ಟಾಂಜಾನಿಯಾದ ಕೆಂಪು ಸರೋವರ – ನ್ಯಾಟ್ರಾನ್

– ಕೆ.ವಿ.ಶಶಿದರ.

ನ್ಯಾಟ್ರಾನ್

ಪೂರ‍್ವ ಆಪ್ರಿಕಾದ ಟಾಂಜಾನಿಯಾ ಸಂಯುಕ್ತ ಗಣರಾಜ್ಯ ಅನೇಕ ನೈಸರ‍್ಗಿಕ ಅದ್ಬುತಗಳ ಆಗರ. ಅವುಗಳಲ್ಲಿ ವಿಲಕ್ಶಣ ಸರೋವರ ನ್ಯಾಟ್ರಾನ್ ಸಹ ಒಂದು. ಲೇಕ್ ನ್ಯಾಟ್ರಾನ್ ಕೀನ್ಯಾದ ಗಡಿಯ ಸಮೀಪದಲ್ಲಿದೆ. ಈ ಸರೋವರದಲ್ಲಿನ ನೀರಿನ ಮಟ್ಟ ಕುಸಿದಾಗ ತಳದಲ್ಲಿ ಉಪ್ಪಿನ ಪದರ ಕಂಡು ಬರುತ್ತದೆ. ಈ ಪದರವು ಉಪ್ಪು ಮತ್ತು ಕನಿಜದ ಮಿಶ್ರಣ ನ್ಯಾಟ್ರಾನ್‍ನಿಂದಾದದ್ದು. ಆದ್ದರಿಂದ ಈ ಸರೋವರಕ್ಕೆ ನ್ಯಾಟ್ರಾನ್ ಎಂದು ಹೆಸರಿಸಲಾಗಿದೆ.

ನ್ಯಾಟ್ರಾನ್ ಎಂಬುದು ಜ್ವಾಲಾಮುಕಿಯ ಬೂದಿಯಿಂದಾಗುವ ಒಂದು ಬಗೆಯ ಉಪ್ಪಿನಂಶವಾಗಿದ್ದು, ಪ್ರಮುಕವಾಗಿ ಸೋಡಿಯಂ ಬೈಕಾರ‍್ಬೋನೇಟ್ ಮತ್ತು ಸೋಡಿಯಂ ಕಾರ‍್ಬೋನೇಟ್ ಉಪ್ಪನ್ನು ಒಳಗೊಂಡಿರುತ್ತದೆ.

ಹಲವಾರು ಸಮ್ರುದ್ದ ಕನಿಜ ಮಿಶ್ರಿತ ಬುಗ್ಗೆಗಳ ನೀರು ಸರಾಗವಾಗಿ ಹರಿದು ಈ ಸರೋವರವನ್ನು ಸೇರುವುದರಿಂದ, ಈ ಸರೋವರದ ನೀರು ಹೆಚ್ಚು ಉಪ್ಪಿನಿಂದ ಕೂಡಿದೆ. ಹಾಗಾಗಿ ಇದರ ಪಿ.ಹೆಚ್ 9 ರಿಂದ 10.5ರ ಪರಿಮಿತಿಯನ್ನು ತಲುಪುತ್ತದೆ. ಸಮುದ್ರದ ನೀರಿಗೆ ಹೋಲಿಸಿದರೆ ಬಹಳವೇ ಹೆಚ್ಚು. ಸಮುದ್ರ ನೀರಿನ ಪಿ.ಹೆಚ್. ಸಾಮಾನ್ಯವಾಗಿ 7 ರಿಂದ 9ರ ಆಸುಪಾಸಿನಲ್ಲಿರುತ್ತೆ. ಇದರಿಂದ ನ್ಯಾಟ್ರಾನ್ ಸರೋವರದ ನೀರಿನ ಉಪ್ಪಿನಳತೆಯನ್ನು ಅಂದಾಜಿಸಬಹುದು. ಈ ನೀರಿನ ಉಪ್ಪಿನಂಶ ಹೆಚ್ಚಿನ ಪ್ರಾಣಿಗಳಿಗೆ ವಿಶವಾಗಬಹುದು.

ಈ ಸರೋವರದ ನೀರು ಕೆಂಪು ಬಣ್ಣದಲ್ಲಿ ಏಕಿದೆ?

ನ್ಯಾಟ್ರಾನ್ ಸರೋವರದಲ್ಲಿ ಉಪ್ಪಿನಲ್ಲಿ ಬೆಳೆಯುವಂತಹ ಸೂಕ್ಶ್ಮಜೀವಿಗಳು ಹಾಗೂ ಪಾಚಿಗಳ ಕಾರಣದಿಂದ ನೀರು ಕೆಂಪುಬಣ್ಣವನ್ನು ಹೊಂದಿದೆ. ನದಿಯ ದಡದಲ್ಲಿ ಸೂಕ್ಶ್ಮಜೀವಿಗಳ ಸಾಂದ್ರತೆ ಕಡಿಮೆಯಿರುವ ಹಿನ್ನಲೆಯಲ್ಲಿ ನೀರಿನ ಬಣ್ಣ ಪ್ರಕಾಶಮಾನವಾದ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ನೀರಿನ ಸಾಮಾನ್ಯ ಬಣ್ಣ ಸರೋವರದ ಉದ್ದಗಲದ ಕೆಲವೇ ಸ್ತಳಗಳಲ್ಲಿ ಕಾಣಬಹುದು. ಅಂತಹ ಆಳವಿಲ್ಲದ ಈ ಸರೋವರದ ನೀರಿನ ತಾಪವು 1400 ಪ್ಯಾರನ್‍ಹೀಟ್ (600 ಸೆಲ್ಶಿಯಸ್) ತಲುಪಬಹುದು. ಸಾಮಾನ್ಯವಾಗಿ ಸ್ನಾನಕ್ಕೆ ಬಳಸುವ ನೀರಿನ ಉಶ್ಣತೆಗಿಂತ ಹೆಚ್ಚು.

ಈ ಎಲ್ಲಾ ಗುಣಲಕ್ಶಣಗಳು ನ್ಯಾಟ್ರಾನ್ ಸರೋವರ ಜೀವಿಗಳಿಗೆ ಮಾರಣಾಂತಿಕವಾಗಿದೆ. ಇಶ್ಟೆಲ್ಲಾ ವ್ಯತಿರಿಕ್ತಗಳ ನಡುವೆಯೂ ಪ್ಲೆಮಿಂಗೋಗಳ ಸಂತಾನೋತ್ಪತ್ತಿಯ ಕೇಂದ್ರವಾಗಿದೆ ಈ ನ್ಯಾಟ್ರಾನ್ ಸರೋವರ. ಪ್ಲೆಮಿಂಗೋ ತನ್ನ ಸಂತಾನೋತ್ಪತ್ತಿಗಾಗಿ ನ್ಯಾಟ್ರಾನ್ ಸರೋವರವನ್ನು ಅವಲಂಬಿಸಿರುವುದರ ನೇರ ಪರಿಣಾಮವಾಗಿ ಅದರ ಸಂಕ್ಯೆ ಕ್ಶೀಣಿಸುತ್ತಿದ್ದು ಇಂದು ಅಳಿವಿನ ಅಂಚಿಗೆ ತಲುಪಿದೆ.

ಹೆಚ್ಚು ಮಳೆ ಬಾರದ ಸಮಯದಲ್ಲಿ ಸರೋವರದ ನೀರಿನ ಮಟ್ಟ ಕಡಿಮೆಯಾಗಿ ಅಲ್ಲಲ್ಲೇ ಸಣ್ಣ ಸಣ್ಣ ಉಪ್ಪಿನ ದ್ವೀಪಗಳು ತಲೆಯೆತ್ತುತ್ತವೆ. ಇಂತಹ ದ್ವೀಪಗಳ ಮೇಲೆ ಪಕ್ಶಿಗಳು ತಮ್ಮ ಗೂಡನ್ನು ಕಟ್ಟುತ್ತವೆ. ಉಪ್ಪಿನಲ್ಲೇ ಜೀವಿಸುವ ಬ್ಲೂ-ಗ್ರೀನ್ ಆಲ್ಗೆಗೆ ಈ ಪಕ್ಶಿ ಗೂಡುಗಳೇ ಆಹಾರ. ಪ್ರಾಣಿ ಪಕ್ಶಿಗಳು ಒಂದು ವೇಳೆ ಸರೋವರದ ನೀರಿನಲ್ಲಿ ಸಾವನ್ನಪ್ಪಿದರೆ, ಉಪ್ಪಿನ ಸಾಂದ್ರತೆ ಹೆಚ್ಚಿರುವ ಕಾರಣ ಕ್ಯಾಲ್ಸಿಪಿಕೇಶನ್‍ಗೆ ಒಳಗಾಗಿ ಶಿಲಾರೂಪವನ್ನು ತಳೆಯುತ್ತವೆ. ಪ್ರತಿಮೆಗಳಾಗುತ್ತವೆ!

ಪ್ರಾಣಿ ಪಕ್ಶಿಗಳು ಇದರಲ್ಲಿ ಹೇಗೆ ಅಸುನೀಗುತ್ತವೆ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ!

ಯಾರಿಗೂ ಇದರ ಬಗ್ಗೆ ಸುಳಿವಿಲ್ಲ. ಚಾಯಾಗ್ರಾಹಕ ನಿಕ್ ಬ್ರಾಂಟ್‍ನ ಸಿದ್ದಾಂತದ ಪ್ರಕಾರ ಸರೋವರದ ನೀರಿನ ಮೇಲ್ಮೈ ಪ್ರತಿಬಿಂಬಿಸುವ ಕಾರಣ ಪಕ್ಶಿಗಳು ಹಟಾತ್ತಾಗಿ ಗೊಂದಲಕ್ಕೀಡಾಗಿ ಸರೋವರದ ನೀರಿಗೆ ಅಪ್ಪಳಿಸಿ ಸಾವನ್ನುಪ್ಪುತ್ತವೆ. ಸೋಡಿಯಂ ಬೈಕಾರ‍್ಬೋನೇಟ್ ಅಂಶದ ಸಾಂದ್ರತೆ ಅತಿ ಹೆಚ್ಚಿರುವ ಕಾರಣ ಸತ್ತ ಪ್ರಾಣಿ – ಪಕ್ಶಿಯ ದೇಹವನ್ನು ಈ ಉಪ್ಪು ಸಂಪೂರ‍್ಣವಾಗಿ ಕಾಪಾಡುತ್ತದೆ. ನ್ಯಾಟ್ರಾನ್ ಸರೋವರದ ಪ್ರಾಣಾಂತಿಕ ನೀರಿನ ಬಲೆಗೆ ಸಿಕ್ಕು ಪ್ರಾಣ ತೆತ್ತ ಜೀವಿಗಳ ಕಳೇಬರ ಯಾವ ರೀತಿಯಲ್ಲಿ ಅವು ಅಸುನೀಗಿದವೋ ಅದೇ ರೀತಿಯಲ್ಲಿ ಶಿಲೆಗಳಾಗಿವೆ.

ಚಾಯಾಗ್ರಾಹಕ ನಿಕ್ ನ್ಯಾಟ್ರಾನ್ ಸರೋವರದಲ್ಲಿ ಕ್ಯಾಲ್ಸಿಪೈ ಆದ ಜೀವಿಗಳನ್ನು ಕಂಡ. ಅವುಗಳ ಚಾಯಾಚಿತ್ರ ತೆಗೆಯದಿರಲು ಆತನಿಗೆ ಮನಸ್ಸಾಗಲಿಲ್ಲ. ನೂರಾರು ಕೋನಗಳಲ್ಲಿ ಅವುಗಳ ಚಾಯಚಿತ್ರವನ್ನು ಸೆರೆಹಿಡಿದ. ತಾನು ಪ್ರಕಟಿಸಿರುವ ಪುಸ್ತಕದಲ್ಲಿ ಸರೋವರದ ನೀರಿನಲ್ಲಿ ಸಾವನ್ನಪ್ಪಿ ಕ್ಯಾಲ್ಸಿಪಿಕೇಶನ್ ಆಗಿ ಶಿಲೆಗಳಾಗಿರುವ ಜೀವಿಗಳ ವಿಚಿತ್ರ ಹಾಗೂ ಅದ್ಬುತ ಚಿತ್ರಗಳನ್ನು ಒಳಗೊಂಡಿದೆ. ಈ ಪುಸ್ತಕ ಪರೋಕ್ಶವಾಗಿ ನ್ಯಾಟ್ರಾನ್ ಸರೋವರದ ಜನಪ್ರಿಯತೆಯನ್ನು ಜಗತ್ತಿನಾದ್ಯಂತ ಪಸರಿಸಿತು.

ನ್ಯಾಟ್ರಾನ್ ಸರೋವರದ ಉಪ್ಪಿನ ನೀರಿನಲ್ಲಿ ಬದುಕಲು ವಿಕಸನಗೊಂಡ ಒಂದು ಜಾತಿಯ ಮೀನಿನ ಹೊರತಾಗಿ ಬೇರೇ ಯಾವುದೇ ಜೀವಿಗಳು ಇಲ್ಲಿ ಬದುಕುಳಿದಿಲ್ಲ.

(ಮಾಹಿತಿ ಸೆಲೆ: livescience, huffingtonpost, smithsonianmag)
(ಚಿತ್ರ ಸೆಲೆ: arounddeglobe.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: