ದೆಹಲಿಯ ಕೆಂಪುಕೋಟೆಯ ಬಳಿ ಹಕ್ಕಿಗಳಿಗೊಂದು ಆಸ್ಪತ್ರೆ

– ಸುಂದರ್ ರಾಜ್

ಹಕ್ಕಿಗಳ ಆಸ್ಪತ್ರೆ, avian hospital

ಜೈನರು ಅಹಿಂಸಾಪ್ರಿಯರೂ, ಶಾಂತಿಪ್ರಿಯರೂ ಆಗಿರುವಂತೆ, ಪ್ರಾಣೆದಯೆ ಉಳ್ಳವರೂ ಆಗಿದ್ದಾರೆ. ಶ್ರೀ ದಿಗಂಬರ ಜೈನ ಪಂಚಾಯತ್ ರವರ ಪರಿಶ್ರಮದಿಂದ ಸ್ತಾಪನೆಯಾದ ಪಕ್ಶಿ ಆಸ್ಪತ್ರೆ ದೆಹಲಿಯ ಚಾಂದನಿ ಚೌಕದಲ್ಲಿ ಕೆಂಪುಕೋಟೆಯ ಬಳಿ ಇದೆ. ಇಲ್ಲಿನ ವಿಶೇಶವೆಂದರೆ ಇಲ್ಲಿ ಸಾಮಾನ್ಯ ಆಸ್ಪತ್ರೆಗಳಂತೆ ಹೊರರೋಗಿ ವಿಬಾಗ, ವಾರ‍್ಡ್‍ಗಳು, ಶಸ್ತ್ರಚಿಕತ್ಸಾ ಕೊಟಡಿಗಳಿವೆ. ಇಲ್ಲಿ ಪ್ರತಿನಿತ್ಯ ನೂರಾರು ಹಕ್ಕಿಗಳಿಗೆ ಸಮಾನವಾಗಿ ಶುಶ್ರೂಶೆ ನಡೆಯುತ್ತಿರುತ್ತದೆ.

ಇದೊಂದು ಉಚಿತ ಆಸ್ಪತ್ರೆ

1930 ರಲ್ಲಿ ಸ್ತಾಪನೆಯಾದ ಈ ಆಸ್ಪತ್ರೆಯಲ್ಲೀಗ 500ಕ್ಕೂ ಹೆಚ್ಚು ಪಕ್ಶಿಗಳು ಒಳರೋಗಿಗಳಾಗಿ ಸೇರಿ ಚಿಕಿತ್ಸೆ ಪಡೆಯುತ್ತಿವೆ. ಅಂಗವಿಕಲ ಮತ್ತು ಮುದಿ ಪಕ್ಶಿಗಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ಸಾಮಾನ್ಯವಾಗಿ ಒಳರೋಗಿಯಾಗಿ ಸೇರಿದ ಹಕ್ಕಿ ಗುಣಹೊಂದಿದ  ಮೇಲೆ ಸ್ವತಂತ್ರವಾಗಿ ಹಾರಿಬಿಡಲಾಗುವುದು.  ಈ ಆಸ್ಪತ್ರೆಯಲ್ಲಿ ಯಾವುದಾದರೂ ಪಕ್ಶಿ ಮರಣಕ್ಕೀಡಾದರೆ ಹಕ್ಕಿಗಳ ಆಸ್ಪತ್ರೆ, avian hospitalಯೋಗ್ಯ ಸಂಸ್ಕಾರ ಕೂಡ ಮಾಡಲಾಗುವುದು. ಈ ಪಕ್ಶಿಗಳ ಆಸ್ಪತ್ರೆ ದಿನದ 24 ಗಂಟೆಯೂ ತೆರೆದಿರುತ್ತದೆ. ಇದೊಂದು ಉಚಿತ ಆಸ್ಪತ್ರೆಯಾಗಿದ್ದು, ನೌಕರರ ಸಂಬಳ, ಪಕ್ಶಿಗಳಿಗೆ ಆಹಾರ, ಔಶದಿ ಇವಕ್ಕೆಲ್ಲಾ ದೇಣಿಗೆಯ ಮೇಲೆಯೇ ಅವಲಂಬಿಸಲಾಗಿದೆ.

ಹಕ್ಕಿಗಳಿಗಿಲ್ಲಿ ಹೊಟ್ಟೆ ತುಂಬಾ ಊಟ

ಇದು ಪಕ್ಶಿಗಳಿಗಾಗಿಯೇ ಸ್ತಾಪಿತವಾದ ವಿಶ್ವದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಆಸ್ಪತ್ರೆಯ ಕಟ್ಟಡದ ಮೇಲೆ ಇಡೀ ಟೆರೇಸಿನ ಮೇಲೆ ಅಕ್ಕಿ, ಜೋಳ, ಗೋದಿ, ಸಜ್ಜೆ, ನವಣೆ, ಕಡಲೆ ಇವುಗಳನ್ನು ದಾರಾಳವಾಗಿ ಚೆಲ್ಲಲಾಗಿದೆ. ಇಲ್ಲಿಗೆ ಯಾವ ಹಕ್ಕಿಗಳು ಬೇಕಾದರೂ ಬಂದು, ಹೊಟ್ಟೆತುಂಬಾ ತಿನ್ನಲು ಅವಕಾಶ ಕೂಡ ಕಲ್ಪಿಸಿಕೊಡಲಾಗಿದೆ. ಅಲ್ಲೊಂದು ತಿಳಿನೀರ ಕೊಳವನ್ನೂ ನಿರ‍್ಮಿಸಲಾಗಿದೆ.

ಹಕ್ಕಿಗಳ ನೆಂಟರ ಮನೆ

ಇದೊಂದು ಹಕ್ಕಿಗಳ ನೆಂಟರ ಮನೆ ಎನ್ನಬಹುದು. ಇಲ್ಲಿಗೆ ಆರೋಗ್ಯವಂತ ಪಕ್ಶಿಗಳ ಜೊತೆ ವಯಸ್ಸಾದ ಪಕ್ಶಿಗಳು, ಅಂಗವಿಕಲ ಪಕ್ಶಿಗಳು ಮತ್ತು ರೆಕ್ಕೆ ಕಳೆದುಕೊಂಡ, ನಿತ್ರಾಣವಾದ ಹಕ್ಕಿಗಳಿಗೂ ಕೂಡ ನೆಲೆ ಒದಗಿಸಿಕೊಟ್ಟಿರುವುದರಿಂದ ಇದೊಂದು ಹಕ್ಕಿಗಳ ಮತ್ತು ಅಂಗವಿಕಲ ಹಕ್ಕಿಗಳ ಆಶ್ರಯ ತಾಣವಾಗಿ ಸಹ ರೂಪುಗೊಂಡಿದೆ. ಇಲ್ಲಿನ ಸಿಬ್ಬಂದಿ ಹಕ್ಕಿಗಳ ಬಗ್ಗೆ ಮಮಕಾರ ಹೊಂದಿರುವವರೇ ಆಗಿದ್ದಾರೆ. ಒಟ್ಟಿನಲ್ಲಿ ಮೂಕಪಕ್ಶಿಗಳನ್ನೂ ಪ್ರೀತಿಯಿಂದ ಆದರಿಸುವ, ತಾಳ್ಮೆಯಿಂದ ಆರೈಕೆ ಮಾಡುವ ಸಜ್ಜನಿಕೆ ಮತ್ತು ಹ್ರುದಯವಂತಿಕೆಯನ್ನಿಲ್ಲಿ ಕಾಣಬಹುದಾಗಿದೆ.

( ಚಿತ್ರ ಸೆಲೆ: animalliberationfront.comcaravanmagazine.in )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಉತ್ತಮ ಲೇಖನ. ಮೂಕ ಪ್ರಾಣಿಯ ರಕ್ಷಣೆ ನಮ್ಮ ಕರ್ತವ್ಯ. ಅದರಲ್ಲೂ ಪಕ್ಷಿಗಳ ಆಸ್ಪತ್ರೆ ನಿಜಕ್ಕೂ ಮಾದರಿ. ಧನ್ಯವಾದಗಳು ಸಾರ್

ಅನಿಸಿಕೆ ಬರೆಯಿರಿ:

%d bloggers like this: