ತುರುಗಾಹಿ ರಾಮಣ್ಣನ ವಚನದ ಓದು

– ಸಿ.ಪಿ.ನಾಗರಾಜ.

ತುರುಗಾಹಿ ರಾಮಣ್ಣ, Turugahi Ramanna

ಹೆಸರು: ತುರುಗಾಹಿ ರಾಮಣ್ಣ

ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ

ಕಸುಬು: ಊರಿನ ದನಗಳನ್ನು ಮುಂಜಾನೆ ಕೊಂಡೊಯ್ದು ಸಂಜೆಯ ತನಕ ಮೇಯಿಸುತ್ತಿದ್ದು ಮತ್ತೆ ಅವನ್ನು ಅವುಗಳ ಒಡೆಯರ ದೊಡ್ಡಿಗೆ ತಂದು ಕೂಡುವುದು. ಈ ಕಸುಬಿನಿಂದ ಬಂದ ಸಂಪಾದನೆಯಿಂದ ಜೀವನವನ್ನು ನಡೆಸುತ್ತಿದ್ದನು. ( ತುರುಗಾಹಿ=ತುರು+ಕಾಹಿ; ತುರು=ಹಸು/ದನ/ಗೋವು; ಕಾಪು>ಕಾಹು; ಕಾಪು/ಕಾಹು=ಕಾಯುವಿಕೆ/ಪಹರೆ/ಎಚ್ಚರದಿಂದ ಕಾಪಾಡುವುದು; ಕಾಹಿ=ಕಾವಲು ಕಾಯುವವನು;ತುರುಗಾಹಿ=ದನಗಳನ್ನು ಮೇಯಿಸುವವನು ಮತ್ತು ಕಾಪಾಡುವವನು/ದನ ಕಾಯುವವನು )

ದೊರೆತಿರುವ ವಚನಗಳು: 46

ವಚನಗಳ ಅಂಕಿತ ನಾಮ: ಗೋಪತಿನಾಥ ವಿಶ್ವೇಶ್ವರಲಿಂಗ

========================================================================

ಅಯ್ಯಾ ಏನನಹುದೆಂಬೆ
ಏನನಲ್ಲಾ ಎಂಬೆ
ಕಾಯವುಳ್ಳನ್ನಕ್ಕ ಕರ್ಮ ಬಿಡದು
ಜೀವವುಳ್ಳನ್ನಕ್ಕ ಕಾರ್ಪಣ್ಯ ಕೆಡದು
ಆರ ಕೇಳಿ ಆರಿಗೆ ಹೇಳಿಹೆನೆಂದಡೂ
ಭಾವದ ಭ್ರಮೆ ಬಿಡದು
ಮಹಾಸಮುದ್ರವನೀಜುವವನಂತೆ ಕರ ಕಾಲು ಆಡುವನ್ನಕ್ಕ
ಜೀವಭ್ರಮೆ ನಿಂದಲ್ಲಿ ನಿಂದಿತ್ತು
ಭಾವಭ್ರಮೆ ಒಂದನರಿತು ಒಂದನರಿದೆಹೆನೆಂಬನ್ನಕ್ಕ
ಬಂದಿತ್ತು ದಿನ ಅಂಗವ ಹರಿವುದಕ್ಕೆ
ಈ ಸಂದೇಹದ ಸಂದಿಯಲ್ಲಿ ಕೆಡಹದೆ
ನಿಜದಂಗವ ತೋರು ಗೋಪತಿನಾಥ ವಿಶ್ವೇಶ್ವರ ಲಿಂಗ.

‘ಯಾವುದು ಸರಿ-ಯಾವುದು ತಪ್ಪು; ಯಾವುದು ದಿಟ-ಯಾವುದು ಸಟೆ; ಯಾವುದು ನೀತಿ-ಯಾವುದು ಅನೀತಿ’ ಎಂಬುದನ್ನು ಗೆರೆ ಹೊಡೆದಂತೆ ವಿಂಗಡಿಸಿ ನೋಡಿ ತಿಳಿಯಲಾಗದೆ ಜೀವನದ ಉದ್ದಕ್ಕೂ ವ್ಯಕ್ತಿಯು ಕಂಗಾಲಾಗಿ ತೊಳಲಾಡುತ್ತಿರುವುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಅಯ್ಯಾ=ಇತರರನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಸುವ ಪದ; ಏನ್+ಅನ್+ಅಹುದು+ಎಂಬೆ; ಏನ್=ಯಾವುದು; ಅನ್=ಅನ್ನು; ಏನನ್=ಯಾವುದನ್ನು/ಯಾವುದೇ ಒಂದು ಸಂಗತಿಯನ್ನು/ವಿಚಾರವನ್ನು; ಅಹುದು=ನಿಜ/ದಿಟ/ವಾಸ್ತವ/ಸತ್ಯ; ಎಂಬೆ= ಹೇಳುವೆ/ನುಡಿಯುವೆ; ಏನ್+ಅನ್+ಅಲ್ಲಾ; ಅಲ್ಲ=ಇಲ್ಲ/ಆ ರೀತಿಯಲ್ಲಿ ಇಲ್ಲ/ಆ ಬಗೆಯಲ್ಲಿ ಇಲ್ಲ;

ಏನನಹುದೆಂಬೆ ಏನನಲ್ಲಾ ಎಂಬೆ =ಮಾನವ ಸಮುದಾಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಜಾತಿ/ಮತ/ದೇವರುಗಳ ಬಗ್ಗೆ ಹತ್ತಾರು ಬಗೆಯ ನಿಲುವುಗಳು ಮತ್ತು ನೂರಾರು ಬಗೆಯ ಆಚರಣೆಗಳು ಹಾಗೂ ಸಾವಿರಾರು ಬಗೆಯ ಸಾಮಾಜಿಕ ಕಟ್ಟುಪಾಡುಗಳಿವೆ. ಪ್ರತಿಯೊಂದು ಜಾತಿ/ಮತದ ಸಮುದಾಯದವರು ‘ತಮ್ಮ ಜಾತಿ ಮತ್ತೊಂದಕ್ಕಿಂತ ಮೇಲು / ತಮ್ಮ ಮತ ಮತ್ತೊಂದಕ್ಕಿಂತ ಉತ್ತಮ / ತಮ್ಮ ದೇವರು ಮತ್ತೊಂದು ದೇವರಿಗಿಂತ ದೊಡ್ಡವನು’ ಎಂಬ ಗ್ರಹಿಕೆ/ನಂಬಿಕೆಯನ್ನು ಹೊಂದಿದ್ದಾರೆ. ಇಂತಹ ನಿಲುವು/ಆಚರಣೆ/ಕಟ್ಟುಪಾಡು/ಗ್ರಹಿಕೆ/ನಂಬಿಕೆಗಳಲ್ಲಿ ಯಾವುದನ್ನು ಸರಿ/ದಿಟ/ವಾಸ್ತವ ಎಂದು ಒಪ್ಪಿಕೊಳ್ಳಲಿ-ಯಾವುದನ್ನು ನಿರಾಕರಿಸಲಿ;

ಕಾಯ+ಉಳ್ಳ್+ಅನ್ನಕ್ಕ; ಕಾಯ=ಮಯ್/ದೇಹ/ಶರೀರ; ಉಳ್/ಉಳ್ಳ್=ಇರು; ಅನ್ನಕ್ಕ=ತನಕ/ವರೆಗೆ; ಉಳ್ಳನ್ನಕ್ಕ=ಇರುವವರೆಗೆ/ಇರುವ ತನಕ ; ಕರ್ಮ=ಕೆಲಸ/ದುಡಿಮೆ/ಕ್ರಿಯೆ; ಬಿಡು=ತೊರೆ/ತ್ಯಜಿಸು/ಕಳಚಿಕೊಳ್ಳು; ಬಿಡದು=ಬಿಡುವುದಿಲ್ಲ/ತೊರೆಯುವುದಿಲ್ಲ;

ಕಾಯವುಳ್ಳನ್ನಕ್ಕ ಕರ್ಮ ಬಿಡದು=ವ್ಯಕ್ತಿಯು ದೇಹವನ್ನು ಹೊಂದಿರುವ ತನಕ , ಒಂದಲ್ಲ ಒಂದು ಬಗೆಯ ಕೆಲಸ/ದುಡಿಮೆಯಲ್ಲಿ ತೊಡಗಿರುತ್ತಾನೆ;

ಜೀವ+ಉಳ್ಳ್+ಅನ್ನಕ್ಕ; ಜೀವ=ಪ್ರಾಣ/ಉಸಿರು; ಕಾರ್ಪಣ್ಯ=ಬಡತನ/ದರಿದ್ರತನ/ಬಹುಬಗೆಯ ಸಂಕಟ/ವೇದನೆ/ನೋವು; ಕೆಡು=ಅಳಿ/ನಾಶವಾಗು/ಇಲ್ಲವಾಗು/ಕಳೆದುಹೋಗು; ಕೆಡದು=ಕೆಡುವುದಿಲ್ಲ/ಇಲ್ಲವಾಗದು/ಕಳೆದುಹೋಗದು;

ಜೀವವುಳ್ಳನ್ನಕ್ಕ ಕಾರ್ಪಣ್ಯ ಕೆಡದು=ವ್ಯಕ್ತಿಯು ಜೀವಂತವಾಗಿರುವ ತನಕ ಬಹುಬಗೆಯ ನೋವು/ಸಂಕಟ/ವೇದನೆಯು ಇದ್ದೇ ಇರುತ್ತದೆ;

ಆರ್+ಅ; ಆರ್=ಯಾರು; ಆರ=ಯಾರನ್ನು; ಕೇಳಿ=ಇತರರು ಆಡಿದ ಮಾತುಗಳನ್ನು ಆಲಿಸಿ/ವಿಚಾರಿಸಿ/ಪ್ರಶ್ನಿಸಿ; ಆರಿಗೆ=ಯಾರಿಗೆ; ಹೇಳ್+ಇಹೆನ್+ಎಂದಡೂ; ಹೇಳು=ತಿಳಿಸು/ವಿವರಿಸು; ಇಹೆನ್=ಇದ್ದೇನೆ; ಎಂದಡೂ=ಎಂದರೂ; ಭಾವ=ಮನದಲ್ಲಿ ತುಡಿಯುವ ಕೋಪ/ತಾಪ/ಒಲವು/ನಲಿವು/ಹತಾಶೆ/ಆಕ್ರೋಶ ಮುಂತಾದ ಹತ್ತಾರು ಬಗೆಯ ಒಳಮಿಡಿತಗಳು; ಭ್ರಮೆ=ಇಲ್ಲದ್ದನ್ನು ಇದೆಯೆಂಬ/ಇರುವುದನ್ನು ಇಲ್ಲವೆಂಬ ಒಳಮಿಡಿತಗಳಿಂದ ಕೂಡಿರುವ ಮನಸ್ಸು/ತಪ್ಪು ಗ್ರಹಿಕೆ/ಅತಿಯಾದ ಮೋಹ/ಕಲ್ಪಿತ ಸಂಗತಿ; ಭಾವದ ಭ್ರಮೆ/ಭಾವಭ್ರಮೆ=ತನ್ನನ್ನೂ ಒಳಗೊಂಡಂತೆ ಸಹಮಾನವರ ಮತ್ತು ಸಮಾಜದ ಬಗ್ಗೆ ವ್ಯಕ್ತಿಯು ಹೊಂದಿರುವ ನೂರೆಂಟು ಬಗೆಯ ಒಳಮಿಡಿತಗಳು;

ಆರ ಕೇಳಿ ಆರಿಗೆ ಹೇಳಿಹೆನೆಂದಡೂ ಭಾವದ ಭ್ರಮೆ ಬಿಡದು=ಇತರರನ್ನು ಕೇಳಿ/ವಿಚಾರಿಸಿ/ಪ್ರಶ್ನಿಸಿ ತಿಳಿದುಕೊಂಡಿರುವ/ಅರಿತುಕೊಂಡಿರುವ ದಿಟ/ನಿಜ/ವಾಸ್ತವದ ಸಂಗತಿಗಳನ್ನು , ಬೇರೆಯವರಿಗೆ ಮತ್ತೆ ಹೇಳುತ್ತಿದ್ದರೂ ವ್ಯಕ್ತಿಯು ತನ್ನಲ್ಲಿಯೇ ಊಹಿಸಿಕೊಂಡಿರುವ/ಕಲ್ಪಿಸಿಕೊಂಡಿರುವ ಒಳಮಿಡಿತಗಳು ಮಾತ್ರ ಮನದೊಳಗೆ ಇದ್ದೇ ಇರುತ್ತವೆ;

ಮಹಾ+ಸಮುದ್ರ+ಅನ್+ಈಜುವ+ಅವನನ್+ಅಂತೆ; ಮಹಾ=ದೊಡ್ಡದಾಗಿರುವ/ವಿಸ್ತಾರವಾಗಿರುವ; ಸಮುದ್ರ=ಕಡಲು/ಸಾಗರ; ಈಜು=ನೀರಿನಲ್ಲಿ ಕಯ್ ಕಾಲುಗಳನ್ನು ಆಡಿಸುತ್ತ, ನೀರಿನ ಅಲೆಗಳನ್ನು ಸೀಳಿಕೊಂಡು, ನೀರಿನಲ್ಲಿ ಮುಳುಗಿಹೋಗದೆ, ತೇಲುತ್ತಾ ಮುಂದೆ ಮುಂದೆ ಸಾಗುವ ಕಲೆ/ನಿಪುಣತೆ/ಕುಶಲತೆ; ಈಜುವ=ಈಜುತ್ತಿರುವ ; ಅವನನ್=ವ್ಯಕ್ತಿಯನ್ನು; ಅಂತೆ=ಹಾಗೆ/ಆ ರೀತಿ/ಬಗೆ; ಕರ=ಕಯ್/ಹಸ್ತ; ಕಾಲು=ಪಾದ/ಅಡಿ/ಮಂಡಿಯಿಂದ ಕೆಳಗಿನ ಅಂಗ/ನಡೆದಾಡಲು ಬಳಸುವ ಅಂಗ; ಆಡುವ+ಅನ್ನಕ್ಕ; ಆಡು=ಅಲುಗು/ಚಲಿಸು; ಕರ ಕಾಲು ಆಡುವನ್ನಕ್ಕ=ಕಯ್ ಕಾಲುಗಳು ಗಟ್ಟಿಮುಟ್ಟಾಗಿರುವ ತನಕ/ಕಯ್ ಕಾಲುಗಳಲ್ಲಿ ಶಕ್ತಿಯಿರುವ ತನಕ/ನಡೆದಾಡಲು ಕೆಲಸಮಾಡಲು ಕಯ್ ಕಾಲುಗಳಲ್ಲಿ ಕಸುವು ಇರುವ ತನಕ;

ಜೀವಭ್ರಮೆ=ಜೀವವನ್ನು/ಪ್ರಾಣವನ್ನು ಉಳಿಸಿಕೊಳ್ಳಬೇಕೆಂಬ ಕಾತರ/ಆತಂಕ/ತಲ್ಲಣದ ಒಳಮಿಡಿತ; ನಿಂತು=ಒಂದು ಕಡೆ ನಿಲ್ಲುವುದು; ನಿಂದಲ್ಲಿ=ನಿಂತ ಕಡೆಯಲ್ಲಿ/ಜಾಗದಲ್ಲಿ/ಎಡೆಯಲ್ಲಿ; ನಿಂತು+ಇತ್ತು;

ಮಹಾಸಮುದ್ರವನೀಜುವವನಂತೆ ಕರ ಕಾಲು ಆಡುವನ್ನಕ್ಕ ಜೀವಭ್ರಮೆ ನಿಂದಲ್ಲಿ ನಿಂದಿತ್ತು=ದೊಡ್ಡದಾದ ಸಾಗರದಲ್ಲಿ ಈಜುತ್ತಿರುವ ವ್ಯಕ್ತಿಯು ತನ್ನ ಜೀವದ ಉಳಿವಿಗಾಗಿ ಪ್ರತಿಗಳಿಗೆಯಲ್ಲೂ ಕಯ್ ಕಾಲುಗಳನ್ನು ಒಂದೇ ಸಮನೆ ಆಡಿಸುತ್ತಿರುವಂತೆ ಬದುಕಿನ ಉದ್ದಕ್ಕೂ ತನ್ನ ಪ್ರಾಣ/ಜೀವದ ಮೇಲಣ ಮೋಹ/ಕಾತರ/ಆತಂಕ/ತಲ್ಲಣದ ಒಳಮಿಡಿತಗಳು ವ್ಯಕ್ತಿಯಲ್ಲಿ ನೆಲೆಗೊಂಡಿರುತ್ತವೆ;

ಒಂದ್+ಅನ್+ಅರಿತು; ಅರಿ=ತಿಳಿ/ಕಲಿ; ಅರಿತು=ತಿಳಿದುಕೊಂಡು; ಒಂದು+ಅನ್+ಅರಿದೆಹೆನ್+ಎಂಬ+ಅನ್ನಕ್ಕ; ಅರಿದೆಹೆನ್=ತಿಳಿದುಕೊಂಡೆನು/ಅರಿತುಕೊಂಡೆನು; ಎಂಬ=ಎನ್ನುವ; ಎಂಬನ್ನಕ್ಕ=ಎನ್ನುತ್ತಿದ್ದಂತೆಯೇ/ಅಂದುಕೊಳ್ಳುತ್ತಿದ್ದಂತೆಯೇ;

ಬಂದು+ಇತ್ತು; ಬಂದು=ಒದಗು/ಉಂಟಾಗು/ಆಗಮಿಸು; ಅಂಗ=ಮಯ್/ದೇಹ/ಶರೀರ; ಹರಿ=ಕೀಳು/ಕಡಿ/ಕತ್ತರಿಸು/ತೀರು/ಮುಗಿ; ಅಂಗವ ಹರಿವುದಕ್ಕೆ=ದೇಹದೊಳಗಿನ ಜೀವ/ಪ್ರಾಣವನ್ನು ತೆಗೆಯುವುದಕ್ಕೆ;

ಭಾವಭ್ರಮೆ ಒಂದನರಿತು ಒಂದನರಿದೆಹೆನೆಂಬನ್ನಕ್ಕ ಬಂದಿತ್ತು ದಿನ ಅಂಗವ ಹರಿವುದಕ್ಕೆ=ಮನದೊಳಗೆ ತುಡಿಯುವ ನೂರೆಂಟು ಬಗೆಯ ಒಳಮಿಡಿತಗಳಲ್ಲಿ ಯಾವುದು ವಾಸ್ತವ/ದಿಟ/ನಿಜ-ಯಾವುದು ವಾಸ್ತವವಲ್ಲ/ದಿಟವಲ್ಲ/ನಿಜವಲ್ಲ ಎಂಬುದನ್ನು ಅರಿತುಕೊಂಡೆನು/ತಿಳಿದುಕೊಂಡೆನು ಎನ್ನುವ ಹಂತದಲ್ಲಿಯೇ ಒಂದು ದಿನ ದೇಹದಲ್ಲಿನ ಜೀವ ಹೋಗಿ ಸಾವುಂಟಾಗುತ್ತದೆ;

ಸಂದೇಹ=ಅನುಮಾನ/ಸಂಶಯ; ಸಂದಿ+ಅಲ್ಲಿ; ಸಂದಿ=ಬಿರುಕು/ಸೀಳು/ಸಂದು; ಕೆಡಹು=ಕೆಳಕ್ಕೆ ಬೀಳಿಸು/ತಳ್ಳು; ನಿಜದ+ಅಂಗವ; ನಿಜ=ದಿಟ/ಸತ್ಯ/ವಾಸ್ತವ; ಅಂಗ=ರೀತಿ/ಬಗೆ/ಕ್ರಮ; ನಿಜದಂಗ=ಒಂದು ಕಡೆ ನಿಸರ‍್ಗ ಸಹಜವಾದ ಹಸಿವು ಮತ್ತು ಕಾಮ, ಮತ್ತೊಂದು ಕಡೆ ಮಾನವನೇ ಕಟ್ಟಿಕೊಂಡಿರುವ ಸಾಮಾಜಿಕ ಕಟ್ಟುಪಾಡು ಹಾಗೂ ಕಲ್ಪಿಸಿಕೊಂಡಿರುವ ನಂಬಿಕೆಗಳ ನಡುವೆ ವ್ಯಕ್ತಿಯ ಜೀವನ ನಡೆಯುತ್ತಿದೆ ಎಂಬ ವಾಸ್ತವ/ದಿಟ/ಸತ್ಯದ ಅರಿವು;

ತೋರು=ಕಾಣುವಂತೆ ಮಾಡು; ಗೋಪತಿನಾಥ ವಿಶ್ವೇಶ್ವರಲಿಂಗ=ಶಿವ/ಈಶ್ವರ/ದೇವರು/ತುರುಗಾಹಿ ರಾಮಣ್ಣನ ವಚನಗಳ ಅಂಕಿತನಾಮ;

ಈ ಸಂದೇಹದ ಸಂದಿಯಲ್ಲಿ ಕೆಡಹದೆ ನಿಜದಂಗವ ತೋರು=ಇಬ್ಬಗೆಯ ತೊಳಲಾಟದಲ್ಲಿ ಸಿಲುಕಿರುವ ಮನಸ್ಸಿಗೆ ಬದುಕಿನಲ್ಲಿ ಯಾವುದು ದಿಟ/ಸತ್ಯ/ವಾಸ್ತವ ಎಂಬುದನ್ನು ಅರಿತು ಬಾಳುವಂತೆ ಮಾಡು ಎಂದು ದೇವರಲ್ಲಿ ಮೊರೆಯಿಡುವುದನ್ನು ಈ ನುಡಿಗಳು ಸೂಚಿಸುತ್ತಿವೆ.)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Suresh says:

    Good article ???

ಅನಿಸಿಕೆ ಬರೆಯಿರಿ:

%d bloggers like this: