ಸಾವಿನ ಸಾವು

ತ್ರಿವೇಣಿ ಲೋಕೇಶ್.

ಸಾವು, death

ಈವ್ ಆಡಮ್‌ರು
ದೇವರಿತ್ತ ಎಚ್ಚರಿಕೆ ಮರೆತು
ತಿನ್ನಬಾರದು ಪಲ
ತಿಂದುದರ ಪಲವಾಗಿ
ಜನಿಸಿತ್ತು ಸಾವು

ಬೆಳೆಬೆಳೆಯುತ್ತಾ
ಪ್ರಪಂಚ ವಿಸ್ಮಯಗಳ ನೋಡುತ್ತಾ
ಸಹಜ ಕುತೂಹಲದಿ
ಚಂದದ ಹೂ ಮುಟ್ಟಲು
ತಕ್ಶಣವೇ ಮುದುಡಿತು ಕುಸುಮ

ಚಿಲಿಪಿಲಿ ಗುಟ್ಟುವ ಹಕ್ಕಿ
ಚಂಗನೆ ಓಡುವ ಚಿಗರೆ
ಬಣ್ಣದ ಚಿಟ್ಟೆ ಮುದ್ದಾದ ಮೊಲ
ಬುದ್ದಿವಂತ ಮಾನವ
ಸಾವಿನ ಕೈ ಸೋಕಿದೊಡನೆ
ನಿರ‍್ಜೀವ ಎಲ್ಲವೂ

ಸಾವಿಗೆ ತಿಳಿದಿರಲಿಲ್ಲ
ತನ್ನದು ವಿನಾಶಕ ಕೈ ಎಂದು
ಮುಟ್ಟಿದ್ದೆಲ್ಲವೂ ಕಮರುತಿರಲು
ಸಾವಿಗೆ ತಿಳಿಯಿತು
ತನ್ನ ಹುಟ್ಟಿನ ಸತ್ಯ

ದೂಶಿಸಲ್ಪಟ್ಟು ದ್ವೇಶಿಸಲ್ಪಟ್ಟು
ಒಬ್ಬಂಟಿಯಾದ ಸಾವು
ಬೇಸತ್ತು ಕಾಯುತ್ತಿದೆ
ಎಂದೂ ಬಾರದ
ಸಾವಿನ ಸಾವಿಗೆ

(ಚಿತ್ರ ಸೆಲೆ: pixabay.com)

2 ಅನಿಸಿಕೆಗಳು

  1. ಸಾವಿನ ಮನಸಿನಲ್ಲೊಂದು ಸಹೃದಯತೆ ಹುಡುಕುವ ಸೂಕ್ಷ್ಮತೆ.

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: