ಡಕ್ಕೆಯ ಬೊಮ್ಮಣ್ಣನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.

ವಚನಗಳು, Vachanas

ಕವಿಯ ಹುಗತೆ
ಗಮಕಿಯ ಸಂಚ
ವಾದಿಯ ಚೊಕ್ಕೆಹ
ವಾಗ್ಮಿಯ ಚೇತನ
ಇಂತೀ ಚತುಷ್ಟಯದಲ್ಲಿ ಯುಕ್ತಿವಂತನಾದಡೇನು
ಭಕ್ತಿಯನರಿಯಬೇಕು
ಸತ್ಯದಲ್ಲಿ ನಡೆಯಬೇಕು
ವಿರಕ್ತಿಯಲ್ಲಿ ವಿಚಾರಿಸಿ ನಿಲ್ಲಬೇಕು
ಈ ಗುಣ ಡಕ್ಕೆಯ ಬೊಮ್ಮನ ಭಕ್ತಿ
ಕಾಲಾಂತಕ ಭೀಮೇಶ್ವರಲಿಂಗವನರಿವವನ ಸದ್ಭಕ್ತಿಯುಕ್ತಿ.

ಓದುಗರಿಗೆ/ಕೇಳುಗರಿಗೆ ಅರಿವು ಮತ್ತು ಆನಂದವನ್ನು ಉಂಟುಮಾಡುವ ಉದ್ದೇಶದಿಂದ ವ್ಯಕ್ತಿಯು ಬಹು ಕುಶಲತೆ/ಚತುರತೆ/ನಿಪುಣತೆಯಿಂದ ನುಡಿಯನ್ನು ಬಳಸುತ್ತ ಕಟ್ಟುವ ಕವಿತೆ, ಹಾಡುವ ಗಮಕ, ಮಾಡುವ ವಾದ/ತರ‍್ಕ/ಚರ‍್ಚೆ, ಆಡುವ ಸೊಗಸಾದ/ಇಂಪಾದ/ಮನೋಹರವಾದ ಮಾತುಗಳಿಗಿಂತ ನಿಜ ಜೀವನದಲ್ಲಿ ಆತನು ಒಳ್ಳೆಯ ನಡೆನುಡಿಗಳಿಂದ ಬಾಳಬೇಕು. ಏಕೆಂದರೆ ಎಲ್ಲ ಬಗೆಯ ಸಾಹಿತ್ಯ, ಸಂಗೀತ ಮತ್ತು ಕಲೆಗಳಿಗಿಂತಲೂ ವ್ಯಕ್ತಿಯ ಬದುಕು ದೊಡ್ಡದು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

‘ದೊಡ್ಡ ಬದುಕು’ ಎಂದರೆ ವ್ಯಕ್ತಿಯು ತನಗೆ ಒಳಿತನ್ನು ಬಯಸುವಂತೆಯೇ , ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳಿಂದ ಕೂಡಿ ಬಾಳುವುದು.

( ಕವಿ=ಕಾವ್ಯವನ್ನು ಕಟ್ಟುವವನು/ರಚಿಸುವವನು/ಬರೆಯುವವನು/ಕಬ್ಬಿಗ; ಹುಗತೆ=ಪ್ರವೇಶ/ಒಳಹೋಗುವಿಕೆ/ಒಳಸೇರುವಿಕೆ; ಕವಿಯ ಹುಗತೆ=ಕವಿಯು ಕಾವ್ಯವನ್ನು ಕಟ್ಟುವ/ರಚಿಸುವ ಬಗೆ. ಕವಿಯು ತನ್ನ ಕಣ್ಣ ಮುಂದಿನ ಲೋಕದ ವಾಸ್ತವ ಸಂಗತಿಗಳನ್ನು ಮತ್ತು ತನ್ನ ಮನದಲ್ಲಿ ಮೂಡುವ ಕಲ್ಪನೆ/ಚಿಂತನೆ/ಆಲೋಚನೆಗಳನ್ನು ಪರಸ್ಪರ ಹೆಣೆದು , ನುಡಿ ಸಾಮಗ್ರಿಗಳಾದ ಅಕ್ಕರ-ಪದ-ವಾಕ್ಯ-ತಿರುಳನ್ನು ಕಲಾತ್ಮಕವಾದ ರೀತಿಯಲ್ಲಿ ಹೊಂದಿಸಿ ಕಾವ್ಯವನ್ನು ರಚಿಸುತ್ತಾನೆ. ಆದುದರಿಂದಲೇ ಕಾವ್ಯದಲ್ಲಿ ಲೋಕಸತ್ಯ ಮತ್ತು ಕಾವ್ಯಸತ್ಯಗಳು ಜತೆಗೂಡಿ ಓದುಗರ/ಕೇಳುಗರ ಮನಕ್ಕೆ ಮುದವನ್ನು ನೀಡುತ್ತವೆ;

ಗಮಕ=ಕಾವ್ಯ ಪ್ರಸಂಗಗಳನ್ನು ಆಲಿಸುತ್ತಿರುವ/ಕೇಳುತ್ತಿರುವ ವ್ಯಕ್ತಿಗಳ ಮನದಲ್ಲಿ ಮತ್ತೊಮ್ಮೆ ಅವು ಚಿತ್ರಣಗೊಳ್ಳುವಂತೆ ಇಂಪಾದ ದನಿಯಿಂದ ರಾಗವಾಗಿ ಕಾವ್ಯವನ್ನು ಹಾಡುವ/ವಾಚಿಸುವ ಕಲೆ; ಕಾವ್ಯ ಪ್ರಸಂಗಗಳಲ್ಲಿ ನವರಸಗಳು ಅಡಕಗೊಂಡಿರುತ್ತವೆ; ನವ=ಒಂಬತ್ತು; ರಸ=ಕಾವ್ಯವನ್ನು ಓದುವಾಗ/ಕೇಳುವಾಗ ವ್ಯಕ್ತಿಯ ಮನದಲ್ಲಿ ಆಯಾಯ ಪ್ರಸಂಗಗಳಿಗೆ ತಕ್ಕಂತೆ ಮೂಡುವಂತಹ ಒಳಮಿಡಿತಗಳು; ನವರಸಗಳು=’ ಶ್ರುಂಗಾರ/ಹಾಸ್ಯ/ಕರುಣ/ರೌದ್ರ/ವೀರ/ಬಯಾನಕ/ಬೀಬತ್ಸ/ಅದ್ಬುತ/ಶಾಂತ’ ಎಂಬ ಒಂಬತ್ತು ಬಗೆಯ ರಸಗಳು; ಗಮಕಿ=ಕಾವ್ಯವನ್ನು ರಾಗವಾಗಿ ಹಾಡುವವನು/ ಕಾವ್ಯ ಪ್ರಸಂಗಗಳಿಗೆ ತಕ್ಕಂತೆ ತನ್ನ ಕೊರಳಿಂದ ಹೊರಹೊಮ್ಮುವ ದನಿಯಲ್ಲಿ ಏರಿಳಿತಗಳನ್ನು ಮಾಡುತ್ತಾ, ನವರಸಗಳು ಮತ್ತೆ ಕೇಳುಗರ ಮನದಲ್ಲಿ ಮೂಡುವಂತೆ ಕಾವ್ಯವನ್ನು ವಾಚಿಸುವವನು/ಹಾಡುವವನು; ಸಂಚು=ನಿಪುಣತೆ/ಕುಶಲ ಕಲೆ/ರೀತಿ/ಕ್ರಮ;

ಗಮಕಿಯ ಸಂಚ=ಕೇಳುಗರ ಕಣ್ಣಿಗೆ ಕಟ್ಟುವಂತೆ ಅಂದರೆ ಮನದಲ್ಲಿ ಮತ್ತೊಮ್ಮೆ ಮೂಡುವಂತೆ/ಕಾಣಿಸಿಕೊಳ್ಳುವಂತೆ ಅತ್ಯಂತ ಕಲಾತ್ಮಕವಾದ ರೀತಿಯಲ್ಲಿ ಕಾವ್ಯವನ್ನು ವಾಚಿಸುವ/ಹಾಡುವ ನಿಪುಣತೆ/ಕುಶಲತೆ;

ವಾದ=ಇಬ್ಬರು ಇಲ್ಲವೇ ಅನೇಕರ ನಡುವೆ ಯಾವುದೇ ಸಂಗತಿಯನ್ನು ಕುರಿತು ಮಾತಿನ ಮೂಲಕ ನಡೆಯುವ ಚರ‍್ಚೆ/ಸಂಗತಿಯೊಂದರ ಸರಿ-ತಪ್ಪುಗಳನ್ನು ಕುರಿತು ಮಾತನಾಡುವಾಗ ತಾವು ಹೇಳುತ್ತಿರುವುದೇ ಸರಿಯೆಂದು ಪ್ರತಿಪಾದಿಸುವುದು; ವಾದಿ=ತಾನು ಹೇಳುತ್ತಿರುವ ಸಂಗತಿಯೇ ಸರಿ/ದಿಟ/ನಿಜ/ಸತ್ಯ/ವಾಸ್ತವ ಎಂದು ಪಟ್ಟು ಹಿಡಿದು ಹೇಳುವವನು/ನಿರೂಪಿಸುವವನು; ಚೊಕ್ಕೆಹ=ಚತುರತೆ/ಯುಕ್ತಿ/ಉಪಾಯ/ಜಾಣತನ;

ವಾದಿಯ ಚೊಕ್ಕೆಹ=ವಾದ/ಚರ‍್ಚೆ/ತರ‍್ಕದಲ್ಲಿ ತೊಡಗಿದಾಗ ಎದುರಾಳಿಯು ತಕ್ಕ ಉತ್ತರಗಳನ್ನು ಕೊಡಲಾಗದೆ ಸೋಲುವಂತೆ/ಮಣಿಯುವಂತೆ ಮಾಡುವ ಬಗೆಯಲ್ಲಿ ವ್ಯಕ್ತಿಯು ತನ್ನ ವಿಚಾರಗಳನ್ನು ಮಂಡಿಸುವ/ಪ್ರತಿಪಾದಿಸುವ ಕುಶಲತೆ/ಜಾಣತನ/ಎಚ್ಚರ;

ವಾಗ್ಮಿ=ಮಾತುಗಾರ/ಮಾತಿನ ಮಲ್ಲ/ಯಾವುದೇ ಒಂದು ಸಂಗತಿಯನ್ನಾಗಲಿ ಇತರರಿಗೆ ಹೇಳುವಾಗ, ಅದನ್ನು ಕೇಳುತ್ತಿರುವ/ಆಲಿಸುತ್ತಿರುವ ವ್ಯಕ್ತಿಗಳ ಮನವನ್ನು ತನ್ನತ್ತ ಸೆಳೆದುಕೊಂಡು , ಅವರು ಮೆಚ್ಚಿ ತಲೆದೂಗುವಂತೆ ಸೊಗಸಾಗಿ ಮಾತನಾಡುವವನು; ಚೇತನ=ಚಟುವಟಿಕೆ/ಲವಲವಿಕೆ/ತಿಳುವಳಿಕೆಯ ಕಸುವು/ಯಾವ ಸಂಗತಿಯನ್ನು ಹೇಗೆ ಹೇಳಬೇಕು ಎಂಬ ಅರಿವು ಮತ್ತು ಎಚ್ಚರ;

ವಾಗ್ಮಿಯ ಚೇತನ=ಆಡುವ ಮಾತುಗಳ ಮೂಲಕವೇ ಕೇಳುವವರಿಗೆ ಮೋಡಿಯನ್ನು ಮಾಡುವ/ಕೇಳುಗರು ತಮ್ಮ ಮಯ್ ಮನಗಳನ್ನು ಮರೆತು ತಲ್ಲೀನರಾಗುವಂತೆ ಮಾಡುವ ಕಲೆ/ಕುಶಲತೆ/ಚತುರತೆ;

ಇಂತು+ಈ; ಇಂತು=ಹೀಗೆ/ಈ ಪ್ರಕಾರವಾಗಿ/ಈ ರೀತಿಯಲ್ಲಿ; ಚತುಷ್ಟಯ+ಅಲ್ಲಿ; ಚತುಷ್ಟಯ=ನಾಲ್ಕರ ಗುಂಪು/ನಾಲ್ಕು ಸಂಗತಿಗಳು; ಯುಕ್ತಿವಂತನ್+ಆದಡೆ+ಏನು; ಯುಕ್ತಿ=ತಾನು ಅಂದುಕೊಂಡಿದ್ದನ್ನು/ತಾನು ಉದ್ದೇಶಪಟ್ಟಿರುವುದನ್ನು ಈಡೇರಿಸಿಕೊಳ್ಳಲೆಂದು ಮಾಡುವ ತಂತ್ರ/ಉಪಾಯ/ಯೋಜನೆ/ಚತುರತೆ/ಕುಶಲತೆ/ನಿಪುಣತೆ; ಯುಕ್ತಿವಂತ=ತಂತ್ರ/ಉಪಾಯಗಳ ಮೂಲಕವೇ ತನ್ನ ಕೆಲಸವನ್ನು ಆಗುಮಾಡಿಕೊಳ್ಳುವ ನಿಪುಣ/ಚತುರ; ಆದಡೆ=ಆದರೆ/ಆಗಿದ್ದರೆ; ಏನು=ಯಾವುದು/ಉಂಟಾದ ಪ್ರಯೋಜನ/ಪರಿಣಾಮ ಯಾವುದು;

ಇಂತೀ ಚತುಷ್ಟಯದಲ್ಲಿ ಯುಕ್ತಿವಂತನಾದಡೇನು=ಕೇವಲ ನುಡಿಯನ್ನು ಕಲಾತ್ಮಕವಾಗಿ/ಸೊಗಸಾಗಿ/ಮನೋಹರವಾಗಿ ಬಳಸುವ ಕಲೆಗಳಲ್ಲಿ ಪರಿಣಿತನಾಗುವುದರಿಂದ ಸಹಮಾನವರಿಗಾಗಲಿ ಇಲ್ಲವೇ ಸಮಾಜಕ್ಕಾಗಲಿ ಯಾವುದೇ ಬಗೆಯಲ್ಲೂ ಪ್ರಯೋಜನವಿಲ್ಲ. ಏಕೆಂದರೆ ಆಡುವ ಮಾತು/ಬಳಸುವ ನುಡಿಗಿಂತ ಮಿಗಿಲಾಗಿ ವ್ಯಕ್ತಿಯು ಮಾಡುವ ಕೆಲಸ ಒಳ್ಳೆಯ ರೀತಿಯಲ್ಲಿರಬೇಕು;

ಭಕ್ತಿ+ಅನ್+ಅರಿಯಬೇಕು; ಭಕ್ತಿ=ದೇವರನ್ನು ಪೂಜಿಸಲು/ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ಅನ್=ಅನ್ನು; ಅರಿ=ತಿಳಿ/ಕಲಿ; ಬೇಕು=ಅಗತ್ಯ/ಅವಶ್ಯ; ಅರಿಯಬೇಕು=ತಿಳಿದುಕೊಳ್ಳಬೇಕು/ಗೊತ್ತು ಮಾಡಿಕೊಳ್ಳಬೇಕು/ಮನದಟ್ಟು ಮಾಡಿಕೊಳ್ಳಬೇಕು ; ಭಕ್ತಿಯನರಿಯಬೇಕು=ಒಳ್ಳೆಯ ನಡೆನುಡಿಗಳಿಂದ ವ್ಯಕ್ತಿಯು ತನ್ನ ಬದುಕನ್ನು ರೂಪಿಸಿಕೊಳ್ಳಬೇಕು;

ಸತ್ಯ+ಅಲ್ಲಿ; ಸತ್ಯ=ದಿಟ/ನಿಜ/ವಾಸ್ತವ; ನಡೆ=ಆಚರಣೆ/ವರ‍್ತನೆ/ನಡವಳಿಕೆ; ಸತ್ಯದಲ್ಲಿ ನಡೆಯಬೇಕು=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಕೆಲಸದಲ್ಲಿ ತೊಡಗಬೇಕು; ವಿರಕ್ತಿ+ಅಲ್ಲಿ; ವಿರಕ್ತಿ=ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವಂತಹ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿರುವ ನಿಲುವು; ವಿಚಾರಿಸಿ=ಸರಿ-ತಪ್ಪುಗಳನ್ನು ಒರೆಹಚ್ಚಿ ನೋಡಿ/ ಒಳ್ಳೆಯದು ಯಾವುದು-ಕೆಟ್ಟದ್ದು ಯಾವುದು ಎಂಬುದನ್ನು ತಿಳಿದುಕೊಂಡು/ಅರಿತುಕೊಂಡು; ನಿಲ್ಲು=ಇರು/ತಂಗು/ಜೀವಿಸು/ಬದುಕು; ನಿಲ್ಲಬೇಕು=ಬಾಳಬೇಕು/ಜೀವನವನ್ನು ರೂಪಿಸಿಕೊಳ್ಳಬೇಕು;

ವಿರಕ್ತಿಯಲ್ಲಿ ವಿಚಾರಿಸಿ ನಿಲ್ಲಬೇಕು=ವ್ಯಕ್ತಿಯು ತನ್ನ ಮಯ್ ಮನಗಳನ್ನು ತಾನು ಹತೋಟಿಯಲ್ಲಿಟ್ಟುಕೊಂಡು ಒಳಿತಿನ ನಡೆನುಡಿಗಳಿಂದ ಕೂಡಿ ಬಾಳಬೇಕು;

ಗುಣ=ನಡತೆ/ನಡವಳಿಕೆ/ಸಜ್ಜನಿಕೆ/ವರ‍್ತನೆ; ಈ ಗುಣ=ಇಂತಹ ಒಳ್ಳೆಯ ನಡವಳಿಕೆ/ಈ ಬಗೆಯ ಸಜ್ಜನಿಕೆ; ಈ ಗುಣ ಡಕ್ಕೆಯ ಬೊಮ್ಮನ ಭಕ್ತಿ=ವಚನಕಾರನಾದ ಡಕ್ಕೆಯ ಬೊಮ್ಮಣ್ಣನು ಈ ಬಗೆಯ ಒಳ್ಳೆಯ ನಡೆನುಡಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿದ್ದನು;

ಕಾಲ+ಅಂತಕ; ಕಾಲ=ಸಮಯ/ವೇಳೆ; ಅಂತಕ=ಯಮ/ಸಾವಿನ ದೇವತೆ; ಕಾಲಾಂತಕ=ಹುಟ್ಟಿದ ಸಕಲಜೀವಿಗಳ ಪ್ರಾಣವನ್ನು/ಉಸಿರನ್ನು ಒಂದಲ್ಲ ಒಂದು ದಿನ ಕೊಂಡೊಯ್ಯುವ ದೇವತೆಯಾದ ಯಮ; ನೀರು-ಬೆಂಕಿ-ನೆಲ-ಮರಗಿಡ-ಹಣ-ವಿದ್ಯೆ ಎಲ್ಲಕ್ಕೂ ಒಬ್ಬೊಬ್ಬ ದೇವತೆಯನ್ನು ಕನ್ನಡ ಜನಸಮುದಾಯವು ಕಲ್ಪಿಸಿಕೊಂಡಿರುವಂತೆಯೇ ಸಾವಿಗೂ ಯಮನೆಂಬ ಹೆಸರಿನ ದೇವತೆಯನ್ನು ಕಲ್ಪಿಸಿಕೊಂಡಿದೆ; ಭೀಮೇಶ್ವರಲಿಂಗ+ಅನ್+ಅರಿವವನ; ಭೀಮೇಶ್ವರಲಿಂಗ=ಈಶ್ವರ/ಶಿವ/ದೇವರು; ಕಾಲಾಂತಕ ಭೀಮೇಶ್ವರಲಿಂಗ=ಡಕ್ಕೆಯ ಬೊಮ್ಮಣ್ಣನ ವಚನಗಳ ಅಂಕಿತನಾಮ; ಅರಿವವನ=ತಿಳಿದುಕೊಳ್ಳುವ ವ್ಯಕ್ತಿಯ/ಅರಿತುಕೊಳ್ಳುವವನ; ಸದ್ಭಕ್ತಿ=ಒಳ್ಳೆಯ ನಡೆನುಡಿ;

ಕಾಲಾಂತಕ ಭೀಮೇಶ್ವರಲಿಂಗವನರಿವವನ ಸದ್ಭಕ್ತಿ=ಶಿವನನ್ನು ಪೂಜಿಸುವ/ಒಲಿಸಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ನಡೆನುಡಿಗಳಿಂದ ತನಗೆ ಒಳಿತನ್ನು ಮಾಡಿಕೊಳ್ಳುವಂತೆಯೇ ಸಹಮಾನವರ ಮತ್ತು ಸಮಾಜದ ಹಿತಕ್ಕಾಗಿ ತಾನು ಬಾಳಬೇಕೆಂಬುದನ್ನು ಅರಿತಿರುತ್ತಾನೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ.)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: