ಉದುರ(ರು) ಜುಣುಕ

– ಮಾನಸ ಎ.ಪಿ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಊಟಕ್ಕೆ ಜುಣುಕ ಮಾಡೇ ಮಾಡುತ್ತಾರೆ. ಹಲವಾರು ರೀತಿಯ ಜುಣಕ ಮಾಡುವುದಿದೆ – ತೆಳುವಾದ ಜುಣುಕ, ಗಟ್ಟಿ ಜುಣುಕ, ಜುಣುಕದ ವಡೆ ಹೀಗೆ. ಉತ್ತರ ಕರ‍್ನಾಟಕ ಮತ್ತು ಮಹಾರಾಶ್ಟ್ರದ ಕಡೆ ಮಾಡುವ ಉದುರ(ರು) ಜುಣಕ ಮಾಡುವ ಬಗೆಯನ್ನು ಈ ಬರಹದಲ್ಲಿ ತಿಳಿಸ ಬಯಸುತ್ತೇನೆ.

ಬೇಕಾಗುವ ಸಾಮಗ್ರಿಗಳು:

 • 1 ಕಪ್ – ಕಡಲೇಬೇಳೆಯ ಹಿಟ್ಟು
 • 4 – ಈರುಳ್ಳಿ
 • 2-3 ಚಮಚ – ಅಚ್ಚಕಾರದ ಪುಡಿ
 • 1 ಚಮಚ – ಜೀರಿಗೆ
 • 1 ಚಮಚ – ಅಜವಾನ
 • 1 ಹಿಡಿ – ಕರಿಬೇವು
 • ಚಿಟಿಕೆ ಅರಿಶಿಣ
 • ಉಪ್ಪು ರುಚಿಗೆ ತಕ್ಕಶ್ಟು
 • ಕಾಲು ಚಮಚ ಸಕ್ಕರೆ (ಬೇಕಿದ್ದರೆ)

ಮಾಡುವ ಬಗೆ:

 • ಕಡಲೇಬೇಳೆಯ ಹಿಟ್ಟು, ಅಚ್ಚಕಾರದಪುಡಿ, ಅರಿಶಿಣ, ಉಪ್ಪು, ಸಕ್ಕರೆ, ಅಜವಾನ ಒಂದು ಪಾತ್ರೆಗೆ ಹಾಕಿ, ಅದಕ್ಕೆ ತಕ್ಕಶ್ಟು ನೀರು ಬೆರಸಿ. ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ
 • ಗ್ಯಾಸ್ ಒಲೆ ಮೇಲೆ ಒಂದು ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ. ಒಗ್ಗರಣೆಗೆ ಜೀರಿಗೆ ಮಾತ್ರ ಹಾಕಬೇಕು
 • ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದು ಅದಕ್ಕೆ ಕರಿಬೇವು ಸೇರಿಸಿ
 • ನಂತರ ಮೊದಲೇ ಕಲಿಸಿಟ್ಟ ಕಡಲೆಬೇಳೆಯ ಹಿಟ್ಟನ್ನು ಬಾಣಲೆಗೆ ಸುರಿದು ಹಿಟ್ಟಲ್ಲಿರುವ ನೀರು ಹೋಗುವವರೆಗೂ ಕೆದಕುತ್ತಿರಬೇಕು(ಸೌಟು/ಹುಟ್ಟಿನಿಂದ ತಿರುವುತ್ತಾ ಇರಬೇಕು)
 • ಹಿಟ್ಟು ತಳ ಬಿಟ್ಟು ಉದುರಾಗುವವರೆಗೂ ಮುಂದುವರೆಸಿ

ಈಗ ರುಚಿಯಾದ ಉದುರು ಜುಣುಕ ಚಪಾತಿ, ಅನ್ನದ ಜೊತೆ ಸವಿಯಲು ಸಿದ್ದ. ಇದು ಎರಡು ಮೂರು ದಿನ ಇಟ್ಟರೂ ಕೆಡುವುದಿಲ್ಲ. ಊಟಕ್ಕೂ ಬಳಸಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: