ಬೊರ‍್ಯೋಂಗ್ ಮಣ್ಣಿನ ಉತ್ಸವ

– ಕೆ.ವಿ.ಶಶಿದರ.
ಮಣ್ಣಿನ ಉತ್ಸವ Mud festivalಇದೇ ಜುಲೈ 21ರಿಂದ 30ರವರೆಗೆ ಸೌತ್ ಕೊರಿಯಾದಲ್ಲಿ ಬೊರ‍್ಯೋಂಗ್ ಮಣ್ಣಿನ ಉತ್ಸವ ಡೇಚಿಯೋನ್‍ನ ಬೀಚ್ ಪ್ರದೇಶದಲ್ಲಿ ನಡೆಯಲಿದೆ. ಮಿಲಿಯಗಟ್ಟಲೆ ಜನ ಪ್ರಪಂಚದ ನಾನಾ ಕಡೆಗಳಿಂದ ಈ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಲ್ಲಿಗೆ ಬರುತ್ತಾರೆ. ಇಶ್ಟೊಂದು ಜನ ಮಣ್ಣಿನ ಉತ್ಸವಕ್ಕೆ ಸೇರುವುದಾದರು ಏತಕ್ಕಾಗಿ? ಅಂತಹುದೇನಿದೆ ಇದರಲ್ಲಿ?

ಡೇಚಿಯೋನ್ ಬೀಚ್ ದಕ್ಶಿಣ ಕೊರಿಯಾದ ಪಶ್ಚಿಮ ಕರಾವಳಿಯಲ್ಲಿನ ಅತಿ ದೋಡ್ಡ ಬೀಚ್. ತಿಳಿ ನೀರಿನ ಬೀಚ್ ಎಂದು ಹೆಸರುವಾಸಿಯಾದ ಕಾರಣ ಈಜುಗಾರರಿಗೆ ಸ್ವರ‍್ಗ. ನೀರಿನಲ್ಲಿ ಆಡಬಹುದಾದಂತ ಬಹಳಶ್ಟು ಆಟಗಳಿಗೆ ಡೇಚಿಯೋನ್ ಬೀಚ್ ಆತಿತ್ಯ ವಹಿಸುತ್ತದೆ. ಈ ಮಣ್ಣಿನ ಉತ್ಸವದಲ್ಲಿ ಬಳಸುವ ಮಣ್ಣನ್ನು ಸಿಯೋಲ್‍ನ ದಕ್ಶಿಣಕ್ಕೆ ಸುಮಾರು 200 ಕಿ.ಮೀ. ದೂರದಲ್ಲಿರುವ ಬೊರ‍್ಯೋಂಗ್‍ನ ಸಮತಟ್ಟಿನಿಂದ ತರಲಾಗುತ್ತದೆ. ಡೇಚಿಯೋನ್ ಬೀಚ್‍ನ ಪ್ರದೇಶ ಮಣ್ಣಿನ ಉತ್ಸವದ ದಿನಗಳಂದು ಅದ್ಬುತ ಮಾಯಾ ಲೋಕವಾಗಿ ಪರಿವರ‍್ತನೆಯಾಗುತ್ತದೆ.

ಸೌಂದರ‍್ಯ ವರ‍್ದಕಗಳ ತಯಾರಿಕೆಯಲ್ಲಿ ಬಳಸುವ ಅನೇಕ ಕನಿಜಗಳು ಈ ಮಣ್ಣಿನಲ್ಲಿ ಹೇರಳವಾಗಿವೆ

ಬೊರ‍್ಯೋಂಗ್‍ನ ಮಣ್ಣಿನಲ್ಲಿ ಅನೇಕ ಕನಿಜಗಳು ಅಡಕವಾಗಿರುವುದರಿಂದ ಚರ‍್ಮದ ಹಲವು ತೊಂದರೆಗಳನ್ನು ಗುಣಪಡಿಸುವ ವಿಶೇಶ ಶಕ್ತಿಯನ್ನು ಅದು ಹೊಂದಿದೆ. ಸೌಂದರ‍್ಯ ವರ‍್ದಕಗಳ ತಯಾರಿಕೆಯಲ್ಲಿ ಬಳಸುವ ಅನೇಕ ಕನಿಜಗಳು ಈ ಮಣ್ಣಿನಲ್ಲಿ ಹೇರಳವಾಗಿ ಲಬ್ಯವಿದೆ. ಮಣ್ಣಿನಲ್ಲಿ ಹೊರಳಾಡುವಂತಹ ವಿನೋದ ಇಲ್ಲಿ ಬಿಟ್ಟರೆ ವಿಶ್ವದಲ್ಲಿ ಬೇರೆಲ್ಲೂ ಸಿಗುವುದಿಲ್ಲ. ಇಲ್ಲಿನ ಕೊಳಕು ಮಣ್ಣನ್ನು ಗಂಡಸರು ಹೆಂಗಸರು ಎಂಬ ಬೇದವಿಲ್ಲದೆ ಮೈಗೆಲ್ಲಾ ಬಳಿದುಕೊಳ್ಳಲು, ತಮಾಶೆಗಾಗಿ ಒಬ್ಬರ ಮೇಲೊಬ್ಬರು ತೂರಲು, ಇದು ಪ್ರಶಸ್ತ ಸ್ತಳ.

ಈ ಮಣ್ಣಿನ ಉತ್ಸವದಲ್ಲಿ ಕೊಳಕು ಮಣ್ಣನ್ನು ಮೈಗೆಲ್ಲಾ ಮೆತ್ತಿಕೊಂಡು ಕುಸ್ತಿ ಆಡುವುದು, ಕೆಸರಿನಲ್ಲಿ ಜಾರುವುದು, ಮಣ್ಣಿನಿಂದ ಮಾಲೀಶ್ ಮಾಡುವುದು, ಪೊಟೋ ಸ್ಪರ‍್ದೆ ಮುಂತಾದವುಗಳು ಆಯೋಜನೆಗೊಂಡಿರುತ್ತವೆ. ದೊಡ್ಡವರು, ಮುದುಕರು, ಯುವಕರೂ ಎಲ್ಲರೂ ಮಕ್ಕಳಾಗಿ ಕೆಸರಿನಲ್ಲಿ ಹೊರಳಾಡಲು ಇದಕ್ಕಿಂತ ಉತ್ತಮ ಸ್ತಳ ಬೇರೊಂದಿಲ್ಲ.

1996ರಲ್ಲಿ ಅನೇಕ ಸೌಂದರ‍್ಯ ವರ‍್ದಕಗಳ ತಯಾರಿಕೆಯಲ್ಲಿ ಬೊರ‍್ಯೋಂಗ್ ಸಮತಟ್ಟಿನಿಂದ ಸಂಗ್ರಹಿಸಿದ ಮಣ್ಣನ್ನು ಉಪಯೋಗಿಸಲಾಗಿತ್ತು. ಬಹಳಶ್ಟು ಕನಿಜಗಳು ಹಾಗೂ ಬೆಂಟೊನೈಟ್ ಮತ್ತು ಜೆರ‍್ಮಾನಿಮ್ಸ್ ನೈಸರ‍್ಗಿಕವಾಗಿ ಈ ಮಣ್ಣಿನಲ್ಲಿ ಲಬ್ಯವಿದ್ದ ಕಾರಣ ಈ ಮಣ್ಣು ಸೌಂದರ‍್ಯ ವರ‍್ದಕಗಳ ತಯಾರಿಕೆಗೆ ಅತಿ ಪ್ರಮುಕ ಮೂಲ ವಸ್ತುವಾಗಿ ತಯಾರಿಕರಿಗೆ ಗೋಚರಿಸಿತು.

ಈ ಮಣ್ಣಿನ ಉತ್ಸವ ಆರಂಬವಾಗಿದ್ದು 1998ರಲ್ಲಿ

ಈ ಉತ್ಸವದಲ್ಲಿ ಬೊರ‍್ಯೋಂಗ್‍ನಲ್ಲಿನ ಮಣ್ಣಿನ ವಿಶೇಶತೆಯನ್ನು ಪ್ರಚುರಪಡಿಸುವುದು ಸೌಂದರ‍್ಯ ವರ‍್ದಕಗಳ ತಯಾರಕರ ಮೂಲ ಉದ್ದೇಶ. ಮತ್ತೊಂದು ಸಂಗತಿಯೆಂದರೆ ತಮ್ಮ ತಯಾರಿಕೆಯ ಸೌಂದರ‍್ಯ ವರ‍್ದಕಗಳ ಮಾರುಕಟ್ಟೆಯನ್ನು ಅಬಿವ್ರುದ್ದಿಪಡಿಸುವ ಉದ್ದೇಶವೇ ಹೆಚ್ಚಾಗಿ ಅಡಗಿರುವುದೂ ಸತ್ಯ.

ಬೊರ‍್ಯೋಂಗ್ ಮಣ್ಣಿನ ಉತ್ಸವ ನಡೆಯುವ ಡೇಚಿಯೋನ್ ಬೀಚ್‍ನಲ್ಲಿ ನೋಡುಗರನ್ನು, ಪ್ರವಾಸಿಗರನ್ನು ಸೆಳೆಯಲು ಆಯೋಜಕರು ಬಹಳಶ್ಟು ತರೆವಾರಿ ಆಟಗಳನ್ನು ಸಂಯೋಜಿಸುತ್ತಾರೆ. ಕೆಸರು ಮಣ್ಣಿನ ಕೊಳ, ಮಣ್ಣಿನ ಇಳಿಜಾರುಗಳು, ಮಣ್ಣಿನ ಜೈಲು, ಮಣ್ಣಿನ ಸ್ಕೀಯಿಂಗ್ ಸ್ಪರ‍್ದೆಗಳೂ ಇದರಲ್ಲಿ ಸೇರಿರುತ್ತವೆ. ಮೈ ಪೂರಾ ಈ ಮಣ್ಣಿನಿಂದ ಪೈಂಟ್ ಮಾಡಿಕೊಳ್ಳ ಬಯಸುವವರಿಗೆ ವಿವಿದ ಬಣ್ಣಗಳನ್ನು ಸೇರಿಸಿ ಬಣ್ಣದ ಮಣ್ಣನ್ನು ತಯಾರಿಸಿ ನೀಡುವ ವ್ಯವಸ್ತೆ ಇಲ್ಲಿ ಇದೆ. ಬಣ್ಣ ಬಣ್ಣದ ಮಣ್ಣು ಆಕರ‍್ಶಕ ಸಹ ಹೌದು.

ಮಣ್ಣಿನ ಉತ್ಸವಕ್ಕೆ ಬರುವ ಎಲ್ಲರೂ ಮಣ್ಣನ್ನು ಮೈಗೆ ಬಳಿದು ಕೊಳ್ಳಬೇಕಾದ್ದು ಇಲ್ಲಿ ಅನಿವಾರ‍್ಯ. ಬಳಿದು ಕೊಳ್ಳದವರನ್ನು ಮಣ್ಣಿನ ಜೈಲಿನಲ್ಲಿ ಬಂದಿಯನ್ನಾಗಿ ಮಾಡಲಾಗುತ್ತದೆ. ಸೇರುವ ಜನರ ಮನರಂಜೆನೆಗಾಗಿ ಬೀಚ್‍ನಲ್ಲಿ ವಿಶಾಲವಾದ ವೇದಿಕೆಯಿದೆ. ಇದರಲ್ಲಿ ಲೈವ್ ಸಂಗೀತ, ಹಲವಾರು ಆಕರ‍್ಶಕ ಸ್ಪರ‍್ದೆಗಳು ಹಾಗೂ ದ್ರುಶ್ಯ ಆಕರ‍್ಶಣೆಗಳನ್ನು ಆಯೋಜಿಸಲಾಗುತ್ತದೆ. ತಮಗಿಶ್ಟವಾದ ಆಟದಲ್ಲಿ ಯಾರು ಬೇಕಾದರೂ ಪಾಲೊಳ್ಳಬಹುದು.

ಈ ಉತ್ಸವ ಸುಮಾರು ಎರಡು ವಾರಗಳ ಕಾಲ ನಡೆಯುತ್ತದೆ

ಬೊರ‍್ಯೋಂಗ್ ಮಣ್ಣಿನ ಉಪಯೋಗದಿಂದ ತಯಾರಿಸಲಾದ ಸೌಂದರ‍್ಯ ವರ‍್ದಕಗಳ ಪುಟ್ಟ ಮಾರುಕಟ್ಟೆ ಈ ಉತ್ಸವದ ದಿನಗಳಲ್ಲಿ ಡೇಚಿಯೋನ್ ಬೀಚ್‍ನ ಉದ್ದಕ್ಕೂ ತೆರೆದುಕೊಂಡಿರುತ್ತದೆ. ಪ್ರವಾಸಿಗರು ತಮಗಿಶ್ಟ ಬಂದ ಸೌಂದರ‍್ಯ ವರ‍್ದಕವನ್ನು ಇಲ್ಲಿ ಮುಕ್ತವಾಗಿ ಕರೀದಿಸಲು ಅವಕಾಶವಿದೆ. ಇಲ್ಲಿ ಸ್ತಳೀಯ ಸೌಂದರ‍್ಯ ಉತ್ಪನ್ನಗಳು ಲಬ್ಯ. ಅವುಗಳಲ್ಲಿ ಮಡ್‍ಪ್ಯಾಕ್, ಮಡ್‍ಸೋಪ್, ಮಡ್ ಸನ್‍ಬ್ಲಾಕ್, ಮಡ್ ಶಾಂಪೂ ಎಲ್ಲವೂ ದೊರಕುತ್ತವೆ. ಇವುಗಳ ಮಾರಾಟವೇ ಉತ್ಸವದ ಆಯೋಜಕರ ಪ್ರತಮ ಆದ್ಯತೆ.

ಎರಡು ವಾರಗಳ ದೀರ‍್ಗ ಕಾಲ ನಡೆಯುವ ಈ ಉತ್ಸವದಲ್ಲಿ ಮೊದಲನೆಯ ದಿನದಂತೆ ಕೊನೆಯ ದಿನವೂ ಎಲ್ಲಾ ಕಾರ‍್ಯಕ್ರಮಗಳಿಗೂ ಪುಟವಿಟ್ಟಂತೆ ಮೈ ನವಿರೇಳಿಸುವ ಚಿತ್ತಾಕರ‍್ಶಕ ಸಿಡಿಮದ್ದುಗಳ ಪ್ರದರ‍್ಶನ ಆಯೋಜಿಸಲಾಗಿರುತ್ತದೆ. ಇಡೀ ಪ್ರದೇಶವೇ ರಾತ್ರಿಯ ಕತ್ತಲಲ್ಲಿ ರಂಗುರಂಗಿನ ದೀಪದ ಬೆಳಕಿನಿಂದ ಪ್ರಕಾಶಮಾನವಾಗುತ್ತದೆ. ಪಶ್ಚಿಮ ಕೊರಿಯಾದಲ್ಲಿ ಇದು ಬಹಳ ಜನಪ್ರಿಯ ಉತ್ಸವ. ಸಾಮಾನ್ಯವಾಗಿ ಜುಲೈನ ಎರಡನೆ ವಾರದ ಕೊನೆಯಲ್ಲಿ ಉತ್ಸವದ ಕೊನೆಯ ವಾರ ಪ್ರಾರಂಬವಾಗುತ್ತದೆ.

ದಕ್ಶಿಣ ಕೊರಿಯಾದ ಬೇಸಿಗೆಯ ಅತಿ ದೊಡ್ಡ ಬೊರ‍್ಯೋಂಗ್ ಮಣ್ಣಿನ ಉತ್ಸವ ಜಗತ್ಪಸಿದ್ದವಾಗಲು ಅಲ್ಲಿ ಸೇರುವ ಲಕ್ಶಾಂತರ ಜನ, ದೇಶ, ಬಾಶೆ, ಜಾತಿ, ಮತ ಮರೆತು ಮೈಗೆಲ್ಲಾ ಮಣ್ಣನ್ನು ಹಚ್ಚಿಕೊಂಡು, ಮಣ್ಣಿನೋಕುಳಿಯಲ್ಲಿ ಮಿಂದೆದ್ದು ಪಾಲ್ಗೊಳ್ಳುವುದು ಮೂಲವಲ್ಲವೆ?

(ಮಾಹಿತಿ ಸೆಲೆ: boryeongmudfestival.com, mudfestival.or.kr, en.wikipedia.org)
(ಚಿತ್ರ ಸೆಲೆ: english.visitkorea.or.kr)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: