ಯಾರು ಯಾರು ಯಾರಿವನು

– ಚಂದ್ರಗೌಡ ಕುಲಕರ‍್ಣಿ.

ಯಾರು, ಮಗು, ಕೇಳ್ವಿ, Who is he, baby, children's poem

( ಬರಹಗಾರರ ಮಾತು: ತನ್ನದೇ ಲೋಕದಲ್ಲಿ ಮುಳುಗಿರುವ, ಏನೂ ಅರಿಯದ ಪುಟ್ಟ ಕಂದನ ಕುರಿತು ಕೆಲ ಸಾಲುಗಳು )

ಯಾರು ಯಾರು ಯಾರಿವನು
ಬೆರಗು ಬೆಡಗನು ತೋರುವನು

ಆಡದ ಮಾತಿನ ಪದಗಳ ನುಡಿವನು
ತನ್ನಯ ನಾಲಿಗೆ ಹೊರಳಿಸುತ
ಉಣ್ಣದ ಊಟದ ರುಚಿ ಬಣ್ಣಿಸುವನು
ಎರಡೂ ತುಟಿಗಳ ಅರಳಿಸುತ

ನೋಡದ ದ್ರುಶ್ಯದ ಚಿತ್ರವ ಬರೆವನು
ಗೆರೆಯನು ಎಳೆಯುತ ಗಾಳಿಯಲಿ
ಸುಂದರ ಚಿತ್ರವ ಮೂಡಿಸಿ ಬಿಡುವನು
ನೋಡುವರೆಲ್ಲರ ಮನದಲ್ಲಿ

ಕುಣಿಯದ ನ್ರುತ್ಯಕ್ಕೆ ತಕತೈ ಎನುವನು
ಕಾಲನು ತಿರುಗಿಸಿ ಕೈ ಬೀಸಿ
ನಟಿಸಿದ ಬಾವವ ಅಬಿನಯಿಸುವನು
ಕಣ್ಣಿನ ಹುಬ್ಬನು ಮೇಲೇರಿಸಿ

ಬರೆಯದ ಕವಿತೆಯ ಲಯವನು ಹಿಡಿಯುವನು
ಆ ಆ ಊ ಊ ಎನ್ನುತ್ತ
ಹಾಡದ ಗೀತೆಗೆ ರಾಗವ ಉಲಿವನು
ಸ್ವರ ಸ್ವರಗಳಲಿ ಮುಳುಗುತ್ತ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: