ಗಣಿ ನಾಡಿನಲ್ಲೊಂದು ಸ್ರುಶ್ಟಿಯ ಸೊಬಗಿನ ಗೂಡು – ‘ಸಂಡೂರು’

– ಸುನಿಲ್ ಮಲ್ಲೇನಹಳ್ಳಿ.

ಸಂಡೂರು, ಪ್ರಕ್ರುತಿ, ನಿಸರ‍್ಗ, nature, sandur

ಬಳ್ಳಾರಿ ಜಿಲ್ಲೆಯ ಸಂಡೂರು ಎಂದರೆ ಬಿಡುವಿಲ್ಲದೆ ಗಣಿಗಾರಿಕೆ‌ ನಡೆಯುವ ಪ್ರದೇಶ; ಅಲ್ಲಿ ಗಣಿಗಾರಿಕೆಯ ವಾಹನಗಳದ್ದೇ ಆರ‍್ಬಟ ಹಾಗೂ ಎಲ್ಲೆಲ್ಲೂ ಕೆಂಪು ಮಣ್ಣಿನ ವಿಪರೀತ ದೂಳು ಎಂದು ಬಹಳಶ್ಟು ಜನರು ಅಂದುಕೊಂಡಿದ್ದಾರೆ. ಆದರೆ ಅಶ್ಟೊಂದು ಗಣಿಗಾರಿಕೆಯ ನಡುವೆಯೂ ‌ಸಂಡೂರಿನ ಸುತ್ತಮುತ್ತ ಈಗಲೂ ಸಹ ಪ್ರಾಕ್ರುತಿಕವಾಗಿ ವಿಸ್ತಾರವಾದ ಗುಡ್ಡ, ಬೆಟ್ಟ ಹಾಗೂ ಕಣಿವೆಗಳಿದ್ದು, ಪ್ರವಾಸಿಗರನ್ನು ಆಕರ‍್ಶಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲೂ ವಿಶೇಶವಾಗಿ ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲಿ ಇಲ್ಲಿಯ ಬೆಟ್ಟ-ಗುಡ್ಡಗಳು, ಕಣಿವೆಗಳಂತೂ ನೋಡಲು ಅತ್ಯಂತ ಸುಂದರವಾಗಿರುತ್ತವೆ. ಸ್ರುಶ್ಟಿಯ ಆ ಸೊಬಗು ಮನಸ್ಸಿಗೆ ಮುದ, ಆನಂದದ ಬಾವವನ್ನು ತರುತ್ತವೆ.

naari halla, sanduru, ನಾರಿ ಹಳ್ಳ, ಕಲ್ಬಂಡೆ, ನದಿ

ಕಲ್ಬಂಡೆ ಸೀಳಿ ಹರಿದಿರುವ ನಾರಿ ಹಳ್ಳ

ಕೂಡ್ಲಿಗಿಯಿಂದ ಸಂಡೂರಿಗೆ ಹೋಗುವ ಮಾರ‍್ಗದಲ್ಲಿ ಸಂಡೂರಿಗೆ ಮೂರು ಕೀಲೋಮೀಟರ್ ದೂರದಲ್ಲಿ ವೀಕ್ಶಣಾ ಸ್ತಳವೊಂದಿದೆ. ನಮ್ಮ ಪ್ರವಾಸ ಶುರುವಾಗಿದ್ದು ಇಲ್ಲಿಂದಲೇ . ಎತ್ತರದಲ್ಲಿರುವ ದೊಡ್ದ ಬಂಡೆಯೊಂದರ ಮೇಲೆ See Sandur in September ಎಂದು ಬರೆಯಲಾಗಿದ್ದು, 1934ರಲ್ಲಿ ಗಾಂದೀಜಿಯವರು ಸಂಡೂರಿಗೆ ಬೇಟಿಕೊಟ್ಟಾಗ ಹೇಳಿದ ವಾಕ್ಯವಿದು. ಈ ಜಾಗದಿಂದ ಸಂಡೂರಿನ ಸುತ್ತಲೂ‌ ಇರುವ ಪ್ರಾಕ್ರುತಿಕ ಸೊಬಗು ಸುಂದರವಾಗಿ ಕಾಣುತ್ತದೆ. ಅಲ್ಲಿಂದ ಕಾಣುವ ವಿಹಂಗಮ ನೋಟವನ್ನು ಕಣ್ಣಾರೆ ಕಂಡು ಪುಳಕಿತರಾದೆವು. ನಂತರ ಅಲ್ಲಿಂದ ಹೊರಟು ಸ್ವಲ್ಪವೇ ದೂರದಲ್ಲಿರುವ ಶ್ರೀ ಗಂಡಿ ನರಸಿಂಹ ಸ್ವಾಮಿ ದೇವಸ್ತಾನವನ್ನು ತಲುಪಿ, ದರ‍್ಶನ ಮಾಡಿದೆವು. ಆ ದೇವಸ್ತಾನದ ಸುತ್ತಲೂ ‌ಕಪಿಸೈನ್ಯದ್ದೇ ರಾಜ್ಯಬಾರ. ಸದ್ಯ ಯಾವುದೇ ಹಣ್ಣು-ಹಂಪಲು, ತಿಂಡಿ-ತಿನಿಸುಗಳು ನಮ್ಮ ಕೈಯಲ್ಲಿ ಇರಲಿಲ್ಲ. ಏನಿಲ್ಲವೆಂದರೂ ಸುಮಾರು ಐವತ್ತಕ್ಕೂ ಹೆಚ್ಚು ಮಂಗಗಳು ಅಲ್ಲಿದ್ದವು. ದೇವಸ್ತಾನದ ಹಿಂಬದಿಯಲ್ಲಿ ನಾರಿ ಹಳ್ಳ ಹರಿಯುತ್ತದೆ. ಆ ಜಾಗದಲ್ಲಿ ಸತತವಾಗಿ ನೀರು ಹರಿದಿರುವುದರ ಪರಿಣಾಮವಾಗಿ ಪರ‍್ವತದ ದೊಡ್ಡ ಕಲ್ಬಂಡೆ ಸೀಳಿ, ನೋಡುಗರಿಗೆ ರಮಣೀಯ ಅನುಬವ ನೀಡುತ್ತದೆ.

ಶ್ರೀ ಕುಮಾರ ಸ್ವಾಮಿ‌ ದೇಗುಲ ಸಂಡೂರು, Kumaraswamy temple Sanduru

ಶ್ರೀ ಕುಮಾರ ಸ್ವಾಮಿ‌ ದೇಗುಲ

ಅಲ್ಲಿಂದ ಹೊರಟ ನಾವು ಸುಪ್ರಸಿದ್ದ ಶ್ರೀ ಕುಮಾರ ಸ್ವಾಮಿ‌ ದೇಗುಲವನ್ನು ನೋಡಿಕೊಂಡು ಬರಲು ಉತ್ಸುಕರಾಗಿದ್ದೆವು. ಈ ದೇಗುಲವು ಸಂಡೂರಿನಿಂದ ಸುಮಾರು‌ 15 ಕಿಲೋಮೀಟರ್ ದೂರದಲ್ಲಿ, ಬೆಟ್ಟದ ತಪ್ಪಲಿನಲ್ಲಿ ಇದೆ. ಈ ದೇಗುಲವು ಎಂಟನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯರಿಂದ ನಿರ‍್ಮಾಣಗೊಂಡಿದ್ದು, ಇದರ ಪಕ್ಕದಲ್ಲೇ ಪಾರ‍್ವತಿ ದೇವಿಯ ದೇಗುಲವೂ ಸಹ ಇದೆ. ಈ ಎರಡೂ ದೇವಸ್ತಾನಗಳು ವಿಬಿನ್ನ ಶೈಲಿಯಲ್ಲಿ ‌ನಿರ‍್ಮಿಸಲ್ಪಟ್ಟಿದ್ದು, ನೋಡಲು ಬಹಳ‌ ವಿಶೇಶವಾಗಿವೆ.

ದೇಗುಲದಿಂದ ನೇರವಾಗಿ ಸಂಡೂರಿಗೆ ಬಂದು ಮದ್ಯಾಹ್ನದ ಊಟವನ್ನು ಮುಗಿಸಿಕೊಂಡು, ನಾರಿ ಹಳ್ಳ ಜಲಾಶಯ ಹಾಗೂ ಅದರ ಸುತ್ತುಮುತ್ತಲಿನ ತಾಣಗಳ ನೋಡಲು ಹೊರಟೆವು. ಅಪರೂಪದ ಸಂಗತಿಯೆಂದರೆ ನಾವು ಪ್ರವಾಸಕ್ಕೆ ಹೋದ ದಿನ ಸಂಡೂರಿನ ಸುತ್ತಮುತ್ತ ತುಂತುರು ಮಳೆ ಬರುತ್ತಿತ್ತು. ಅಲ್ಲದೇ ಬೆಟ್ಟ-ಗುಡ್ಡಗಳೆಲ್ಲ ಮೋಡಗಳಿಂದ ಆವರಿಸಲ್ಪಟ್ಟಿದ್ದವು. ಸ್ವತಹ ಪ್ರಕ್ರುತಿಯೇ ಸುಂದರ ವಾತಾವರಣ ಸ್ರುಶ್ಟಿಸಿದಂತೆ ಇತ್ತು. ಇದು ನಮ್ಮ ಪ್ರವಾಸಕ್ಕೆ‌ ಇನ್ನಿಲ್ಲದ ಮೆರುಗನ್ನು ತಂದಿತ್ತು. ನಾರಿಹಳ್ಳ ಜಲಾಶಯದಲ್ಲಿ ಹೆಚ್ಚು ನೀರು‌ ಇರಲಿಲ್ಲ, ಇದು ನಮಗೆ‌ ನಿರಾಶೆಯನ್ನುಂಟು ಮಾಡಿದರೂ ಅಲ್ಲಿಂದ ಕಾಣುವ ನೋಟ ಸಂತಸ ನೀಡಿತು. ಅಣೆಕಟ್ಟಿನ ಸಮೀಪದಿಂದ ನೋಡಿದಾಗ‌ ಸುತ್ತಲೂ ಕಾಣುವ ಬೆಟ್ಟಗುಡ್ಡಗಳು, ಅವುಗಳನ್ನು ಆವರಿಸಿದ್ದ ಮೋಡ, ಜಲಾಶಯದ ಪಕ್ಕದಲ್ಲೇ ಅದಿರನ್ನು ತುಂಬಿಕೊಂಡು ಹಾದು‌ಹೋದ ಉದ್ದನೆಯ ರೈಲು ಇವು ನಮಗೆ‌ ಕುಶಿಯನ್ನು ತಂದುಕೊಟ್ಟವು. ಆಕರ‍್ಶಣೆಯಲ್ಲಿ ಹಾಗೂ ಪ್ರವಾಸಿಗರ ಮನಸ್ಸನ್ನು ತಣಿಸುವುದರಲ್ಲಿ ಸಂಡೂರು ಯಾವ ಪ್ರವಾಸಿ ತಾಣಕ್ಕೂ ಕಡಿಮೆಯಿಲ್ಲ.

ಹೋಗುವ ‌ಹಾದಿಯುದ್ದಕ್ಕೂ ಹಲವು ಗಣಿಗಳಿವೆ. ಇಂದಿಗೂ ಹಲವು ಕಡೆ ನಡಯುತ್ತಿರುವ ಗಣಿಗಾರಿಕೆಯನ್ನು ನೋಡುತ್ತಾ ಸಾಗಬಹುದು. ಆ ದ್ರುಶ್ಯಗಳನ್ನು ಕಂಡು, ಪ್ರವಾಸಿಗರ ಮೈಮನಸ್ಸು ಯಾತನೆಯಿಂದ ಕಂಪಿಸುವುದಂದೂ ದಿಟ.

(ಚಿತ್ರ ಸೆಲೆ: ಸುನಿಲ್ ಮಲ್ಲೇನಹಳ್ಳಿdeccanchronicle.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: