ಅಡುಗೆ: ಗಳಿಗ್ಗಡುಬು ಮತ್ತು ಬೆಲ್ಲದ ಬೇಳೆ

– ಸವಿತಾ.

ಗಳಿಗ್ಗಡುಬು ಮತ್ತು ಬೆಲ್ಲದ ಬೇಳೆ Bellada Bele

ಬೇಕಾಗುವ ಪದಾರ‍್ತಗಳು:

1 ಲೋಟ ಗೋದಿ ಹಿಟ್ಟು
2 ಲೋಟ ಹೆಸರುಬೇಳೆ
1 ಲೋಟ ಬೆಲ್ಲ
4 ಬಾದಾಮಿ
6 ಗೋಡಂಬಿ
10 ಒಣದ್ರಾಕ್ಶಿ
2 ಲವಂಗ
4 ಏಲಕ್ಕಿ
1 ಚಮಚ ಗಸಗಸೆ
1/4 ಚಮಚ ಜಾಯಿಕಾಯಿ ಪುಡಿ
5 ಚಮಚ ತುಪ್ಪ
ಸ್ವಲ್ಪ ಎಣ್ಣೆ

ಮಾಡುವ ಬಗೆ

ಗೋದಿಹಿಟ್ಟಿಗೆ ನೀರನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ತೆಗೆದಿಟ್ಟುಕೊಳ್ಳಿ. ಹೆಸರುಬೇಳೆಗೆ ಒಂದು ಚಮಚ ತುಪ್ಪ ಹಾಕಿ ಹುರಿದು ನಂತರ ಐದು ಲೋಟ ನೀರು ಸೇರಿಸಿ ಕುಕ್ಕರಿನಲ್ಲಿ ಮೂರು ಕೂಗು ಬರುವವರೆಗೆ ಕುದಿಸಿರಿ. ಎರಡು ಚಮಚ ತುಪ್ಪದಲ್ಲಿ ಗೋಡಂಬಿ, ಬಾದಾಮಿ, ಒಣದ್ರಾಕ್ಶಿಗಳನ್ನು ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಬೆಲ್ಲ ಮತ್ತು ಅರ‍್ದ ಲೋಟ ನೀರು ಹಾಕಿ ಬಿಸಿಮಾಡಿ. ಅದಕ್ಕೆ ಮೊದಲೇ ಬೇಯಿಸಿಟ್ಟ ಹೆಸರುಬೇಳೆಯನ್ನು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.

ಏಲಕ್ಕಿ, ಲವಂಗ, ಜಾಯಿಕಾಯಿಯನ್ನು ಒಟ್ಟಿಗೆ ಹಾಕಿ ಹುರಿದು ಪುಡಿಮಾಡಿ ಮಿಶ್ರಣಕ್ಕೆ ಸೇರಿಸಿ. ಬಳಿಕ ಗಸಗಸೆಯನ್ನು ಹುರಿದು ಹಾಕಿ. ಕೊನೆಗೆ ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ಒಣದ್ರಾಕ್ಶಿಗಳನ್ನು ಸೇರಿಸಿದರೆ ರುಚಿಯಾದ ಬೆಲ್ಲದ ಬೇಳೆ ತಯಾರಾಯಿತು.

ಗಳಿಗ್ಗಡುಬು ಮಾಡುವ ಬಗೆ

ಚಪಾತಿಯ ಹದಕ್ಕೆ ಕಲಸಿಟ್ಟ ಗೋದಿ ಹಿಟ್ಟನ್ನು ತೆಗೆದುಕೊಂಡು, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಚಪಾತಿಯ ಅಳತೆಗೆ ಹಿಟ್ಟನ್ನು ಲಟ್ಟಿಸಿ ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ಬಳಿಕ ಸ್ಟೀಲ್ ಜರಡಿಗೆ ಸ್ವಲ್ಪ ಎಣ್ಣೆ ಹಚ್ಚಿ, ಲಟ್ಟಿಸಿದ ಹಿಟ್ಟನ್ನು ಕುದಿಯುವ ನೀರಿನಲ್ಲಿ ಮುಳುಗಿಸಿ ಮೇಲೊಂದು ಮುಚ್ಚಳ ಮುಚ್ಚಿ ಬೇಯಿಸಿ ತೆಗೆಯಿರಿ. (ಇದಕ್ಕೆ ಅಂತಾ ಕಡುಬಿನ ಬುಟ್ಟಿ ಸಿಗುತ್ತದೆ. ಸಿಗದವರು ಸ್ಟೀಲ್ ಜರಡಿ ಇಟ್ಟು ಹೀಗೆ ಮಾಡಬಹುದು.) ಈಗ ರುಚಿಯಾದ ಗಳಿಗ್ಗಡುಬನ್ನು ಬೆಲ್ಲದ ಬೇಳೆ ಜೊತೆ ಸವಿಯಿರಿ. ಇದನ್ನು ಕೆಂಪು ಕಾರದ ಚಟ್ನಿ ಜೊತೆಗೂ ತಿನ್ನಬಹುದು.

(ಚಿತ್ರ ಸೆಲೆ: ಸವಿತಾ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: