ಪೋರ್ ಟೋರ್ – ಚೀನಾದಲ್ಲಿ ನಡೆಯುವ ಪ್ರೇತಗಳ ಉತ್ಸವ!

– ಕೆ.ವಿ.ಶಶಿದರ.

ಪ್ರೇತಗಳ ಉತ್ಸವ Ghost festival

ಪೋರ್ ಟೋರ್ ಅತವಾ ಹಂಗ್ರಿ ಗೋಸ್ಟ್ ಉತ್ಸವವು ಪೂಕೆಟ್‍ನಲ್ಲಿನ ಬುಡುಕಟ್ಟು ಜನಾಂಗದ ಚೀನೀಯರಿಗೆ ಮಹತ್ತರವಾದ ಕಾರ‍್ಯಕ್ರಮ. ಚೀನೀ ಬಾಶೆಯಲ್ಲಿ ಇದನ್ನು ಗೈ ಜೀ ಎನ್ನುತ್ತಾರೆ. ಅಂದರೆ ಪ್ರೇತ ಹಬ್ಬ. ಅಂದಿನ ದಿನ ವಿಶೇಶವಾಗಿ ತಯಾರಿಸಿದ ಊಟ, ಬಣ್ಣ ಬಣ್ಣದ ಹೂವುಗಳು ಮತ್ತು ತರೆವಾರಿ ಮೇಣದ ಬತ್ತಿಯನ್ನು ಪೂಜಾವೇದಿಕೆಯಲ್ಲಿ ಪೂರ‍್ವಜರಿಗಾಗಿ ಅರ‍್ಪಿಸಲಾಗುತ್ತದೆ. ಸಂಬಂದಿಕರಿಲ್ಲದ ಪ್ರೇತಾತ್ಮಗಳಿಗೂ ಸಹ ವಿಶೇಶವಾದ ಊಟವನ್ನು ನೀಡಲಾಗುತ್ತದೆ. ಈ ಪ್ರೇತಾತ್ಮಗಳು ತಿಂಗಳ ಮಟ್ಟಿಗೆ ನರಕದಿಂದ ಬಿಡುಗಡೆಯಾಗಿ ತಮ್ಮವರ ವಿಶೇಶ ಊಟಕ್ಕಾಗಿ ಬೂಮಿಗೆ ಬರುತ್ತವೆ ಎಂಬ ನಂಬಿಕೆ ಅವರದ್ದು.

ಪೂಕೆಟ್ ರಸ್ತೆಯಲ್ಲಿನ ಸೆಂಗ್ ಟೆಕ್ ಬೆಲ್ ದೇವಾಲಯ ಈ ಆಚರಣೆಯ ಪ್ರಮುಕ ಸ್ತಳ. ಇದರೊಂದಿಗೆ ರನೋಂಗ್ ರಸ್ತೆಯಲ್ಲಿನ ತಾಜಾ ಮಾರುಕಟ್ಟೆಯಲ್ಲಿ ಯಾವುದೇ ಚೀನೀ ದೇವಾಲಯದಲ್ಲಿ ಪ್ರೇತ ಉತ್ಸವದ ಬ್ರುಹತ್ ಆಚರಣೆಯನ್ನು ಕಾಣಬಹುದು. ಈ ದ್ವೀಪದ ಪ್ರತಿಯೊಂದು ಚೀನೀ ದೇವಾಲಯದಲ್ಲೂ ಈ ಉತ್ಸವದ ಆಚರಣೆ ನಡೆಯುತ್ತಾದರೂ ಇವೆರಡರ ಪ್ರಮಾಣದಶ್ಟಲ್ಲ.

ಪೂರ‍್ವಜರ ಪ್ರೇತಾತ್ಮಗಳ ಹಸಿವನ್ನು ಇಂಗಿಸಲು ಆಚರಿಸುವ ಹಬ್ಬ

ಹಿಂದೂ ಪಂಚಾಂಗದಲ್ಲಿ ಪಿತ್ರುಪಕ್ಶವಿದ್ದಂತೆ ಚೀನೀಯರ ಚಾಂದ್ರಮಾನ ಸಂವತ್ಸರದ ಏಳನೇ ತಿಂಗಳನ್ನು ಪ್ರೇತಗಳ ತಿಂಗಳು ಎಂದೇ ಗುರುತಿಸುತ್ತಾರೆ. ಈ ತಿಂಗಳಲ್ಲಿ ನರಕದ ಬಾಗಿಲುಗಳು ತೆರೆದಿರುತ್ತವೆ. ಆ ಲೋಕದಿಂದ ಹೊರಬಂದ ಹಸಿದ ದೆವ್ವಗಳು ಊಟವನ್ನು ಅರಸುತ್ತಾ ಬೂಮಿಯಲ್ಲಿ ಅಲೆದಾಡುತ್ತಾ ಇರುತ್ತವೆ ಎಂಬ ನಂಬಿಕೆಯಿದೆ. ಪೂರ‍್ವಜರ ಪ್ರೇತಾತ್ಮಗಳ ಹಸಿವನ್ನು ಇಂಗಿಸಲು ಆಚರಿಸುವುದೇ ಈ ಹಬ್ಬದ ಮೂಲ ಪ್ರೇರಣೆ.

‘ಹಂಗ್ರೀ ಗೋಸ್ಟ್ ಪೆಸ್ಟಿವಲ್’ನ ಕೇಂದ್ರ ಬಿಂದು ಸೆಂಗ್ ಟೆಕ್ ಬೆಲ್ ದೇವಾಲಯ. ಇದನ್ನು ಪೋರ್ ಟೋರ್ ಕಾಂಗ್ ದೇವಾಲಯವೆಂದೂ ಸಹ ಕರೆಯುತ್ತಾರೆ. ಇಲ್ಲಿ ಈ ವಾರ‍್ಶಿಕ ಉತ್ಸವವನ್ನು ಏಳು ಹಗಲು ಏಳು ರಾತ್ರಿಗಳ ಕಾಲ ಆಚರಿಸಲಾಗುತ್ತದೆ. ಬೇರೆಡೆ ಇದನ್ನು ಕೇವಲ ಎರಡು ದಿನಗಳ ಕಾಲ ಮಾತ್ರ ಆಚರಿಸುವ ಪದ್ದತಿಯಿದೆ.

ಈ ಹಬ್ಬದಲ್ಲಿ ಏನೇನು ಕಾರ‍್ಯಕ್ರಮಗಳಿರುತ್ತವೆ?

ಇಲ್ಲಿನ ಮಾರುಕಟ್ಟೆ ವರ‍್ಣರಂಜಿತವಾಗಿ ಅಲಂಕರಿಸಲ್ಪಡುತ್ತದೆ. ಮದ್ಯಾಹ್ನದಿಂದ ರಾತ್ರಿಯವರೆಗೆ ಆಸಕ್ತಿದಾಯಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಸಿಂಹದ ಕುಣಿತ, ಮ್ಯಾಜಿಕ್ ಪ್ರದರ‍್ಶನಗಳು, ಸಂಗೀತ ಗೋಶ್ಟಿಗಳು, ಇವೇ ಮುಂತಾದ ಹತ್ತು ಹಲವು ಪ್ರದರ‍್ಶನಗಳು ಇದರಲ್ಲಿ ಅಡಕವಾಗಿವೆ. ಸ್ತಳೀಯ ಆಹಾರದ ಮಳಿಗೆಗಳನ್ನು ದೇವಾಲಯ ಮತ್ತು ಮಾರುಕಟ್ಟೆಯ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಕಾಣಬಹುದು. ಚೀನೀ ಪ್ರಬಾವಿತ ಸ್ತಳೀಯ ಆಹಾರ ಗ್ರಾಹಕಸ್ನೇಹಿ ಬೆಲೆಯಲ್ಲಿ ಆಸ್ವಾದಿಸಲು ಇಲ್ಲಿ ಅವಕಾಶವಿದೆ.

ಉತ್ಸವದ ಸಮಯದಲ್ಲಿ ಬಾರಿ ಬಾರಿ ದೊಡ್ಡ ಮೆರವಣಿಗೆಗಳು ನಡೆಯುತ್ತವೆ. ಶಾಲಾ ಮಕ್ಕಳು ಮತ್ತು ಸ್ತಳೀಯ ಜನ ಸಾಂಪ್ರದಾಯಿಕ ವೇಶಬೂಶಣಗಳನ್ನು ದರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಚೀನೀ ಶೈಲಿಯ ಉಡುಗೆ ಕೆಂಪು ಚಿಯಾಂಗ್ಸಾಮ್ ದಿರಿಸನ್ನು ದರಿಸಿದ ಅನೇಕ ಹೆಣ್ಣುಮಕ್ಕಳು ಹೂವು, ‘ಆಮೆ’ ಕೇಕ್ ಮತ್ತು ಹಣ್ಣುಗಳನ್ನು ಹೊತ್ತು ಪೂಜೆಗಾಗಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ಸಾಗುವ ದ್ರುಶ್ಯ ಅತಿ ಸುಂದರ ಹಾಗೂ ವರ‍್ಣಮಯ. ದೇವರಿಗೆ ಸಮರ‍್ಪಿಸುವ ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಿದ ಕೆಂಪು ಬಣ್ಣದ ವಿವಿದ ಗಾತ್ರದ ಸಾವಿರಾರು ಆಮೆ ಕೇಕ್‍ಗಳು ಇಲ್ಲಿನ ಮುಕ್ಯ ಹಾಗೂ ಪ್ರಮುಕ ಆಕರ‍್ಶಣೆ.

ಕೆಂಪು ಬಣ್ಣದ ಆಮೆ ಏಕೆ? ಸರಳವಾಗಿ ಹೇಳುವುದಾದರೆ ಚೀನೀಯರಿಗೆ ಆಮೆ ಅಪ್ರತಿಮ ಬಲವನ್ನು ಪ್ರತಿನಿದಿಸುವ ಹಾಗೂ ದೀರ‍್ಗಾಯುಶ್ಯದ ಸಂಕೇತ. ಕೆಂಪು ಚೀನೀಯರಿಗೆ ಅದ್ರುಶ್ಟದ ಬಣ್ಣ. ಆದ ಕಾರಣ ಅವರವರ ಶಕ್ತಿಗೆ ಅನುಸಾರವಾಗಿ ವಿವಿದ ಗಾತ್ರದ ಕೆಂಪು ಆಮೆಯನ್ನು ಸಮರ‍್ಪಿಸುವುದು ಪೂರ‍್ವಜರಿಗೆ ಮಾತ್ರವಲ್ಲದೆ ತಮ್ಮ ದೀರ‍್ಗಾಯುಶ್ಯಕ್ಕೂ ಸಲ್ಲಿಸಿದ ಬೇಡಿಕೆ ಎಂದವರು ಬಾವಿಸುತ್ತಾರೆ. ತಾಯ್-ಚೀನಿಯರ ನಡುವೆ ಹಾಸುಹೊಕ್ಕಾದ ಸಂಪ್ರದಾಯಗಳನ್ನು ಇದರಲ್ಲಿ ಕಾಣಬಹುದು. ಈ ಆಚರಣೆ ತಮ್ಮ ಪೂರ‍್ವಜರಿಗೆ ಸಲ್ಲಿಸುವ ಗೌರವ ಮತ್ತು ಕುಟುಂಬ ಬಾದ್ಯತೆಯಲ್ಲಿನ ಅವರ ಬಲವಾದ ನಂಬಿಕೆಯನ್ನು ಸೂಚಿಸುತ್ತದೆ.

(ಮಾಹಿತಿ ಸೆಲೆ: puhket.com)
(ಚಿತ್ರ ಸೆಲೆ: legacyoftaste)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: