‘ಲೇಮ್ ಡೆವಿಲ್’ ಉತ್ಸವ – ಲಾ ವೇಗಾ

– ಕೆ.ವಿ.ಶಶಿದರ.

ಲಾ ವೇಗಾ, La Vega

ಅಮೇರಿಕಾಸ್ ನಲ್ಲಿ ನಡೆಯುವ ಅನೇಕ ಕಾರ‍್ನಿವಾಲ್‍ಗಳಲ್ಲಿ ಲಾ ವೇಗಾದಲ್ಲಿ ನಡೆಯುವ ಕಾರ‍್ನಿವಾಲ್ ಅತ್ಯಂತ ಹಳೆಯದೆಂದು ಇತಿಹಾಸಕಾರರು ದಾಕಲಿಸಿದ್ದಾರೆ. ಅವರ ಪ್ರಕಾರ ಇದು 16ನೇ ಶತಮಾನದ ಆದಿ ಬಾಗದಲ್ಲಿ ಪ್ರಾರಂಬವಾಗಿರಬಹುದೆಂದು ಅಂದಾಜಿಸಿದ್ದಾರೆ. 1520ರಲ್ಲಿ ಈ ನಗರಕ್ಕೆ ಬೇಟಿ ನೀಡಿದ ಪ್ರೇ ಬಾರ‍್ಟೊಲೊಮೆ ಡೆ ಲಾಸ್ ಕಾಸಾಸ್ (Fray Bartolomé de las Casas), ಇಲ್ಲಿನ ಸ್ತಳೀಯರು ಮೂರಿಶ್ ಹಾಗೂ ಕ್ರಿಶ್ಚಿಯನ್ ವೇಶಬೂಶಣಗಳನ್ನು ದರಿಸಿ ಆಚರಿಸುವುದನ್ನು ಕಂಡಿರುವುದಾಗಿ ವಿವರಿಸಿದ್ದಾನೆ.

ಸೈತಾನ್ ನ ತಾಳ್ಮೆಯನ್ನು ಪರೀಕ್ಶಿಸಿದ ಲೇಮ್ ಡೆವಿಲ್!

ಇಂದಿಗೂ ಸಹ ಲಾ ವೇಗಾ ಕಾರ‍್ನಿವಾಲ್, ಡೊಮಿನಿಕ್ ದೇಶದಲ್ಲಿ ಅತ್ಯಂತ ಪ್ರಸಿದ್ದವಾದದ್ದು ಹಾಗೂ ವಿಶ್ವದ ಅತ್ಯುತ್ತಮ ಉತ್ಸವಗಳಲ್ಲಿ ಒಂದಾಗಿದೆ. ಡೊಮಿನಿಕ್ ದೇಶದ ಈ ಉತ್ಸವದ ಮೂಲ ಪಾತ್ರವು ‘ಲೇಮ್ ಡೆವಿಲ್’ ಅನ್ನು ಪ್ರತಿನಿದಿಸುತ್ತದೆ. ಈ ಪಾತ್ರದ ಸ್ರುಶ್ಟಿಯೂ ಸಹ ವಿಚಿತ್ರವಾಗಿದೆ. ಸಂಪ್ರದಾಯದ ಪ್ರಕಾರ ಲೇಮ್ ಡೆವಿಲ್ ಸೈತಾನನ ತಾಳ್ಮೆಯನ್ನು ಪರೀಕ್ಶಿಸಲು ಪ್ರಯತ್ನಿಸಿದ, ಚೇಶ್ಟೆಯ ಹಾಗೂ ತಮಾಶೆ ಮಾಡುವಂತಹ ಬಹು ಮುಕ ಪ್ರತಿಬೆಯ ಪಾತ್ರ. ಸೈತಾನನು ಡೆವಿಲ್‍ ಅನ್ನು ಜೋರಾಗಿ ತಳ್ಳಿದಾಗ, ಅದು ನೇರ ಬಂದು ಅಪ್ಪಳಿಸಿದ್ದು ಬೂಮಿಗೆ. ಅಪ್ಪಳಿಸಿದ ರಬಸಕ್ಕೆ ಕೈಕಾಲುಗಳು ಮುರಿದು ಊನವಾಯಿತು. ಇದಕ್ಕೆ ಅದನ್ನು ‘ಡಯಾಬ್ಲೊ ಕೊವೆಲೊ’ ಅತವಾ ‘ಲೇಮ್ ಡೆವಿಲ್’ ಎಂಬ ಅನ್ವರ‍್ತನಾಮ.

ಲೇಮ್ ಡೆವಿಲ್ ಅನ್ನು ಸ್ಪಾನಿಶ್‍ನಲ್ಲಿ ಡಯಾಬ್ಲೊ ಕೊವೆಲೊ(Diablo cojuelo) ಎನ್ನುತ್ತಾರೆ. ಅಂದರೆ ಕುಚೋದ್ಯದ ಪ್ರೇತ ಎನ್ನಬಹುದು. ಇದು ಉದ್ದನೆಯ ಹಲ್ಲುಗಳನ್ನು ಹೊಂದಿರುವ ಮುಕವಾಡ ದರಿಸಿದ್ದು ಮಕ್ಕಳಾದಿಯಾಗಿ ಎಲ್ಲರನ್ನೂ ಬಯಬೀತಗೊಳಿಸುತ್ತದೆ. ಮೈ ತುಂಬಾ ಗರಿಗಳು ಮತ್ತು ತುಪ್ಪಳದಿಂದ ತಯಾರಾದ ಬಣ್ಣ ಬಣ್ಣದ ವೇಶಬೂಶಣವನ್ನು ಹೊಂದಿರುವುದು ಇದರ ಮತ್ತೊಂದು ಲಕ್ಶಣ.

ಎಲ್ಲಂದರಲ್ಲಿ ಪ್ರತ್ಯಕ್ಶವಾಗುವ ಡೆವಿಲ್ ಗಳು!

ಲೇಮ್ ಡೆವಿಲ್ ಕಾರ‍್ನಿವಾಲ್ ನಡೆಯುವುದು ಪ್ರತಿ ವರ‍್ಶ ಪೆಬ್ರವರಿಯಲ್ಲಿ. ಕಾರ‍್ನಿವಾಲ್‍ನ ಬಾಗವಾಗಿ ಪೆಬ್ರವರಿಯ ಪ್ರತಿ ಬಾನುವಾರ ಬವ್ಯ ನ್ರುತ್ಯ ಪ್ರದರ‍್ಶನ ಬೀದಿ ಬೀದಿಯಲ್ಲೂ ನಡೆಯುತ್ತದೆ. ನ್ರುತ್ಯ ಪ್ರದರ‍್ಶನ ಹಾಗೂ ಮೆರವಣಿಗೆ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಎಲ್ಲಿಂದಲೋ ಲೇಮ್ ಡೆವಿಲ್‍ಗಳು ದುತ್ತೆಂದು ಪ್ರತ್ಯಕ್ಶವಾಗುತ್ತವೆ. ಕೈಯಲ್ಲಿ ಗಾಳಿ ತುಂಬಿದ ತೆಳು ಚೀಲ ಹಿಡಿದುಕೊಂಡು ಬಂದ ಅವು ಕ್ಶಣ ಮಾತ್ರದಲ್ಲಿ ಇಡೀ ರಸ್ತೆಯನ್ನು ತಮ್ಮ ಸ್ವಾದೀನಕ್ಕೆ ಪಡೆಯುತ್ತವೆ. ಪಲಾಯನ ಮಾಡಲು ಯತ್ನಿಸುವವರ ತೊಡೆ, ಕಾಲುಗಳಿಗೆ ತೆಳು ಗಾಳಿಯ ಚೀಲದಿಂದ ಬಲವಾಗಿ ಹೊಡೆದು ಕ್ಶಣಕಾಲ ಹೆಳವನನ್ನಾಗಿ ಮಾಡಿ ‘ಅವರಗಳು ಮಾಡಿದ್ದ ಪಾಪ’ವನ್ನು ತೊಳೆಯುತ್ತವೆ.

ಇಲ್ಲಿ ಡೆವಿಲ್ ಗಳ ಮುಕವಾಡಗಳು ಹೆಚ್ಚು ಜನಪ್ರಿಯ

ಪೆಬ್ರವರಿ 27ರಂದು ಡೋಮಿನಿಕ್ ಗಣರಾಜ್ಯದ ಸ್ವಾತಂತ್ರ್ಯ ದಿನಾಚರಣೆ. ಲಾ ವೇಗಾದ ಲೇಮ್ ಡೆವಿಲ್ ಕಾರ‍್ನಿವಾಲ್ ಸಹ ತಿಂಗಳ ಪೂರ‍್ತಿಯ ಆಚರಣೆಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಂಬ್ರಮದ ತೆರೆ ಎಳೆಯಲಾಗುತ್ತದೆ. ಲಾ ವೇಗಾದ ಲೇಮ್ ಡೆವಿಲ್‍ಗಳು ದರಿಸುವ ಮುಕವಾಡವನ್ನು ‘ಪೇಪಿಯರ‍್-ಮಾಶೆ’( papier-mãché ) ಎನ್ನುತ್ತಾರೆ. ಡೊಮಿನಿಕ್ ದೇಶದಲ್ಲಿ ಈ ಮುಕವಾಡಗಳು ಅತ್ಯಂತ ಜನಪ್ರಿಯತೆ ಹಾಗೂ ಮೆಚ್ಚುಗೆಯನ್ನು ಪಡೆದಿವೆ. ಬಯಾನಕ ಮತ್ತು ಬೀಬತ್ಸ ಮುಕಚರ‍್ಯೆಯನ್ನು ಹೊಂದಿರುವ ಈ ಡೆವಿಲ್‍ಗಳು ಡೊಮಿನಿಕ್‍ನ ಎಲ್ಲಾ ಪ್ರಾಂತೀಯ ಉತ್ಸವಗಳಲ್ಲೂ ಮೂಲ ಆಕರ‍್ಶಣೆ. ಹೆಸರುಗಳು ಮಾತ್ರ ಬೇರೆ ಬೇರೆ. ಸಾಲ್ಸೆಡೊ ಮತ್ತು ಬೊನೊವಗಳಲ್ಲಿ ‘ಮಕರಾವೋಸ್’ ಎಂದು ಕರೆದರೆ ಸ್ಯಾಂಟಿಯಾಗೊದಲ್ಲಿ ‘ಡಿ ಲಾಸ್ ಕಾಬಾಲ್ಲೆರೋಸ್ ಲೆಕೊನೆಸ್’ ಎನ್ನುತ್ತಾರೆ.

ಲಾ ವೇಗಾದ ಕಾರ‍್ನಿವಾಲ್‍ನಲ್ಲಿ ಬ್ರಾಂಕೊಸ್, ಟಿಜ್ನಾಡೋಸ್, ಎನ್ಲೊಡಾಡೋಸ್ ಮುಂತಾದ ವಿವಿದ ಪ್ರಾಕಾರದ ಬೀದಿ ನ್ರುತ್ಯಗಳನ್ನು ಕಾಣಬಹುದು. ಈ ನ್ರುತ್ಯ ಪ್ರಾಕಾರಗಳಿಗೆ ಮೂಲ ಡೊಮಿನಿಕ್‍ನಲ್ಲಿ ಬಂದು ನೆಲೆಸಿರುವ ಕ್ಯೂಬಾದವರ ‘ಕುಲೆಬ್ರ ಡೆ ಸ್ಯಾನ್ ಬ್ಲಾಸ್’ ಸಂಸ್ಕ್ರುತಿ. 19ನೇ ಶತಮಾನದಲ್ಲಿ ಕ್ಯೂಬಾದಲ್ಲಿ ನಡೆದ ಆಂತರಿಕ ಕ್ರಾಂತಿಯ ಸಮಯದಲ್ಲಿ ಅವರುಗಳು ಇಲ್ಲಿಗೆ ವಲಸೆ ಬಂದರು ಎಂದು ಹೇಳಲಾಗುತ್ತದೆ.

( ಮಾಹಿತಿ ಮತ್ತು ಚಿತ್ರ ಸೆಲೆ: traveltradecaribbean.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.