ಡಕ್ಕೆಯ ಬೊಮ್ಮಣ್ಣನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಡಕ್ಕೆಯ ಬೊಮ್ಮಣ್ಣ

ಕಾಲ: ಕ್ರಿ.ಶ.1100

ಕಸುಬು: ಡಕ್ಕೆಯನ್ನು ಬಾರಿಸುವುದು ( ಡಕ್ಕೆ=ತಮಟೆ/ತೊಗಲಿನಿಂದ ಮಾಡಿರುವ ಒಂದು ಬಗೆಯ ವಾದ್ಯ/ಚರ‍್ಮ ವಾದ್ಯ. ಊರ ಬೀದಿಗಳಲ್ಲಿ ದೇವರ ಮೆರವಣಿಗೆಯನ್ನು ಮಾಡುವಾಗ/ಸಾವನ್ನಪ್ಪಿದ ವ್ಯಕ್ತಿಯ ಹೆಣವನ್ನು ಹೊತ್ತು ಮಸಣಕ್ಕೆ ಸಾಗಿಸುವಾಗ ಮತ್ತು ಊರಿನ ಜನರೆಲ್ಲರಿಗೂ ಸುದ್ದಿಯೊಂದನ್ನು ತಿಳಿಸುವಾಗ ತಮಟೆಯನ್ನು ಬಾರಿಸಲಾಗುತ್ತಿತ್ತು.)

ದೊರೆತಿರುವ ವಚನಗಳು: 90

ವಚನಗಳ ಅಂಕಿತ ನಾಮ: ಕಾಲಾಂತಕ ಭೀಮೇಶ್ವರಲಿಂಗ

========================================================================

ತಾನರಿಯದೆ ಮಾಡಿದ ದೋಷಕ್ಕೆ
ತನಗೆ ಅಘೋರವಿಲ್ಲ
ಅದು ಜಗದ ಹುದುಗು
ತಾನರಿದು ಅಲ್ಲ ಅಹುದೆಂದು
ಎಲ್ಲರಿಗೆ ಹೇಳಿ
ಪರಧನದಲ್ಲಿ
ಪರಸತಿಯಲ್ಲಿ
ಅನ್ಯರ ನಿಂದೆಯಲ್ಲಿ
ವ್ರತಾಚಾರ ಭಂಗಿತರಲ್ಲಿ
ಇದನರಿದು ಅನುಸರಣೆಯ ಮಾಡಿದಡೆ
ಕುಂಭೀನರಕದಲ್ಲಿ ಹಿಂಗದಿರ್ಪನು
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸ್ವಪ್ನದಲ್ಲಿ ದೂರಸ್ಥನು.

ನಡೆನುಡಿಗಳಲ್ಲಿ ಯಾವುದು ಒಳ್ಳೆಯದು/ಯಾವುದು ಕೆಟ್ಟದ್ದು ಎಂಬುದನ್ನು ಎಲ್ಲರಿಗೂ ಮನದಟ್ಟಾಗುವಂತೆ ತಾನೇ ಹೇಳುತ್ತಾ, ತಾನು ಮಾತ್ರ ಕೆಟ್ಟ ನಡೆನುಡಿಗಳಲ್ಲಿ ತೊಡಗಿರುವ ವ್ಯಕ್ತಿಯ ಬದುಕು ಆತಂಕ/ತಲ್ಲಣ/ಅಪಮಾನ/ಸಂಕಟ/ಸೋಲು/ನೋವು/ಸಾವಿನಲ್ಲಿ ಕೊನೆಗೊಳ್ಳುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ತಾನ್+ಅರಿಯದೆ; ತಾನ್=ವ್ಯಕ್ತಿಯು ; ಅರಿ=ತಿಳಿ/ಕಲಿ; ಅರಿಯದೆ=ತಿಳಿಯದೆ/ಗೊತ್ತಿಲ್ಲದೆ; ಮಾಡು=ನಡೆದುಕೊಳ್ಳು/ಆಚರಿಸು; ದೋಷ=ತಪ್ಪು/ಕೆಟ್ಟದ್ದು/ಕುಂದು; ತನಗೆ=ವ್ಯಕ್ತಿಗೆ; ಅಘೋರ+ಇಲ್ಲ; ಘೋರ=ಉಗ್ರವಾದುದು/ಬಲವಾದುದು/ಹೆಚ್ಚಿನದು/ಕ್ರೂರವಾದುದು; ಅಘೋರ=ಹೆಚ್ಚಿನದಲ್ಲ/ದೊಡ್ಡದಲ್ಲ/ಕ್ರೂರವಾದುದಲ್ಲ; ಅದು=ಅಂತಹ ನಡವಳಿಕೆ; ಜಗ=ಜಗತ್ತು/ಲೋಕ/ಪ್ರಪಂಚ; ಹುದುಗು=ಅಡಗು/ಒಳಗೊಂಡಿರುವುದು/ಹಾಸುಹೊಕ್ಕಾಗಿರುವುದು/ಕೂಡಿಕೊಂಡಿರುವುದು; ಜಗದ ಹುದುಗು=ಮಾನವ ಸಮುದಾಯದ ಜೀವನದಲ್ಲಿ ಸೇರಿಕೊಂಡಿದೆ/ಅಡಗಿಕೊಂಡಿದೆ/ಹಾಸುಹೊಕ್ಕಾಗಿದೆ;

ತಾನರಿಯದೆ ಮಾಡಿದ ದೋಷಕ್ಕೆ ತನಗೆ ಅಘೋರವಿಲ್ಲ ಅದು ಜಗದ ಹುದುಗು=ವ್ಯಕ್ತಿಯು ತನ್ನ ನಡೆನುಡಿಗಳಿಂದ ಇತರರಿಗೆ/ಸಮಾಜಕ್ಕೆ ಕೇಡು/ಹಾನಿ/ನೋವು/ತೊಂದರೆಯು ಆಗುತ್ತಿದೆ ಎಂಬುದನ್ನು ಅರಿಯದೆ ನಡೆದುಕೊಂಡರೆ ಅದು ಅಂತಹ ದೊಡ್ಡ ತಪ್ಪೇನಲ್ಲ. ಏಕೆಂದರೆ ನಿಸರ‍್ಗ ಸಹಜವಾದ ಹಸಿವು ಮತ್ತು ಕಾಮ ಹಾಗೂ ಮಾನವ ಸಮುದಾಯವೇ ಕಟ್ಟಿಕೊಂಡಿರುವ ಸಾಮಾಜಿಕ ಕಟ್ಟುಪಾಡುಗಳ ನಡುವೆ ಸಿಲುಕಿರುವ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಂದಲ್ಲ ಒಂದು ಬಗೆಯ ತಪ್ಪನ್ನು ಮಾಡುತ್ತಾನೆ. ಈ ರೀತಿ ತಮಗೆ ಅರಿವಿಲ್ಲದೆಯೇ ತಪ್ಪನ್ನು ಮಾಡುವುದು ಎಲ್ಲ ವ್ಯಕ್ತಿಗಳ ಬದುಕಿನ ಲೋಕ ವ್ಯವಹಾರದಲ್ಲಿ/ ಸಾಮಾಜಿಕ ನಡೆನುಡಿಯಲ್ಲಿ ಹಾಸುಹೊಕ್ಕಾಗಿದೆ. ಅಂದರೆ ಜೀವನದಲ್ಲಿ ತಪ್ಪನ್ನು ಮಾಡದಿರುವ ವ್ಯಕ್ತಿಯೇ ಇಲ್ಲ;

ತಾನ್+ಅರಿದು; ಅರಿದು=ತಿಳಿದುಕೊಂಡಿದ್ದು/ಬಲ್ಲವನಾಗಿದ್ದು/ಯಾವುದು ಒಳ್ಳೆಯದು/ಯಾವುದು ಕೆಟ್ಟದ್ದು-ಯಾವುದನ್ನು ಮಾಡಬೇಕು/ಯಾವುದನ್ನು ಮಾಡಬಾರದು ಎಂಬ ಅರಿವನ್ನು ಹೊಂದಿದವನಾಗಿದ್ದು; ಅಲ್ಲ=ಇದು ಒಳ್ಳೆಯದಲ್ಲ/ಇದು ಕೆಟ್ಟುದ್ದು/ಇದನ್ನು ಮಾಡಬಾರದು; ಅಹುದು+ಎಂದು; ಅಹುದು=ಇದು ಸರಿ/ಇದು ಒಳ್ಳೆಯದು/ಇದನ್ನು ಮಾಡಬೇಕು; ಎಲ್ಲರಿಗೆ=ಪ್ರತಿಯೊಬ್ಬರಿಗೂ/ಸಕಲರಿಗೂ; ಹೇಳಿ=ತಿಳಿಸಿ/ವಿವರಿಸಿ/ಮನದಟ್ಟು ಮಾಡಿಸಿ; ಪರಧನ+ಅಲ್ಲಿ; ಪರ=ಬೇರೆ/ಅನ್ಯ/ಇತರ; ಧನ=ಹಣ/ಸಂಪತ್ತು/ಆಸ್ತಿಪಾಸ್ತಿ/ಒಡವೆ ವಸ್ತು; ಪರಧನ=ಬೇರೆಯವರ ಸಂಪತ್ತು/ಒಡವೆ ವಸ್ತು/ಆಸ್ತಿಪಾಸ್ತಿ; ಪರಸತಿ+ಅಲ್ಲಿ; ಸತಿ=ಹೆಂಡತಿ/ಮಡದಿ/ಹೆಂಗಸು; ಪರಸತಿ=ಮತ್ತೊಬ್ಬನ ಮಡದಿಯನ್ನು/ಹೆಂಡತಿಯನ್ನು/ಮತ್ತೊಬ್ಬ ಹೆಂಗಸನ್ನು;

ಅನ್ಯ=ಬೇರೆ/ಇತರ; ನಿಂದೆ+ಅಲ್ಲಿ; ನಿಂದೆ=ತೆಗಳಿಕೆ/ಬಯ್ಯುವಿಕೆ/ಕಡೆಗಣಿಸಿ ಮಾತನಾಡುವುದು/ ವ್ಯಕ್ತಿತ್ವವನ್ನು ಅಲ್ಲಗಳೆಯುವುದು; ವ್ರತ+ಆಚಾರ; ವ್ರತ=ವ್ಯಕ್ತಿಯು ತಾನಾಗಿಯೇ ಕಯ್ಗೊಂಡು ಆಚರಿಸುವ ನಡೆನುಡಿಗಳು/ದೇವರನ್ನು ಒಲಿಸಿಕೊಳ್ಳಲು/ದೇವರ ಕರುಣೆಗೆ ಪಾತ್ರರಾಗಲೆಂದು ದೇಹವನ್ನು ದಂಡಿಸುವ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ನಿಯಮಿತವಾದ ನಡೆನುಡಿಗಳು; ಆಚಾರ=ಕಟ್ಟುಪಾಡು/ಸಂಪ್ರದಾಯ/ಒಳ್ಳೆಯ ನಡತೆ; ವ್ರತಾಚಾರ=ವ್ರತವನ್ನು ಕಟ್ಟುನಿಟ್ಟಾಗಿ ಆಚರಿಸುವುದು; ಭಂಗಿತರು+ಅಲ್ಲಿ; ಭಂಗ=ಹಾಳು/ನಾಶ/ಮುರಿಯುವಿಕೆ/ಕುಂದನ್ನು ಉಂಟುಮಾಡುವುದು; ಭಂಗಿತರು=ಹಾಳು ಮಾಡುವವರು/ನಾಶಪಡಿಸುವವರು/ಮುರಿಯುವವರು; ಇದನ್+ಅರಿದು; ಇದನ್=ಇದನ್ನು; ಇದನರಿದು=ವ್ಯಕ್ತಿಗಳು ಕೆಟ್ಟ ನಡೆನುಡಿಯವರು ಎಂಬುದನ್ನು ಚೆನ್ನಾಗಿ ತಿಳಿದಿದ್ದರೂ/ಅರಿತಿದ್ದರೂ; ಅನುಸರಣೆ=ಹೊಂದಿಕೊಂಡು ಹೋಗುವುದು/ಒಡನಾಡುವುದು/ನಂಟನ್ನು ಬೆಳೆಸುವುದು; ಮಾಡಿದಡೆ=ಮಾಡಿದರೆ;

ಪರಧನದಲ್ಲಿ ಪರಸತಿಯಲ್ಲಿ ನಿಂದೆಯಲ್ಲಿ ವ್ರತಾಚಾರ ಭಂಗಿತರಲ್ಲಿ ಇದನರಿದು ಅನುಸರಣೆಯ ಮಾಡಿದಡೆ=ಇತರರ ಸಂಪತ್ತನ್ನು ವಂಚನೆ/ಮೋಸ/ಕಪಟತನದಿಂದ ದೋಚುವ, ಇತರರ ಮಡದಿಯರೊಡನೆ ಕಾಮದ ನಂಟನ್ನು ಪಡೆಯುವ , ಇತರರನ್ನು ನಿಂದಿಸುವ ಮತ್ತು ಒಳ್ಳೆಯ ನಡೆನುಡಿಗಳನ್ನು ಪಾಲಿಸದೆ ಹಾಳಾಗಿರುವ ವ್ಯಕ್ತಿಗಳ ಕೆಟ್ಟತನವನ್ನು ಚೆನ್ನಾಗಿ ತಿಳಿದಿದ್ದರೂ, ಅಂತಹವರೊಡನೆ ಗೆಳೆತನ/ನಂಟನ್ನು ಬೆಳೆಸಿಕೊಂಡು ಅವರ ಹಾಗೆಯೇ ತಾನೂ ಕೂಡ ಕೆಟ್ಟ ನಡೆನುಡಿಗಳಲ್ಲಿ ತೊಡಗಿದರೆ;

ಕುಂಭೀನರಕ+ಅಲ್ಲಿ; ನರಕ=ಈ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದು ಸಾವನ್ನಪ್ಪಿದ ವ್ಯಕ್ತಿಯು , ಅನಂತರ ತಾನು ಮಾಡಿದ ಕೆಟ್ಟ ಕೆಲಸಗಳಿಗೆ ತಕ್ಕಂತೆ ನಾನಾ ಬಗೆಯ ದಂಡನೆಗಳಿಗೆ ಗುರಿಯಾಗಿ ನರಳುವ ಮತ್ತೊಂದು ಲೋಕದಲ್ಲಿರುವ ಜಾಗ. ಜನರಿಗೆ ಕೇಡನ್ನು ಮಾಡಿದವರು ಸಂಕಟದ ನೆಲೆಯಾದ ನರಕಕ್ಕೆ , ಒಳಿತನ್ನು ಮಾಡಿದವರು ಸ್ವರ‍್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯು ಜನಮನದಲ್ಲಿದೆ; ಕುಂಭೀನರಕ=ಹೆಚ್ಚಿನ ದಂಡನೆಯನ್ನು ನೀಡುವ ಹಾಗೂ ನೋವು/ಸಂಕಟ/ವೇದನೆಯ ನೆಲೆಯಾದ ಒಂದು ನರಕದ ಹೆಸರು; ಹಿಂಗದೆ+ಇರ್ಪನು; ಹಿಂಗು=ತಗ್ಗು/ಕುಸಿ/ಕುಗ್ಗು/ಬಿಡು/ತ್ಯಜಿಸು; ಹಿಂಗದೆ=ಬಿಡದೆ/ತ್ಯಜಿಸದೆ; ಇರ್ಪನು=ಇರುವನು ;

ಕುಂಭೀನರಕದಲ್ಲಿ ಹಿಂಗದಿರ್ಪನು=ನಿಶ್ಚಯವಾಗಿಯೂ ಕುಂಬೀನರಕದಲ್ಲಿ ಬಿದ್ದು ಅತಿ ಹೆಚ್ಚಿನ ಯಾತನೆಗೆ ಒಳಗಾಗಿ ನರಳುವನು/ನರಕಯಾತನೆಯಿಂದ ಪಾರಾಗಲು/ತಪ್ಪಿಸಿಕೊಳ್ಳಲು ಆಗುವುದಿಲ್ಲ;

ಕಾಲ+ಅಂತಕ; ಕಾಲ=ಸಮಯ/ವೇಳೆ; ಅಂತಕ=ಯಮ/ಸಾವಿನ ದೇವತೆ; ಕಾಲಾಂತಕ=ಹುಟ್ಟಿದ ಸಕಲಜೀವಿಗಳ ಪ್ರಾಣವನ್ನು/ಉಸಿರನ್ನು ಒಂದಲ್ಲ ಒಂದು ದಿನ ಕೊಂಡೊಯ್ಯುವ ದೇವತೆಯಾದ ಯಮ. ನೀರು-ಬೆಂಕಿ-ನೆಲ-ಮರಗಿಡ-ಹಣ-ವಿದ್ಯೆ ಎಲ್ಲಕ್ಕೂ ಒಬ್ಬೊಬ್ಬ ದೇವತೆಯನ್ನು ಕನ್ನಡ ಜನಸಮುದಾಯವು ಕಲ್ಪಿಸಿಕೊಂಡಿರುವಂತೆಯೇ ಸಾವಿಗೂ ಯಮನೆಂಬ ಹೆಸರಿನ ದೇವತೆಯನ್ನು ಕಲ್ಪಿಸಿಕೊಂಡಿದೆ; ಭೀಮೇಶ್ವರಲಿಂಗ=ಈಶ್ವರ/ಶಿವ/ದೇವರು; ಕಾಲಾಂತಕ ಭೀಮೇಶ್ವರಲಿಂಗ=ಡಕ್ಕೆಯ ಬೊಮ್ಮಣ್ಣನ ವಚನಗಳ ಅಂಕಿತನಾಮ; ಸ್ವಪ್ನ+ಅಲ್ಲಿ; ಸ್ವಪ್ನ=ಕನಸು/ನಿದ್ರೆಯಲ್ಲಿದ್ದಾಗ ಕಾಣುವ ನೋಟ; ದೂರ=ಎರಡು ವಸ್ತು/ಇಬ್ಬರು ವ್ಯಕ್ತಿಗಳ ನಡುವಣ ಅಂತರ; ದೂರಸ್ಥನು=ದೂರದಲ್ಲಿರುವವನು;

ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸ್ವಪ್ನದಲ್ಲಿ ದೂರಸ್ಥನು=ತಿಳಿದು ತಿಳಿದು ಕೆಟ್ಟ ಸಹವಾಸವನ್ನು ಮಾಡಿ, ನೀಚ ಕೆಲಸಗಳಲ್ಲಿ ತೊಡಗುವ ವ್ಯಕ್ತಿಯು ಎಂದೆಂದೆಗೂ ದೇವರಿಂದ ದೂರವಿರುತ್ತಾನೆ/ಕೆಟ್ಟತನವುಳ್ಳ ವ್ಯಕ್ತಿಗಳು ಕನಸಿನಲ್ಲಿಯೂ ದೇವರ ಬಳಿಸಾರುವುದಕ್ಕೆ ಆಗುವುದಿಲ್ಲ/ವ್ಯಕ್ತಿಯು ಒಳ್ಳೆಯ ನಡೆನುಡಿಗಳಿಂದ ತನಗೆ ಒಳಿತನ್ನು ಮಾಡಿಕೊಳ್ಳುವುದರ ಜತೆಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳನ್ನೇ ದೇವರೆಂದು ನಂಬಿದ್ದ ಶಿವಶರಣಶರಣೆಯರು ಕೆಟ್ಟ ವ್ಯಕ್ತಿಗಳು ದೇವರ ಬಳಿಸಾರುವುದಕ್ಕೆ ಯೋಗ್ಯರಲ್ಲವೆಂಬ ನಿಲುವನ್ನು ಹೊಂದಿದ್ದರು)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: