ನನಗೇಕೆ ಒಬ್ಬಳು ಹೆಂಡತಿ ಬೇಕು?

– ಪ್ರಿಯದರ‍್ಶಿನಿ ಶೆಟ್ಟರ್.

ನನಗೇಕೆ ಒಬ್ಬಳು ಹೆಂಡತಿ ಬೇಕು?ಇತ್ತೀಚೆಗೆ ನಾನು ಓದಿದ ಜೂಡಿ ಬ್ರಾಡಿಯವರ “ನನಗೇಕೆ ಒಬ್ಬಳು ಹೆಂಡತಿ ಬೇಕು?” (Why I Want a Wife?) ಎಂಬ ಇಂಗ್ಲಿಶ್ ಪ್ರಬಂದದ ಬಾಶಾಂತರವನ್ನು ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಕಾರಣವಿಶ್ಟೇ 1971ರಲ್ಲಿ ಅಮೇರಿಕದ ಈ ಲೇಕಕಿ ಬರೆದ ಈ ಲೇಕನ ಎಪ್ಪತ್ತರ ದಶಕದಲ್ಲಿ ಮಹಿಳಾ ಆಂದೋಲನದಲ್ಲಿ ಸಂಚಲನವನ್ನುಂಟು ಮಾಡಿತ್ತು. ಇದೊಂದು ಗಂಬೀರ ವಿಶಯವನ್ನೊಳಗೊಂಡ ಪ್ರಬಂದವಾಗಿದ್ದು ಲೇಕಕಿ ಒಬ್ಬ ಸ್ತ್ರೀವಾದಿ ಎಂಬುದು ಸಹಜವಾಗಿಯೇ ಓದುಗರ ಗಮನಕ್ಕೆ ಬರುತ್ತದೆ. ನಮ್ಮದು ಆದುನಿಕ ಸಮಾಜ ಎಂದುಕೊಂಡರೂ ಲಿಂಗಾದಾರಿತ ಪಾತ್ರಗಳ ಬದಲಾಗದ ಸ್ತಿತಿಯನ್ನು ಲೇಕಕಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮಹಿಳೆಯರೇ ಮಾಡಬೇಕಾದ ಅತವಾ ಅವರಿಗೆಂದೇ ಮೀಸಲಾದ ಜವಾಬ್ದಾರಿಗಳ ಕುರಿತು ವಿಡಂಬನಾತ್ಮಕವಾಗಿ ಜೂಡಿ ಬ್ರಾಡಿಯವರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಗತ ಶೈಲಿಯ ಬರವಣಿಗೆ ಈ ಪ್ರಬಂದದ ವಿಶೇಶತೆ.

ಅದರ ಬಾವಾನುವಾದ ಹೀಗಿದೆ:

‘ಹೆಂಡತಿಯರು’ ಎಂಬ ವರ‍್ಗೀಕ್ರುತ ವ್ಯವಸ್ತೆಯಲ್ಲಿ ನಾನೂ ಒಬ್ಬಳು ಹೆಂಡತಿ; ಜೊತೆಗೆ ಸಾಂದರ‍್ಬಿಕವಾಗಿ ತಾಯಿಯೂ ಹೌದು. ಇತ್ತೀಚೆಗೆ ವಿಚ್ಚೇದನ ಹೊಂದಿದ ಸ್ನೇಹಿತನೊಬ್ಬನ ಬೇಟಿಯಾಯಿತು. ಅವನಿಗೊಂದು ಮಗುವಿದೆ ಹಾಗೂ ಅದು ಸ್ವಾಬಾವಿಕವಾಗಿ ತನ್ನ ತಾಯಿಯೊಟ್ಟಿಗೆ ಇದೆ. ಅವನು ಮತ್ತೊಬ್ಬ ಪತ್ನಿಯ ಹುಡುಕಾಟದಲ್ಲಿದ್ದಾನೆ. ಒಂದು ದಿನ ಸಂಜೆ ಇಸ್ತ್ರಿ ಮಾಡುವಾಗ ಅವನನ್ನು ನೆನಪಿಸಿಕೊಂಡಾಗ ನನಗೂ ಒಬ್ಬಳು ಪತ್ನಿ ಬೇಕು ಎನಿಸಿತು. ನನಗೆ ಒಬ್ಬಳು ಪತ್ನಿ ಏಕೆ ಬೇಕು?

ನಾನು ಆರ‍್ತಿಕವಾಗಿ ಸದ್ರುಡವಾಗಲು ಶಾಲೆಯ ಕೆಲಸಕ್ಕೆ ಮತ್ತೆ ಹಿಂತಿರುಗಬೇಕು. ನಾನು ಸ್ವಾವಲಂಬಿಯಾಗಿರಬೇಕು ಹಾಗೂ ನನ್ನನ್ನು ಅವಲಂಬಿಸಿದವರಿಗೆ ಆದಾರವಾಗಬೇಕು. ನನ್ನನ್ನು ಶಾಲೆಗೆ ಕಳುಹಿಸಿ ನನ್ನ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವ ಪತ್ನಿ ನನಗೆ ಬೇಕು. ನನ್ನ ಮಕ್ಕಳನ್ನು ವೈದ್ಯರಲ್ಲಿ ಕರೆದೊಯ್ಯಲು ಅಪಾಯಿಂಟ್‍ಮೆಂಟ್ ಗೊತ್ತುಮಾಡಲು ನನಗೊಬ್ಬ ಪತ್ನಿ ಬೇಕು; ಜೊತೆಗೆ ನನ್ನನ್ನೂ ಕರೆದೊಯ್ಯುವವಳಾಗಿರಬೇಕು. ನನ್ನ ಮಕ್ಕಳಿಗೆ ಊಟ ಮಾಡಿಸಲು, ಅವರನ್ನು ಮತ್ತು ಅವರ ಬಟ್ಟೆಗಳನ್ನು ಶುಚಿಯಾಗಿಡಲು ನನಗೊಬ್ಬ ಪತ್ನಿ ಬೇಕು.

ಮಕ್ಕಳನ್ನು ತಯಾರು ಮಾಡಿ ಶಾಲೆಗೆ ಕಳುಹಿಸಿಕೊಟ್ಟು ಅವರನ್ನು ಸಹಪಾಟಿಗಳೊಂದಿಗೆ ಆಟಪಾಟದಲ್ಲಿ ಬೆರೆಯುವಂತೆ ಪ್ರೋತ್ಸಾಹಿಸಬೇಕು. ಅವರನ್ನು ಉದ್ಯಾನವನಕ್ಕೆ, ಪ್ರಾಣಿಸಂಗ್ರಹಾಲಯಕ್ಕೆ ಕರೆದೊಯ್ಯಬೇಕು. ನಾನು ನನ್ನ ಕೆಲಸದಲ್ಲಿ ಮಗ್ನವಾದಾಗ ಮಕ್ಕಳು ಕಾಯಿಲೆಯಿಂದ ನರಳುವಂತಾದಾಗ ಕಾಳಜಿ ವಹಿಸುವವಳಾಗಿರಬೇಕು; ಹಾಗೂ ಮಕ್ಕಳತ್ತ ವಿಶೇಶ ಗಮನಹರಿಸಬೇಕಾದಾಗ ಆಕೆ ಅವರಿಗೆ ಸಮಯ ಕೊಡುವವಳಾಗಿರಬೇಕು. ಏಕೆಂದರೆ, ನಾನಂತೂ ನನ್ನ ಶಾಲೆಯ ಕೆಲಸಕ್ಕೆ ಗೈರಾಗಲು ಸಾದ್ಯವಿಲ್ಲ. ಅವಳು ಹೊರಗೂ ಸಂಬಳಕ್ಕಾಗಿ ದುಡಿಯುವವಳಾಗಿರಬೇಕು. ಅವಳ ಸಂಬಳದಲ್ಲಿ ಸ್ವಲ್ಪ ಕಡಿತವಾದರೂ ಚಿಂತೆಯಿಲ್ಲ, ಆದರೆ ಮನೆಗೆಲಸದಲ್ಲಿ ಯಾವುದೇ ರಿಯಾಯಿತಿ ಅವಳಿಗೆ ಇಲ್ಲ. ಆಕೆ ನನ್ನ ಲೈಂಗಿಕ ಬಯಕೆಗಳನ್ನು ಪೂರೈಸಬೇಕು. ಆಕೆ ನನ್ನೆಲ್ಲಾ ಬೇಕುಬೇಡಗಳನ್ನು ಅರಿತಿರುವವಳಾಗಿರಬೇಕು. ಮನೆಯನ್ನು ಸ್ವಚ್ಚವಾಗಿರಿಸಬೇಕು. ಮಕ್ಕಳನ್ನು ಶಾಲೆಯಿಂದ ಕರೆತರುವವಳಾಗಿರಬೇಕು, ಸಾದ್ಯವಿದ್ದರೆ ನನ್ನನ್ನು ಕೂಡಾ…

ನನ್ನ ಪತ್ನಿ ನಮ್ಮ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡಿ, ಅವುಗಳ ಜಾಗದಲ್ಲಿ ಇಟ್ಟು, ಇತರ ವಸ್ತುಗಳನ್ನೂ ಅವುಗಳ ಜಾಗದಲ್ಲಿ ಜೋಡಿಸಿ, ಅಗತ್ಯವಿದ್ದಾಗ ತಕ್ಶಣ ಕೊಡುವವಳಾಗಿರಬೇಕು. ಅವಳೊಬ್ಬ ಪಾಕಪ್ರವೀಣೆ ಆಗಿರಲೇಬೇಕು. ಅವಳು ಮನೆಯ ದಿನಸಿ ಕರೀದಿಸಿ ಅಂದಿನ ಊಟ-ತಿಂಡಿ ತಯಾರಿಸಿ, ಬಡಿಸಿ ಕೊಡಬೇಕು. ರಜೆ ಬಂದಾಗ ಸುತ್ತಾಡಲು ಕರೆದೊಯ್ಯಬೇಕು ಹಾಗೂ ನಮ್ಮೆಲ್ಲರ ಕಾಳಜಿ ತೆಗೆದುಕೊಳ್ಳಬೇಕು. ನನಗೆ ವಿಶ್ರಾಂತಿ, ಬದಲಾವಣೆ ಬೇಕೆನಿಸಿ ಹೊರಗೆ ಹೋದಾಗ ನನ್ನ ಮಕ್ಕಳ ಹಾಗೂ ಮನೆಯ ಸಂಪೂರ‍್ಣ ಜವಾಬ್ದಾರಿ ಹೊರಬೇಕು. ನನ್ನ ಪತ್ನಿಯು ಕೆಲಸಗಳ ಕುರಿತು ತಕರಾರು ಹೇಳಬಾರದು. ಆಕೆ ಅಂತಹ ಕರ‍್ತವ್ಯನಿಶ್ಟ ಹೆಂಡತಿ ಆಗಿರಬೇಕು. ಪಟ್ಯದಲ್ಲಿ ನನಗೆ ಕಶ್ಟವಾದ ವಿಶಯವನ್ನು ನಾನು ಹೇಳುವಾಗ ಆಕೆ ಗಮನವಿಟ್ಟು ಕೇಳಬೇಕು ಹಾಗೂ ನಾನು ಬರೆದದ್ದನ್ನು ಟೈಪ್ ಮಾಡಿ ಕೊಡಬೇಕು.

ಅವಳು ನನ್ನ ಸಾಮಾಜಿಕ ಜೀವನದ ಬಗ್ಗೆ ಅರಿತಿರಬೇಕು. ನಮ್ಮನ್ನು ಮಿತ್ರರು ಆಹ್ವಾನಿಸಿದ ಸಂದರ‍್ಬದಲ್ಲಿ ಆಕೆ ಮಕ್ಕಳನ್ನು ಬೇಬಿ ಸಿಟ್ಟಿಂಗ್‍ಗೆ ಬಿಡುವ ಕಾಳಜಿ ತೆಗೆದುಕೊಳ್ಳಬೇಕು; ನಾನು ನನ್ನ ಸ್ನೇಹಿತರನ್ನು ಆಹ್ವಾನಿಸಿದಾಗ ಆಕೆ ವಿಶೇಶ ಅಡುಗೆ ಮಾಡಿ ಬಡಿಸಬೇಕು. ನಾನು ಮಿತ್ರರೊಂದಿಗೆ ಸ್ವಾರಸ್ಯಕರವಾದ ಮಾತುಗಳಲ್ಲಿ ತೊಡಗಿದಾಗ ಅವಳು ನಡುವೆ ಮೂಗುತೂರಿಸಬಾರದು. ಅತಿತಿಗಳು ಮನೆಗೆ ಬರುವ ಮುನ್ನವೇ ಆಕೆ ಮಕ್ಕಳನ್ನು ಉಣಿಸಿ ಮಲಗಿಸಬೇಕು; ಕಾರಣ, ಮಕ್ಕಳು ನಮ್ಮ ಸಮಯ ಹಾಳು ಮಾಡಬಾರದು. ನಮ್ಮ ಅತಿತಿಗಳಿಗೆ ಆರಾಮವೆನಿಸುವಂತೆ ವರ‍್ತಿಸಬೇಕು. ಅವರಿಗೆ ಅಗತ್ಯವಿರುವ ಆ್ಯಶ್‍ಟ್ರೇ ಇಡಬೇಕು. ಅಗತ್ಯ ಬಿದ್ದರೆ ಅವರ ಗ್ಲಾಸುಗಳಿಗೆ ಮತ್ತಶ್ಟು ವೈನ್ ಸುರಿಯಬೇಕು.

ನನಗೆ ಕೆಲವುಸಲ ನೈಟ್‍ಔಟ್‍ಗೆ ಹೋಗಬೇಕೆಂದೆನಿಸುವುದು ಅವಳಿಗೆ ಗೊತ್ತಿರಬೇಕು. ನನ್ನನ್ನು ಎಲ್ಲ ರೀತಿಯಿಂದ ತ್ರುಪ್ತಿಪಡಿಸಬೇಕು. ಆಕೆ ನನ್ನ ಮನಸ್ತಿತಿ ಅರಿತವಳಾಗಿರಬೇಕು. ನನಗೆ ಮೂಡ್ ಇಲ್ಲದಿರುವಾಗ ನನ್ನಿಂದ ಯಾವುದೇ ಶಾರೀರಿಕ ತ್ರುಪ್ತಿಯನ್ನು ಬಯಸಬಾರದು. ಜನನ ನಿಯಂತ್ರಣದ ಸಂಪೂರ‍್ಣ ಜವಾಬ್ದಾರಿ ಹೊರಲು ಸಿದ್ದಳಿರಬೇಕು ಏಕೆಂದರೆ ನನಗೆ ಹೆಚ್ಚು ಮಕ್ಕಳು ಬೇಡ. ನನ್ನ ಹೆಂಡತಿ ಲೈಂಗಿಕವಾಗಿ ನನಗೆ ನಿಶ್ಟಳಾಗಿರಬೇಕು. ಆ ವಿಶಯದಲ್ಲಿ ನನಗೆ ಮತ್ಸರ ಉಂಟಾಗಿ ನನ್ನ ಬೌದ್ದಿಕ ಚಟುವಟಿಕೆಗಳಿಗೆ ದಕ್ಕೆಯಾಗಬಾರದು. ಏಕಪತ್ನಿವ್ರುತಕ್ಕೆ ನಾನು ಗಟ್ಟಿಯಾಗಿ ಅಂಟಿಕೊಳ್ಳಲಾರೆ ಹಾಗೂ ನನ್ನ ಲೈಂಗಿಕ ಬೇಡಿಕೆಗಳು ಈ ವ್ಯವಸ್ತೆಯಾಚೆಗೆ ಚಾಚಬಲ್ಲವು ಎಂಬುದನ್ನು ಅವಳು ಅರಿತವಳಾಗಿರಬೇಕು. ನನ್ನ ಇಚ್ಚೆಗೆ ಅನುಗುಣವಾದ ಸಂಬಂದಗಳನ್ನು ಪೂರ‍್ಣಪ್ರಮಾಣದಲ್ಲಿ ಹೊಂದುವ ಸಾದ್ಯತೆ ನನಗೆ ಮುಕ್ತವಾಗಿರಬೇಕು.

ಅಕಸ್ಮಾತ್ ನನಗೆ ಈಗಿರುವವಳಿಗಿಂತಲೂ ಒಳ್ಳೆಯ ಹೆಂಡತಿ ಸಿಕ್ಕರೆ, ಅವಳನ್ನು ಬದಲಾಯಿಸುವ ಸ್ವಾತಂತ್ರ್ಯವಿರಬೇಕು. ಹೌದು; ನಾನು ಹೊಸ, ತಾಜಾ ಜೀವನ ಬಯಸುತ್ತೇನೆ. ಅಂತಹ ಸಂದರ‍್ಬದಲ್ಲಿ ಎಂದಿನಂತೆ ನನ್ನ ಹೆಂಡತಿ ನನ್ನ ಮಕ್ಕಳ ಎಲ್ಲಾ ಜವಾಬ್ದಾರಿ ತಕರಾರಿಲ್ಲದೇ
ಹೆಗಲಿಗೇರಿಸಿಕೊಂಡು ನನ್ನನ್ನು ಬಂದಮುಕ್ತಗೊಳಿಸಬೇಕು. ಯಾವಾಗ ನಾನು ನನ್ನ ಶಾಲೆಯ ಕರ‍್ತವ್ಯಗಳಲ್ಲಿ ತೊಡಗಿರುವೆನೋ ಆಗವಳು ತನ್ನ ಉದ್ಯೋಗವನ್ನು ತ್ಯಜಿಸಿ ಪೂರ‍್ಣಪ್ರಮಾಣದಲ್ಲಿ ಮನೆಗೆಲಸದಲ್ಲಿ ತೊಡಗಿ ತನ್ನ ಕರ‍್ತವ್ಯ ನಿರ‍್ವಹಿಸಬೇಕು.

ಓ ದೇವರೇ !!! ಯಾರಿಗೆ ಇಂತಹ ಹೆಂಡತಿ ಬೇಡ?

– ಹೀಗೆ ಶಾಲೆಯ ಶಿಕ್ಶಕಿಯಾದ ಲೇಕಕಿಗೆ “ತನಗೆ ಒಬ್ಬ ಪತ್ನಿ ಇದ್ದು ಆಕೆ ತನ್ನೆಲ್ಲಾ ಜವಾಬ್ದಾರಿಗಳನ್ನು ನಿಬಾಯಿಸುವಂತಾಗಿದ್ದರೆ?” ಎಂದೆನಿಸುವುದಕ್ಕೆ ಹಲವಾರು ಕಾರಣಗಳಿವೆ. ತನ್ನ ಸಮಕಾಲೀನ ಸಮಾಜ ಪುರುಶಪ್ರದಾನವಾಗಿವೆ ಎಂದು ಬಿಂಬಿಸುವುದು ಅವಳ ಲೇಕನದ ಉದ್ದೇಶವಾಗಿದೆ. ಹೆಂಡತಿ ಗಂಡನಿಗೆ ವಿದೇಯಳಾಗಿರಬೇಕೆಂದು ಬಯಸುವುದು ಕೇವಲ ನಮ್ಮ ಸಮಾಜದ ಗುಣಲಕ್ಶಣವಾಗಿರದೇ ಅದೊಂದು ಜಾಗತಿಕ ಕಾಯಿಲೆಯಾಗಿದೆ ಎಂಬುದನ್ನು ಲೇಕಕಿ ಅತ್ಯಂತ ಮಾರ‍್ಮಿಕವಾಗಿ ಪ್ರಸ್ತುತ ಲೇಕನದಲ್ಲಿ ನಿರೂಪಿಸಿದ್ದಾರೆ.

(ಚಿತ್ರ ಸೆಲೆ: slideshare)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಸಿ.ಪಿ.ನಾಗರಾಜ says:

    ತುಂಬಾ ಒಳ್ಳೆಯ ಬರಹ

  2. Akash Lokhande says:

    ಲೇಖನ ತುಂಬಾ ಅಥ೯ಪೂಣ೯ತೆಯಿಂದ ಕೊಡಿದೆ…

ಅನಿಸಿಕೆ ಬರೆಯಿರಿ: