ಕತೆ: ಒಲವು-ಗೆಲುವು

– ಸುರಬಿ ಲತಾ.

ಹ್ರುದಯ, heart,

ಜೋರು ಮಳೆ, ಕಾರನ್ನು ಸರ‍್ವಿಸ್ ಗೆ ಬಿಟ್ಟು ಬೈಕ್ ನಲ್ಲಿ ಬಂದಿದ್ದ ಶ್ರೀದರ ಮಳೆಯಲ್ಲಿ ನೆಂದು ಮುದ್ದೆಯಾಗಿದ್ದ. ಮಳೆ ನಿಲ್ಲುವಂತೆ ಕಾಣಲಿಲ್ಲ. ಅಲ್ಲೇ ಇದ್ದ ಒಂದು ಅಂಗಡಿಯ ಬಳಿ ಬೈಕ್ ನಿಲ್ಲಿಸಿ ಕಾಪಿ ಕುಡಿಯುತ್ತ ನಿಂತ. ದೂರದಿಂದ ಒಂದು ಹುಡುಗಿ ಓಡಿ ಬಂದು “ತಾತಾ, ಬೇಗ  ಕಾಪಿ ಕೊಡು” ಎಂದಳು. ಅಲ್ಲಿದ್ದ ತಾತ “ಓ ಕಾದಂಬರಿ, ಬಾ” ಎನ್ನುತ್ತಾ ಅವಳಿಗೆ ಕಾಪಿ ಕೊಟ್ಟ. ಶ್ರೀದರ ಅವಳನ್ನು ನೋಡಿದ, ಅವಳು ಮಳೆಯಲ್ಲಿ ನೆನೆದಿದ್ದಳು. ಉದ್ದ ಕೂದಲು ಮೈಗೆ ಅಂಟಿತ್ತು , ಗುಂಡು ಮುಕ ನೋಡಲು ಸುಂದರವಾಗಿ ಶ್ರೀದರನಿಗೆ ಅಪ್ಸರೆಯಾಗಿ ಕಂಡಳು. ಅವಳು ಕಾಪಿ ಕುಡಿದು ಮುಗಿಸುವುದರಲ್ಲಿ ಮಳೆ ಸ್ವಲ್ಪ ನಿಂತಿತ್ತು. “ಬರ‍್ತೀನಿ ತಾತಾ” ಎಂದು ಓಡಿ ತಿರುವಿನಲ್ಲಿ ಮಾಯವಾದಳು .

ಶ್ರೀದರನು ಮನೆಗೆ ಬಂದ ಮೇಲೂ ಅ ಸುಂದರಿಯ ಮುಕ ಮಾತ್ರ ಮರೆಯಲಾಗಲಿಲ್ಲ. ಪ್ರತೀ ದಿನ ಆಪೀಸು ಮುಗಿದೊಡನೆ ಆ ಮುದುಕನ ಅಂಗಡಿಗೆ ಹೋಗಿ ಕಾಪಿ ಕುಡಿದು ಮನೆಗೆ ಹೋಗುವ ಅಬ್ಯಾಸ  ಮಾಡಿಕೊಂಡ. 5  ದಿನಗಳಾದರೂ ಆ ಹುಡುಗಿಯನ್ನು ಮಾತ್ರ ನೋಡಲು ಆಗಲಿಲ್ಲ.

ಅಂದು ಶ್ರೀದರ್ ಆಪೀಸ್ ಗೆ ಬೇಗ ಹೋಗಬೇಕಿತ್ತು. ಅವರ ಬಾಸ್ ಅಮೇರಿಕಾಗೆ ಹೋಗುವ ಮೊದಲು ಒಂದು ಜವಾಬ್ದಾರಿ ಒಪ್ಪಿಸಿದ್ದರು. ಅವನು ಇಂಟರ‍್ವ್ಯೂ ಮಾಡಬೇಕಿತ್ತು. ಬಂದ ಎಶ್ಟೋ ಜನರಲ್ಲಿ 5 ಜನರನ್ನು ಅವನು ಸೆಲೆಕ್ಟ್ ಮಾಡಬೇಕಿತ್ತು. ಒಬ್ಬೊಬ್ಬರನ್ನಾಗಿ ಕರೆಯುತ್ತಿದ್ದಾಗ, ಒಂದು ಹೆಸರ ಮೇಲೆ ಅವನ ಕಣ್ಣು ಬಿತ್ತು. ಒಳಗೆ ಬಂದ ಅವಳನ್ನು ನೋಡಿ ಒಳೊಗೊಳಗೆ ಸಂತಸವಾಗಿತ್ತು. ಅವಳು, ಅವಳ ಬಗ್ಗೆ ಹೇಳುತಿದ್ದಳು. ಹೆಸರು ಕಾದಂಬರಿ,  ಡಿಗ್ರೀ ಮುಗಿಸಿ ಸೆಕ್ರೆಟರಿ ಆಗಿ 2 ವರ‍್ಶ ಅನುಬವ ಆಗಿತ್ತು, ಅಲ್ಲಿ ಸಂಬಳ ಸಾಲದು ಎಂದು ಇಲ್ಲಿ ಸೇರಲು ಬಂದಿರುವುದಾಗಿ ತಿಳಿಸಿದಳು. ಅವಳನ್ನು ನೋಡಿದಾಕ್ಶಣ ಅವಳಿಗೆ ಕೆಲಸ ಕೊಡಲು ಶ್ರೀದರ್ ಆಗಲೇ ನಿರ‍್ದರಿಸಿದ್ದ. ಇದು ಕೇಳಿದೊಡನೆ ಅವಳ ಮುಕ ತಾವರೆಯಂತೆ ಅರಳಿತು. ಅವಳು ದನ್ಯವಾದ ಹೇಳಿ ಹೋದಳು.

ಶ್ರೀದರ್ ಆಪೀಸಿನ  ಕೆಲಸದ ಮೇಲೆ ಮುಂದಿನವಾರ ಡೆಲ್ಲಿಗೆ ಹೋಗಬೇಕಾಗಿತ್ತು. ತನ್ನ ಪ್ರೀತಿಯ ವಿಶಯ ಕಾದಂಬರಿಗೆ ತಿಳಿಸಬೇಕು ಎಂದುಕೊಂಡು ಕ್ಯಾಂಟೀನ್ ಕಡೆ ಹೊರಟ. ಅಲ್ಲಿ ಕಾದಂಬರಿ ಇವನನ್ನು ನೋಡಿ  ‘ಹಾಯ್ ಸರ್’ ಎಂದಳು . ಅವನು ನಗುತ್ತ “ನಿಮ್ಮ ಹತ್ತಿರ ಮಾತಾಡಬೇಕಿತ್ತು, ಬಂದೆ”‘ ಎಂದ . ‘ಹೇಳಿ ಸರ್ ‘ ಎಂದಳು. ಎರಡೇ ಎರಡು ಸಾಲಿನಲ್ಲಿ ಬರೆದಿದ್ದ ಒಂದು ಚೀಟಿಯನ್ನು ಅವಳ ಕೈನಲ್ಲಿ ಇಟ್ಟ. ಅವಳು ಅದನ್ನು ಬಿಡಿಸಿ ನೋಡಿದಳು. ಅದರಲ್ಲಿ “ನಾನು ನಿಮ್ಮನ್ನು ಇಶ್ಟ ಪಟ್ಟಿದ್ದೇನೆ, ನಿಮಗೆ ಒಪ್ಪಿಗೆ ಇದ್ದಲ್ಲಿ ಮದುವೆ ಮಾಡಿಕೊಳ್ಳಲು ಇಚ್ಚಿಸುತ್ತೇನೆ” ಎಂದು ಬರೆದಿತ್ತು. ಅವಳು ಅವನ ಮುಕ  ನೋಡಿದಳು. ಅವನು ಅವಳನ್ನೇ ನೋಡುತ್ತಿದ್ದ. ಅವಳು ನಾಚಿ ‘ಹೂಂ..’ ಎಂದೊಡನೆ ಅವಳ ಕೈ ಹಿಡಿದುಕೊಂಡ. ಅಂದಿನಿಂದ ಇಬ್ಬರು ಜೋಡಿ ಹಕ್ಕಿಗಳ ಹಾಗೆ ಇರುತಿದ್ದರು. ಅವಳ ಬಗ್ಗೆ ಅವನು ಎಲ್ಲವೂ ತಿಳಿದುಕೊಂಡ. ಕಾದಂಬರಿಗೆ ತಂದೆ ಇರಲಿಲ್ಲ. ಒಂದು ಸ್ವಂತ ಮನೆ ಬಿಟ್ಟರೆ ಬೇರೆ ಏನು ಇರಲಿಲ್ಲ .

ಶ್ರೀದರ  ಕಾದಂಬರಿಗೆ, ತಾನು ದೆಹಲಿಯಿಂದ ಬಂದ ಮೇಲೆ ಅವಳ ಅಮ್ಮನ ಬಳಿ ಮದುವೆಯ ವಿಶಯ ಮಾತನಾಡುವುದಾಗಿ ತಿಳಿಸಿ ದೆಹಲಿಗೆ ಹೊರಟ.

*******************************************************

ಮೋಹನರಾಯ ಹಾಗು ಶಾಂತಮ್ಮರಿಗೆ ಇಬ್ಬರು ಗಂಡು ಮಕ್ಕಳು  – ಮದುಕರ ಮತ್ತು ಶ್ರೀದರ. ಮದುಕರನಿಗೆ ಮದುವೆ ಆದ ಆರು ತಿಂಗಳ ಬಳಿಕ ಅಪಗಾತವೊಂದರಲ್ಲಿ ಮದುಕರನ ಹೆಂಡತಿ ಸಾವನ್ನಪ್ಪಿದ್ದಳು. ಎಶ್ಟು ಹೇಳಿದರೂ ಮರು ಮದುವೆಗೆ ಮದು ಒಪ್ಪಿರಲಿಲ್ಲ. ಹೆಂಡತಿಯ ನೆನಪಲ್ಲೇ 5 ವರ‍್ಶ ಕಳೆದಿದ್ದ.

ಅಂದು ಮದು ಬೇಗನೆ ಎದ್ದಿದ್ದ. ಅಂದು ಅವನ ಮದುವೆಯ ಆನಿವರ‍್ಸರಿ . ಪ್ರತೀ ವರ‍್ಶ ಗುಡಿಗೆ ಹೋಗಿ, ಪೂಜೆ ಮಾಡಿಸಿ ಬಡವರಿಗಾಗಿ ಬಟ್ಟೆಗಳನ್ನು ಕೊಟ್ಟು ಬರುತ್ತಿದ್ದ. ಪ್ರತೀ ವರ‍್ಶ ಅಣ್ಣ ತಮ್ಮ ಇಬ್ಬರೂ ಗುಡಿಗೆ ಹೋಗಿ ಬರುತ್ತಿದ್ದರು. ಆದರೆ  ಶ್ರೀದರ ಡೆಲ್ಲಿ ಗೆ ಹೋಗಿದ್ದರಿಂದ  ಮದು ಒಬ್ಬನೇ ಹೊರಟ. ಶಾಂತಮ್ಮ ಬಟ್ಟೆಗಳನ್ನು ಜೋಡಿಸಿ ರೆಡಿ ಮಾಡಿ ಕೊಟ್ಟಳು .

ಪೂಜೆ  ಮಾಡಿಸಿ ಬಟ್ಟೆಗಳನ್ನೂ ಹಂಚಿ ಮನೆಗೆ ಹೊರಡಲು ಮದು ಕಾರಿನಲ್ಲಿ ಕೂತ. ಅವನಿಗೆ ಹಳೆಯ ನೆನಪು ಮರುಕಳಿಸುತ್ತಿತ್ತು. ಅವನ ಮದುವೆ, ಹೆಂಡತಿ, ನಡೆದ ಅಪಗಾತದ ಬಗ್ಗೆ ಯೋಚಿಸುತ್ತಾ ಡ್ರೈವ್ ಮಾಡುತ್ತಿದ್ದವನಿಗೆ ಒಂದು ಹೆಂಗಸು ಅಡ್ಡ ಬಂದಿದ್ದು ತಿಳಿಯಲಿಲ್ಲ. ಕಾರು ಅವಳಿಗೆ ಡಿಕ್ಕಿ ಹೊಡೆದು ಅವಳು ಕೆಳಗೆ ಬಿದ್ದಳು. ಆಗ ವಾಸ್ತವಕ್ಕೆ ಬಂದ ಮದುವಿಗೆ ತನ್ನ ತಪ್ಪಿನ ಅರಿವಾಯಿತು. ಕೆಳಗೆ ಇಳಿದು ನೋಡಿದ. ಆ ಹೆಂಗಸಿನ ಕಾಲಿಗೆ ಜೋರು ಪೆಟ್ಟಾಗಿತ್ತು. ಅವನು ಅವಳನ್ನು ಆಸ್ಪತ್ರೆಗೆ ಸೇರಿಸಿ, ಅವಳು ತಿಳಿಸಿದ ಪೋನ್ ನಂಬರ್ ಗೆ ಕರೆ ಮಾಡಿದ. ಕಾದಂಬರಿ ಗಾಬರಿಯಿಂದ ಆಸ್ಪತ್ರೆಗೆ ಓಡಿ ಬಂದಳು. ಅವಳನ್ನು ಕಂಡೊಡನೆ, ಮದು ನಡೆದ ವಿಶಯ ತಿಳಿಸಿ ಕ್ಶಮೆ ಕೋರಿದ. 5 ದಿನಗಳ ಕಾಲ ಶ್ರೀದೇವಿ ಅಲ್ಲೇ ಇರಬೇಕಾಯಿತು. ಕಾದಂಬರಿ ತಾಯಿಯ ಸೇವೆಗೆ ನಿಂತಳು. ಮದು ಸಹ ಪ್ರತೀ ದಿನ ಆಸ್ಪತ್ರೆಗೆ ಬಂದು ಕಾದಂಬರಿಯ ತಾಯಿಯ ಯೋಗಕ್ಶೇಮ ವಿಚಾರಿಸಿ ಹೋಗುತ್ತಿದ್ದ. ಕಾದಂಬರಿ ತನ್ನ ತಮ್ಮನ ಕಂಪನಿಯಲ್ಲಿ ಕೆಲಸ ಮಾಡುವುದು ಮದುಗೆ ತಿಳಿದು ಬಂತು. ಕಾದಂಬರಿಗೂ ಮದು ಶ್ರೀದರನ ಅಣ್ಣ ಎಂದು ತಿಳಿದು ಸಂತಸ ವಾಯಿತು .

ಆರನೇ ದಿನ, ಶ್ರೀದೇವಿ ಮನೆಗೆ ಹೊರಡಲು ಅಡ್ಡಿಯಿಲ್ಲ ಎಂದು ವೈದ್ಯರು ತಿಳಿಸಿದರು. ಮದುಕರನೇ ತನ್ನ ಕಾರಿನಲ್ಲಿ ಅವರನ್ನು ಮನೆಗೆ ಬಿಟ್ಟು ಬಂದಿದ್ದ.

*******************************************************

ಶ್ರೀದರ ದೆಹಲಿಯಿಂದ ಬಂದು ಎರಡು ದಿನದ ನಂತರ ಕಾದಂಬರಿಗೆ ಪೋನ್ ಮಾಡಿದ್ದ. ಅಂದು ಅವರ ಮನೆಗೆ ಬರುವುದಾಗಿ ತಿಳಿಸಿದ. ಕಾದಂಬರಿ ಕೆಂಪು ಅಂಚಿನ ಸೀರೆಯಲ್ಲಿ ಮುದ್ದಾಗಿ ಕಾಣುತಿದ್ದಳು. ಕಾರಿನ ಶಬ್ದ ಕೇಳಿದೊಡನೇ ಹೊರಗೆ ಬಂದಳು. ಮದು, ಶ್ರೀದರ, ಅವನ ತಂದೆ, ತಾಯಿ ಕಾದಂಬರಿಯ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದರು. ಹೂವು ಹಣ್ಣನ್ನು ಜೊತೆಯಲ್ಲೇ ತಂದಿದ್ದುದು ಕಾಣಿಸುತಿತ್ತು. ಬಂದವರನ್ನು ಶ್ರೀದೇವಿ ಸ್ವಾಗತಿಸಿದಳು.

ಪರಿಚಯ, ತಿಂಡಿ ಆದ ಮೇಲೆ ಶಾಂತಮ್ಮ ಶ್ರೀದೇವಿಯ ಕೈ ಹಿಡಿದು ಕೇಳಿದಳು ‘ನನ್ನ ದೊಡ್ಡ ಮಗ ಮದು ನಿಮ್ಮ ಮಗಳನ್ನು ತುಂಬಾ ಇಶ್ಟ ಪಟ್ಟಿದ್ದಾನೆ..ನೀವು ಒಪ್ಪಿದರೆ ಅವಳನ್ನು ನಮ್ಮ ಮನೆಗೆ ಸೊಸೆಯಾಗಿ ಮಾಡಿಕೊಳ್ಳುತ್ತೇವೆ’ ಎಂದಳು.

ಶ್ರೀದೇವಿ ಗೆ ಏನು ಹೇಳಲು ತೋಚದೆ ಮಗಳ ಮುಕ  ನೋಡಿದಳು. ಕಾದಂಬರಿ ಸಿಡಿಲು ಬಡಿದಂತೆ ಕುಳಿತಿದ್ದಳು. ಶ್ರೀದರ ತನಗೆ ಸಂಬಂದವಿಲ್ಲದಂತೆ ಎತ್ತಲೋ ನೋಡುತ್ತಿದ್ದ . ಶಾಂತಮ್ಮ ಕಾದಂಬರಿಯನ್ನು ಹತ್ತಿರ ಕರೆದು ‘ನಿನಗೆ ಒಪ್ಪಿಗೆ ತಾನೇ, ನೀನು ನನ್ನ ಸೊಸೆಯಾಗಿ ಅಲ್ಲ, ಮಗಳಾಗಿ ಇರು’ ಎಂದಳು. ಆಗಲೂ ಶ್ರೀದರ ತಲೆ ತಗ್ಗಿಸಿ ಕುಳಿತಿದ್ದ. ಶಾಂತಮ್ಮ ಶ್ರೀದೇವಿಯ ಬಳಿ ಬಂದು ನಿಶ್ಚಿತಾರ‍್ತ ಏನು ಬೇಡ ಒಟ್ಟಿಗೆ ಮದುವೆ ಇಟ್ಟುಕೊಂಡು ಬಿಡೋಣ ಎಂದಾಗ ಶ್ರೀದೇವಿ ಏನೂ ಮಾತನಾಡದೆ ಒಪ್ಪಿದಳು.

ಮಾರನೆಯ ದಿನ, ಹಿಂದಿನ ನಡೆದ ಹೊಸ ಬೆಳವಣಿಗೆಯ ಕುರಿತು ಶ್ರೀದರ್ ನನ್ನೇ ಆಪೀಸ್ ನಲ್ಲಿ ಕೇಳಬೇಕು ಎಂದು, ಕಾದಂಬರಿ ಅಂದು ಬೇಗ ಹೊರಟಳು. ಆದರೆ ಶ್ರೀದರ  ಆಪೀಸ್ ಗೆ ಬಂದೇ ಇರಲಿಲ್ಲ. 4 ದಿನವಾದರೂ ಅವನ ಸುಳಿವೇ ಇರಲಿಲ್ಲ. ತಾಯಿಯ ಬಳಿ ತನ್ನ ನೋವು ಹೇಳಿಕೊಂಡಳು.

ಶ್ರೀದೇವಿ “ಕಾದಂಬರಿ, ಶ್ರೀದರ  ಬಂದಿದ್ದ. ಅವನ ಅಣ್ಣ 5 ವರ‍್ಶವಾದರೂ ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ವಂತೆ. ಈಗ ನಿನ್ನ ನೋಡಿ ಮೆಚ್ಚಿದ್ದಾನೆ, ಕಾದಂಬರಿ ಒಪ್ಪಿಸುವ ಹೊಣೆ ನಿಮ್ಮದು ಎಂದು ನನ್ನ ಕಾಲು  ಹಿಡಿದು ಬೇಡಿಕೊಂಡ. ಅವಳು ಒಪ್ಪದಿದ್ದರೂ, ನಾನು ಮದುವೆ ಆಗಲು ಸಾದ್ಯವಿಲ್ಲ. ಅಣ್ಣ ಮೆಚ್ಚಿರುವ ಹುಡುಗಿಯನ್ನು ನಾನು ಹೇಗೆ ತಾನೆ ಮದುವೆಯಾಗಲಿ ಎಂದ. ಹಳೆಯದನ್ನು ಮರೆತು ಅವನನ್ನು ಮದುವೆ ಆಗುವುದೇ ಒಳ್ಳೆಯದು” ಎಂದು ಹೇಳಿ ಹೊರಟು ಹೋದಳು.

*******************************************************

ಮದುವೆ ಕಾರ‍್ಯ ಶುರುವಾಗಿತ್ತು, ಎಶ್ಟು ಬಾರಿ ಶ್ರೀದರನಿಗೆ ಪೋನ್ ಮಾಡಿದ್ರೂ ಸ್ವಿಚ್ ಆಪ್ ಎಂದು ಬರುತ್ತಿತ್ತು. ಮದುವೆಯ ದಿನ ಇಶ್ಟವಿಲ್ಲದೆ ಅಲಂಕರಿಸಿಕೊಂಡು ಕುಳಿತಿದ್ದಳು. ಪುರೋಹಿತರು ಹುಡುಗಿಯನ್ನ ಕರೆಯುವಂತೆ ಹೇಳಿದರು. ಸಂಬಂದಿಕರ ಜೊತೆಯಲ್ಲಿ ಹಸೆಮಣೆಯ ಬಳಿ ಹೊರಟಳು ಕಾದಂಬರಿ. ಎದುರಿನಲ್ಲಿ ಮದು ನಿಂತಿದ್ದ. ಅವನು ಬಳಿ ಬಂದು ಕೈ ಹಿಡಿದು “ನಿನಗೆ ಈ ಮದುವೆ ಇಶ್ಟಾನ?” ಎಂದು ಕೇಳಿದ. “ಈಗ ಯಾಕೆ ಹೀಗೆ ಕೇಳುತಿದ್ದಾನೆ?” ಅಂತ  ಅವಳಿಗೆ ಅನಿಸಿತು. ಮದು ನಗುತ್ತಾ ಕಾದಂಬರಿಯ ಕೈ ಹಿಡಿದು, ಅವಳನ್ನು ಶ್ರೀದರನ ಮುಂದೆ ನಿಲ್ಲಿಸಿದ .

ಮದು ಕಾದಂಬರಿಗೆ ಹೇಳಿದ “ನಿಮ್ಮ ಅಮ್ಮ ಈ ವಿಶಯ ಹೇಳಿರಲಿಲ್ಲ ಎಂದಿದ್ದರೆ ನನಗೆ ತಿಳಿಯುತ್ತಿರಲಿಲ್ಲ” ಎಂದಾಗ ಶ್ರೀದೇವಿ ಮಗಳ ಹೆಗಲ ಮೇಲೆ ಕೈ ಇಟ್ಟಳು.

ಕಾದಂಬರಿ ಶ್ರೀದರನ ಮುಕ ನೋಡಿದಳು. ಶ್ರೀದರ “ನನ್ನ ಕ್ಶಮಿಸುವೆಯಾ”ಎಂದ. ಕಾದಂಬರಿ ಹುಸಿ ಮುನಿಸಿನಿಂದ ಅವನನ್ನು ತಬ್ಬಿದಳು.

ಶಾಂತಮ್ಮಳಿಗೆ ಮಕ್ಕಳ ತ್ಯಾಗದಿಂದ ಕಣ್ಣು ತುಂಬಿಬಂದಿತ್ತು. ಮೋಹನರಾಯರು ಹೆಮ್ಮೆಯಿಂದ ಮಗನನ್ನು ನೋಡುತ್ತಿದ್ದರು

(ಚಿತ್ರ ಸೆಲೆ: healingwithdrcraig.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: