ಮುದ್ದು ಪಾಂಡಾ ಎಲ್ಲರಿಗೂ ಮೆಚ್ಚು!

– ನಾಗರಾಜ್ ಬದ್ರಾ.

ಪಾಂಡಾ, Panda

ಈ ನೆಲದ ಮೇಲೆ ಹಲವಾರು ಜೀವಿಗಳು ಬದುಕುತ್ತಿದ್ದು, ಪ್ರತಿಯೊಂದು ಜೀವಿಯೂ ಕೂಡ ತನ್ನದೇ ಆದ ವಿಶೇಶತೆಗಳನ್ನು ಹೊಂದಿದೆ. ಅಂತಹುದೇ ಒಂದು ವಿಶೇಶ ಪ್ರಾಣಿ ಜಯಂಟ್ ಪಾಂಡಾ (Giant Panda).

ನೋಡಲು ಕರಡಿಯ ಹಾಗೆ!

ಪಾಂಡಾಗಳು ಮೈಮಾಟ ಮತ್ತು ಆಕಾರದಲ್ಲಿ ಕರಡಿಯನ್ನು ಹೋಲುತ್ತವೆ. ಇವು ಕೂಡ ಕರಡಿಗಳಂತೆ ಮೈ ಮೇಲೆ ದಟ್ಟವಾದ ವಿಶೇಶ ಕೂದಲನ್ನು ಹೊಂದಿದ್ದು, ತಂಪಾದ ಪರಿಸರದಲ್ಲಿ ತಂಡಿಯಾಗದಂತೆ ಹಾಗೂ ನೀರಿನಲ್ಲಿ ಇವುಗಳ ಮೈ ಒದ್ದೆಯಾಗದಂತೆ ಈ ಕೂದಲುಗಳು ತಡೆಯುತ್ತವೆ. ಪಾಂಡಾಗಳ ಮೈಮಾಟದಲ್ಲಿ ಕಂಡುಬರುವ ಒಂದು ವಿಶೇಶತೆ ಅಂದರೆ ಕಪ್ಪು ಬಣ್ಣದ ಕೂದಲಿನ ತೇಪೆಗಳು. ಪಾಂಡಾಗಳ ಕಣ್ಣಿನ ಸುತ್ತ, ಮೂತಿ, ಕಾಲು, ತೋಳು, ಬುಜ, ಕಿವಿ ಮುಂತಾದ ಬಾಗಗಳಲ್ಲಿ ಕಪ್ಪು ಬಣ್ಣದ ಕೂದಲಿನ ತೇಪೆಗಳು ಕಂಡುಬಂದರೆ, ಅವುಗಳ ಮೈಯ ಉಳಿದ ಬಾಗವು ಬಿಳಿ ಬಣ್ಣದ ಕೂದಲಿನಿಂದ ಕೂಡಿರುತ್ತದೆ.

ಇನ್ನು ಇವುಗಳ ಹಲ್ಲುಗಳು, ಗಾತ್ರದಲ್ಲಿ ಮನುಶ್ಯನ ಹಲ್ಲುಗಳಿಗಿಂತ ಸುಮಾರು ಏಳು ಪಟ್ಟು ದೊಡ್ಡದಾಗಿ ಹಾಗೂ ಗಟ್ಟಿಯಾಗಿರುತ್ತವೆ. ಕಾಲುಗಳಿನ ಪಂಜಗಳು ವಿಶೇಶವಾದ ರಚನೆಯನ್ನು ಹೊಂದಿದ್ದು, ಮರ ಗಿಡಗಳನ್ನು ಹತ್ತಲು ಪಾಂಡಾಗಳಿಗೆ ನೆರವಾಗುತ್ತವೆ. ಸಾಮಾನ್ಯವಾಗಿ ಪಾಂಡಾಗಳು ಸುಮಾರು 120 ರಿಂದ 180 ಸೆ ಮೀ ಯಶ್ಟು ಉದ್ದ ಹಾಗೂ 125 ರಿಂದ 150 ಕೆಜಿ  ತೂಕವನ್ನು ಹೊಂದಿರುತ್ತವೆ.

ಇವು ಹೆಚ್ಚಾಗಿ ಎಲ್ಲಿ ಕಂಡುಬರುತ್ತವೆ?

ಪಾಂಡಾಗಳು ಚೀನಾ ದೇಶದ ಕೆಲವು ಬೆಟ್ಟಗಳಲ್ಲಿ ಕಂಡುಬರುತ್ತವೆ. ಅದರಲ್ಲಿ ಪ್ರಮುಕವಾಗಿ ಸಿಚುವಾನ್ (Sichuan) ಹಾಗೂ ಅದರ ನೆರೆಯ ಶಾನ್-ಶಿ ಮತ್ತು ಗ್ಯಾನ್ಸು (Shaanxi and Gansu) ಬೆಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ವಿಶೇಶವಾಗಿ ಚೀನಾದ ಕೆಲವು ಪ್ರದೇಶಗಳಲ್ಲಿ ಮಾತ್ರ ಕಂಡುಬರುವುದರಿಂದ ಎಣಿಕೆಯಲ್ಲಿ ತುಂಬಾ ಕಡಿಮೆ ಇವೆ. 1980 ರ ದಶಕದಲ್ಲಿ ಪಾಂಡಾಗಳ ಕುರಿತು ಚೀನಾದಲ್ಲಿ ಒಂದು ಸರ‍್ವೆ ಮಾಡಲಾಯಿತು. ಅದರ ಪ್ರಕಾರ ಒಟ್ಟು 1,114 ಪಾಂಡಾಗಳಿವೆ ಎಂದು ತಿಳಿದುಬಂತು. ಇತ್ತೀಚಿಗೆ ಚೀನಾ ಸರ‍್ಕಾರವು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಪಾಂಡಾಗಳ ಒಟ್ಟು ಎಣಿಕೆ 1864 ಎಂದು ತಿಳಿದುಬಂದಿದೆ.ಪಾಂಡಾ, Panda

ಇವು ತಿನ್ನುವುದರಲ್ಲಿ ಬಕಾಸುರನ ನೆಂಟರು!

ಬಿದಿರು ಇವುಗಳಿಗೆ ತುಂಬಾ ಇಶ್ಟವಾದ ತಿಂಡಿ. ಸಾಮಾನ್ಯವಾಗಿ ಪಾಂಡಾಗಳ ದಿನನಿತ್ಯದ ಆಹಾರವು ಗಿಡ ಮರಗಳ ಎಲೆ, ತುಂಬು (stem) ಹಾಗೂ ಬಗೆಬಗೆಯ ಬಿದಿರುಗಳನ್ನು ಒಳಗೊಂಡಿರುತ್ತದೆ. ಬಿದಿರಿನಲ್ಲಿ ಮೈಯ ಒಳ್ಳೆಯ ಆರೈಕೆಗೆ ಬೇಕಾಗುವ ಪೌಶ್ಟಿಕಾಂಶಗಳು ಕಡಿಮೆ ಇರುವುದರಿಂದ, ಅವು ತಮ್ಮ ಶಕ್ತಿಯ ಅಗತ್ಯತೆಗಳನ್ನು ಪೂರೈಸಲು ಪ್ರತಿದಿನ 12-38 ಕೆ ಜಿ ಯಶ್ಟು ಬಿದಿರನ್ನು ತಿನ್ನುತ್ತವೆ ಎಂದು ಹೇಳಲಾಗುತ್ತದೆ. ಪಾಂಡಾಗಳು ಕೇವಲ 40 ಸೆಕೆಂಡುಗಳಲ್ಲಿ ಒಂದು ಬಿದಿರಿನ ಸಿಪ್ಪೆ ಸುಲಿದು ಚಿಗುರನ್ನು ತಿನ್ನಬಲ್ಲವು. ಇವು ಸಸ್ಯಾಹಾರಿಯಾಗಿದ್ದರೂ, ಕೆಲವೊಮ್ಮೆ ಪಿಕಾಗಳನ್ನು (pika) ಹಾಗೂ ಸಣ್ಣ ಇಲಿಗಳನ್ನು ಬೇಟೆಯಾಡುತ್ತವೆ.

ಪಾಂಡಾ ಶಾಂತಿಯ ಸಂಕೇತ

ಪಾಂಡಾವನ್ನು ಶತಮಾನಗಳಿಂದಲೂ ಚೀನಾದಲ್ಲಿ ಶಾಂತಿ ಹಾಗೂ ಸ್ನೇಹದ ಸಂಕೇತವನ್ನಾಗಿ ಬಿಂಬಿಸಲಾಗಿದೆ. ಇವುಗಳದ್ದು ಆಕ್ರಮಣಕಾರಿ ಸ್ವಬಾವವಲ್ಲ, ಸಾಮಾನ್ಯವಾಗಿ ತಾನಾಗಿಯೇ ಇತರ ಪ್ರಾಣಿಗಳ ಮೇಲೆ ಆಕ್ರಮಣ ಮಾಡುವುದಿಲ್ಲ. ಈ ನಡವಳಿಕೆಯೇ ಪಾಂಡಾವು ಶಾಂತಿಯ ಸಂಕೇತವಾಗಿ ರೂಪುಗೊಳ್ಳಲು ಪ್ರಮುಕ ಕಾರಣಗವಾಗಿದೆ ಎಂದು ಹೇಳಲಾಗುತ್ತದೆ. ಹಿಂದೆ, ದೊಡ್ಡ ದೊಡ್ಡ ಕಾಳಗವನ್ನು ಕೊನೆಗೊಳಿಸಲು ಪಾಂಡಾ ಚಿತ್ರವಿರುವ ಬಾವುಟಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

ಪಾಂಡಾಗಳ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು
  • ಇವು ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಇಡುವುದರಿಂದ, ವೇಗವಾಗಿ ಓಡುವುದಿಲ್ಲ.
  • ಗಂಡು ಪಾಂಡಾ ಮರಿಯು ದೊಡ್ಡದಾಗಲು 5 ವರುಶಗಳನ್ನು ತೆಗೆದುಕೊಂಡರೆ, ಹೆಣ್ಣು ಪಾಂಡಾ ಮರಿ 7 ವರುಶಗಳನ್ನು ತೆಗೆದುಕೊಳ್ಳುತ್ತದೆ.
  • ಪಾಂಡಾಗಳು 42 ಹಲ್ಲುಗಳನ್ನು ಹೊಂದಿದ್ದು, ನಮ್ಮಂತೆ ಇವುಗಳಿಗೂ ಚಿಕ್ಕ ವಯಸ್ಸಿನಲ್ಲಿನ ಹಲ್ಲುಗಳು ಬಿದ್ದು ಹೋಗಿ, ಮತ್ತೆ ಹೊಸ ಹಲ್ಲುಗಳು ಬರುತ್ತವೆ.
  • ಅಂತರರಾಶ್ಟ್ರೀಯ ಸಂರಕ್ಶಣಾ ಸಂಸ್ತೆ ವರ‍್ಲ್ಡ್ ವೈಡ್ ಪಂಡ್ ಪಾರ್ ನೇಚರ್ (World Wide Fund for Nature – WWF) ಸುಮಾರು ವರ‍್ಶಗಳಿಂದ ಪಾಂಡಾವನ್ನು ತನ್ನ ಗುರುತನ್ನಾಗಿಸಿ ಕೊಂಡಿದೆ.
  • ಇವು ತುಂಬಾ ಸೋಮಾರಿ ಸ್ವಬಾವದಾಗಿದ್ದು, ದಿನದ ಹೆಚ್ಚಿನ ಸಮಯವನ್ನು ತಿನ್ನುವುದು ಹಾಗೂ ಮಲಗುವುದರಲ್ಲಿಯೇ ಕಳೆಯುತ್ತವೆ. ಆದರೆ ಚಳಿಗಾಲದಲ್ಲಿ ತುಂಬಾ ಕಡಿಮೆ ನಿದ್ದೆ ಮಾಡುತ್ತವೆ.
  • ಇವು ನೋಡಲು ತುಂಬಾ ಮುದ್ದಾಗಿ ಕಾಣಿಸುವುದರಿಂದ ಹೆಚ್ಚಿನ ಮಂದಿಗೆ ಇಶ್ಟವಾಗುತ್ತವೆ. ಮಾರುಕಟ್ಟೆಯಲ್ಲಿನ “ಟೆಡ್ಡಿ ಬೇರ್ (teddy bear)” ರೂಪದ ಬೊಂಬೆಗಳು ಇವುಗಳನ್ನು ಇನ್ನಶ್ಟು ಜನಪ್ರಿಯಗೊಳಿಸಿವೆ.
  • ಸಾಮಾನ್ಯವಾಗಿ ಇವು ಬಿದಿರು ಗಿಡಗಳಲ್ಲಿನ ಬೀಜಗಳನ್ನು ಬೇರೆ ಕಡೆಗೂ ಹರಡುವುದರಿಂದ ಬಿದಿರಿನ ಕಾಡುಗಳ ಬೆಳವಣಿಗೆಯಲ್ಲಿ ಮುಕ್ಯ ಪಾತ್ರವಹಿಸುತ್ತವೆ.
  • ಪಾಂಡಾಗಳು ಕಾಡಿನಲ್ಲಿ ಸಾಮಾನ್ಯವಾಗಿ 14 ರಿಂದ 20 ವರುಶಗಳ ಕಾಲ ಬದುಕಿದರೆ, ಕಾಡಿನ ಹೊರಗೆ ಅಂದರೆ, ಜೂ ಮುಂತಾದ ಜಾಗಗಳಲ್ಲಿ ಸುಮಾರು 30 ವರುಶ ಬದುಕುತ್ತವೆ ಎಂದು ಹೇಳಲಾಗುತ್ತದೆ.
  • ಚೀನಾದಲ್ಲಿ ಪಾಂಡಾಗಳಿಗೆ ಒಂದು ವಿಶೇಶವಾದ ಸ್ತಾನವಿದ್ದು, ಅಲ್ಲಿನ ಸರಕಾರ ಇವುಗಳನ್ನು ರಾಶ್ಟ್ರೀಯ ಸಂಪತ್ತು ಎಂದು ಗೋಶಿಸಿದೆ. 1960 ರ ದಶಕದಲ್ಲಿ ಮೊಟ್ಟ ಮೊದಲ ಬಾರಿಗೆ ಚೀನಾ ಸರಕಾರವು ಪಾಂಡಾಗಳನ್ನು ಕೊಲ್ಲುವುದು ಕಾನೂನುಬಾಹಿರವಾದ್ದದು ಎಂಬ ನಿಯಮವನ್ನು ಜಾರಿಗೆ ತಂದಿತು. ಆದರೆ ಅದು ಅಶ್ಟೊಂದು ಕಟ್ಟುನಿಟ್ಟಾಗಿ ಜಾರಿಗೆ ಬರಲಿಲ್ಲ. ಇಂದು ಅಲ್ಲಿ ಪಾಂಡಾಗಳ ಕೊಲೆಯ ಶಿಕ್ಶೆಯ ಪ್ರಮಾಣ 10-20 ವರ‍್ಶಗಳ ಜೈಲುವಾಸವಾಗಿದೆ.
  • 20 ನೇ ಶತಮಾನದಲ್ಲಿ ಇವು ಜಗತ್ತಿನ ವಿವಿದ ಬಾಗಗಳಿಗೆ ಪರಿಚಯಿಸಲ್ಪಟ್ವವು. 1936 ರಲ್ಲಿ ಸು-ಲಿನ್ ಎಂಬ ಹೆಸರಿನ ಪಾಂಡಾವನ್ನು ಚೀನಾದಿಂದ ಶಿಕಾಗೋದ ಬ್ರೂಕ್ ಪೀಲ್ಡ್ ಉಸುರಿಮನೆಗೆ (Brookfield Zoo) ಸಾಗಿಸಲಾಯಿತು. ಇದು ಚೀನಾ ದೇಶದ ಹೊರಗಡೆ ಕಾಣಿಸಿಕೊಂಡ ಮೊದಲ ಪಾಂಡಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

( ಮಾಹಿತಿ ಸೆಲೆ: wikipediagiantpandasbi3u.weebly.com, panda.orgfactretriever.comthedailychina.org )

( ಚಿತ್ರ ಸೆಲೆ: wikipedia, kungfupanda.wikia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: