ಸಿಹಿ ಸಿಹಿಯಾದ ‘7 ಕಪ್ ಬರ‍್ಪಿ’

– ಬವಾನಿ ದೇಸಾಯಿ.

7 ಕಪ್ ಬರ‍್ಪಿ 7 Cup Burfiಹೆಸರೇ ಹೇಳುವಂತೆ ಏಳು ಬಗೆಯ ಪದಾರ‍್ತಗಳಿಂದ ತಯಾರಿಸುವ ಸಿಹಿ ಇದು. ಈಗ ಇದನ್ನ ಹೇಗೆ ಮಾಡೋದು ಅಂತ ತಿಳಿಯೋಣ.

ಬೇಕಾಗುವ ಪದಾರ‍್ತಗಳು:

– 2 ಕಪ್ ಸಕ್ಕರೆ.
– 1 ಕಪ್ ಕಡಲೆಹಿಟ್ಟು.
– 1 ಕಪ್ ತುಪ್ಪ.
– 1 ಕಪ್ ತುರಿದ ಕೊಬ್ಬರಿ.
– 1 ಕಪ್ ಹಾಲು.
– 1 ಕಪ್ ಗೋಡಂಬಿ ಮತ್ತು ಬಾದಾಮಿ ಪುಡಿ.
– ಸ್ವಲ್ಪ ಏಲಕ್ಕಿಕಾಯಿ ಪುಡಿ.

ಮಾಡುವ ಬಗೆ:

ಒಂದು ದಪ್ಪ ತಳ ಇರುವ ಪಾತ್ರೆಗೆ ಕಡಲೆಹಿಟ್ಟನ್ನು ಹಾಕಿ, ಹಸಿವಾಸನೆ ಹೋಗಿ ಗಮ ಬರುವವರೆಗೆ ಹುರಿಯಿರಿ.

ಈಗ ಅದಕ್ಕೆ, ಹಾಲು, ಸಕ್ಕರೆ, ತುಪ್ಪ, ಕೊಬ್ಬರಿ ತುರಿ, ಗೋಡಂಬಿ ಮತ್ತು ಬಾದಾಮಿ ಪುಡಿ ಹಾಕಿ ತಿರುವುತ್ತಿರಿ.

ಸುಮಾರು 20 ನಿಮಿಶದ ಬಳಿಕ, ಬರ‍್ಪಿ ತಳ ಬಿಡೋಕೆ ಶುರುವಾಯಿತು ಅಂದರೆ, ಬರ‍್ಪಿ ಆಯಿತು ಅಂತ ಅರ‍್ತ.

ಈಗ, ಏಲಕ್ಕಿಕಾಯಿ ಪುಡಿ ಹಾಕಿ, ತುಪ್ಪ ಸವರಿದ ಒಂದು ತಟ್ಟೆಗೆ ಬರ‍್ಪಿನ ಹರಡಿ.

ಬರ‍್ಪಿ ಸ್ವಲ್ಪ ಆರಿದ ಮೇಲೆ ನಿಮಗೆ ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಕತ್ತರಿಸಿದರೆ, ಬರ‍್ಪಿ ಸವಿಯಲು ಸಿದ್ದ.

(ಚಿತ್ರ ಸೆಲೆ: ಬವಾನಿ ದೇಸಾಯಿ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks