ಚಿಗುರಿನೊಂದಿಗೆ ಅರುಳು ಮರುಳು

– ವೆಂಕಟೇಶ ಚಾಗಿ.

ಅಜ್ಜ ಮೊಮ್ಮಗ Grandpa and Grandson

ಸಂಜೆಯ ತಂಪಾದ ಗಾಳಿಯಲ್ಲಿ ವಾಯುವಿಹಾರಕ್ಕಾಗಿ ತೆರಳುವವರು ಹಲವರು. ಅವರಲ್ಲಿ ನಾನೂ ಒಬ್ಬ. ಸಾಯಂಕಾಲದ ತಂಪಾದ ವಾತಾವರಣದಲ್ಲಿ ಹಸಿರು ಗಿಡಗಳ ನಡುವೆ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ಸಾಗುತ್ತಿದ್ದರೆ ಆ ದಿನದ ದಣಿವು ನೀಗಿ, ತನು-ಮನಕ್ಕೆ ಏನೋ ಒಂದು ರೀತಿಯ ನಿರಾಳ ಬಾವ. ಈ ಒಂದು ಅತವಾ ಎರಡು ಗಂಟೆಗಳ ಅವದಿಯಲ್ಲಿ ದೊರೆಯುವ ವಿಶ್ರಾಂತಿ, ಮನಸ್ಸಿಗೆ ಆಹ್ಲಾದಕರ.

ಪ್ರತಿ ದಿನದಂತೆ ಆ ದಿನವೂ ವಾಯುವಿಹಾರಕ್ಕೆ ತೆರಳಿದೆ. ಹಬ್ಬದ ಹಿಂದಿನ ದಿನವಾದ್ದರಿಂದ ಹಲವು ಸ್ನೇಹಿತರು ವಾಯುವಿಹಾರಕ್ಕೆ ಚಕ್ಕರ್ ಹಾಕಿದ್ದರು. ಆ ದಿನ ಒಬ್ಬನೇ ಸಾಗಿದೆ. ಏಕಾಂಗಿಯಾದರೂ ಅರೆಬರೆ ಹಾಡುಗಳನ್ನು ಹಾಡುತ್ತಾ ಮುಂದೆಸಾಗಿದೆ. ಸ್ನೇಹಿತರಿಲ್ಲ ಎನ್ನುವ ಪುಟ್ಟ ಕೊರಗಿದ್ದರೂ ಅದು ಅಂತಹ ಬಾದೆ ತರಲಿಲ್ಲ. ದಾರಿಯಲ್ಲಿ ನಡೆಯುವಾಗ ನನ್ನ ಗಮನ ಸೆಳೆದಿದ್ದು ಒಂದು ಸುಂದರವಾದ ಜೋಡಿ. ಅದು ಅಂತಿಂತ ಜೋಡಿಯಲ್ಲ. ಆ ವಾಯುವಿಹಾರಕ್ಕೆ ಬಂದವರಲ್ಲಿಯೇ ಅಪರೂಪದ ಜೋಡಿ. ಎಪ್ಪತ್ತು ಸಂವತ್ಸರಗಳನ್ನು ಕಂಡ ಅಜ್ಜನೊಂದಿಗೆ ಆರು ವರ‍್ಶದ ಪುಟ್ಟ ಹುಡುಗ ತನ್ನ ತಲೆಯಲ್ಲಿ ಬರುವ ಎಲ್ಲಾ ತರಲೆ ಪ್ರಶ್ನೆಗಳನ್ನು ಕೇಳುತ್ತಾ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಆ ಪುಟ್ಟ ಹುಡುಗನ ಪ್ರಶ್ನೆಗಳು ಅಜ್ಜನಿಗೆ ಉತ್ತರಿಸಲು ಸಾದ್ಯವಾಗದಶ್ಟು ಸೂಕ್ಶ್ಮವಾಗಿರುತ್ತಿದ್ದವು. ಆದರೆ ಅಜ್ಜನ ತಾಳ್ಮೆಯ ಉತ್ತರ ಪುಟ್ಟ ಹುಡುಗನನ್ನು ತ್ರುಪ್ತಿ ಪಡಿಸುತ್ತಿತ್ತು.

ಆಕಾಶ ಮೇಲೆ ಯಾಕಿದೆ? ಗಿಡಮರಗಳು ಹೇಗೆ ಊಟಮಾಡುತ್ತವೆ? ಆಕಾಶದಿಂದ ನೀರನ್ನು ಯಾರು ಸುರಿತಾರೆ? ದೇವರು ಎಲ್ಲಿದ್ದಾನೆ? ಹೀಗೆ ಹಲವಾರು ಪ್ರಶ್ನೆಗಳು ಬಾಣದ ರೀತಿಯಲ್ಲಿ ಬರುತ್ತಿದ್ದರೆ ಅಜ್ಜನ ಉತ್ತರಗಳು ಅಶ್ಟೇ ಸಮಂಜಸವಾಗಿರುತ್ತಿದ್ದವು. ಅಜ್ಜ ಮತ್ತು ಮೊಮ್ಮಗನ ನಡುವಿನ ಸಂಬಾಶಣೆ ಕೆಲವೊಮ್ಮೆ ನನಗೆ ನಗು ತರಿಸುತ್ತಿತ್ತು. ಮಗುವಿನ ಕೆಲವೊಂದು ಪ್ರಶ್ನೆಗಳು ಅಸಮಂಜಸವೆನಿಸಿದರೂ ಮಗುವಿನ ಕುತೂಹಲಕ್ಕೆ ನಾನು ಪರವಶನಾಗಿದ್ದೆನು.

ವಾಯುವಿಹಾರ ಮುಗಿಸಿ ಮನೆಗೆ ಮರಳಿದ ಮೇಲೂ ಅಜ್ಜ ಮತ್ತು ಮೊಮ್ಮಗನ ಆ ಸಂಬಾಶಣೆ ತುಂಬಾನೇ ಕಾಡತೊಡಗಿತು. ಹೌದು, ಮಗು ತಾನು ಬೆಳೆಯುತ್ತಲೇ ತಾನು ಕಾಣುವ ಹಲವಾರು ವಿಚಾರಗಳ ಬಗ್ಗೆ ತನ್ನ ಮನದಲ್ಲಿ ಹುಟ್ಟುವ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಪ್ರಯತ್ನಿಸುತ್ತದೆ. ಮಕ್ಕಳ ಈ ಗುಣ ಮೆಚ್ಚುವಂತಹದು. ಆದರೆ ಹಿರಿಯರಾದ ನಾವು ಮಕ್ಕಳ ಈ ಗುಣವನ್ನು ಹಲವಾರು ಬಾರಿ ಹತ್ತಿಕ್ಕಲು ಪ್ರಯತ್ನಿಸುತ್ತೇವೆ. ಪ್ರಶ್ನೆ ಕೇಳಿದರೆ ಬೈದು ಸುಮ್ಮನಾಗಿಸುತ್ತೇವೆ ಅತವಾ ಹೀಯಾಳಿಸುವಂತಹ ಮಾತುಗಳನ್ನಾಡಿ ಅವರ ಕುತೂಹಲಕ್ಕೆ ತಣ್ಣಿರೆರಚಿಬಿಡುತ್ತೇವೆ. ಮಕ್ಕಳಲ್ಲಿ ಚಿಗುರುವ ಇಂತಹ ಗುಣವನ್ನು ನಾವೇ ಚಿವುಟಿಹಾಕುತ್ತೇವೆ.

ಕೆಲವೊಮ್ಮೆ ಅಸಮಂಜಸವಾಗಿ ಕಂಡುಬಂದರೂ ನಿಜ ಜೀವನದಲ್ಲಿ ಮಕ್ಕಳ ಪ್ರಶ್ನೆಗಳು, ತಾರ‍್ಕಿಕ ಉತ್ತರಗಳು ಸೂಕ್ತವೆನಿಸಿಬಿಡುತ್ತವೆ. ಮಕ್ಕಳೊಂದಿಗೆ ಸಮಯ ಕಳೆದಾಗ ಮಾತ್ರ ಈ ಅನುಬವವನ್ನು ಹೊಂದಲು ಸಾದ್ಯ. ಇದಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ. ಇದಕ್ಕೇ ಇರಬೇಕು ‘ಮಕ್ಕಳೇ ದೇವರು’ ಅಂತ ಹೇಳುವುದು!

(ಚಿತ್ರ ಸೆಲೆ: pixabay)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.