ಒಲವರಳಲು ಕಾರಣ ಬೇಕೇನು

– ವಿನು ರವಿ.

ಒಲವರಳಲು ಕಾರಣ ಬೇಕೇನು
ಸುಮ್ಮನೆ ಒಲವಾಗುವುದಿಲ್ಲವೇನು
ಬೀಸೋ ಗಾಳಿ ಅರಳಿದಾ
ಹೂ ಮೊಗವ ಚುಂಬಿಸುವಾಗ
ಮೊರೆವ ಸಾಗರ ಹೊಳೆವ
ಮರಳ ದಂಡೆಯ ಮುದ್ದಿಸುವಾಗ
ನೇಸರನ ಹೊಸ ಕಿರಣ
ಬೂರಮೆಯ ಮುತ್ತಿಡುವಾಗ
ಸುಮ್ಮನೆ ಒಲವಾಯಿತಲ್ಲವೇನು
ಒಲವರಳಲು ಕಾರಣ ಬೇಕೇನು

ಮೇಗರಾಜನ ಕರೆಗೆ
ನವಿಲೊಂದು ಗರಿ ತೆಗೆದು
ನರ‍್ತಿಸುವಾಗ
ತುಂಬು ಚಂದಿರ ಸುರಿಸುವ
ಬೆಳದಿಂಗಳಲಿ ನಿಶೆರಾಣಿ
ಮಿಂದೇಳುವಾಗ
ನೀಲಬಾನ ಹರಹಿಗೆ
ತಾರೆಗಳ ಕಣ್ ಮಿಂಚುವಾಗ
ಸುಮ್ಮನೆ ಒಲವಾಯಿತಲ್ಲವೇನು
ಒಲವರಳಲು ಕಾರಣ ಬೇಕೇನು

ಜಗದ ಚೆಲುವಿನಾತ್ಮ ಒಲವು
ಎಲ್ಲೆಲ್ಲೂ ಅದರದೇ ಸವಿಸೊಲ್ಲು
ಅದನರಿತ ಹ್ರುದಯದ ತುಂಬಾ
ಬಣ್ಣ ತುಂಬಿದಾ ಕಾಮನಬಿಲ್ಲು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Prathima T says:

    ಒಂದು ಸುಂದರ ಭಾವನೆ

ಅನಿಸಿಕೆ ಬರೆಯಿರಿ: