ಸಕ್ಕರೆ ಅಚ್ಚಿನ ಗೌರಿ ಹುಣ್ಣಿಮೆ

– ಮಾನಸ ಎ.ಪಿ.

ಗೌರಿ ಹುಣ್ಣಿಮೆ,, Gouri Hunnime

ಸಕ್ಕರೆ ಅಚ್ಚನ್ನ(ಗೊಂಬೆ) ನೋಡಿದಾಗಲೆಲ್ಲ ನಾವು ಚಿಕ್ಕವರಿದ್ದಾಗ ಮಾರುಕಟ್ಟೆಯಿಂದ ತರುವುದರಲ್ಲಿಯೇ ಒಂದು ಕದ್ದು ತಿಂದಿದ್ದು, ಪಕ್ಕದ ಬೀದಿಯಲ್ಲಿ  ಪರಿಚಯಸ್ತರೇ ಸಕ್ಕರೆ ಗೊಂಬೆ ಮಾಡುವುದನ್ನು ಬೆರಗುಗಣ್ಣಿಂದ ನೋಡುತ್ತಾ ನಿಂತದ್ದು, ಅವರು ಒಂದು ಗೊಂಬೆಯನ್ನು ನಮ್ಮ ಕೈಯಲ್ಲಿಟ್ಟಾಗ ಅದರಂದಕೆ ಮಾರು ಹೋಗಿದ್ದು, ಅದನ್ನು ಸವಿದು ಸಂತಸ ಪಟ್ಟ ನೆನಪುಗಳು ಮರುಕಳಿಸುತ್ತವೆ. ಈಗ ಇದೆಲ್ಲಾ ಇತಿಹಾಸ ಎನ್ನಬಹುದೇನೋ!

ಉತ್ತರ ಕರ‍್ನಾಟಕದಲ್ಲಿ ಶೀಗಿ ಮತ್ತು ಗೌರಿ ಹುಣ್ಣಿಮೆ ದಿನ ಗೌರಿಯ ಹೆಸರಿನಲ್ಲಿ ಪಾರ‍್ವತಿಯನ್ನು ಆರಾದಿಸಿದರೆ, ಸಕ್ಕರೆ ಅಚ್ಚುಗಳಿಗೆ ಪೂಜೆಯಲ್ಲಿ ಆದ್ಯತೆ. ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳನ್ನು ಆರತಿಯ ಜೊತೆಗೆ ತಟ್ಟೆಯಲ್ಲಿಟ್ಟ ಪುಟ್ಟ ಪುಟ್ಟ ಹುಡುಗಿಯರು, ಮನೆಮನೆಗೆ ತೆರಳಿ ಗೌರಿಗೆ ಆರತಿ ಮಾಡಿ ಬರುತ್ತಾರೆ. ಅಲ್ಲದೇ ಬಣ್ಣಬಣ್ಣದ ಕೋಲುಗಳೊಂದಿಗೆ ಕೋಲಾಟದ ಹೆಜ್ಜೆ ಹಾಕುತ್ತ ಕೋಲಾಟದ ಹಾಡಾದ

ಗೌರಿ ಗೌರಿ ಗಾಣಾ ಗೌರಿ
ಮ್ಯಾಣಾ ಗೌರಿ
ಕುಂಕುಮ ಗೌರಿ
ಅರಿಶಿಣ ಗೌರಿ
ಅವರಿ ಅಂತ ಅಣ್ಣನ ಕೊಡ
ತೊಗರಿ ಅಂತ ತಮ್ಮನ ಕೊಡ

ಎಂದು ಹಾಡುತ್ತ ಆರತಿ ಬೆಳಗುವುದೇ ಒಂದು ಸಡಗರ. ಹಾಗೇ, ಒಬ್ಬ ಹುಡುಗನಿಗೆ ಹುಡುಗಿ ಗೊತ್ತು ಮಾಡಿದ್ದರೆ, ಮದುವೆಗೆ ಮೊದಲೇ ಗೌರಿ ಹುಣ್ಣಿಮೆ ಬಂದರೆ ಗಂಡಿನವರು ಮದುವೆ ಹೆಣ್ಣಿಗೆ ಸಕ್ಕರೆ ಗೊಂಬೆ, ಸೀರೆ, ದಂಡಿ ತಂದು ಹುಡುಗಿಗೆ ಆರತಿ ಮಾಡ್ತಾರೆ. ಆರತಿ ಮಾಡಲು ಓಣಿಯಲ್ಲಿನ ಮುತ್ತೈದೆಯರನು ಕರೆದಾಗ ಅವರಿಗೊಂದು ಸಕ್ಕರೆ ಗೊಂಬೆ ಕೊಡುವುದು ವಾಡಿಕೆ.

ಪುರಾಣಗಳಲ್ಲಿ ಈ ಹುಣ್ಣಿಮೆ:

ಈ ದಿನವೇ ವಿಶ್ಣು ಮತ್ಸ್ಯಾವತಾರ ತಾಳಿದ್ದು ಎಂದು ಪುರಾಣಗಳು ಹೇಳುತ್ತವೆ. ಹಾಗೇ ಈ ದಿನವೇ ಪರಶಿವನು ತ್ರಿಪುರಗಳನ್ನು ನಾಶಮಾಡಿದ್ದು ಎಂಬ ನಂಬಿಕೆಯೂ ಇದೆ. ಅಸುರನ ಸಂಹಾರ ಮಾಡಿ ಲೋಕಕಂಟಕವನ್ನು ದೂರಮಾಡಿದ ಹರಸಾಹಸವನ್ನೂ ಕ್ರುತಗ್ನತೆಯಿಂದ ಸ್ಮರಿಸಿ ಸಂಬ್ರಮದಿಂದ ಆಚರಿಸುವ ದಿನವಿದು.

ಉತ್ತರ ಕರ‍್ನಾಟಕದ ಕಡೆ:

ಕಾರ‍್ತಿಕ ದ್ವಾದಶಿಯ ದಿನ ಮಣ್ಣಿನ ಗೌರಿ ಮಾಡಿ ಅದನ್ನಿಟ್ಟು ಪ್ರತಿನಿತ್ಯ ಪೂಜಿಸುವುದು ವಾಡಿಕೆ. ನದಿ ತೀರಗಳಿಗೆ ತೆರಳಿ ಜಳಕ ಮತ್ತು ದೀಪದಾನಗಳನ್ನು ಮಾಡುವ ಪದ್ದತಿಯೂ ಕೂಡ ಇದೆ. ಹುಣ್ಣಿಮೆಯ ಬೆಳಗಿನ ಜಾವ ನಸುಕಿನಲ್ಲಿಯೇ ಅಂದರೆ ಬೆಳಕಾಗುವ ಮೊದಲೇ ಗೌರಿಗೆ ದೀಪ ಬೆಳಗಬೇಕು. ಹುಣ್ಣಿಮೆ ಮುಗಿದ ನಂತರ ಆ ಮೂರ‍್ತಿಯನ್ನು ನದಿ-ಕೆರೆ-ಬಾವಿಗಳಲ್ಲಿ ಒಂದೊಳ್ಳೆ ದಿನ ನೋಡಿ ವಿಸರ‍್ಜಿಸುತ್ತಾರೆ.

ಈಗ ಮಣ್ಣಿನ ಮೂರ‍್ತಿಗಳ ಜಾಗವನ್ನು ಪ್ಲಾಸ್ಟರ್ ಮೂರ‍್ತಿಗಳು ಅಲಂಕರಿಸಿವೆ. ಮೂರ‍್ತಿ ಇರದಿದ್ದರೂ ಗೌರಿಯ ಪೋಟೋ ಇಟ್ಟು ಪೂಜೆ ಮಾಡುವರು. ನದಿ ಕೆರೆಗಳು ಬತ್ತಿ ಹೋಗಿದ್ದರೆ, ಮನೆಯಲ್ಲಿಯೇ ದೊಡ್ಡ ಬುಟ್ಟಿಗಳಲ್ಲಿ ನೀರು ತುಂಬಿಸಿ ಕಾರ‍್ತಿಕ ದೀಪ ಬಿಡುವುದು ಪರ‍್ಯಾಯವಾಗಿದೆ. ಹಳ್ಳಿಗಳ ಈ ಸೊಗಡು, ಸಂಪ್ರದಾಯ ತುಂಬಾ ಚೆಂದ!

( ಚಿತ್ರ ಸೆಲೆ: uksuddi.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: