ನಾರ‍್ವೆಯಲ್ಲಿರುವ ‘ಪ್ಲೋಬೆನೆನ್ ಪನಿಕ್ಯುಲರ್’ ರೈಲು

– ಕೆ.ವಿ.ಶಶಿದರ.

fløibanen funicular railway, ಪ್ಲೋಬೆನೆನ್ ಪನಿಕ್ಯುಲರ್ ರೈಲು

ಬರ‍್ಗೆನ್‍ನಲ್ಲಿರುವ ಪ್ಲೋಬೆನೆನ್ ಪನಿಕ್ಯುಲರ್ ರೈಲು ನಾರ‍್ವೆಯ ಅತ್ಯಂತ ಪ್ರಸಿದ್ದ ಆಕರ‍್ಶಣೆಗಳಲ್ಲಿ ಒಂದಾಗಿದೆ. ಬರ‍್ಗೆನ್ನಿನ ಕೇಂದ್ರ ಸ್ತಾನದಲ್ಲಿರುವ ಇದು, ಮೀನು ಮಾರುಕಟ್ಟೆಯಿಂದ ಕೇವಲ 150 ಮೀಟರ್ ದೂರದಲ್ಲಿದೆ. ಈ ಪನಿಕ್ಯುಲರ್ ರೈಲನ್ನು ಕೇಂದ್ರ ಸ್ತಳದಿಂದ ಜನರನ್ನು ತ್ವರಿತವಾಗಿ ಮೌಂಟ್ ಪ್ಲೋಯನ್‍ಗೆ ಕರೆದೊಯ್ಯಲು ನಿರ‍್ಮಿಸಲಾಗಿದೆ. ಮೌಂಟ್ ಪ್ಲೋಯನ್ ಸಮುದ್ರ ಮಟ್ಟದಿಂದ 320 ಮೀಟರ್ ಎತ್ತರದಲ್ಲಿದೆ. ಇಳಿಜಾರು ಮಾರ‍್ಗದಲ್ಲಿ ಕೆಳಗೆ ಇಳಿಯುವ ಮತ್ತು ಮೇಲ್ಮುುಕವಾಗಿ ಏರುವ ಈ ಪನಿಕ್ಯುಲರ್ ರೈಲಿನ ದ್ರುಶ್ಯವೇ ಸುಂದರ, ಹಾಗಾಗಿಯೇ ಇದು ಪ್ರಸಿದ್ದಿ ಪಡೆದಿರುವುದು.

ಏನಿದು ಪನಿಕ್ಯುಲರ್ ರೈಲು?

ರೈಲುಗಳ ಚಲಿಸಲು ಕಟ್ಟಿರುವ ವ್ಯವಸ್ತೆ ಮತ್ತು ಬಳಕೆಗೆ ಅನುಗುಣವಾಗಿ ವರ‍್ಗೀಕರಿಸಲಾಗುತ್ತದೆ. ಮೆಟ್ರೋ ರೈಲು, ಬುಲೆಟ್ ಟ್ರೈನ್, ಕೇಬಲ್ ಟ್ರೈನ್, ಬೋಟ್ ಟ್ರೈನ್ ಹೀಗೆ ಹಲವು. ಪನಿಕ್ಯುಲರ್ ರೈಲ್ವೆ ಒಂದು ರೀತಿಯ ಕೇಬಲ್ ರೈಲ್ವೆ ಸಾರಿಗೆ ವ್ಯವಸ್ತೆ. ಪನಿಕ್ಯುಲರ್ ರೈಲಿನಲ್ಲಿ ಕಡಿದಾದ ಇಳಿಜಾರಿನಲ್ಲಿ ಹಾಗೂ ಮೇಲ್ಮುಕ ವಾಹನ ಚಾಲನೆಗೆ ಬಳಕೆಯಾಗುವುದು ಕೇಬಲ್.

ಪನಿಕ್ಯುಲರ್ ರೈಲ್ವೆನಲ್ಲಿ ಸಾಮಾನ್ಯವಾಗಿ ಎರಡು ಬೋಗಿಗಳು ಇರುತ್ತವೆ. ಇವರೆಡನ್ನು ಕೇಬಲ್‍ನ ಎರಡು ತುದಿಗೆ ಲಗತ್ತಿಸಿರುತ್ತಾರೆ. ಹೀಗೆ ಲಗತ್ತಿಸಿರುವ ಕೇಬಲ್ಅನ್ನು ಮೇಲಿನ ತುದಿಯಲ್ಲಿ ರಾಟೆಗೆ ಸುತ್ತಲಾಗಿರುತ್ತದೆ. ಒಂದು ಬೋಗಿ ಇಳಿಜಾರಿನಲ್ಲಿ ಇಳಿಯುತ್ತಿದ್ದರೆ ಕೇಬಲ್‌ನ ಇನ್ನೊಂದು ತುದಿಗೆ ಜೋಡಿಸಿರುವ ಮತ್ತೊಂದು ಬೋಗಿ ಮೇಲ್ಮುಕಕ್ಕೆ ಚಲಿಸಲು ವೇಗ ಪಡೆದುಕೊಳ್ಳುತ್ತದೆ. ಕೇಬಲ್‍ನಿಂದಾಗಿ ಬೋಗಿಗಳು ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಮತ್ತೊಂದು ರೀತಿಯಲ್ಲಿ ವಿಶ್ಲೇಶಿಸಿದರೆ ಪನಿಕ್ಯುಲರ್ ರೈಲು ಬೂಮಿಯ ಗುರುತ್ವಾಕರ‍್ಶಣೆ ಶಕ್ತಿಯನ್ನು ಸಂಪೂರ‍್ಣವಾಗಿ ಉಪಯೋಗಿಸಿಕೊಂಡಿದೆ. ಈ ವ್ಯವಸ್ತೆಯಲ್ಲಿ ಎರಡೂ ಬೋಗಿಗಳು ಒಟ್ಟೊಟ್ಟಿಗೇ ಚಲಿಸುತ್ತವೆ. ಒಂದು ಮೇಲೇರುತ್ತಿದ್ದರೆ ಮತ್ತೊಂದು ಕೆಳಗಿಳಿಯುತ್ತಿರುತ್ತದೆ. ಈ ವಿಶಿಶ್ಟತೆ ಬೇರೆ ಬಗೆಯ ಕೇಬಲ್ ರೈಲ್ವೆಗಳಿಂದ ಇದನ್ನು ಪ್ರತ್ಯೇಕಿಸುತ್ತದೆ.

ಇದು 100 ವರುಶಗಳ ಹಿಂದೆ ಶುರುವಾದ ಕೇಬಲ್ ರೈಲು

ಇಂದಿಗೆ ಸುಮಾರು ನೂರು ವರುಶಗಳ ಹಿಂದೆ ಅಂದರೆ 15ನೇ ಜನವರಿ 1918ರಂದು ಪ್ಲೋಬೆನೆನ್‍ನ ಪನಿಕ್ಯುಲರ್ ರೈಲ್ವೆ ಅದಿಕ್ರುತವಾಗಿ ಪ್ರಾರಂಬವಾಯಿತು. ಈ ರೀತಿಯ ಸಾರಿಗೆ ಸಂಪರ‍್ಕವನ್ನು ನಿರ‍್ಮಿಸುವ ಕಲ್ಪನೆ ನಾರ‍್ವೆಯ ಶಾಸಕಾಂಗದ ಸದಸ್ಯ ಜಾನ್ ಲುಂಡ್ 1895ರಶ್ಟು ಮುಂಚೆಯೇ ಮಂಡಿಸಿದ್ದ. ಅದರಂತೆ ಪ್ಲೋಬೆನೆನ್   ಪನಿಕ್ಯುಲರ್ ರೈಲ್ವೆ ನಿರ‍್ಮಾಣ ಕಾರ‍್ಯ 1914ರಲ್ಲಿ ಪ್ರಾರಂಬವಾಗಿ 1918ರಲ್ಲಿ ಪೂರ‍್ಣಗೊಂಡಿತು.

850 ಮೀಟರ್ ದೂರ ಚಲಿಸುವ ಈ ರೈಲು ಮೂರು ನಿಲ್ದಾಣಗಳ ಮೂಲಕ ಹಾದುಹೋಗುತ್ತದೆ

ಪ್ರತಿ ವರ‍್ಶ ಹತ್ತು ಲಕ್ಶಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುವ ಈ ಯೋಜನೆಯ ಶೇಕಡ 44ರಶ್ಟು ಸ್ವಾಮ್ಯ ಬರ‍್ಗೆನ್ ಪುರಸಬೆಯದು. ಉಳಿದದ್ದು ಕಾಸಗಿ ಹಿತಾಸಕ್ತಿಗಳ ಪಾಲಾಗಿದೆ. ಸರಿ ಸುಮಾರು 80 ಜನ ಪ್ರಯಾಣಿಕರಿಗೆ ಸ್ತಳಾವಕಾಶವಿರುವ ಎರಡು ಬೋಗಿಗಳು ಪ್ಲೋಯನ್ ಮತ್ತು ಬರ‍್ಗೆನ್ ಕೇಂದ್ರಗಳ ನಡುವೆ ವರ‍್ಶ ಪೂರ‍್ತಿ ಕೆಲಸ ನಿರ‍್ವಹಿಸುತ್ತಿದೆ. ಈ ಎರಡು ಕೇಂದ್ರಗಳ ನಡುವಿನ ದೂರ 850 ಮೀಟರ್(2789 ಅಡಿ), ಇಳಿಜಾರು ಅತವಾ ಎತ್ತರ 300 ಮೀಟರ್(984ಅಡಿ). ಪ್ಲೋಬೆನೆನ್ ರೈಲು 1000 ಮಿ.ಮೀ. ಗೇಜಿನ ಕಿರಿದಾದ ರೈಲು. ನಮ್ಮಲ್ಲಿದ್ದ ಮೀಟರ್ ಗೇಜ್‍ನಂತೆ. ಪ್ಲೋಯನ್ ಮತ್ತು ಬರ‍್ಗೆನ್ ಕೇಂದ್ರಗಳ ನಡುವೆ ಮೂರು ನಿಲ್ದಾಣಗಳು ಇವೆ. ಪ್ರೋಮ್ಸ್‍ಗೇಟ್, ಪಿಜೆಲ್ವೆನ್ ಮತ್ತು ಸ್ಕನ್ಸ್ಮಿರೆನ್.

ಬೋಗಿಗಳಿಗೆ ಹೆಸರಿಡಲು ಸ್ಪರ‍್ದೆಯೊಂದನ್ನು ನಡೆಸಲಾಗಿತ್ತು

ಕೇಬಲ್‍ನ ಇಕ್ಕೆಗಳಲ್ಲಿ ಲಗತ್ತಿಸಿರುವ ಬೋಗಿಗಳಿಗೆ ಪ್ರತ್ಯೇಕವಾಗಿ ಹೆಸರಿಸಲಾಗಿದೆ ಹಾಗೂ ಅದಕ್ಕೆ ತಕ್ಕಂತೆ ಬಣ್ಣವನ್ನು ಬಳಿಯಲಾಗಿದೆ. ನೀಲಿ ಬಣ್ಣದ ಬೋಗಿ ಬ್ಲೇಮನ್ ಆದರೆ ಕೆಂಪು ಬಣ್ಣದ್ದು ರೊಡ್ಹೆಟ್ಟೆ. ಈ ಬೋಗಿಗಳನ್ನು ಹೆಸರಿಸುವಾಗ ನಾರ‍್ವೆಯ ರಾಜಕೀಯ ನಾಯಕರುಗಳ ಹೆಸರಾಗಲೀ ಅತವಾ ನಗರದ ಪ್ರಮುಕರ ಹೆಸರಾಗಲಿ ಬಳಸಿಲ್ಲ. ಬದಲಾಗಿ ಇದಕ್ಕೊಂದು ಸ್ಪರ‍್ದೆ ಏರ‍್ಪಡಿಸಿ ಜನ ಸಾಮಾನ್ಯರಿಂದ ಸೂಚಿತವಾದ ಹೆಸರುಗಳಲ್ಲಿ ಅತ್ಯುತ್ತಮ ಎನಿಸಿದ್ದನ್ನು ಆಯ್ಕೆ ಮಾಡಿ ನಾಮಕರಣ ಮಾಡಲಾಗಿದೆ.

ಪನಿಕ್ಯುಲರ್ ರೈಲ್ವೆ 850 ಮೀಟರ್ ದೂರವನ್ನು ಕ್ರಮಿಸಲು ತೆಗೆದುಕೊಳ್ಳುವ ಸಮಯ ಅಂದಾಜು 7 ನಿಮಿಶ. ಅದೂ ಪ್ರತಿಯೊಂದು ಸ್ಟೇಶನ್‍ನಲ್ಲಿ ನಿಲುಗಡೆ ಮಾಡಿ. ಸಾಮಾನ್ಯವಾಗಿ ಪ್ರತಿ ಸೆಕೆಂಡಿಗೆ 4-6 ಮೀಟರ್ ವೇಗದಲ್ಲಿ ಚಲಿಸಬಲ್ಲುದು. ಪ್ರಯಾಣಿಕರ ದಟ್ಟಣೆ ಹೆಚ್ಚಾದಲ್ಲಿ ಗರಿಶ್ಟ ಮಿತಿ ಪ್ರತಿ ಸೆಕೆಂಡಿಗೆ 6 ಮೀಟರ್ ವೇಗದಲ್ಲಿ ಚಾಲನೆ ಮಾಡಿ ಗಂಟೆಗೆ ಎಂಟಕ್ಕಿಂತ ಹೆಚ್ಚು ಸಲ ರೈಲು ಹೊರಡುವಂತೆ ಅವಕಾಶ ಮಾಡಿಕೊಡಲಾಗುತ್ತದೆ.

ಪ್ರವಾಸಿಗರ ಮೆಚ್ಚಿನ ಪರ‍್ವತ ತಾಣ ಪ್ಲೋಯನ್

ನಾರ‍್ವೆ ರಾಶ್ಟ್ರದಲ್ಲೇ ಪ್ಲೋಯನ್ ಒಂದು ಅತ್ಯುತ್ತಮ ಪಿಕ್‍ನಿಕ್ ಕೇಂದ್ರ, ಪ್ರಸಿದ್ದ ಪ್ರವಾಸಿಗರ ತಾಣ. ಈ ಪರ‍್ವತದ ಮೇಲೆ ನಿಂತು ಬರ‍್ಗೆನ್ ನಗರದ ವಿಹಂಗಮ ನೋಟ ಸವಿಯಬಹುದು. ಪ್ರವಾಸಿಗರ ದಣಿವನ್ನು ತಣಿಸಲು ಪರ‍್ವತದ ಮೇಲೆ ರೆಸ್ಟೋರೆಂಟ್, ಸ್ಮಾರಕಗಳ ಅಂಗಡಿ, ಕೆಪೆ ಸಹ ಇವೆ.

(ಮಾಹಿತಿ ಮತ್ತು ಚಿತ್ರ ಸೆಲೆ: nevereverseenbefore.blogspot.inwikipedia.orgfloyen.no, expedia.comwikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: