ತೆರೆದ ಬಾಗಿಲು

ಜನಾರ‍್ದನ.

( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ )

ತೆರೆದ ಬಾಗಿಲಿನಲ್ಲಿ ನಿಂತ ನಿನ್ನನು ಕಂಡೆ
ನಿನ್ನ ಮುಗುಳು ನಗೆಯಲಿ ನನ್ನ ನೆನಪ ಸುಳಿವು
ಹೊತ್ತಿಕೊಂಡವು ಸಾಲು ದೀಪಗಳು ದಾರಿಯಲ್ಲಿ
ದಾರಿಯುದ್ದಕೂ ತುಂಬು ಬೆಳಕು ಚೆಲ್ಲಿ

ನನ್ನ ಬರುವನು ಕೋರಿ, ತೆರೆದುಕೊಂಡಿತು ದಾರಿ
ನಿಂತೇ ಇದ್ದೆ ನಾನು, ಬೇಲಿಯ ಆಚೆ
ಹೂವೊಂದು ಅರಳಿತ್ತು ನಗುವ ನೆನಪಿಸಲೆಂದೆ
ಅದರ ಕಣ್ಣನೆ ನಾನು ನೊಡುತಿದ್ದೆ

ಮತ್ತೆ ಕರೆದೆ ನೀನು ಬರಲೇಬೇಕೆಂದು
ನಿನ್ನ ದನಿಯು ನನ್ನ ಎಚ್ಚರಿಸಿತು
ಅದರ ಸೌಜನ್ಯಕೆ ವಂದಿಸಿದ ನಾನು
ಮತ್ತೆಬರುವೆನು ಎಂದು ನನ್ನ ದಾರಿಯ ಹಿಡಿದೆ
ಹೊರನಡೆದೆ ಹಣೆಯಲ್ಲಿ ಬೆವರನೊರೆಸಿ

ನನ್ನ ದಾರಿಯ ತುದಿಯು ನಿಂತಿತ್ತು ದೂರದಲಿ
ಕೊನೆಯ ಮುಟ್ಟುವ ಬರವಸೆ ಇನ್ನೂ ದೂರ
ಹೆಜ್ಜೆ ಹೆಜ್ಜೆಗೂ ನೆನಪು ಬಾರವಾಯಿತು, ದಣಿದೆ
ನಿಲ್ಲುವಂತಿರಲಿಲ್ಲ… ಮುಂದೆ ನಡೆದೆ

ನಡೆದ ದಾರಿಯಲಿ
ನಿಂತ ದೂರದಲಿ… ಇಂದು
ನನ್ನ ಒಂದೇ ನೆನಪು
ತೆರೆದ ಬಾಗಿಲು
ತೆರೆದಿರಲಿ ಬಾಗಿಲು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sandeep A says:

    ಸರಳವಾಗಿ ಚೆನ್ನಾಗಿ ಮೂಡಿ ಬಂದಿದೆ

ಅನಿಸಿಕೆ ಬರೆಯಿರಿ: