ರಂಗಶಂಕರ – ಶಂಕರನಾಗ್ ರವರ ಕನಸಿನ ಕೂಸು

– ಸಂದೀಪ ಔದಿ.

ರಂಗಶಂಕರ, Rangashankara

“ನಮಸ್ಕಾರ,  ನಾಟಕಕ್ಕೆ ಅಡಚಣೆಯಾಗದಿರಲು, ದಯವಿಟ್ಟು ನಿಮ್ಮ ಮೊಬೈಲ್ ಪೋನ್ ಸ್ವಿಚ್ ಆಪ್ ಮಾಡಿ”

ಹೀಗೆ ವಿನಂತಿ ಮಾಡುವ ಅಶರೀರ ವಾಣಿ. ಟರ‍್ರ ಟರ‍್ರ….ಎನ್ನುವ ರಿಂಗಣ (ಹಳೆ ಸಿನೆಮಾ ಮಂದಿರದಲ್ಲಿ ಮದ್ಯಂತರ ವೇಳೆ ಬರುವ ರಿಂಗಣ). ಸಬಾಂಗಣದ ಎರಡು ಬಾಗಿಲುಗಳನ್ನು ಮುಚ್ಚಲಾಗುವುದು. ನಿದಾನವಾಗಿ ಎಲ್ಲೆಡೆ ಕಗ್ಗತ್ತಲು ಆವರಿಸಿ, ಬರೀ ರಂಗದ ಮೇಲೆ ಮಾತ್ರ ಮಂದ ಬೆಳಕು. ಪ್ರಯೋಗಕ್ಕೆ ಅನುಕೂಲರ ಮೌನ ಹಾಗೂ ವಾತಾವರಣ. ಇನ್ನೇನು ನಾಟಕ (ಪ್ರಯೋಗ) ಶುರು.

ಮೊದಲ ಸಲ “ರಂಗಶಂಕರ”ದ ಪ್ರೇಕ್ಶಕನಾಗಿದ್ದಾಗ ನನಗಾದ ವಿಶೇಶ ಅನುಬವ. ಈ ವಿಶೇಶ ಅನುಬೂತಿ ಪ್ರತೀ ಬಾರಿ ನಾನಲ್ಲಿ ಹೋದಾಗ ಕಟ್ಟಿಟ್ಟ ಬುತ್ತಿ.

ಸುಮಾರು 2004 ರಲ್ಲಿ ರಂಗಶಂಕರ, ವಿವಿದ ಬಾಶೆಯ ರಂಗ ಪ್ರಯೋಗ-ರಂಗಾಸಕ್ತರನ್ನು ಪ್ರೋತ್ಸಾಹಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಕೆಲಸ ಶುರುಮಾಡಿತ್ತು. ಮುಂಬೈನಲ್ಲಿ ರಂಗ ಪ್ರಯೋಗಗಳಿಗಂತಲೇ ಮೀಸಲಿರುವ ಪ್ರುತ್ವಿ ಅತವಾ ಶಿವಾಜಿ ಮಂದಿರಗಳಂತೆ ಬೆಂಗಳೂರಿನಲ್ಲೂ ಯಾಕೆ ಒಂದು ರಂಗಸ್ತಳ ಮಾಡಬಾರದು ಎನ್ನುವ ಆಲೋಚನೆಯೊಂದಿಗೆ ರಂಗಶಂಕರ ಅಂಕುರಗೊಂಡಿತು. ಇದು ನಮ್ಮ ನೆಚ್ಚಿನ ಶಂಕರನಾಗರವರ ಕನಸಿನ ಕೂಸು. ಅವರು ಕಾಲವಾದ ನಂತರ, ಅರುಂದತಿ ನಾಗ್ ರವರು ಮುತವರ‍್ಜಿಯಿಂದ ಹಾಗೂ ದೈರ‍್ಯದಿಂದ, ರಂಗಕರ‍್ಮಿಗಳ ಸಹಕಾರದೊಂದಿಗೆ ರಂಗಶಂಕರವನ್ನು ಮುನ್ನಡೆಸುತ್ತಿದ್ದಾರೆ. ಶಂಕರ್ ನಾಗ್, Shankarnag

ವಿಶೇಶ ತೇಜಸ್ಸು ಹೊಂದಿರುವ ರಂಗಶಂಕರ

ವಾರದ 6 ದಿನ (ಸೋಮವಾರ ರಜೆ) ತಪ್ಪದೇ ರಂಗಶಂಕರ ಕಾರ‍್ಯನಿರತ. ಪ್ರತಿ ವರುಶ ಬೇರೆ ಬೇರೆ ಬಾಶೆಯ, ಸಾಗರದಾಚಿನ ಸಂಸ್ಕ್ರುತಿಗಳ ವಿಶಿಶ್ಟ ಪ್ರಯೋಗಗಳನ್ನು ನಾವಿಲ್ಲಿ ಕಾಣಬಹುದು. ರಂಗಶಂಕರಕ್ಕೆ ವಿಶೇಶ ತೇಜಸ್ಸು-ಕಳೆ ಇರೋದಂತು ಸತ್ಯ. ಹಾಗಾಗಿಯೇ, ರಂಗ ಸೊಗಡು ಗೊತ್ತಿರದವರನ್ನೂ ಕೂಡ ರಂಗದೆಡೆಗೆ ಸೆಳೆಯುವುದು. ನಾ ಕಂಡಂತೆ ರಂಗಶಂಕರದ ಹೊರಾಂಗಣದಲ್ಲಿ ಗೇಟ್ ಇಲ್ಲ, ಸರ‍್ವರಿಗೂ ಸುಸ್ವಾಗತ ಎಂಬಂತೆ ಬಾಸ. ಎಡಬದಿಯಲ್ಲಿ ಚಿಕ್ಕ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಕೊಂಡು ಸರತಿ ಸಾಲಿಗೆ ಸೇರಿಕೊಳ್ಳಬೇಕು. ಸಾಲಿನ ಉದ್ದ, ನಾಟಕ ಅತವಾ ತಂಡದ ಪ್ರಕ್ಯಾತಿಯನ್ನು ಅವಲಂಬಿಸಿರುತ್ತದೆ. ಹಿರಿಯ ನಾಗರಿಕರು ಲಿಪ್ಟ್ ಮೂಲಕ ರಂಗಮಂದಿರಕ್ಕೆ ಹೋಗಬಹುದು.

ಪ್ರಯೋಗ ಆರಂಬಕ್ಕೂ 15-20 ನಿಮಿಶ ಮೊದಲೇ, ಜನರನ್ನ ಒಂದನೇ ಮಹಡಿಯ ರಂಗಮಂದಿರದ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ. ನಿದಾನವಾಗಿ, ಮೆಟ್ಟಿಲ ಮೇಲೆ ಬರೆದಿರುವಂತ ವಾಕ್ಯಗಳನ್ನ ಓದುತ್ತಾ ಹೋಗಬಹುದು. ಮೊದಲ ಮಹಡಿಯ ಗೋಡೆಯ ಮೇಲೆ ಹಳೆಯ ನಾಟಕಗಳ ಚಿತ್ರಗಳು ಮತ್ತು ಕೆಲ ಆಂಟಿಕ್ ಸಾಮಗ್ರಿಗಳಿವೆ. ರಂಗ ಮಂದಿರ ಪ್ರವೇಶಿಸಲು, ಅಲ್ಲಲ್ಲಿ ತಮ್ಮವರಿಗಾಗಿ ಜಾಗ ಕಾಯ್ದಿರಿಸಿದ ಬ್ಯಾಗ್ ಗಳು ನೋಡಸಿಗುತ್ತವೆ. ಮುಂದಿನ ಎರಡು ಸಾಲುಗಳು ಆಗಲೇ ತುಂಬಿರುತ್ತವೆ. ಮಂದಿರದ ನಡು ಬಾಗದ ಆಸನಗಳಿಗೆ ಎಲ್ಲಿಲ್ಲದ ಬೇಡಿಕೆ (ಯಾಕೆ ಅಂತ ನೀವು ಹೋದಾಗ ಅರ‍್ತ ಆಗುತ್ತೆ). ಎಲ್ಲ ವಯೋಮಾನದ ರಂಗಾಸಕ್ತರೂ ತಮ್ಮ ಕುಟುಂಬದೊಂದಿಗೆ ಸ್ನೇಹಿತರೂಂದಿಗೆ ಆಸೀನರಾಗಿ ಪ್ರಯೋಗಕ್ಕಾಗಿ ಅಣಿಯಾಗುವರು.

ಸುಸಜ್ಜಿತ ಮತ್ತು ಅಚ್ಚುಕಟ್ಟಾದ ಸಬಾಂಗಣ

ಸುಮಾರು 300 ಕ್ಕಿಂತಲೂ ಹೆಚ್ಚು ಜನರಿಗೆ ಆಸೀನರಾಗಲು ಬೆಂಚ್ ಗಳು, ನಾಲ್ಕು ಹಸಿರು ಕೋಣೆಗಳು, ಸುಸಜ್ಜಿತ ಬೆಳಕು, ಅಚ್ಚುಕಟ್ಟಾದ ದ್ವನಿ ಪ್ರಸರಣ ಹಾಗೂ ಹವಾ ನಿಯಂತ್ರಿತ ಸಬಾಂಗಣ ರಂಗಶಂಕರ. ವಿವಿದ ಬಣ್ಣಗಳ ಬೆಳಕಿನ ಆಟ, ಪಾತ್ರಗಳ ಪರಕಾಯ ಪ್ರವೇಶ-ಸಂಬಾಶಣೆ, ಮುದ ನೀಡುವ ಸಂಗೀತ ಬೇರೊಂದು ಲೋಕಕ್ಕೆ ಕರೆದೊಯ್ಯುವ ಅನುಬವ. ಪ್ರಯೋಗದ ನಂತರ ಪಾತ್ರ ಪರಿಚಯ, ತಂತ್ರಗ್ನರ ಪರಿಚಯ ವಿಶೇಶವಾಗಿರುತ್ತದೆ.

ಬೆಂಗಳೂರಿನ ಪ್ರಸಿದ್ದ ರಂಗ ತಂಡಗಳಾದ ಬೆನಕ, ಕಲಾಗಂಗೋತ್ರಿ, ಜಾಗ್ರುತಿ ಹಾಗು ಇನ್ನಿತರ ಹವ್ಯಾಸಿ ತಂಡಗಳಿಂದ ಹತ್ತು ಹಲವು ನಾಟಕಗಳ ಪ್ರಯೋಗ ಇಲ್ಲಿ ನಡೆಯುತ್ತಿರುತ್ತದೆ. ತಂಡಗಳು ಈ ತಾಣದಲ್ಲಿ ತಮ್ಮ ನಾಟಕ ಪ್ರದರ‍್ಶಿಸಿದಾಗ ಪಡುವ ಸಂಬ್ರಮ ವಿಶಿಶ್ಟ. ರಂಗಯುಗಾದಿ, ಮಾವಿನ ಹಬ್ಬ(ಮ್ಯಾಂಗೋ ಪಾರ‍್ಟಿ) ಹಾಗೂ ವಾರ‍್ಶಿಕ ರಂಗ ಹಬ್ಬಗಳನ್ನು ಸುಮಾರು ವರುಶಗಳಿಂದ ನಡೆಸಿಕೊಂಡು ರಂಗ ಸಂಸ್ಕ್ರುತಿ ಬೆಳವಣಿಗೆಗೆ ತನ್ನದೇ ಆದ ವಿಶೇಶ ಪ್ರಯತ್ನ ಮಾಡುತ್ತಿದೆ. ಇನ್ನು ಬೇಸಿಗೆ ರಜೆಗಳಲ್ಲಿ ಮಕ್ಕಳಿಗಾಗಿ ರಂಗ ಶಿಬಿರ, ಕತಾ ಶಿಬಿರ, ಮಕ್ಕಳ ನಾಟಕಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳಿಗಂತನೇ “ಆಹಾ “ಎಂಬ ರಂಗ ತಂಡ ಆಗಾಗ್ಗೆ ಪ್ರಯೋಗಗಳನ್ನು ಹಮ್ಮಿಕೊಳ್ಳುತ್ತದೆ. ‘ಗುಮ್ಮಾ ಬಂದ ಗುಮ್ಮ’ ಹೆಚ್ಚು ಬಾರಿ ಪ್ರದರ‍್ಶನಗೊಂಡ ಮಕ್ಕಳ ನಾಟಕ.

ರಂಗಶಂಕರಕ್ಕೆ ಹೋದಾಗ ಕೇವಲ ನಾಟಕ ಪ್ರಯೋಗ ನೋಡಲಿಕ್ಕೇ ಹೋಗಬೇಕಿಂದಿಲ್ಲ. ಒಳಾಂಗಣದಲ್ಲೇ ಒಂದು ಪುಸ್ತಕಾಲಯವಿದೆ. ಪ್ರವೇಶ ಹಾದಿಯ ಬಲಬಾಗಕ್ಕೆ ರಂಗಶಂಕರ ನಾಮಾಂಕಿತ ಏಕ ಶಿಲೆ, ಗಾಜಿನ ಪರದೆಯ ಮೇಲೆ ಶಂಕರರ (ನಮ್ಮ ಶಂಕರನಾಗ್) ಕಲಾಕ್ರುತಿ, ಗೋಡೆಯಮೇಲೆ ಬೇರೆ ಬೇರೆ ಕಲಾಕ್ರುತಿ. ಒಳಬಾಗದಲಿರುವ ತಿಂಡಿಮನೆಯಲ್ಲಿ(ಕ್ಯಾಂಟೀನ್) ಸಾಬೂದಾನಿ ವಡೆ-ಕಾಪಿಯನ್ನೂ ಕೂಡ ಸವಿಯಬಹುದು.

ನಾಟಕಗಳಿಗೆ ವೇದಿಕೆಯನ್ನು ಹಾಗೂ ಶಂಕರರ ಸ್ಪೂರ‍್ತಿ ಚಿಲುಮೆಯನ್ನು ಜೀವಂತವಾಗಿರಿಸಿರುವ ಅರುಂದತಿ ನಾಗ್ ರವರ ಪರಿಶ್ರಮವನ್ನು ಮೆಚ್ಚಲೇಬೇಕು.

( ಚಿತ್ರ ಸೆಲೆ: ಬರಹಗಾರರದ್ದು )

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. K.V Shashidhara says:

    ಮನಸ್ಸಿಗೆ ಬಹಳವೇ ಖುಷಿ ಕೊಟ್ಟ ಬರಹ. ಸಂದೀಪ್ ರವರಿಗೆ ಧನ್ಯವಾದಗಳು

  2. Sandeep A says:

    ನನ್ನಿ ಶಶಿಧರ ಅವರೇ

  3. krishne gowda says:

    ಆಟ ಆರಂಬವಾದ ಕೂಡಲೇ ತಿಯೇಟರ್ ಬಾಗಿಲುಗಳನ್ನು ಮುಚ್ಚಲಾಗುತ್ತದೆ.ತಡವಾಗಿ ಒಳಗೆಹೋಗುವಂತಿಲ್ಲ.

  4. krishne gowda says:

    ಅಡಚಣೆ ಪದದ ಬದಲು ಗಿರೀಶ್ ಕಾರ್ನಾಡ್ ಉಲಿಯಲ್ಲಿ ವ್ಯತ್ಯಯ ಎಂದು ಹೇಳುವುದನ್ನು ಕೇಳಿದ್ದೇನೆ.

ಅನಿಸಿಕೆ ಬರೆಯಿರಿ:

%d bloggers like this: