ರಣಜಿ ಟೂರ‍್ನಿ 2018/19 ಮತ್ತು ಕರ‍್ನಾಟಕ ತಂಡ

– ರಾಮಚಂದ್ರ ಮಹಾರುದ್ರಪ್ಪ.

ರಣಜಿ, Ranji

ಬಾರತದ ಪ್ರತಿಶ್ಟಿತ ಕ್ರಿಕೆಟ್ ದೇಸೀ ಪಂದ್ಯಾವಳಿಯಾದ ರಣಜಿ ಟ್ರೋಪಿಯ 85ನೇ ಆವ್ರುತ್ತಿ ಇದೇ ನವಂಬರ್ 1 ರಂದು ಶುರುವಾಯಿತು. ಕಳೆದ ವರುಶ ಸೆಮಿಪೈನಲ್ ನಲ್ಲಿ ವಿದರ‍್ಬ ಎದುರು 5 ರನ್ ಗಳಿಂದ ಮುಗ್ಗರಿಸಿದ್ದ ಕರ‍್ನಾಟಕ ತಂಡ, ಈ ಬಾರಿ ಮೊದಲ ಸುತ್ತಿನಲ್ಲಿ ಪಂದ್ಯ ಆಡದೇ ನವಂಬರ್ 12 ರಂದು ಹಾಲಿ ಚಾಂಪಿಯನ್ ವಿದರ‍್ಬ ಎದುರೇ ನಾಗ್ಪುರದಲ್ಲಿ ತನ್ನ ಈ ಸಾಲಿನ ರಣಜಿ ಪಯಣ ಆರಂಬಿಸಲಿದೆ. ಕಳೆದ ವರುಶ ಒಂದು ದಿನದ ಪಂದ್ಯಾವಳಿಯಾದ ವಿಜಯ್ ಹಜಾರೆ ಟ್ರೋಪಿಯನ್ನು ಗೆದ್ದು, ಅಬಿಮಾನಿಗಳಿಗಾಗಿದ್ದ ರಣಜಿ ಸೋಲಿನ ನೋವನ್ನು ಕೊಂಚ ಮಟ್ಟಿಗೆ ಮರೆಸಿದ್ದ ಕರ‍್ನಾಟಕ, ಈ ಬಾರಿ ವಿಜಯ್ ಹಜಾರೆ ಟ್ರೋಪಿಯ 8 ಪಂದ್ಯಗಳಲ್ಲಿ ಎರಡನ್ನಶ್ಟೇ ಗೆದ್ದು ಮೊದಲ ಸುತ್ತಿನಲ್ಲೇ ಹೊರನಡೆದು ತಂಡದ ಅಳವಿನ ಬಗ್ಗೆಯೇ ಅನುಮಾನ ಹುಟ್ಟುವಂತೆ ಮಾಡಿರುವುದು ಸುಳ್ಳಲ್ಲ.

ಈ ಬಾರಿ ಹೆಚ್ಚು ತಂಡಗಳು

ಬಿಸಿಸಿಐನ ಬ್ರಶ್ಟಾಚಾರದ ಆರೋಪಗಳು ಮುಗಿಲು ಮುಟ್ಟಿದ್ದರಿಂದ ಸುಪ್ರೀಮ್ ಕೋರ‍್ಟ್ ಮೂರು ಸದಸ್ಯರ ಲೋದಾ ಕಮಿಟಿಯನ್ನು ಮಾಡಿ ಬ್ರಶ್ಟಾಚಾರವನ್ನು ಹತ್ತಿಕ್ಕುವ ಬಗೆಗೆ ಒಂದು ವರದಿ ಕೇಳಿತ್ತು. ಈ ವರ‍್ಶ ಈ ವರದಿಯ ಶಿಪಾರಸ್ಸಿನ ಮೇರೆಗೆ ರಾಜ್ಯಕ್ಕೊಂದು ತಂಡವಿರಲೇಬೇಕೆಂದು ಬಿಸಿಸಿಐ ಒಟ್ಟು ಹೊಸ 9 ತಂಡಗಳನ್ನು ( ಬಿಹಾರ್, ಉತ್ತರಾಕಂಡ್, ಪುದುಚೆರಿ, ಮೇಗಾಲಯ, ಸಿಕ್ಕಿಮ್, ಮಿಜೋರಾಮ್, ಮಣಿಪುರ್, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ) ಹುಟ್ಟು ಹಾಕಿತು. ಇದರಿಂದ ತಂಡಗಳ ಎಣಿಕೆ 28 ರಿಂದ 37ಕ್ಕೆ ಮುಟ್ಟಿತು. ಹೊಸ ತಂಡಗಳಾದುದರಿಂದ ಎಲ್ಲಾ 9 ತಂಡಗಳನ್ನು ಪ್ಲೇಟ್ ಗುಂಪಿನಲ್ಲಿ ಇರಿಸಿ ಪಂದ್ಯಾವಳಿಯ ಪೈಪೋಟಿಗೆ ಕುಂದು ಬರದಂತೆ ಬಿಸಿಸಿಐ ನೋಡಿಕೊಂಡಿದೆ.

ಈ ಬಾರಿಯ ಟೂರ‍್ನಿಯ  ಬದಲಾದ ಸ್ವರೂಪ

ಕಳೆದ ಬಾರಿ ಇದ್ದ 28 ತಂಡಗಳನ್ನು ಕ್ರಮವಾಗಿ 7 ತಂಡಗಳುಳ್ಳ 4 ಗುಂಪುಗಳಾಗಿ ಬೇರ‍್ಪಡಿಸಲಾಗಿತ್ತು. ಆದರೆ ಈ ಬಾರಿ 37 ತಂಡಗಳಿರುವುದರಿಂದ ಎಲೈಟ್ ಎ ಮತ್ತು ಬಿ ಗುಂಪಿನಲ್ಲಿ ತಲಾ 9 ತಂಡಗಳನ್ನು ಮತ್ತು ಎಲೈಟ್ ಸಿ ಗುಂಪಿನಲ್ಲಿ 10 ತಂಡಗಳನ್ನು ಇರಿಸಲಾಗಿದೆ. ಹಾಗೂ ಎಲ್ಲಾ 9 ಹೊಸ ತಂಡಗಳನ್ನು ಪ್ಲೇಟ್ ಗುಂಪಿನಲ್ಲಿ ಇರಿಸಲಾಗಿದೆ.ಎ ಮತ್ತು ಬಿ ಎರಡೂ ಗುಂಪುಗಳಿಂದ ಸೇರಿ ಒಟ್ಟು ಅಂಕಪಟ್ಟಿಯ ಮೊದಲ 5 ತಂಡಗಳು ಕ್ವಾರ‍್ಟರ್ ಪೈನಲ್ ತಲುಪುವ ಅರ‍್ಹತೆ ಪಡೆಯಲಿದ್ದಾರೆ. ಮತ್ತು ಎಲೈಟ್ ಸಿ ಗುಂಪಿನಿಂದ ಮೊದಲ 2 ತಂಡಗಳು ಕ್ವಾರ‍್ಟರ್ ಪೈನಲ್ ಪ್ರವೇಶಿಸಿದರೆ ಪ್ಲೇಟ್ ಗುಂಪಿನಲ್ಲಿ ಮೊದಲ ಎಡೆ ಪಡೆಯುವ ತಂಡ ಅಂತಿಮ ಎಂಟರ ಗಟ್ಟ ತಲುಪಲಿದೆ. ಸಿ ಗುಂಪಿನಲ್ಲಿ ಕಡೆಯ ಸ್ತಾನ ಪಡೆಯುವ ತಂಡವನ್ನು ಮುಂದಿನ ಟೂರ‍್ನಿಗೆ ಪ್ಲೇಟ್ ಗುಂಪಿಗೆ ತಳ್ಳಲಾಗುತ್ತದೆ. ಕಳೆದ ಬಾರಿ ಇದ್ದ ಗೆಲುವಿಗೆ 6 ಅಂಕ, ಇನ್ನಿಂಗ್ಸ್ ಹಾಗೂ 10 ವಿಕೆಟ್ ಗೆಲುವುಗಳಿಗೆ 1 ಬೋನಸ್ ಅಂಕ. ಗೆಲುವಿಲ್ಲದ ಇನ್ನಿಂಗ್ಸ್ ಮುನ್ನಡೆಗೆ 3 ಅಂಕ ಮತ್ತು ಸೋಲಿಲ್ಲದ ಇನ್ನಿಂಗ್ಸ್ ಹಿನ್ನಡೆಗೆ 1 ಅಂಕ ಕೊಡುವ ಪದ್ದತಿಯೇ ಈ ಬಾರಿಯೂ ಮುಂದುವರಿಯಲಿದೆ.

ಹೆಚ್ಚು ತಂಡಗಳಿಂದ ಆಗಿರುವ ಗೊಂದಲ

ಪ್ರಪಂಚದಲ್ಲಿ ಕ್ರಿಕೆಟ್ ಆಡುವ ಯಾವೊಂದು ದೇಶದಲ್ಲೂ ಇಲ್ಲದಶ್ಟು ಮೊದಲ ದರ‍್ಜೆ ಕ್ರಿಕೆಟ್ ತಂಡಗಳು ಈಗ ಬಾರತದಲ್ಲಿವೆ. 28 ತಂಡಗಳಿದ್ದಾಗಲೇ ಕ್ರಿಕೆಟ್ ನ ಸ್ಪರ‍್ದಾತ್ಮಕತೆಯ ದ್ರುಶ್ಟಿಯಿಂದ ಹಲವಾರು ಕ್ರಿಕೆಟ್ ಪಂಡಿತರು ತಂಡಗಳ ಎಣಿಕೆಯನ್ನು ತಗ್ಗಿಸುವಂತೆ ಹೇಳುತ್ತಿದ್ದರು. ಈಗ ತಂಡಗಳ ಎಣಿಕೆ 37ಕ್ಕೆ ಏರಿರೋದು ಒಂದು ಗೊಂದಲಮಯ ವಾತಾವರಣವನ್ನು ಸ್ರುಶ್ಟಿ ಮಾಡಿದೆ ಎಂದರೆ ತಪ್ಪಾಗಲಾರದು. ಹೊಸ ತಂಡಗಳಿಂದ ಹೊಸ ಪ್ರತಿಬೆಗಳು ಹೊರಹೊಮ್ಮುವುದಕ್ಕಿಂತ ಬಲಿಶ್ಟ ತಂಡಗಳಿಂದ ಕೈ ಬಿಡಲಾಗಿದ್ದ ಬೇರೆ ರಾಜ್ಯದ ಆಟಗಾರರೇ ಈ ತಂಡಗಳಲ್ಲಿ ಹೆಚ್ಚು ಎಡೆ ಪಡೆದ್ದಿದ್ದಾರೆ. ಎತ್ತುಗೆಗೆ, ನಾಗಾಲ್ಯಾಂಡ್ ತಂಡದ ನಾಯಕ ಕರ‍್ನಾಟಕದ ಜೊನಾತನ್ ಆದರೆ, ವಿಕೆಟ್ ಕೀಪರ್ ಕನ್ನಡಿಗ ಕೆ.ಬಿ ಪವನ್ ಆಗಿದ್ದಾರೆ. ಹಾಗೂ ಕಳೆದ ವಾರ ಮಿಜೋರಾಮ್ ಎದುರು ನಾಗಾಲ್ಯಾಂಡ್ ತಂಡದ ಮೊದಲ ಗೆಲುವಿನಲ್ಲಿ ಸೊಗಸಾದ ಅಜೇಯ ದ್ವಿಶತಕದ ಜೊತೆಗೆ 9 ವಿಕೆಟ್ ಕೆಡವಿ ಮುಕ್ಯ ಪಾತ್ರ ವಹಿಸಿದ ಅಬರಾರ್ ಕಾಜಿ ಕೂಡ ಕರ‍್ನಾಟಕದವರು. ಹೀಗೆ ಎಲ್ಲಾ ಹೊಸ ತಂಡಗಳಲ್ಲಿಯೂ  ಕರ‍್ನಾಟಕ, ದೆಹಲಿ, ಪಂಜಾಬ್, ಮುಂಬೈ ಹೀಗೆ ನಾನಾ ಪ್ರಮುಕ ತಂಡಗಳ ಹಳೇ ಆಟಗಾರರೇ ಹೆಚ್ಚು ಇದ್ದಾರೆ. ಈ ಹೆಚ್ಚುವರಿ ತಂಡಗಳಿಂದ ದೇಶದ ಕ್ರಿಕೆಟ್ ಗಾದ ಪ್ರಯೋಜನವಾದರೂ ಏನು ಅನ್ನೋದು ಬಗೆಹರಿಯದ ಕೇಳ್ವಿಯಾಗಿಯೇ ಉಳಿದಿದೆ.

ಕಳೆದ ತಿಂಗಳು ನಡೆದ ವಿಜಯ್ ಹಜಾರೆ ಟ್ರೋಪಿಯಲ್ಲಿ ಬಿಹಾರ್ ತಂಡ ಪ್ಲೇಟ್ ಗುಂಪಿನಿಂದ ಕ್ವಾರ‍್ಟರ್ ಪೈನಲ್ ತಲುಪಿತ್ತು. ಆದರೆ ಮುಂಬೈ ಎದುರು ಕೇವಲ 69 ರನ್ ಗಳಿಗೆ ಆಲೌಟ್ ಆಗಿ ಶೋಚನೀಯ ಸೋಲು ಕಂಡಿತು. ಈ ಸೋಲಿನಿಂದ ಇತರೆ ತಂಡಗಳಿಗೂ ಈ ಹೊಸ ತಂಡಗಳಿಗೂ ಇರುವ ಅಂತರ ತಿಳಿಯುತ್ತದೆ. ಈ ತಂಡಗಳು ಗೆಲ್ಲುವುದಿರಲಿ ಪೈಪೋಟಿ ನೀಡಲು ಹೆಣಗಾಡುತ್ತಿರುವುದು ದೇಶೀ ಕ್ರಿಕೆಟ್ ನ ಒಂದು ದೊಡ್ಡ ಅಬಾಸ. ಹಾಗಾಗಿ ಬಿಸಿಸಿಐ ಆದಶ್ಟು ಬೇಗ ಕ್ರಿಕೆಟ್ ನ ಗುಣಮಟ್ಟ ಕಾಪಾಡುವತ್ತ ಗಮನ ಹರಿಸಬೇಕಿದೆ. ಜೊತೆಗೆ ರಣಜಿ ಟೂರ‍್ನಿ ನಡೆಯುವ ವೇಳೆ ಹಲವಾರು ರಣಜಿ ತಂಡಗಳ ಮುಕ್ಯ ಆಟಗಾರರನ್ನು ಬಾರತ ಎ ತಂಡಕ್ಕೆ ಆಯ್ಕೆ ಮಾಡಿ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಕಳಿಸುತ್ತಿರುವ ತೀರ‍್ಮಾನ ಮೂರ‍್ಕತನದ್ದೆಂದೇ ಹೇಳಬೇಕು. ಯಾವೊಂದು ದೇಶದಲ್ಲೂ ತಮ್ಮ ಮೊದಲ ದರ‍್ಜೆ ಕ್ರಿಕೆಟ್ ಪಂದ್ಯಾವಳಿಯ ಹೊತ್ತಿನಲ್ಲಿ ಎ ತಂಡವನ್ನು ಹೊರದೇಶಕ್ಕೆ ಕಳಿಸಿರೋ ಎತ್ತುಗೆಗಳಿಲ್ಲ. ದೇಶದ ಪ್ರಬಲ ಆಟಗಾರರು ರಣಜಿ ಟೂರ‍್ನಿಯಲ್ಲಿ ಪಾಲ್ಗೊಳ್ಳದ್ದಿದ್ದರೆ ನಮ್ಮ ದೇಶೀ ಕ್ರಿಕೆಟ್ ಇನ್ನಶ್ಟು ಸೊರಗಲಿದೆ ಅನ್ನೋ ಸಣ್ಣ ವಿಚಾರ ಬಿಸಿಸಿಐ ಮಂದಿಗೆ ತಿಳಿಯದದ್ದು ಸೋಜಿಗವೇ ಸರಿ!

ಕರ‍್ನಾಟಕ ಕ್ರಿಕೆಟ್ ತಂಡಕ್ಕೆ ಅತಿ ಹೆಚ್ಚು ಬೆಂಬಲಿಗರು!

ಕರ‍್ನಾಟಕ ತಂಡಕ್ಕೆ ಯಾವೊಂದು ರಾಜ್ಯ ತಂಡಕ್ಕೂ ಇಲ್ಲದಶ್ಟು ಬೆಂಬಲಿಗರು ಇದ್ದಾರೆ.  ನಮ್ಮ ತಂಡ ಆಡುವ ಪ್ರತಿಯೊಂದು ಪಂದ್ಯದ ಸ್ಕೋರ್ ವಿವರಗಳನ್ನು ಕರ‍್ನಾಟಕ ರಣಜಿ ತಂಡದ ಪೇಸ್ಬುಕ್ ಮತ್ತು ಟ್ವಿಟ್ಟರ್ ಕಾತೆಯಿಂದ ಪಡೆಯುವುದರ ಜೊತೆಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ. ಕರುನಾಡ ಕ್ರಿಕೆಟ್ ಪ್ರೇಮಿಗಳು ಯಾವ ಮಟ್ಟಕ್ಕೆ ಈ ರಣಜಿ ಪಂದ್ಯಗಳನ್ನು ನೋಡುತ್ತಾರೆ ಎಂಬುದರ ಎತ್ತುಗೆ ಕಳೆದ ವರ‍್ಶ ನೋಡಸಿಕ್ಕಿತು. ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ಒಂದರಲ್ಲಿ ಇನ್ನಿಂಗ್ಸ್ ಮುನ್ನಡೆ ಪಡೆದು ಆಗಾಗಲೇ ಕ್ವಾರ‍್ಟರ್ ಪೈನಲ್ ತಲುಪಿದ್ದ ಕರ‍್ನಾಟಕ, ಉತ್ತರ ಪ್ರದೇಶದ ಎದುರು 600 ರನ್ ಗಳ ಗಡಿ ದಾಟಿದ ಮೇಲಿಯೂ 3ನೇ ದಿನ ಬ್ಯಾಟಿಂಗ್ ಮುಂದುವರೆಸಿತು. ಡಿಕ್ಲೇರ್ ಮಾಡಿ ಗೆಲ್ಲಲು ಪ್ರಯತ್ನಿಸದೆ ರಕ್ಶಣಾತ್ಮಕ ಆಟಕ್ಕೆ ಮೊರೆ ಹೋಗಿದ್ದು ಅಬಿಮಾನಿಗಳನ್ನು ಕೆರಳಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾದವು. ವಿನಯ್ ಏಕೆ ಹೀಗೆ ಮಾಡುತ್ತಿದ್ದಾರೆ? ಈ ರೀತಿಯ ಸಪ್ಪೆ ಆಟದಿಂದ ಕ್ರಿಕೆಟ್ ಸೊರಗಲಿದೆ ಎಂದೆಲ್ಲಾ ಜನರು ಹಿನ್ನುಣಿಕೆ ನೀಡಿದರು. ಈ ಪ್ರಸಂಗವನ್ನು ಗಮನಿಸಿದಾಗ ಅಚ್ಚರಿಯೊಂದಿಗೆ ಸಂತಸ ಕೂಡ ಆಗುತ್ತದೆ. ಐಪಿಎಲ್ ಅಬಿಮಾನಿಗಳಿರುವ ಕಾಲದಲ್ಲಿ ಹೀಗೆ ಒಂದು ರಣಜಿ ತಂಡದ ಪ್ರತಿಯೊಂದು ಪಂದ್ಯವನ್ನು ನೋಡುತ್ತಾ ಬೆಂಬಲಿಸುವ ಮಂದಿ ಇದ್ದಾರೆ ಎಂದರೆ ಅದು ನಮ್ಮ ವಿನಯ್ ಬಳಗದ ಅಳವಿಗೆ ಹಿಡಿದ ಕನ್ನಡಿಯೆಂದೇ ಹೇಳಬೇಕು. ಒಂದು ದಶಕದಿಂದ ಆ ಬಗೆಯ ಕೆಚ್ಚೆದೆಯ ಆಟವನ್ನು ಆಡುತ್ತಾ ಬಂದಿದೆ ರಾಜ್ಯ ತಂಡ.

2018/19 ರ ಟೂರ‍್ನಿ – ಕರ‍್ನಾಟಕ ತಂಡ

ಕಳೆದ ಸೋಮವಾರ ನವಂಬರ್ 5 ರಂದು 15 ಮಂದಿಯ ಕರ‍್ನಾಟಕ ತಂಡವನ್ನು ಆಯ್ಕೆ ಮಾಡಲಾಯಿತು. ವಿಜಯ್ ಹಜಾರೆ ಟ್ರೋಪಿ ನಡೆಯುವಾಗಲೇ, ತಂಡದ ಕಳಪೆ ಪ್ರದರ‍್ಶನದ ಸಲುವಾಗಿ ನಾಯಕತ್ವ ಕಳೆದುಕೊಂಡಿದ್ದ ವಿನಯ್ ಕುಮಾರ್ ಈ ಸಾಲಿನ ರಣಜಿ ಟೂರ‍್ನಿಗೆ ಮತ್ತೊಮ್ಮೆ ನಾಯಕರಾಗಿ ಆಯ್ಕೆ ಆಗಿದ್ದಾರೆ. ವಿನಯ್ ರನ್ನೇ ನಾಯಕರನ್ನಾಗಿ ನೇಮಿಸಿದ್ದು ಆಯ್ಕೆಗಾರರ ಸಮಯೋಚಿತ ಹಾಗೂ ಪ್ರಬುದ್ದ ತೀರ‍್ಮಾನ ಎಂದೇ ಹೇಳಬೇಕು. ಜೊತೆಗೆ ಕರುಣ್ ನಾಯರ್ ರನ್ನು ಮುಂದಿನ ನಾಯಕರನ್ನಾಗಿ ರೂಪಿಸಲು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ವಿನಯ್ ರ ಗರಡಿಯಲ್ಲಿ ಕರುಣ್ ನಾಯಕತ್ವದ ಪಟ್ಟುಗಳನ್ನು ಕಲಿತಶ್ಟೂ ಕರ‍್ನಾಟಕದ ಕ್ರಿಕೆಟ್ ಬವಿಶ್ಯಕ್ಕೆ ಒಳಿತು. ವಿನಯ್ ಕುಮಾರ್, Vinay Kumar

ತಂಡದ ಅನುಬವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಳ ಕ್ರಮಾಂಕದಲ್ಲಿ ವೇಗವಾಗಿ ರನ್ ಕಲೆ ಹಾಕುತ್ತಿದ್ದ ಸಿ.ಎಮ್ ಗೌತಮ್ ರನ್ನು ತಂಡದಿಂದ ಕೈಬಿಟ್ಟು ಆಯ್ಕೆಗಾರರು ಅಚ್ಚರಿ ಮೂಡಿಸಿದ್ದಾರೆ. ಇದು ಗೌತಮ್ ರ ಪಾಲಿಗೆ ದೊಡ್ಡ ಆಗಾತವೆಂದೇ ಹೇಳಬೇಕು. ಏಕೆಂದರೆ ಕಳೆದ ವರುಶದ ಕ್ವಾರ‍್ಟರ್ ಮತ್ತು ಸೆಮಿಪೈನಲ್ ನಲ್ಲಿ ಅವರು ಬಿರುಸಿನ 79 ಮತ್ತು 73 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದ್ದರು. ಆದರೂ ಎರಡನೇ ಪಂದ್ಯದಿಂದ ಸಮರ‍್ತ್ ಮತ್ತು ಕರುಣ್ ನ್ಯೂಜಿಲ್ಯಾಂಡ್ ಗೆ ತೆರಳಲಿದ್ದು ಅಲಬ್ಯರಾಗುವುದರಿಂದ ಗೌತಮ್ ತಂಡಕ್ಕೆ ಮರಳುವ ಅವಕಾಶ ಇದೆ.

ಇನ್ನುಳಿದಂತೆ ನಿಶ್ಚಲ್, ಶ್ರೇಯಸ್ ಗೋಪಾಲ್, ಅಬಿಮನ್ಯು ಮಿತುನ್, ಸುಚಿತ್, ರೋನಿತ್ ಮೋರೆ, ಬಿನ್ನಿ, ಪವನ್ ದೇಶಪಾಂಡೆ ಮತ್ತು ಕಳೆದ ವರುಶ ಹೆಚ್ಚುವರಿ ಕೀಪರ್ ಆಗಿ ಆಯ್ಕೆಯಾಗಿದ್ದ ಶರತ್ ಶ್ರೀನಿವಾಸ್ ತಂಡದಲ್ಲಿ ತಮ್ಮ ಸ್ತಾನವನ್ನು ಉಳಿಸಿಕೊಂಡಿದ್ದಾರೆ. ಮೊದಲ 4 ಪಂದ್ಯಗಳಿಗೆ ಕೆ.ಗೌತಮ್ ಕೂಡ ಇಲ್ಲದಿರುವುದರಿಂದ ಸುಚಿತ್ ರಿಗೆ ವರುಶಗಳ ಬಳಿಕ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವ ನಿರೀಕ್ಶೆ ಇದೆ. ಜೊತೆಗೆ ಸೊಗಸಾದ ಪಾದಾರ‍್ಪಣೆ ಪಂದ್ಯದ ನಂತರ 3 ವರುಶಗಳ ಕಾಲ ರಣಜಿ ತಂಡದಿಂದ ಹೊರಗುಳಿದಿದ್ದ ಬರವಸೆಯ ವೇಗದ ಬೌಲರ್ ಪ್ರಸಿದ್ ಕ್ರಿಶ್ಣ ತಂಡಕ್ಕೆ ಮರಳಿದ್ದಾರೆ. ಅವರಂತೆಯೇ ಒಳ್ಳೆ ಆರಂಬ ಪಡೆದು ನಂತರ ಪೆಟ್ಟು ಮಾಡಿಕೊಂಡು ವರ‍್ಶಗಳ ಕಾಲ ಹೊರಗುಳಿದ್ದಿದ್ದ ಹುಬ್ಬಳ್ಳಿಯ ಎಡಗೈ ಬ್ಯಾಟ್ಸ್ಮನ್ ಶಿಶಿರ್ ಬಾವನೆ ಜವಹಾರ‍್ಸ್ ಕ್ಲಬ್ ಪರವಾಗಿ ಸುಮಾರು 700 ರನ್ ಗಳನ್ನು ಬಾರಿಸಿ ಮತ್ತೊಮ್ಮೆ ತಂಡ ಸೇರಿದ್ದಾರೆ. ಸ್ವಸ್ತಿಕ್ ಯೂನಿಯನ್ ಪರ ಹೆಚ್ಚು ರನ್ ಗಳಿಸಿದ್ದ ಬ್ಯಾಟ್ಸ್ಮನ್ ಕೆ.ವಿ ಸಿದ್ದಾರ‍್ತ್ ಮತ್ತು ಮೌಂಟ್ ಜಾಯ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶರತ್ ಬಿ.ಆರ್ ತಂಡದಲ್ಲಿ ಎಡೆ ಪಡೆದ ಹೊಸ ಮುಕಗಳು. ಕೆ.ಎಲ್ ರಾಹುಲ್ ಈ ಬಾರಿ ರಾಜ್ಯದ ಪರ ಒಂದು ಪಂದ್ಯವನ್ನಾಡುವುದು ಅನುಮಾನವಾಗಿದೆ. ಲೀಗ್ ಹಂತದ ಬಹುತೇಕ ಪಂದ್ಯಗಳಿಗೆ ಸ್ಟಾರ್ ಆಟಗಾರರಾದ ಮಾಯಾಂಕ್ ಅಗರ‍್ವಾಲ್, ಸಮರ‍್ತ್, ಕರುಣ್, ಕೆ.ಗೌತಮ್, ಮನೀಶ್ ರ ಸೇವೆ ರಾಜ್ಯ ತಂಡಕ್ಕೆ ಸಿಗುವುದಿಲ್ಲವಾದ್ದರಿಂದ 2013/14 ರ ಸಾಲಿನಂತೆ ವಿನಯ್ ಮತ್ತೊಮ್ಮೆ ಯುವ ಆಟಗಾರರನ್ನು ನೆಚ್ಚಿಕೊಂಡೇ ತಂಡವನ್ನು ಮುನ್ನಡೆಸಬೇಕಾಗಿದೆ.

ಬಲಿಶ್ಟ ತಂಡಗಳ ಗಂಪಿನಲ್ಲಿ ಕರ‍್ನಾಟಕ ತಂಡ!

ವಿದರ‍್ಬ, ಮುಂಬೈ, ಮಹಾರಾಶ್ಟ್ರ, ಗುಜರಾತ್, ಬರೋಡ, ಸೌರಾಶ್ಟ್ರ, ರೈಲ್ವೇಸ್ ಮತ್ತು ಚತ್ತೀಸ್ಗಡ ತಂಡಗಳೊಟ್ಟಿಗೆ ಕರ‍್ನಾಟಕ ಎ ಗುಂಪಿನಲ್ಲಿದೆ. ಚತ್ತೀಸ್ಗಡ ಒಂದು ತಂಡವನ್ನು ಬಿಟ್ಟು ಇನ್ಯಾವ ತಂಡವನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಕೆಲವು ಇಂಗ್ಲಿಶ್ ಸುದ್ದಿಹಾಳೆಗಳಲ್ಲಿ ಎ ಗುಂಪನ್ನು ‘ಗ್ರೂಪ್ ಆಪ್ ಡೆತ್’ ಎಂದು ಬಣ್ಣಿಸಲಾಗಿದೆ. ಇದು ಅಕ್ಶರಶಹ ದಿಟ. ವಿಜಯ್ ಹಜಾರೆ ಟೂರ‍್ನಿಯ ಬೇಜವಬ್ದಾರಿ ಆಟವನ್ನು ಕರ‍್ನಾಟಕ ಮುಂದುವರಿಸಿದರೆ ಸೋಲು ಕಟ್ಟಿಟ್ಟ ಬುತ್ತಿ. ಹಾಗಾಗಿ ವಿನಯ್, ತಂಡದ ಕೋಚ್ ಗಳೊಟ್ಟಿಗೆ ಸಮಾಲೋಚನೆ ನಡಿಸಿ ತಂಡವನ್ನು ಮುನ್ನಡೆಸಿವ ತಂತ್ರವನ್ನು ರೂಪಿಸಬೇಕಿದೆ.

ಬೌಲಿಂಗ್ ಈಗಲೂ ಬಲಾಡ್ಯವಾಗಿಯೇ ಇದೆ. ಆದರೆ ಬ್ಯಾಟಿಂಗ್ ನಲ್ಲಿ ನಿಶ್ಚಲ್, ಬಾವನೆ ಮತ್ತು ಸಿದ್ದಾರ‍್ತ್ ಹಿರಿಯರ ಸ್ತಾನ ತುಂಬಬೇಕಿದೆ. ಈ ಯುವಕರೇ ಲೀಗ್ ಹಂತದ ಹೆಚ್ಚು ಪಂದ್ಯಗಳಲ್ಲಿ ಬ್ಯಾಟಿಂಗ್ ನೊಗ ಹೊರಬೇಕಾದ್ದರಿಂದ ಎಲ್ಲರ ಕಣ್ಣು ಇವರ ಆಟದ ಮೇಲೇ ಇರುವುದು. ಮಾಯಾಂಕ್, ಸಮರ‍್ತ್, ಕರುಣ್ ಮತ್ತು ಮನಿಶ್ ತಂಡಕ್ಕೆ ಮರಳುವವರೆಗೂ ತಂಡವನ್ನು ಟೂರ‍್ನಿಯಲ್ಲಿ ಉಳಿಸುವ ಹೊಣೆ ಈ ಯುವಕರ ಮೇಲಿದೆ. ವಿನಯ್ ಮಾರ‍್ಗದರ‍್ಶನದಲ್ಲಿ ಬಹಳಶ್ಟು ಹೊಸ ಹುಡುಗರು ರಾಜ್ಯದ ಪರ ಆಡಿ ನಂತರ ಬಾರತ ತಂಡಕ್ಕೆ ಆಯ್ಕೆ ಆಗಿರುವ ಎತ್ತುಗೆಗಳು ನಮ್ಮ ಕಣ್ಣ ಮುಂದೆ ಇರುವುದರಿಂದ ವಿನಯ್ ನಮ್ಮ ತಂಡವನ್ನು  ಮತ್ತೊಮ್ಮೆ ಗೆಲುವಿನ ದಡ ಸೇರಿಸಲಿದ್ದಾರೆ ಎಂದು ಕ್ರಿಕೆಟ್ ಅರಿತಿರುವ ಅಬಿಮಾನಿಗಳ ನಂಬಿಕೆ. ಹಾಗಾಗಿ ಕರ‍್ನಾಟಕ ಇಂದಿನಿಂದ ನಾಗ್ಪುರದಲ್ಲಿ ಶುರುವಾಗುವ ವಿದರ‍್ಬ ಎದುರಿನ ಪಂದ್ಯದಲ್ಲಿ ಗೆದ್ದು ಒಳ್ಳೆ ಆರಂಬ ಪಡೆಯುವುದರ ಮೂಲಕ 9ನೇ ರಣಜಿ ಟ್ರೋಪಿಯನ್ನು ಮುಡಿಗೇರಿಸಿಕೊಳ್ಳುವತ್ತ ದಾಪುಗಾಲು ಹಾಕಲಿ ಎಂದು ಹಾರೈಸೋಣ.

( ಚಿತ್ರಸೆಲೆ – espncricinfo.comnews18.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: