ನೆನಪುಗಳು ಎಂದಿಗೂ ಅಮರ

– ವೆಂಕಟೇಶ ಚಾಗಿ.

ರೈಲು, ಪ್ರಯಾಣ, ನೆನಪು, train, railway, journey, memories,

ಬದುಕಿನಲ್ಲಿ ಕೆಲವು ಬೇಟಿಗಳು ಅನಿರೀಕ್ಶಿತ. ಅದರಲ್ಲಿ ಕೆಲವರು ಒಂದೇ ಬೇಟಿಯಲ್ಲಿ ಆಪ್ತರಾಗಿಬಿಡುತ್ತಾರೆ. ನಮಗೂ ಅವರಿಗೂ ತುಂಬಾ ದಿನಗಳಿಂದ ಒಡನಾಟವಿದೆಯೇನೋ ಎನ್ನಿಸುವಶ್ಟು ಹತ್ತಿರವಾಗುತ್ತಾರೆ. ನಂತರ ಅನಿವಾರ‍್ಯ ಕಾರಣಗಳಿಂದಾಗಿ ದೂರವಾಗಿ ಬಿಡುತ್ತಾರೆ. ಮತ್ತೆ ಅವರ ನಮ್ಮ ಬೇಟಿ ಅತೀ ವಿರಳ ಅತವಾ ಶೂನ್ಯ ಎನ್ನಬಹುದು. ಆಕಸ್ಮಿಕವಾಗಿ ಕಣ್ಣೆದುರಿಗೆ ಬಂದರೂ ಅವರನ್ನು ನಾವು ಮರೆತಿರುತ್ತೇವೆ ಅತವಾ ನಮ್ಮನ್ನು ಅವರು ಮರೆತಿರುತ್ತಾರೆ ಅಶ್ಟೇ. ಆದರೆ ಅವರು ಬೇಟಿಯಾದ, ಅವರೊಂದಿಗೆ ಕಳೆದ ಕ್ಶಣಗಳು ಎಂದಿಗೂ ನೆನಪಿನಲ್ಲಿ ಉಳಿದಿರುತ್ತವೆ.

ಅಂದು ತಡವಾದ್ದರಿಂದ ದೌಡಾಯಿಸಿ ರೈಲು ನಿಲ್ದಾಣಕ್ಕೆ ಬಂದೆ. ಟಿಕೆಟ್ ಪಡೆದು ರೈಲು ಬರುವುದನ್ನು ಕಾಯುತ್ತಾ ನಿಂತೆ. ಶನಿವಾರವಾಗಿದ್ದರಿಂದ ರಜೆ ನಿಮಿತ್ಯ ತಮ್ಮ ತಮ್ಮ ಊರುಗಳಿಗೆ ತೆರಳಬೇಕಾದ ಜನಸಂದಣಿ ತುಂಬಾನೇ ಇತ್ತು. 5-6 ತಾಸುಗಳ ಪ್ರಯಾಣ ಬೇರೆ. ಸೀಟು ಸಿಗುತ್ತದೋ ಇಲ್ಲವೋ ಎನ್ನುವ ಯೋಚನೆಯಲ್ಲಿದ್ದಾಗ ರೈಲು ಬಂದೇ ಬಿಟ್ಟಿತು. ಬೋಗಿಯೊಳಗೆ ಬೇಗನೇ ಪ್ರವೇಶಿಸಿದ್ದರಿಂದ ಸೀಟು ದೊರೆಯಿತು. ಕಿಟಕಿಯಲ್ಲಿ ಯಾರೋ “ಸರ್ ಮಕ್ಕಳಿದ್ದಾರೆ. ನಮಗೊಂದು ಸೀಟ್ ಹಿಡ್ಕೊಳ್ಳಿ ” ಎನ್ನುತ್ತಾ ಬಟ್ಟೆ ಕೊಟ್ಟರು. ನನ್ನ ಮುಂದೆ ಕಾಲಿ ಇದ್ದ 4-5 ಜನ ಕುಳಿತುಕೊಳ್ಳಬಹುದಾದ ಸೀಟಿಗೆ ಬಟ್ಟೆ ಹಾಕಿ ಕಾಯ್ದಿರಿಸಿದೆ. ಆ ಗದ್ದಲದಲ್ಲಿ ದಂಪತಿಗಳಿಬ್ಬರು ತಮ್ಮ ಎರಡು ಚಿಕ್ಕ ಮಕ್ಕಳೊಂದಿಗೆ ಬಂದು ಸೀಟಲ್ಲಿ ಕುಳಿತರು. “ತುಂಬಾ ತ್ಯಾಂಕ್ಸ್ ಸರ್ ” ಎಂದು ದನ್ಯವಾದಗಳನ್ನು ಹೇಳಿದರು. ರೈಲು ಹೊರಟಿತು. ಹಾಗೇ ಅವರ ನನ್ನ ಪರಿಚಯವಾಯಿತು. ಮಾತನಾಡುತ್ತಾ ತುಂಬಾ ಆತ್ಮೀಯತೆ ಬೆಳೆಯಿತು. ಮಕ್ಕಳು ಅಂಕಲ್ ಎನ್ನುತ್ತಾ ನನ್ನೊಂದಿಗೆ ಆಟವಾಡಿದರು. ಅವರು ತಂದಿದ್ದ ಊಟ ತಿಂಡಿಗಳಲ್ಲಿ ನನಗೂ ಒಂದು ಪಾಲಿತ್ತು. ದಂಪತಿ ಹಾಗೂ ಮಕ್ಕಳೊಂದಿಗೆ ಕಳೆದ ಸಮಯದಲ್ಲಿ ಪ್ರಯಾಣ ಬೇಸರವೆನಿಸಲಿಲ್ಲ‌.

ಆ ದಂಪತಿಗಳು ಇಳಿಯಬೇಕಾದ ಸ್ತಳ ಬರುತ್ತಿದ್ದಂತೆ “ಸರ್ ಮತ್ತೆ ಸಿಗೋಣ” ಎನ್ನುತ್ತಾ ನನ್ನ ಮೊಬೈಲ್ ನಂಬರ್ ಪಡೆದು ಇಳಿದರು. ಮಕ್ಕಳು ರೈಲು ಮರೆಯಾಗುವವರೆಗೂ ಬೈ ಬೈ ಅಂಕಲ್ ಎನ್ನುತ್ತಲೇ ಇದ್ದರು. ಅದೇ ಬೇಟಿ ಕೊನೆ. ಎದುರಿದ್ದ ಸೀಟಿಗೆ ಬೇರೆ ಯಾರೋ ಆವರಿಸಿದ್ದರು. ಅವರು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಪ್ರಯಾಣ ಮುಂದುವರೆಸಿದೆ. ಈಗ ಸುಮಾರು ವರ‍್ಶಗಳು ಉರುಳಿದರೂ ಆ ಕುಟುಂಬದೊಂದಿಗೆ ಕಳೆದ ಕ್ಶಣಗಳ ನೆನಪುಗಳು ಇಂದಿಗೂ ಹಾಗೇ ಇವೆ. ಕೆಲವು ನೆನಪುಗಳು ಎಂದಿಗೂ ಅಮರ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: