‘ಡ್ಯೂಡ್ ಪರ‍್ಪೆಕ್ಟ್’ – ಚಿಣ್ಣರ ಮೆಚ್ಚಿನ ವಿಡಿಯೋಲೋಕ

– ವಿಜಯಮಹಾಂತೇಶ ಮುಜಗೊಂಡ.

dude perfect, youtube, stunt, ಡ್ಯೂಡ್ ಪರ‍್ಪೆಕ್ಟ್, ಯೂಟ್ಯೂಬ್, ವಿಡಿಯೋ

ಚೂಟಿಯುಲಿ ಕಂಡರೆ ಇಂದಿನ ಸಣ್ಣ ಮಕ್ಕಳಿಗೆ ಪ್ರಾಣ. 2-3 ವರುಶ ವಯಸ್ಸಿನ ಮಕ್ಕಳು ತಾವೇ ಯೂಟ್ಯೂಬ್ ತೆರೆದು ತಮ್ಮ ಮೆಚ್ಚಿನ ವಿಡಿಯೋಗಳನ್ನು ನೋಡುವುದು ಇಂದಿನ ಮಟ್ಟಿಗೆ ಆಶ್ಚರ‍್ಯದ ವಿಶಯವಾಗಿ ಉಳಿದಿಲ್ಲ. ಮಕ್ಕಳಿಗಾಗಿಯೇ ಯೂಟ್ಯೂಬ್‌ನಲ್ಲಿ ಹಲವು ಚಾನೆಲ್‌ಗಳಿವೆ. ಬಗೆಬಗೆಯ ಕಾರ‍್ಟೂನುಗಳಲ್ಲದೇ ಎತ್ತರದಿಂದ ನೀರಿನಲ್ಲಿ ಜಿಗಿಯುವುದು, ಪುಟ್ಟ ಬೈಕುಗಳನ್ನೇರಿ ಸಾಹಸ ತೋರುವ ವಿಡಿಯೋಗಳೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಮಕ್ಕಳೇನು, ದೊಡ್ಡವರೂ ಇಂತಹ ವಿಡಿಯೋಗಳು ಸಿಕ್ಕರೆ ಕಳೆದುಹೋಗುತ್ತಾರೆ. ಇಂತಹ ವಿಡಿಯೋಗಳನ್ನೇ ಮಾಡುವ ಗುಂಪೊಂದು ಯೂಟ್ಯೂಬ್ ಪ್ರಪಂಚದಲ್ಲಿ ತುಂಬಾ ಹೆಸರುವಾಸಿ. ಅದುವೇ ಡ್ಯೂಡ್ ಪರ‍್ಪೆಕ್ಟ್. ಬೇರೆ ಎಲ್ಲೋ ನೋಡಿಕೊಂಡು ದೂರದಿಂದ ವಸ್ತುಗಳನ್ನು ಸರಿಯಾಗಿ, ಗುರಿಯತ್ತ ಎಸೆಯುವುದು ಡ್ಯೂಡ್ ಪರ‍್ಪೆಕ್ಟ್ ತಂಡದ ತುಂಬಾ ಹೆಸರುವಾಸಿ ಮತ್ತು ಗಮನಸೆಳೆವ ಸ್ಟಂಟ್.

ಡ್ಯೂಡ್ ಪರ‍್ಪೆಕ್ಟ್ ತಂಡದವರು ಮಾಡುವ ವಿಡಿಯೋಗಳು ಎಶ್ಟು ಹೆಸರುವಾಸಿ ಎಂದು ತಿಳಿಯಲು ಅವರ ಚಾನೆಗಲ್‌ಗೆ ಇರುವ ಚಂದಾದಾರರು ಮತ್ತು ಅವರ ಚಾನೆಲ್‌ಗೆ ಹರಿದುಬರುವ ನೋಟಗಳತ್ತ ಒಮ್ಮೆ ಕಣ್ಣು ಹಾಯಿಸಬೇಕು. ಜುಲೈ 2018ರ ಅಂಕಿ ಅಂಶಗಳಂತೆ, ಅವರ ಚಾನೆಲ್‌ಗೆ ಒಟ್ಟು 3.3 ಕೋಟಿಗಿಂತಲೂ ಹೆಚ್ಚು ಹಿಂಬಾಲಕರಿದ್ದು ಇಲ್ಲಿಯವರೆಗೆ 5 ಬಿಲಿಯನ್‌ಗಿಂತಲೂ ಹೆಚ್ಚು ನೋಟಗಳು ಹರಿದುಬಂದಿವೆ. ಡ್ಯೂಡ್‌ ಪರ‍್ಪೆಕ್ಟ್ ಯೂಟ್ಯೂಬ್ ಚಾನೆಲ್ ಜಗತ್ತಿನಲ್ಲಿಯೇ 6ನೆಯ ಅತಿಹೆಚ್ಚು ಚಂದಾದಾರರನ್ನು ಹೊಂದಿರುವ ಚಾನೆಲ್ ಆಗಿದ್ದು ಯು.ಎಸ್‌.ನಲ್ಲಿ ಇವರೇ ಮೊದಲ ಸ್ತಾನದಲ್ಲಿದ್ದಾರೆ. ಹಲವಾರು ಗಿನ್ನೆಸ್ ವಿಶ್ವ ದಾಕಲೆಗಳೂ ಇವರ ಹೆಸರಿನಲ್ಲಿವೆ.

ಡ್ಯೂಡ್ ಪರ‍್ಪೆಕ್ಟ್ ತಂಡದ ಹಿನ್ನೆಲೆ

ಡ್ಯೂಡ್ ಪರ‍್ಪೆಕ್ಟ್ ಯೂಟ್ಯೂಬ್ ಚಾನೆಲ್ಅನ್ನು ಹುಟ್ಟುಹಾಕಿದ್ದು ಐದು ಮಂದಿ ಗೆಳೆಯರು. ಕೋಬಿ & ಕೋರಿ ಕಾಟನ್ ಅವಳಿ ಅಣ್ಣತಮ್ಮಂದಿರು, ಗ್ಯಾರೆಟ್ ಹಿಲ್ಬರ‍್ಟ್, ಕೋಡಿ ಜೋನ್ಸ್ ಮತ್ತು ಟೈಲರ್ ಟೋನಿ ತಮ್ಮ ಕಾಲೇಜು ದಿನಗಳಲ್ಲಿ ಬಾಸ್ಕೆಟ್‌ಬಾಲ್ ಆಟಗಾರರಾಗಿದ್ದರು, ಟೆಕ್ಸಾಸ್ ಅಗ್ರಿಕಲ್ಚರಲ್ ಮತ್ತು ಮೆಕ್ಯಾನಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಒಂದೇ ಕೋಣೆಯಲ್ಲಿದ್ದರು. ಸ್ಯಾಂಡ್‌ವಿಚ್‌ಗಾಗಿ ಬಾಜಿಕಟ್ಟಿ ಒಮ್ಮೆ ಬಾಸ್ಕೆಟ್‌ಬಾಲ್ ಎಸೆಯುವ ಆಟವಾಡುತ್ತಿದ್ದಾಗ ಅವರ ವಿಡಿಯೋ ಒಂದನ್ನು ಮೊದಲು ಸೆರೆಹಿಡಿದಿದ್ದರು. ಯೂಟ್ಯೂಬಿಗೆ ಏರಿಸಿದ ವಾರದೊಳಗೇ ಈ ವಿಡಿಯೋ ಅನ್ನು 2 ಲಕ್ಶಕ್ಕಿಂತಲೂ ಹೆಚ್ಚು ಮಂದಿ ನೋಡಿದ್ದರು. ಬಳಿಕ ಬೇಸಿಗೆ ಶಿಬಿರವೊಂದರಲ್ಲಿ ಸೆರೆಹಿಡಿದ ಡ್ಯೂಡ್ ಪರ‍್ಪೆಕ್ಟ್ ಅವರ ವಿಡಿಯೋ ಇಲ್ಲಿಯವರೆಗೆ 1.9 ಕೋಟಿಗೂ ಹೆಚ್ಚು ನೋಟಗಳನ್ನು ಕಂಡಿದೆ.

ಇಎಸ್‌ಪಿಎನ್‌ ಅವರ ಮ್ಯಾಗಜೀನ್‌ E60 ಈ ಗುಂಪನ್ನು ಸಂಪರ‍್ಕಿಸಿ ಟೆಕ್ಸಾಸ್ ಯೂನಿವರ‍್ಸಿಟಿಯ ಕಾಲ್ಚೆಂಡಾಟದ ಮೈದಾನದ 3ನೆಯ ಮಹಡಿಯಿಂದ ಬಾಸ್ಕೆಟ್‌ಬಾಲನ್ನು ಸರಿಯಾಗಿ ಗುರಿಯತ್ತ ಎಸೆಯುವ ಸವಾಲನ್ನು ನೀಡಿತ್ತು. ಇದನ್ನು ಟೋನಿ ಯಶಸ್ವಿಯಾಗಿ ಮಾಡಿ ತೋರಿಸಿದ್ದರು. 3ನೆಯ ಮಹಡಿಯಿಂದ ಎಸೆದ ಚೆಂಡು ವಿಶ್ವದಾಕಲೆಯ 3.9 ಸೆಕೆಂಡುಗಳಲ್ಲಿ ಬುಟ್ಟಿಯನ್ನು ಸೇರಿತ್ತು. ಈ ವಿಡಿಯೋ ಇಎಸ್‌ಪಿಎನ್‌ ಅವರ ಹಲವು ಟಿವಿ ಕಾರ‍್ಯಕ್ರಮಗಳಲ್ಲಿ ಮೂಡಿಬಂದಿತ್ತು.

ಡ್ಯೂಡ್ ಪರ‍್ಪೆಕ್ಟ್ ತಂಡಕ್ಕೆ ಹೆಚ್ಚಿದ ಅಬಿಮಾನಿಗಳು

ಡ್ಯೂಡ್ ಪರ‍್ಪೆಕ್ಟ್ ವಿಡಿಯೋಗಳು ಯೂಟ್ಯೂಬಿನಲ್ಲಿ ಸದ್ದು ಮಾಡುತ್ತಿದ್ದಂತೆ, ಅವರ ಹಿಂಬಾಲಕರ ಪಟ್ಟಿಯೂ ದೊಡ್ಡದಾಗಿ ಬೆಳೆಯುತ್ತಾ ಹೋಯಿತು. ಇವರ ವಿಡಿಯೋಗಳಿಗೆ ಬೇಡಿಕೆ ಹೆಚ್ಚಾಗತೊಡಗಿತು. ತಮಗೆ ಬೆಂಬಲಿಸುವಂತೆ ಹಲವಾರು ಬಾಸ್ಕೆಟ್‌ಬಾಲ್ ಆಟಗಾರರು ಮತ್ತು ಕ್ಲಬ್‌ಗಳು, ಡ್ಯೂಡ್ ಪರ‍್ಪೆಕ್ಟ್ ನವರನ್ನು ಕೇಳತೊಡಗಿದರು. ಇವರ ವಿಡಿಯೋಗಳು ಹಲವು ಕ್ಲಬ್‌ಗಳ ಬಯಲರಿಕೆಗಳಲ್ಲಿ(advertisement) ಸದ್ದು ಮಾಡಿವೆ. ಬಾಸ್ಕೆಟ್‌ಬಾಲ್ ಅಲ್ಲದೇ ಬೇರೆ ಆಟೋಟಗಳಲ್ಲಿಯೂ ಡ್ಯೂಡ್ ಪರ‍್ಪೆಕ್ಟ್ ತಂಡ ತಮ್ಮ ಕೈಚಳಕ ತೋರಿಸಿದೆ. ಪ್ರಸಿದ್ದ ಟೆನಿಸ್ ಆಟಗಾರ‍್ತಿ ಸೆರೆನಾ ವಿಲಿಯಮ್ಸ್, ಯುಎಸ್ ಒಲಿಂಪಿಕ್ ತಂಡ ಸೇರಿದಂತೆ ಹಲವು ಆಟಗಾರರ ಮತ್ತು ಕ್ಲಬ್‌ಗಳೊಂದಿಗೆ ಸೇರಿ ಡ್ಯೂಡ್ ಪರ‍್ಪೆಕ್ಟ್ ತಂಡ ಹಲವಾರು ವಿಡಿಯೋಗಳನ್ನು ಮಾಡಿ ಯೂಟ್ಯೂಬಿನಲ್ಲಿ ಹರಿಯಬಿಟ್ಟಿದೆ. ಹೆಸರುವಾಸಿ ಇಂಗ್ಲೀಶ್ ಪ್ರೀಮೀಯರ್ ಲೀಗ್‌ನ ಮ್ಯಾಂಚೆಸ್ಟರ್ ಸಿಟಿ, ಅರ‍್ಸೆನಲ್ ಮತ್ತು ಚೆಲ್ಸೀ ಪುಟ್ಬಾಲ್ ಕ್ಲಬ್‌ಗಳೊಂದಿಗೆ ಕೂಡ ಡ್ಯೂಡ್ ಪರ‍್ಪೆಕ್ಟ್ ತಂಡ ವಿಡಿಯೋಗಳನ್ನು ಮಾಡಿದೆ. ಡ್ಯೂಡ್ ಪರ‍್ಪೆಕ್ಟ್ ತಂಡದ ಐವರೊಂದಿಗೆ ಒಂದು ಪಾಂಡಾ ಮ್ಯಾಸ್ಕಾಟ್ ಕೂಡ ಇದೆ. ಈ ತಂಡ ಬಿಡುಗಡೆ ಮಾಡಿದ ಮೊಬೈಲ್ ಆಟ ಸುಮಾರು 2 ಕೋಟಿ ಬಾರಿ ಡೌನ್‌ಲೋಡ್‌ ಆಗಿದೆ. ಪೇಸ್‌ಬುಕ್‌ನಲ್ಲಿ 17 ಕೋಟಿಗೂ ಹೆಚ್ಚು ಮತ್ತು ಇನ್‌ಸ್ಟಾಗ್ರಾಂನಲ್ಲಿ 75 ಲಕ್ಶಕ್ಕೂ ಹೆಚ್ಚು ಬೆಂಬಲಿಗರು ಈ ತಂಡಕ್ಕಿದ್ದಾರೆ.

ಬೆನ್ನಟ್ಟಿ ಬಂದ ಟೀಕೆಗಳು

ಡ್ಯೂಡ್ ಪರ‍್ಪೆಕ್ಟ್ ತಂಡದ ಹೆಸರು ಬೆಳೆಯುತ್ತಿದ್ದಂತೆ ಇವರ ವಿಡಿಯೋಗಳು ದಿಟವೋ ಇಲ್ಲವೋ ಎನ್ನುವ ಚರ‍್ಚೆಯೂ ಶುರುವಾಯಿತು. ಗುಡ್ ಮಾರ‍್ನಿಂಗ್ ಅಮೆರಿಕಾ ಎನ್ನುವ ಟಿವಿ ಶೋ ಒಂದರಲ್ಲಿ ಈ ತಂಡಕ್ಕೆ ಅವಕಾಶ ನೀಡಲಾಯಿತು. ಈ ಶೋನಲ್ಲಿ ಡ್ಯೂಡ್ ಪರ‍್ಪೆಕ್ಟ್ ತಂಡದ ಸಾಹಸಗಳು ಸುಳ್ಳು ಎಂದು ಸಾಬೀತು ಪಡಿಸಲು ಆಗಲಿಲ್ಲ ಎಂದು ಹಲವು ತಗ್ನರು ಹೇಳಿದ್ದಾರೆ.

ಈ ಕುರಿತು ಕೋಡಿ ಜೋನ್ಸ್, “ನಮ್ಮ ಸಾಹಸಗಳನ್ನು ಯಾರಾದರೂ ಸುಳ್ಳು ಎಂದು ಹೇಳಿದಾಗ ನಮಗೆ ಸಂತಸವಾಗುತ್ತದೆ. ಏಕೆಂದರೆ, ಇದರಿಂದ ಇನ್ನಶ್ಟು ಪ್ರಚಾರ ಸಿಕ್ಕು ಹೆಚ್ಚು ಹೆಚ್ಚು ಮಂದಿಗೆ ನಮ್ಮ ವಿಡಿಯೋಗಳ ಬಗ್ಗೆ ತಿಳಿಯುತ್ತದೆ ಮತ್ತು ಮತ್ತಶ್ಟು ಹೆಚ್ಚಿನ ನೋಟಗಳು ಯೂಟ್ಯೂಬ್ ಚಾನೆಲ್‌ಗೆ ಹರಿದುಬರುತ್ತವೆ” ಎಂದು ಹೇಳುತ್ತಾರೆ. ಈ ಕುರಿತಂತೆ ಟಿವಿ ಕಾರ‍್ಯಕ್ರಮವೊಂದರಲ್ಲಿ ಮಾತನಾಡುವಾಗ, ಯೂಟ್ಯೂಬಿಗೆ ಸೇರಿಸುವ ಮುನ್ನ ಹಲವು ಬಾರಿ ಪ್ರಯತ್ನಿಸಿ ವಿಡಿಯೋಗಳನ್ನು ಸೆರೆಹಿಡಿದಿರುವುದಾಗಿ ಕೋಬಿ & ಕೋರಿ ಕಾಟನ್ ತಿಳಿಸಿದ್ದರು.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.orgdudeperfect.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: