದ್ದ ಸಮಸ್ಯೆಯೂ ಪರಿಹಾರವಾಗಿತ್ತು. ಅದನ್ನು ನೋಡಿದ ಇಂಜಿನಿಯರ್ ಕೂಡ “ಇದುನ್ನ ಮಾಡ್ಬೋದು” ಎಂದರು. ಮನೆ ಕಟ್ಟುವಾಗಲೂ, ಮೇಶ್ಟರಿಗಿಂತ ಶ್ರೀದರನೇ ಹೆಚ್ಚು ಉತ್ಸಾಹ, ಜವಾಬ್ದಾರಿಗಳಿಂದ ಓಡಾಡಿದ್ದ. ಮನೆ ಮುಗಿಯುವ ಹೊತ್ತಿಗೆ, ಅವನಿಗೆ, ಸಿಮೆಂಟಿಗೆ ಬೆರೆಸುವ ಮರಳಿನ ಪ್ರಮಾಣ, ಸ್ಪ್ರೆಡ್ ಪೌಂಡೇಶನ್ ಮತ್ತು ಕಾಲಂ ಪೌಂಡೇಶನ್ ನಡುವಿನ ವ್ಯತ್ಯಾಸ, ಮರಳಿನ ಗುಣಮಟ್ಟ ಕಂಡು ಹಿಡಿಯುವ ರೀತಿ, ಕಬ್ಬಿಣ, ಪೈಪ್ ಮತ್ತು ಪಿಟ್ಟಿಂಗ್‍ಗಳ ಬೇರೆ ಬೇರೆ ಕಂಪನಿಗಳ ಬೆಲೆ ಗುಣಮಟ್ಟಗಳಲ್ಲಿನ ವ್ಯತ್ಯಾಸಗಳಂತಹ ಎಶ್ಟೊ ವಿವರಗಳು ಅಂಗೈನ ರೇಕೆಗಳಶ್ಟು ಸ್ಪಶ್ಟವಾಗಿದ್ದವು.

ಆದರೆ ಅವನ ಪಬ್ಲಿಕ್ ಪರೀಕ್ಶೆಯಲ್ಲಿ ಇದ್ಯಾವುದಕ್ಕೂ ಅಂಕಗಳು ಸಿಗದೆ ಸೆಕೆಂಡ್‍ಕ್ಲಾಸಿನಲ್ಲಿ ಪಾಸಾಗಿದ್ದ. ಅವನು ಪಿಯುಸಿ ಪರೀಕ್ಶೆಗೆ ಕೂರುವ ವೇಳೆಗೆ ಕಾತ್ಯಾಯಿನಿ ಬಿ.ಇ. ಮುಗಿಸಿ ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯೊಂದರಲ್ಲಿ ಸೇರಿದ್ದಳು. ಪಿ.ಯು.ಸಿ ಯಲ್ಲಿಯೂ ಐವತ್ತೇಳು ಪರ‍್ಸೆಂಟಿನೊಂದಿಗೆ ಪಾಸಾದ ಶ್ರೀದರನಿಗೆ, ಸಿ.ಇ.ಟಿ ಯಲ್ಲಿ ಕೂಡ, ಟ್ಯೂಶನ್ ಮತ್ತು ಕಾತ್ಯಾಯಿನಿಯ ಮಾರ‍್ಗದರ‍್ಶನದ ಹೊರತಾಗಿ ಮೂವತ್ತೇಳು ಸಾವಿರ ಚಿಲ್ಲರೆ ರ‍್ಯಾಂಕ್ ಬಂದಿತ್ತು. ರಾಮಸಂದ್ರದ ಪಕ್ಕದಲ್ಲೇ ಇದ್ದ ಮಲ್ಲೂರಿನಲ್ಲಿ ಅದೇ ತಾನೆ ಶುರುವಾಗಿದ್ದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಬ್ರಾಂಚಿಗೆ ಸೇರಿ ಹಾಗೂ ಹೀಗೂ ಇಂಜಿನಿಯರಿಂಗ್ ಮುಗಿಸಿದ ಶ್ರೀದರನಿಗೆ, ಒಂದು ವರ‍್ಶ ಪ್ರಯತ್ನಿಸಿದರೂ ಕೆಲಸ ಸಿಗಲಿಲ್ಲ. ಯಾವುದಾದರೂ ಸಾಪ್ಟ್ ವೇರ್ ಕೋರ‍್ಸ್ ಒಂದನ್ನು ಮಾಡಿಕೊಳ್ಳುವಂತೆ, ಕಾತ್ಯಾಯಿನಿ ಮತ್ತು ಅವಳ ಗಂಡ ಇಬ್ಬರೂ ಕೂಡಿ ಹೇಳಿದರೂ ಅವನು ಒಪ್ಪಲಿಲ್ಲ. ಅವನಿಗೆ ಅದು ಒಗ್ಗುವುದೂ ಇಲ್ಲವೆಂದು ತಿಳಿದಿದ್ದ ಕಾತ್ಯಾಯಿನಿ ಹೆಚ್ಚು ಬಲವಂತ ಪಡಿಸಲಿಲ್ಲ. ಕಡೆಗೆ ಪೀಣ್ಯದ ಐರನ್ ಕಾಸ್ಟಿಂಗ್ಸ್ ತಯಾರಿಸುವ ಪೌಂಡ್ರಿಯೊಂದು, ಮೂರು ತಿಂಗಳೊಳಗಾಗಿ ಆಡಿಟಿಂಗ್‍ಗೆ ಸಂಬಂದ ಪಟ್ಟ ದಾಕಲೆಗಳನ್ನು ತಯಾರಿಸಬೇಕಾಗಿದ್ದರಿಂದ, ತಾಂತ್ರಿಕ ಹಾಗೂ ಕಂಪ್ಯೂಟರ್ ಬಗ್ಗೆ ಗೊತ್ತಿರುವವರ ತಾತ್ಕಾಲಿಕ ಅವಶ್ಯಕತೆಯಲ್ಲಿತ್ತು. ಆ ಕಂಪನಿಯ ಎಂ.ಡಿ. “ನೋಡಿ ಶ್ರೀದರ್, ಮೂರು ತಿಂಗಳ ಕೆಲಸ. ಸ್ಯಾಲರಿ ಇರಲ್ಲ. ಎಕ್ಸ್ ಪೀರಿಯನ್ಸ್ ಸರ‍್ಟಿಪಿಕೇಟ್ ಕೊಡ್ತೀವಿ ಅಶ್ಟೇ. ನೋ ಕಮಿಟ್‍ಮೆಂಟ್ಸ್” ಎಂದರು. ಇವನು ಸೇರಿಕೊಂಡ. ನಂತರ ಅವನ ಕೌಶಲ್ಯ, ದುಡಿಮೆ ಮತ್ತು ಆಸಕ್ತಿಗಳನ್ನು ಮನಗಂಡ ಅವರು, ಇಚ್ಚೆ ಇದ್ದರೆ ಏಳು ಸಾವಿರ ಸಂಬಳಕ್ಕೆ ಅಲ್ಲಿಯೇ ಮುಂದುವರಿಯಬಹುದೆಂದು ಹೇಳಿದರು. ಇವನು ಒಪ್ಪಿ, ಕಾತ್ಯಾಯಿನಿ ಮನೆಯಲ್ಲಿದ್ದುಕೊಂಡು ಹೋಗಿ ಬರತೊಡಗಿದ.

ಮೇಶ್ಟರಿಗೆ ಸ್ವಲ್ಪವೂ ತ್ರುಪ್ತಿಯಾಗಲಿಲ್ಲ. ಶ್ರೀದರನೇನೋ ಅಲ್ಲಿದ್ದುಕೊಂಡೇ ಬೇರೆ ಪ್ರಯತ್ನಗಳನ್ನು ಮಾಡುತ್ತಿದ್ದ. ಆದರೆ ಅವನ ಸಾಮರ‍್ತ್ಯವನ್ನು ಇಂಟರ್ ವ್ಯೂವರ್ ಗಳಿಗೆ ಮನಗಾಣಿಸಲು ಅವನ ಇಂಗ್ಲಿಶ್ ಬಾಶಾ ಸಾಮರ‍್ತ್ಯವು ಸಾಕಾಗುತ್ತಿರಲಿಲ್ಲ. ಪುಸ್ತಕಗಳನ್ನು ಹೆಚ್ಚು ಓದದಿರುವುದರ ಪರಿಣಾಮವನ್ನು ಅವನು ಈ ಹಂತದಲ್ಲಿ ಎದುರಿಸುತ್ತಿದ್ದ. ಇಂಜಿನಿಯರಿಂಗ್‍ನಲ್ಲೂ ತಿಯರಿಗಳಲ್ಲಿ ಅವನ ಅಂಕಗಳಿಕೆ ಅಶ್ಟಕ್ಕಶ್ಟೆ. ಮನೆಯಲ್ಲಿ ಇಶ್ಟು ಓದಿನ ವಾತಾವರಣವಿದ್ದೂ, ತಮ್ಮಂತಹ ಆಳವಾದ ಓದಿನ ಅಬಿರುಚಿಯುಳ್ಳ ತಂದೆಯ ಮಗನಾಗಿಯೂ, ಇವನು ಅದರಿಂದ ವಿಮುಕನಾದುದರ ಕಾರಣವನ್ನು ಮೇಶ್ಟರು ಒಮ್ಮೊಮ್ಮೆ ಯೋಚಿಸುತ್ತಾರೆ. ಆಗೆಲ್ಲ ಅವರಿಗೆ ತಮ್ಮ ಹೆಂಡತಿಯ ಸ್ವಬಾವ ನೆನಪಾಗುತ್ತದೆ. ತಮ್ಮ ಲೈಬ್ರರಿಯನ್ನು ಸ್ವಚ್ಚವಾಗಿಡುವುದನ್ನು ಬಿಟ್ಟರೆ, ಅವಳಿಗೂ ಪುಸ್ತಕಗಳಿಗೂ ಯಾವ ಸಂಬಂದವೂ ಇಲ್ಲ. ಬಹುಶಃ ಅವಳ ಸ್ವಬಾವವೇ ಇವನಿಗೂ ಬಂದಿದೆ ಎನ್ನಿಸುತ್ತದೆ. ಆದರೆ ಕೋಪದ ಬಿಂದುವಿನೆಡೆಗೆ ಚಲಿಸುತ್ತಿದ್ದ ಮನಸ್ಸು ಹೆಂಡತಿಯ ನೆನಪಿನೊಂದಿಗೆ ಸಹಜ ಸ್ತಿತಿಗೆ ಮರಳುತ್ತದೆ. ತಮ್ಮ ಸಾಮಾಜಿಕ ವ್ಯಕ್ತಿಚಿತ್ರವನ್ನು ಕಟ್ಟುವುದರಲ್ಲಿ ಅವಳ ತ್ಯಾಗ ಅಶ್ಟಿಶ್ಟಲ್ಲ. ಒಡನೆಯೆ ಅವರ ಯೋಚನೆ ಮಗಳ ಕಡೆಗೆ ತಿರುಗುತ್ತದೆ. ಕಾತ್ಯಾಯಿನಿ ಬುದ್ದಿವಂತೆ. ಅವಳಿಗೆ ತಮ್ಮ ಸ್ವಬಾವ ಬಂದಿದೆಯೇ? ಹಾಗೆನಿಸುವುದಿಲ್ಲ. ಅವಳು ಬರಿ ಬುದ್ದಿವಂತೆಯಶ್ಟೆ. ಶ್ರೀದರನಿಗಾದರೆ ತನ್ನ ಆಸಕ್ತಿಯ ವಿಶಯದಲ್ಲಿ, ಲಾಬ ನಶ್ಟಗಳ ಪರಿವೆಯಿಲ್ಲದೆ ಮುಳುಗಿಬಿಡುವ ಮನೋಬಾವವಿದೆ. ಇವಳಿಗೆ ಆಸಕ್ತಿಯ ವಿಶಯವೆಂಬುದೇ ಇಲ್ಲ. ಆದರೆ ಪಕ್ಕಾ ವಾಸ್ತವವಾದಿ. ಪ್ರಪಂಚವು ನಡೆಯುತ್ತಿರುವ ಹಾದಿಯನ್ನು ಸ್ಪಶ್ಟವಾಗಿ ಗ್ರಹಿಸಿ, ಅದರೊಂದಿಗೆ ತನ್ನ ಸದ್ಯದ ಸ್ತಿತಿಯನ್ನು ಸಮಗ್ರವಾಗಿ ಹೊಂದಿಸಿ, ತನ್ಮೂಲಕ ಸ್ವಂತ ಹಿತದ ಸಾದನೆಗೆ ಪೂರಕವಾದ ಕಾರ‍್ಯಸೂಚಿಯನ್ನು ಆದ್ಯತೆಯನುಸಾರ, ನಿಶ್ಯಬ್ದವಾಗಿ ಮತ್ತು ನಿರ‍್ಬಾವುಕವಾಗಿ ಕಾರ‍್ಯರೂಪಕ್ಕಿಳಿಸುವ ಚತುರೆ. ತನ್ನ ವಿದ್ಯಾಬ್ಯಾಸ, ವ್ರುತ್ತಿ, ಬಾಳ ಸಂಗಾತಿಯ ಆಯ್ಕೆ, ಹೀಗೆ ತನ್ನ ಜೀವನದ ಪ್ರತಿ ಹಂತದ ಆಯ್ಕೆಯಲ್ಲೂ ಅವಳು ತೋರಿದ ಜಾಣ್ಮೆ ಮತ್ತು ಮುಂದಾಲೋಚನೆಗಳಿಂದಾಗಿ, ತನ್ನ ಇಂದಿನ ಸುಕ ಜೀವನದ ನಿರ‍್ಮಾತ್ರು ತಾನೇ ಆಗಿದ್ದ ಹುಡುಗಿ. ಇದು ತಾವಲ್ಲ, ಎನ್ನುವಲ್ಲಿಗೆ, ಅವಳ ವ್ಯಕ್ತಿತ್ವದ, ಈ ಆಯಾಮದ ಮೂಲವು ಹೊಳೆಯುತ್ತದೆ. ಮನಸ್ಸು ನಿರಾಕರಿಸಲು ಯತ್ನಿಸಿದರೂ, ಬುದ್ದಿಯು ಅವಳ ವಾಸ್ತವವಾದಿ ಗುಣಗಳ ಸಾಮ್ಯತೆಯನ್ನು ಅವಳ ಸೋದರಮಾವ ವೀರೇಶನಲ್ಲಿ ಕಾಣಿಸಿ, ಅನುಮಾನಕ್ಕೆಡೆಯಿಲ್ಲದಂತೆ ನಿರೂಪಿಸುತ್ತದೆ.

ಹಾಗೆ ನೋಡಿದರೆ, ತನ್ನ ಅಕ್ಕ ಮತ್ತವಳ ವಿದ್ಯಾವಂತ ಕುಟುಂಬದ ಬಗ್ಗೆ ಹೆಮ್ಮೆಯ ಜೊತೆಗೆ ಅಂತಕ್ಕರಣವನ್ನೂ ಇಟ್ಟುಕೊಂಡಿದ್ದ ವೀರೇಶನಿಂದ ಮೇಶ್ಟರಿಗೆ ಯಾವ ಕೇಡೂ ಆಗಿಲ್ಲ. ಆದರೆ ಅವನ ಸ್ವಬಾವದ ಬಗ್ಗೆ ಮೇಶ್ಟರಿಗೆ ತಿರಸ್ಕಾರವಿತ್ತು. ವೀರೇಶನೆಂದರೆ ಕಡಿಮೆ ಕುಳವೇನಲ್ಲ. ಸೆಶನ್ಸ್ ಕೋರ‍್ಟಿನಲ್ಲಿ ಪ್ರೊಸೆಸ್ ಸರ‍್ವರ್ ಆಗಿ ಸೇರಿ ಲಂಚಗುಳಿತನವನ್ನು ಮೈಗೂಡಿಸಿಕೊಂಡಿದ್ದ ಅವನ ಕೆಲಸವು ಪೀಲ್ಡ್ ವರ‍್ಕ್ ಸ್ವರೂಪದ್ದಾದರಿಂದ, ಎರಡು ದಿನಕ್ಕೊಮ್ಮೆ ಆಪೀಸಿಗೆ ಬಂದು ಹಾಜರಿ ಹಾಕುವ ರಿಯಾಯಿತಿ ಇತ್ತು. ಪಾದರಸದಂತಹ ಚಟುವಟಿಕೆಯ ಮನುಶ್ಯನಾದ ಅವನು ಈ ಸಮಯವನ್ನು ಸದುಪಯೋಗ(?) ಪಡಿಸಿಕೊಂಡು, ಗ್ಯಾಸ್ ಏಜೆನ್ಸಿ, ಮೊಬೈಲ್ ಕರೆನ್ಸಿ, ಹಾಲಿನ ವ್ಯಾಪಾರ, ಕಿರಾಣಿ ಅಂಗಡಿ ಮುಂತಾಗಿ ಹತ್ತು ಕೈಗಳಿಂದ ಸಂಪಾದಿಸತೊಡಗಿದ್ದ. ಇಶ್ಟು ವ್ಯವಹಾರಗಳಿಂದ ಅಪಾರವಾದ ಜನ ಸಾಂಗತ್ಯವನ್ನು ಸಾದಿಸಿದ್ದ ಅವನು ಸಹಜವಾಗಿ ಸ್ತಳೀಯ ರಾಜಕಾರಣಕ್ಕೆ ಸೆಳೆಯಲ್ಪಟ್ಟು ರಾಮಸಂದ್ರದ ಎಮ್ಮೆಲ್ಲೆ ಮುನಿಯಪ್ಪನವರ ಬಲಗೈ ಬಂಟನಂತಾಗಿ ಹೋಗಿದ್ದ. ಚುನಾವಣೆಗಳ ಸಂದರ‍್ಬದಲ್ಲಿ ಯಾವ ಜಾತಿಯ ಜನ ಹೆಚ್ಚಿದ್ದಾರೆ ಅತವಾ ಕಡಿಮೆಯಾಗಿದ್ದಾರೆ, ಯಾವ ಸಂಗ ಸಂಸ್ತೆಗಳ ತುಡಿತ ಯಾವ ಕಡೆಗಿದೆ, ಅಸಂಗಟಿತ ವಲಯಗಳಲ್ಲಿನ ಪ್ರಬಾವಿ ವ್ಯಕ್ತಿಗಳ ವಿವರಗಳು ಮತ್ತು ಅವರನ್ನು ಒಲಿಸಿಕೊಳ್ಳುವ ಬಗೆ ಹೇಗೆ, ದುಡ್ಡಿಗೆ ಬೀಳುವ, ಬೀಳದ ವಲಯಗಳು ಯಾವುವು ಎಂಬಂತಹ ವಿವರಗಳನ್ನು ಉಪಾಯವಾಗಿ ಸಂಗ್ರಹಿಸಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಸಲಹೆಗಳನ್ನು ನೀಡುತ್ತಿದ್ದ ಅವನ ಲೆಕ್ಕಾಚಾರ ತಪ್ಪುತ್ತಿದ್ದುದು ಕಡಿಮೆ. ಹಾಗಾಗಿ ಅವನ ಮಾತು ಮುನಿಯಪ್ಪನವರ ಬಳಿ ತಪ್ಪದೆ ನಡೆಯುತ್ತಿತ್ತು. ವರದಕ್ಶಿಣೆಯ ಆಸೆಗಾಗಿ, ರೂಪು, ವಿದ್ಯೆ, ಬುದ್ದಿಗಳಲ್ಲಿ ತನಗೆ ಹೋಲಿಕೆಯೇ ಇರದಂತಹ ಹೆಣ್ಣೊಂದನ್ನು ಮದುವೆಯಾಗಿದ್ದ ಅವನು, ಎಲ್ಲ ಬಗೆಯ ಚಪಲಗಳನ್ನು ಮಿತವಾಗಿ ರೂಡಿಸಿಕೊಂಡಿದ್ದ. ಆಪೀಸಿನಲ್ಲಿ ತನ್ನ ಮಹಿಳಾ ಸಹೋದ್ಯೋಗಿಯೊಬ್ಬರೊಡನೆ ಅವನಿಗೆ ಗುಟ್ಟಾದ ಸಂಬಂದವಿರುವ ಬಗ್ಗೆ ಗಾಳಿಸುದ್ದಿಗಳಿದ್ದವು. ಇಂತಹ ತನ್ನ ಬಗ್ಗೆ ತನ್ನ ಬಾವನಿಗೆ ಇರುವ ತಿರಸ್ಕಾರದ ಅರಿವಿದ್ದ ಅವನ ಮನಸ್ಸು ಕೀಳರಿಮೆಯ ಒತ್ತಡದಿಂದ, ಅವರ ಮುಂದೆ ತನ್ನ ಗನತೆಯನ್ನು ಏರಿಸುವ ಇಲ್ಲವೆ ಅವರ ನೈತಿಕ ಅಹಂನ್ನು ಇಳಿಸುವ ಅವಕಾಶಕ್ಕಾಗಿ ಅಪ್ರಗ್ನಾಪೂರ‍್ವಕವಾಗಿ ಕಾಯುತ್ತಿತ್ತು.

ಅಂತಹ ಅವಕಾಶ ಬಂದೇ ಬಂತು. ಆಟೋಮೊಬೈಲ್ಸ್ ಇಂಜಿನಿಯರಿಂಗ್‍ಗೆ ಸಂಬಂದಿಸಿದ ಪ್ರತಿಶ್ಟಿತ ಕಂಪನಿಯೊಂದು ರಾಮಸಂದ್ರಕ್ಕೆ ಹತ್ತಿರವಿದ್ದ ಇಂಡಸ್ಟ್ರಿಯಲ್ ಏರಿಯಾದಲ್ಲಿ, ಸ್ತಳೀಯರಿಗೆ ಉದ್ಯೋಗ ನೀಡುವ ಬರವಸೆಯೊಂದಿಗೆ, ತನ್ನ ಬ್ರಾಂಚೊಂದನ್ನು ಸ್ತಾಪಿಸಿತು. ಐಟಿಐ, ಡಿಪ್ಲೋಮಾಗಳನ್ನು ಮಾಡಿದ ಎಶ್ಟೊ ಹುಡುಗರು ಮುನಿಯಪ್ಪನವರ ಶಿಪಾರಸು ಪತ್ರಗಳೊಂದಿಗೆ ಹೋಗಿ ಸೇರತೊಡಗಿದರು. ಕೈ ತುಂಬಾ ಸಂಬಳವಿದ್ದ ಆ ಕಂಪನಿಯಲ್ಲಿ ಇಂಜಿನಿಯರ್ ಮಟ್ಟದ ಹುದ್ದೆಗಳ ಆಯ್ಕೆ ಪ್ರಕ್ರಿಯೆ ತುಂಬಾ ಕಟಿಣವಾಗಿತ್ತು. ಶ್ರೀದರ ಹೋಗಿ ಬಂದಿದ್ದ. ಆದರೆ ಬರವಸೆಯಿರಲಿಲ್ಲ. ಇದನ್ನು ತಿಳಿದ ವೀರೇಶ “ನಿಮ್ಮಪ್ಪನಿಗೇನೂ ಏಳಕ್ಕೋಗ್ಬೇಡ. ನಾನು ಮುನಿಯಪ್ನೋರತ್ರ ಹೇಳಿಸ್ತೀನಿ ಸೇರ‍್ಕೊ ಓಗಲೇ” ಎಂದಿದ್ದ. ಆದರೆ ಹಾಗೆ ಮಾಡಿ ಅಬ್ಯಾಸವಿರದ ಶ್ರೀದರ, ತಂದೆಗೆ ತಿಳಿಸಿ ಅವರ “ಹೂಂ” ಗಾಗಿ ಬರವಸೆಯಿಂದ ಕಾದ.

ಆದರೆ, ಅವನ ನಿರೀಕ್ಶೆ ತಪ್ಪಾಯಿತು. ವೀರೇಶನ ಉದ್ದೇಶದ ಅರಿವಿದ್ದ ಮೇಶ್ಟರು “ಹೂಂ” ಅನ್ನಲಿಲ್ಲ. ನಿರಾಶೆಗೊಂಡ ಶ್ರೀದರ ಮತ್ತೆ ತನ್ನ ಮಾವನ ಜೊತೆ ಮಾತಾಡಲು ಹೋಗಲಿಲ್ಲ. ಈ ಮದ್ಯೆ ಕನಸಿನಂತೆ ಒಂದು ಗಟನೆ ನಡೆದು ಹೋಯಿತು. ಬಾನುವಾರದ ಒಂದು ಸಂಜೆ ಮೇಶ್ಟರು ಮನೆಯಲ್ಲಿದ್ದಾಗ, ನಂಜುಂಡಯ್ಯನವರ ಮೊಬೈಲಿಗೊಂದು ಕರೆ ಬಂತು. ಪೋನ್ ರಿಸೀವ್ ಮಾಡಿದ ಅವರು ಯಾರೆಂದು ವಿಚಾರಿಸುತ್ತಿದ್ದಂತೆ ತುಸು ಉದ್ವೇಗಗೊಂಡಂತೆ ಕಂಡುಬಂದರು. ಮೇಶ್ಟ್ರ ಮನೆಯ ವಿಳಾಸವನ್ನು ಹೇಳಿ ಪೋನ್ ಕಟ್ ಮಾಡಿದ ಅವರು, ಮೇಶ್ಟ್ರನ್ನು ಕರೆದು, ತಮ್ಮ ಹಳೆಯ ಸ್ನೇಹಿತರೊಬ್ಬರು ತಮ್ಮನ್ನು ಕಾಣಲು ಈಗ ಮನೆಗೆ ಬರುತ್ತಿರುವುದಾಗಿ ಹೇಳಿದರು. ಇದಾದ ಅರ‍್ದ ಗಂಟೆಗೆ, ದೊಡ್ಡ ವ್ಯಕ್ತಿಯಂತೆ ಕಾಣುವ ವಯೋವ್ರುದ್ದರೊಬ್ಬರು ಕಾರಿನಲ್ಲಿ ಬಂದಿಳಿದರು. ಬಾಗಿಲು ತೆಗೆದ ಮೇಶ್ಟರಿಗೆ ತಮ್ಮ ಹೆಸರು ರಾಮಕ್ರಿಶ್ಣ ಎಂದೂ, ನಂಜುಂಡಯ್ಯನವರು ಇಲ್ಲಿರುವರೆಂದು ತಿಳಿದು ಅವರನ್ನು ನೋಡಲು ಬಂದಿರುವುದಾಗಿ ಹೇಳಿದರು. ಮೇಶ್ಟರು ತೋರಿಸಿದ ಕೋಣೆಯೊಳಗೆ ನೇರವಾಗಿ ಹೋಗಿ ಸಂಬ್ರಮಾಶ್ಚರ‍್ಯಗಳಿಂದ “ಹೋ.. ನಂಜು ಹೌ ಆರ್ ಯು!? ಐ ವಾಸ್ ಸರ‍್ಚಿಂಗ್ ಪಾರ್ ಯು” ಎಂದು ಇಂಗ್ಲೀಶಿನಲ್ಲಿ ಸಂಬಾಶಿಸತೊಡಗಿದ್ದರು. ನಂತರ ತಿಳಿದುಬಂದದ್ದೇನೆಂದರೆ, ಅವರಿಬ್ಬರೂ ಬಾಲ್ಯ ಸ್ನೇಹಿತರು. ಆರ‍್ತಿಕ ಸಂಕಶ್ಟದಲ್ಲಿದ್ದಾಗ ನಂಜುಂಡಯ್ಯನವರ ತಂದೆಯಿಂದ ಸಾಕಶ್ಟು ಸಹಾಯವನ್ನು ಪಡೆದಿದ್ದ ರಾಮಕ್ರಿಶ್ಣರಿಗೆ ನಂತರ ಯು.ಎಸ್.ನಲ್ಲಿ ಕೆಲಸ ಸಿಕ್ಕು ಅಲ್ಲೆ ನೆಲೆಸಿದ ಮೇಲೆ ಇಬ್ಬರ ಸಂಪರ‍್ಕವು ಕ್ರಮೇಣ ನಿಂತುಹೋಗಿತ್ತು. ಇತ್ತೀಚೆಗಶ್ಟೆ ವಾಪಸ್ಸು ಬಂದಿದ್ದ ಅವರು, ರಾಮಸಂದ್ರಕ್ಕೆ ಹೊಸದಾಗಿ ಬಂದಿದ್ದ ಆಟೊಮೊಬೈಲ್ ಕಂಪನಿಗೆ ಅಡ್ವೈಸರ್ ಆಗಿ ಸೇರಿದ್ದರು. ತಮ್ಮ ಸ್ನೇಹಿತನನ್ನು ಈ ಸ್ತಿತಿಯಲ್ಲಿ ಸಲಹುತ್ತಿರುವುದಕ್ಕಾಗಿ ಅವರು ಮೇಶ್ಟರನ್ನು ಮನಸಾರೆ ಅಬಿನಂದಿಸಿದರು.

ಆ ದಿನ ಮನೆಯಲ್ಲೇ ಇದ್ದ ಶ್ರೀದರನನ್ನು ಕೂಡಲೆ ಗುರುತು ಹಿಡಿದ ಅವರು “ಹೊ.. ಯು ಕೇಮ್ ಪಾರ್ ದಿ ಇಂಟರ್ ವ್ಯೂ ರೈಟ್?” ಎಂದು ಹೇಳಿ ಅರೆ ಕ್ಶಣ ಯೋಚಿಸಿ “ಕ್ಯಾನ್ ಯು ಕಮ್ ಅಂಡ್ ಮೀಟ್ ಮಿ ಟುಮಾರೋ ಅಟ್ ಇಲೆವೆನ್?” ಎಂದರು. ಮೇಶ್ಟರು ಮಾತಾಡಲಿಲ್ಲ. ಅದು ಶ್ರೀದರನಿಗೆ “ಹೂಂ” ಎಂದು ಕೇಳಿಸಿತು. ಶ್ರೀದರ ಮಾರನೆಯ ದಿನವೇ ಹೋಗಿ ಅವರನ್ನು ಕಂಡು, ಮೂರುವರೆ ಲಕ್ಶದ ವಾರ‍್ಶಿಕ ಆದಾಯದ ಆಪರ್ ನೊಂದಿಗೆ ಅಸಿಸ್ಟೆಂಟ್ ಡಿಸೈನ್ ಇಂಜಿನಿಯರ್ ಆಗಿ ರಿಪೋರ‍್ಟ್ ಮಾಡಿಕೊಂಡ. ಎರಡು ದಿನ ಬಾರವಿಳಿದ ಸಂತ್ರುಪ್ತಿಯಿಂದಿದ್ದ ಮೇಶ್ಟರಿಗೆ, ಗೆಲುವಿನ ಬಾವವು ಒದಗುವ ಮೊದಲೇ ಮನಸ್ಸಿನಲ್ಲಿ ಪ್ರಶ್ನೆಯೊಂದು ಎದ್ದಿತು. ಈಗ ಶ್ರೀದರನಿಗೆ ಸಿಕ್ಕ ಕೆಲಸವೂ ಒಂದು ರೀತಿಯ ವಶೀಲಿಯಿಂದಲೇ ಅಲ್ಲವೆ. ನಿಮ್ಮ ಇಂಟರ್ ವ್ಯೂನಲ್ಲಿ ಅವನು ನಿಜಕ್ಕೂ ಆಯ್ಕೆಯಾಗಿದ್ದನೆ ಎಂದು ತಾವು ರಾಮಕ್ರಿಶ್ಣರನ್ನು ಏಕೆ ಪ್ರಶ್ನಿಸಲಿಲ್ಲ? ಹಾಗಿದ್ದರೆ ವೀರೇಶನನ್ನು ತಾವು ನಿರಾಕರಿಸಿದುದರ ಔಚಿತ್ಯವೇನು? ಮೇಶ್ಟರ ಮನಸ್ಸು ಆತ್ಮಾವಲೋಕನಕ್ಕೆ ತೊಡಗಿತು. ವೀರೇಶನ ಪ್ರಸ್ತಾವನೆಗೆ ಒಪ್ಪಿಬಿಟ್ಟಿದ್ದರೆ ಅವನ ಮುಂದೆ ತಮ್ಮ ಮೌಲ್ಯವು ಕುಸಿಯುತ್ತಿದ್ದುದಶ್ಟೇ ಅಲ್ಲ, ತಾವೂ ಕೂಡ ಅವನಶ್ಟೆ ಸಾಮಾನ್ಯರೆಂಬಂತೆ ಚಿತ್ರಿಸಲು ಅವನು ಸಿಗುವ ಅವಕಾಶವನ್ನೆಲ್ಲ ಬಳಸಿಕೊಳ್ಳುತ್ತಿದ್ದನೆಂಬ ಬಯವೇ ಅವನ ನಿರಾಕರಣೆಗೆ ಪ್ರೇರಣೆಯೆ? ತಮ್ಮ ಆರೈಕೆಯ ಹಂಗಿನಲ್ಲಿದ್ದು, ರುಣಬಾರದ ನಿವಾರಣೆಯ ಅವಕಾಶವನ್ನು ನಿರೀಕ್ಶಿಸುತ್ತಿದ್ದಂತಿದ್ದ ನಂಜುಂಡಯ್ಯನವರ ವಿಶಯದಲ್ಲಿ ಹಾಗಾಗುವ ಅವಕಾಶ ಎಂದೆಂದಿಗೂ ಇಲ್ಲವೆಂಬ ಕಲುಶಿತ ದೈರ‍್ಯವೇ ರಾಮಕ್ರಿಶ್ಣರಿಗಿತ್ತ ಮನ್ನಣೆಗೆ ಪ್ರೇರಣೆಯೇ?

ತಮ್ಮ ಜೀವನದಲ್ಲಿ ನಡೆಸಿದ ಮೌಲ್ಯಾಚರಣೆಯೆಲ್ಲಾ ಕೇವಲ ತಾನು ನೈತಿಕವಾಗಿ ಶ್ರೇಶ್ಟನೆಂಬ ವ್ಯಕ್ತಿಚಿತ್ರವನ್ನು ಕಟ್ಟಿ ಸಮಾಜದ ಮುಂದಿಡಲು ಮಾಡಿದ ಡಂಬ ಕಸರತ್ತಿನಂತೆ ತೋರಿತು. ತಮಗಿಂತಲೂ, ತನ್ನ ವ್ಯಕ್ತಿತ್ವವನ್ನು ಪ್ರಾಮಾಣಿಕವಾಗಿ ಅನಾವರಣಗೊಳಿಸಿಯೇ ಅನೈತಿಕತೆಯನ್ನು ಆಚರಿಸಿದ ವೀರೇಶನ ಬದುಕೇ ಹೆಚ್ಚು ಶುದ್ದವೆಂದೆನಿಸಿ, ಮೈ ಮನಸ್ಸುಗಳು ಲಗುವಾಗಿ ಕಂಪಿಸಿದವು. ನೈತಿಕತೆಯಿಂದ ನಟಿಸಿ ನರಳುವ ನೋವಿಗಿಂತಲೂ, ಬುದ್ದಿ ಬಳಸಿ ಬದುಕುವ ಸುಕವೇ ಹೆಚ್ಚು ಸಾರ‍್ತಕವೆಂಬ ಹೊಸ ಹೊಳಹಿನಿಂದ ಅವರಿಗೆ ತಮ್ಮ ಬೌದ್ದಿಕ ಪ್ರತಿಬೆಯ ಬಗ್ಗೆ ಹೆಮ್ಮೆಯೆನಿಸಲಿಲ್ಲ. ತಮ್ಮ ವ್ಯಕ್ತಿತ್ವದ ಆಳವು ಸತ್ವಯುತ ಜಿಗ್ನಾಸೆಯ ಒಂದೇ ಬಗೆತಕ್ಕೆ ಹೀಗೆ ದಕ್ಕಿಬಿಡಬಹುದೆಂದು ಅವರು ಎಣಿಸಿರಲಿಲ್ಲ. ಇದ್ದಕ್ಕಿದ್ದಂತೆ ಮನಸ್ಸು ಮತ್ತೊಂದು ಮಗ್ಗುಲಿಗೆ ಹೊರಳಿತು. ಒಂದು ವೇಳೆ ಶ್ರೀದರ ನಿಜಕ್ಕೂ ಆಯ್ಕೆಯಾಗಿದ್ದರಲೂಬಹುದು. ಅವರು ಅದೇ ಕಂಪನಿಗೆ ಸೇರಿದವರೆಂದು ತಿಳಿದೂ ತಾವು ಶ್ರೀದರನ ಪ್ರಸ್ತಾಪ ಮಾಡದೇ ಇದ್ದುದು ನೈತಿಕತೆಯಲ್ಲದೆ ಮತ್ತೇನು? ಇಶ್ಟಕ್ಕೂ ಶ್ರೀದರ ಆ ಕೆಲಸಕ್ಕೆ ಅನರ‍್ಹನೇನಲ್ಲ. ಅಪ್ಪಟ ತಾಂತ್ರಿಕ ಪ್ರತಿಬೆಯುಳ್ಳ ಹುಡುಗನಿಗೆ ಅದೇ ಕ್ಶೇತ್ರವನ್ನು ಪ್ರವೇಶಿಸದಂತೆ ಅಡಿಗಡಿಗೆ ತಡೆಯುವ ಈ ವ್ಯವಸ್ತೆಯ ದೋಶಕ್ಕೆ, ತನ್ನ ತಪ್ಪೇ ಇರದ ಶ್ರೀದರನೇಕೆ ಬಲಿಯಾಗಬೇಕು? ಹೀಗೆ ಆಲೋಚಿಸುತ್ತಲೆ ನಿರಾಳವೆನಿಸತೊಡಗಿತು. ಹಿಂದೆಯೇ, ಮತ್ತೊಮ್ಮೆ ಹೊರಳಿದ ಮನಸ್ಸು, ಆದರೆ ಅವನು ಇಂಟರ್ ವ್ಯೂನಲ್ಲಿ ನಿಜಕ್ಕೂ…..?

ಜಿಗ್ನಾಸೆಯ ಹೊಯ್ದಾಟವು ಮುಗಿಯುತ್ತಿಲ್ಲವೋ ಅತವಾ ಅರ‍್ತವಾಗದ ಆತಂಕದಿಂದ ಮನಸ್ಸು ಮುಗಿಯಗೊಡುತ್ತಿಲ್ಲವೋ. ಮನಸ್ಸಿನ ಆತಂಕಕ್ಕೆ ಕಾರಣವಂತೂ ಬಯವೇ. ಆದರೆ ಅದು ಒಮ್ಮೆ ಪ್ರಾಂಜಲ ಮನಸ್ಸಿನ, ಶುದ್ದ, ತಾರ‍್ಕಿಕ ಮಂತನದ ಅಂತ್ಯದಲ್ಲಿ ಹುಟ್ಟುವ ಸತ್ಯವನ್ನು ಎದುರುಗೊಳ್ಳಬೇಕಾದ ಬಯದಂತೆ ಕಾಣಿಸಿದರೆ, ಇನ್ನೊಮ್ಮೆ ಮುಕೇಡಿ ಮನಸ್ಸಿನ ದುರ‍್ಬಲ ಸಮರ‍್ತನೆಗಳು ರೂಪಿಸುವ ಸುಳ್ಳನ್ನು ಒಪ್ಪಿ, ಅಪ್ಪಬೇಕಾಗಿಬಿಡಬಹುದಾದ ಬಯದಂತೆ ಕಾಣುತ್ತದೆ. ಹಾಗೆ ಸುಳ್ಳನ್ನು ಒಪ್ಪುವ ಬಯದಿಂದಲೂ, ಜಿಗ್ನಾಸೆಗೆ ಹೆದರುವ ಮಟ್ಟಿಗೆ, ಉದ್ದೇಶ ಶುದ್ದಿಯನ್ನು ಉಳಿಸಿಕೊಂಡಿರುವ ತಮ್ಮ ಬಗ್ಗೆ ಮೇಶ್ಟರಿಗೆ ಈಗ ಹೆಮ್ಮೆಯಾಗತೊಡಗಿತು.

( ಚಿತ್ರ ಸೆಲೆ : mzayat.com )

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. padmanabha d says:

    ಕಥೆ ಸುಂದರವಾಗಿದೆ

  2. ಕತೆ ಚೆನ್ನಾಗಿದೆ, ಓದಿಸಿಕೊಂಡು ಹೋಗುತ್ತದೆ.

  3. Sharath Kumar says:

    ಅದ್ಬುತ

  4. ಎಸ್ ವಿ ಪ್ರಕಾಶ್ ಅವರಂತ ಪ್ರತಿಬಾವಂತ ಬರಹಗಾರರನ್ನು ನಮಗೆ ಪರಿಚಯಿಸುತ್ತಿರುವುದಕ್ಕಾಗಿ ಹೊನಲಿಗೆ ನನ್ನಿ. ‘ಆಳ’ದಲ್ಲಿ ಪ್ರಕಾಶರು ಕತೆಯ ಪಾತ್ರಗಳ ಒಳತೋಟಿಯನ್ನು ತೆರೆದಿಡುವ ಬಗೆ, ಅದರಲ್ಲೂ ಶ್ರೀಕಂಟಪ್ಪ ಮೇಸ್ಟರ ನೈತಿಕ ಇಬ್ಬಂದಿಯನ್ನು ಒಳಹೊರಗು ಮಾಡುವಲ್ಲಿ ತೋರುವ ಪಳಗಿಕೆ ತೀರ ಮೇಲುಮಟ್ಟದ್ದಾಗಿದೆ. ಮತ್ತು ಎಲ್ಲೂ ಯಾವ ಪಾತ್ರದ ವಕೀಲಿಯನ್ನೂ ಮಾಡದೆ ಅವರು ಮೆರೆಯುವ ಸಂಯಮ ಕತೆಗಾರರಲ್ಲಿ ಅಪರೂಪದ್ದು. ಪ್ರಕಾಶ್ ಅವರು ದೊಡ್ಡ ಹೆಸರು ಮಾಡುವುದರಲ್ಲಿ ಸಂಶಯವಿಲ್ಲ.

ಅನಿಸಿಕೆ ಬರೆಯಿರಿ:

%d bloggers like this: