ಡ್ರ್ಯಾಗನ್ ನದಿ Dragon River

“ದಿ ಬ್ಲೂ ಡ್ರ್ಯಾಗನ್” ಪೋರ‍್ಚುಗಲ್‍ನ ಸುಂದರ ನದಿ

– ಕೆ.ವಿ.ಶಶಿದರ.

ಡ್ರ್ಯಾಗನ್ ನದಿ Dragon River

ಈ ನದಿಯನ್ನು ಅದಿಕ್ರುತವಾಗಿ ‘ಒಡೆಲಿಯಟ್ ನದಿ’ ಎಂದು ಕರೆಯುತ್ತಾರೆ. ಆದರೆ ಇದು ಪ್ರಸಿದ್ದಿಯಾಗಿರುವುದು ‘ದಿ ಬ್ಲೂ ಡ್ರ್ಯಾಗನ್ ನದಿ’ ಎಂದು. ಇದಕ್ಕೂ ಸಾಕಶ್ಟು ಕಾರಣಗಳಿವೆ. ಈ ನದಿಯ ನೀರಿನ ಬಣ್ಣ ಕಡುನೀಲಿ. ನದಿಯ ನೀರು ಹರಿಯುವ ಉದ್ದಕ್ಕೂ ಅನೇಕ ಅಸಾಮಾನ್ಯ ಅಂಕುಡೊಂಕಾದ ತಿರುವುಗಳು ಇವೆ. ಪಕ್ಶಿ ನೋಟದಲ್ಲಿ ಇದು ಕಲ್ಪಿತ ಡ್ರ್ಯಾಗನ್ ಮಾದರಿಯಲ್ಲಿ ಕಂಡುಬರುತ್ತದೆ. ನೀರಿನ ಬಣ್ಣ ನೀಲಿಯಿರುವ ಕಾರಣ ಇದನ್ನು ‘ದಿ ಬ್ಲೂ ಡ್ರ್ಯಾಗನ್ ನದಿ’ ಎನ್ನುತ್ತಾರೆ.

ಪೋರ‍್ಚುಗಲ್ಲಿನ ಆಲ್ಗರ‍್ವೆ ಪ್ರಾಂತ್ಯದಲ್ಲಿನ ಕ್ಯಾಸ್ಟ್ರೊ ಮರೀಮ್ ಪುರಸಬೆಯಲ್ಲಿದೆ ಒಡೆಲಿಯೆಟ್ ನದಿ. ಈ ನದಿಯ ಹುಟ್ಟು ಸೆರ‍್ರಾ ಡಿ ಕಾಲ್ಡೆರಾವೊ ಪರ‍್ವತ ಶ್ರೇಣಿಗಳಲ್ಲಿ. ಇದೇ ನದಿಯ ಹಾದಿಯಲ್ಲಿ ಕಟ್ಟಲಾದ ಅಣೆಕಟ್ಟಿಗೆ ಒಡೆಲಿಯಟ್ ಅಣೆಕಟ್ಟು ಎಂದು ಹೆಸರಿಸಲಾಗಿದೆ. ಒಡೆಲಿಯಾಟ್ ನದಿಯು ಗುವಾಡಿಯಾನಾ ನದಿಯ ಉಪನದಿ.

ಈ ನದಿಯೊಂದು ಸೊಬಗಿನ ತಾಣ!

ದಿ ಬ್ಲೂ ಡ್ರ್ಯಾಗನ್ ನದಿಯ ದಡದಲ್ಲಿರುವ ಹಳ್ಳಿಗಳ ಮನೆಗಳು ಬಿಳಿಯ ಬಣ್ಣದ್ದಾಗಿವೆ. ಇದು ಈ ಸ್ತಳದ ಸೌಂದರ‍್ಯವನ್ನು ಇಮ್ಮಡಿಗೊಳಿಸಿದೆ ಮತ್ತು ವಿಶೇಶ ಮೋಡಿಯನ್ನು ಮಾಡಿದೆ. ಈ ಹಳ್ಳಿಯನ್ನೂ ಸಹ ಒಡೆಲಿಯಟ್ ಎಂದೇ ಕರೆಯುತ್ತಾರೆ. ನದಿ ತೀರದ ಅತ್ಯದ್ಬುತ ಬೂದ್ರುಶ್ಯದ ಜೊತೆಗೆ ಸುಂದರವಾದ ಕಟ್ಟಡಗಳು ಮೇಳೈಸಿ ವಿಶಿಶ್ಟ ಆಕರ‍್ಶಣೆಯನ್ನು ಒದಗಿಸಿದೆ.

ನದಿ ತೀರದಲ್ಲಿ ಸ್ತಳೀಯ ಹೆಗ್ಗುರುತೊಂದಿದೆ. ಅದೇ ‘ವಿಸಿಟೇಶನ್ ಆಪ್ ದ ಮದರ್ ಆಪ್ ಗಾಡ್’ ಚರ‍್ಚ್. ಈ ದೇವಾಲಯವು ಪುರಾಣ ಮತ್ತು ದಂತಕತೆಗಳ ಆಗರವಾಗಿದೆ. ಈ ಚರ‍್ಚ್ ಬೂದ್ರುಶ್ಯದ ಒಂದು ಬಾಗವಾದ ಕಾರಣ ಈ ಸ್ತಳಕ್ಕೆ ವಿಶಿಶ್ಟವಾದ ಆಕರ‍್ಶಣೆ ಒದಗಿದೆ.

ದ ಬ್ಲೂ ಡ್ರ್ಯಾಗನ್ ನದಿಯ ವೈಬವವನ್ನು ನೋಡಿ ಅನುಬವಿಸ ಬಯಸಿದರೆ, ಪಕ್ಕದಲ್ಲಿರುವ ಬೆಟ್ಟದ ಮೇಲೇರಬೇಕು. ಎತ್ತರದ ಜಾಗದಿಂದ ನೋಡಿದಾಗ ಕಾಲ್ಪನಿಕ ನೀಲಿ ಡ್ರ್ಯಾಗನ್ ನದಿ ಹರಿಯುವ ಅನನ್ಯ ದ್ರುಶ್ಯ ಎಂತಹವರನ್ನೂ ಕೂಡ ಬೆರಗುಗೊಳಿಸುತ್ತದೆ. ನದಿಗೆ ಇಟ್ಟಿರುವ ಹೆಸರು ಸಾರ‍್ತಕ ಎನಿಸುತ್ತದೆ.

(ಮಾಹಿತಿ ಸೆಲೆ: visitportugal.com, gathersomeinfo.com, spectacularart.quora.com )
(ಚಿತ್ರ ಸೆಲೆ: visitportugal.com)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: