ಇದು ಹೊಡೆದಾಡುವ ಹೋಳಿ ಹಬ್ಬ!

– ಕೆ.ವಿ.ಶಶಿದರ.

ಹೋಳಿ ಹಬ್ಬ Holiಬಾರತ ಸಾಂಸ್ಕ್ರುತಿಕವಾಗಿ ವಿಬಿನ್ನ ರಾಶ್ಟ್ರ. ವಿವಿದ ದರ‍್ಮಗಳು ಅನೇಕ ಉತ್ಸವಗಳನ್ನು ಆಚರಿಸುತ್ತವೆ. ದಾರ‍್ಮಿಕ ಉತ್ಸವಗಳನ್ನು ಗಮನಿಸಿದಾಗ ಬಾರತೀಯರು ಅತ್ಯಂತ ಉತ್ಸಾಹದಿಂದ ಹಾಗೂ ನಂಬಿಕೆಯಿಂದ ಆಚರಿಸುವುದನ್ನು ಕಾಣಬಹುದು. ಬಾರತದಲ್ಲಿ ಮಾತ್ರ ಆಚರಿಸಲಾಗುವ ಹಿಂದೂ ಹಬ್ಬ ಲಾತ್ ಮಾರ್ ಹೋಳಿ ಶತಮಾನದಶ್ಟು ಹಳೆಯದಾದ ಒಂದು ಉತ್ಸವ. ಉತ್ಸವದ ಅಂಗವಾಗಿ ಹೆಂಗಸರು ಕೋಲಿನಿಂದ ಗಂಡಸರನ್ನು ಹೊಡೆಯುವ ವಿಚಿತ್ರ ಸಂಪ್ರದಾಯ ಇದರಲ್ಲಿ ಸೇರಿದೆ. ಹೆಂಗಸರು ಯಾಕಾಗಿ ಗಂಡಸರಿಗೆ ಹೊಡೆಯುತ್ತಾರೆ? ಈ ಆಚರಣೆಯ ಹಿಂದಿನ ಮಹತ್ವವೇನು? ನೋಡುವ ಬನ್ನಿ.

ಉತ್ತರ ಪ್ರದೇಶದ ಮತುರಾದಲ್ಲಿ ನಡೆಯುವ ಹಬ್ಬ

ಲಾತ್ ಮಾರ್ ಹೋಳಿ ಎಂದರೆ ಬಣ್ಣದ ಹಬ್ಬದಂದು ಕೋಲಿನಿಂದ ಬಡಿ ಎಂದು. ಉತ್ತರ ಪ್ರದೇಶದ ಮತುರಾ ಜಿಲ್ಲೆಯ ಸಾವಿರಾರು ಜನ ಬರ‍್ಸಾನಾ ಹಳ್ಳಿಯ ರಾದಾ ರಾಣಿ ದೇವಾಲಯಕ್ಕೆ ಉತ್ಸವದ ಆಚರಣೆಗೆ ಬಂದು ಸೇರುತ್ತಾರೆ. ಅಲ್ಲಿ ಆರಂಬದಲ್ಲಿನ ಸಣ್ಣ ಸಾಂಪ್ರದಾಯಿಕ ಸಮಾರಂಬದ ನಂತರ, ಎಲ್ಲರೂ ದೇವಾಲಯದ ಸಂಕೀರ‍್ಣದಲ್ಲಿನ ಪ್ರಸಿದ್ದ ‘ರಂಗ್ ರಂಗೇಲಿ ಗಲ್ಲಿ’ ಎಂಬ ಕಿರಿದಾದ ಓಣಿಯಲ್ಲಿ ಒಟ್ಟುಗೂಡುತ್ತಾರೆ.

ಹೆಂಗಸರು ಗಂಡಸರಿಗೆ ಬಣ್ಣ ಬಳಿಯುವ ಮೂಲಕ ಉತ್ಸವದ ಆಚರಣೆ ಆರಂಬ. ಯಾವ ಗಂಡಸು ಇದಕ್ಕೆ ಹೊರತಲ್ಲ. ಪ್ರತಿಯೊಬ್ಬರಿಗೂ ಬಣ್ಣ ಬಳಿಯುವುದು ಲಾತ್ ಮಾರ್ ಹೋಳಿಯ ಸಂಪ್ರದಾಯ. ಸ್ತಳೀಯರು ಜಾನಪದ ಹಾಡುಗಳನ್ನು ಹಾಡಲು ಪ್ರಾರಂಬಿಸುತ್ತಿದ್ದಂತೆ ಹಾಡಿಗೆ ತಕ್ಕುದಾಗಿ ಹೆಣ್ಣುಮಕ್ಕಳು ಕುಣಿಯುವುದು ಆಚರಣೆಯ ಮುಂದಿನ ಬಾಗ.

ಈ ದಿನದಲ್ಲಿ ಇಲ್ಲಿನ ಸಿಹಿ ಮಾರಾಟ ಮಳಿಗೆಗೆಳಲ್ಲಿ ‘ತಾಂಡೈ’ ಎಂಬ ತಂಪು ಪಾನೀಯ ಯತೇಚ್ಚವಾಗಿ ದೊರಕುತ್ತದೆ. ಪ್ರತಿ ಮಾರಾಟ ಮಳಿಗೆಯಲ್ಲೂ ಇದು ತುಂಬಿ ತುಳುಕುತ್ತಿರುತ್ತದೆ. ತಾಂಡೈ ತಯಾರಾಗುವುದು ಬಾಂಗ್ ಎಂಬ ಕಾದ್ಯದಿಂದ. ಇದು ಬಂಗಿಯ ಸಹವರ‍್ತಿ. ಹಾಗಾಗಿ ಇದಕ್ಕೆ ಅಂದಿನ ದಿನ ಎಲ್ಲಿಲ್ಲದ ಬೇಡಿಕೆ. ಬಹಳಶ್ಟು ಗಂಡಸರ ಬಾಗವಹಿಸುವಿಕೆ ಇದಕ್ಕಾಗಿಯೇ.

ಮರುದಿನವೂ ಸಹ ಬರ‍್ಸಾನಾಗೆ ಆಗಮಿಸಿದ ಗಂಡಸರು ಗ್ರಾಮದ ಹೆಣ್ಣುಮಕ್ಕಳಿಗೆ ಬಣ್ಣ ಹಚ್ಚಲು ಪ್ರಯತ್ನಿಸುತ್ತಾರೆ. ಈ ಸಮಯದಲ್ಲಿ ಹೆಂಗಸರು ಅವರಿಂದ ತಪ್ಪಿಸಿಕೊಳ್ಳಲು ಕೋಲನ್ನು ಅಸ್ತ್ರವಾಗಿ ಬಳಸಿಕೊಂಡು ಬಡಿಯಲು ಯತ್ನಿಸುತ್ತಾರೆ. ಇವರ ಹೊಡೆತದಿಂದ ತಪ್ಪಿಸಿಕೊಳ್ಳಲು ಗಂಡಸರು ಸಿಕ್ಕ ಸಿಕ್ಕ ಬಾಣಲೆ, ಮರದ ಹಲಗೆ ಮುಂತಾದ ಗಟ್ಟಿ ವಸ್ತುವನ್ನು ಗುರಾಣಿಯಾಗಿ ಅಡ್ಡ ಹಿಡಿದು ಹೊಡೆತದಿಂದ ತಪ್ಪಿಸಿಕೊಳ್ಳುತ್ತಾರೆ. ಹೊಡೆತದಿಂದ ತಪ್ಪಿಸಿಕೊಳ್ಳಲು ಇವರು ಪಡುವ ಪ್ರಯತ್ನ ನೋಡುಗರಿಗೆ ಮಜಬೂತಾದ ಮನರಂಜನೆ ಒದಗಿಸುತ್ತದೆ. ಹೆಂಗಸರು ತಮ್ಮ ಜೊತೆಗಾರರನ್ನು ಹುರಿದುಂಬಿಸುತ್ತಾ ಕೂಗುತ್ತಾ ಗಂಡಸರ ಬೆನ್ನಟ್ಟಿ, ಕೋಲಿನಿಂದ ಇನ್ನೂ ಬಲವಾಗಿ ಹೊಡೆಯಲು ಪ್ರೆರೇಪಿಸುತ್ತಾರೆ.

ಬಣ್ಣದ ಹಬ್ಬ Holi Festival

ಈ ಹಬ್ಬದ ಹಿಂದಿರುವ ಪುರಾಣದ ಕತೆ

ನೆರೆದಿದ್ದ ಬಹುತೇಕರು ಈ ವಿನೋದದಲ್ಲಿ ಪಾಲ್ಗೊಳ್ಳುತ್ತಾರೆ. ಇದು ತಮಾಶೆಗಾಗಿ ಮಾತ್ರ ನಡೆಯುವ ಸಂಪ್ರದಾಯ. ಇದರಲ್ಲಿ ಇದುವರೆಗೂ ಸಾವು ನೋವುಗಳು ಸಂಬವಿಸಿಲ್ಲ. ಬಾರತದ ಪೌರಾಣಿಕ ಕತೆಗಳಲ್ಲಿ ಹೆಂಗಸರ ಕಣ್ಮಣಿ ಕ್ರಿಶ್ಣ. ಯಾವುದೇ ಪುಟ್ಟ ಗಂಡು ಮಗು ಕಂಡರೂ ಮೊದಲು ಹೋಲಿಸುವುದು ಕ್ರಿಶ್ಣನಿಗೆ. ಅಶ್ಟು ಜನಪ್ರಿಯತೆ ಆತನಿಗೆ. ಕ್ರಿಶ್ಣನ ಜೀವನದ ವಿವಿದ ಹಂತಗಳೂ ಅತ್ಯಂತ ಚೆತೋಹಾರಿ. ಆತ ಯುವಕನಾಗಿದ್ದ ಕಾಲದಲ್ಲಿ ಬಹಳವೇ ವಿನೋದ ಹಾಗೂ ತುಂಟತನ ತುಂಬಿತ್ತು. ಯೌವನದಲ್ಲಿ ಕ್ರಿಶ್ಣ ತನ್ನ ಪ್ರಿಯತಮೆ ರಾದ ಇದ್ದ ಬರ‍್ಸಾನಾಗೆ ಅನೇಕ ಬಾರಿ ಬೇಟಿ ನೀಡಿದ್ದ. ಒಮ್ಮೆ ರಂಗಿನ ಹಬ್ಬ ಹೋಳಿಯ ಮುನ್ನಾದಿನ ತನ್ನ ಗೆಳೆಯರ ಜೊತೆ ಬರ‍್ಸಾನಾಗೆ ಬಂದ. ರಾದ ಮತ್ತು ಅವಳ ಸಹಚರರನ್ನು ಲೇವಡಿ ಮಾಡಿದ. ಇದಕ್ಕೆ ಪ್ರತಿರೋದವಾಗಿ ರಾದ ಮತ್ತು ಆಕೆಯ ಸಹಚರರು ಸಿಕ್ಕ ಸಿಕ್ಕ ಕೋಲುಗಳಿಂದ ಕ್ರಿಶ್ಣ ಮತ್ತು ಅವನ ಜೊತೆಗಾರರನ್ನು ಬೆದರಿಸಿ ದೂರ ಓಡಿಸಿದ್ದರಂತೆ. ಈ ದಂತಕತೆಯ ಪುನರುತ್ತಾನವೇ ಲಾತ್ ಮಾರ್ ಹೋಳಿ.

ಲಾತ್ ಮಾರ್ ಹೋಳಿ ಪ್ರಾರಂಬವಾಗಿದ್ದು ಕ್ರಿಶ್ಣನ ಕುಚೇಶ್ಟೆಯಿಂದಾದ ಕಾರಣ ಈ ಹಬ್ಬವನ್ನು ಆತ ಹುಟ್ಟಿದ ಜಾಗ ಎಂದು ನಂಬಲಾಗಿರುವ ಮತುರಾ ಜಿಲ್ಲೆಯಲ್ಲಿ ಆಚರಿಸುತ್ತಾರೆ.

(ಮಾಹಿತಿ ಸೆಲೆ: theculturetrip)
(ಚಿತ್ರ ಸೆಲೆ: wiki/lathmar, wiki/holi)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: