ನನ್ನ ಅನಿಸಿಕೆಯಲ್ಲಿ ‘ದೇವರು’

– ಬರತ್ ರಾಜ್. ಕೆ. ಪೆರ‍್ಡೂರು.

ಅರಿವು, ದ್ಯಾನ, Enlightenment

“ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ‌
ಇಲ್ಲೆ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ”

ರಾಶ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆ ಕೇಳುತ್ತಿದ್ದಾಗ ಮನಸ್ಸು ನೆನಪಿನ ಹೊಳೆಯಲ್ಲಿ ಬಾಲ್ಯದ ದಿನಗಳೆಡೆಗೆ ಕಾಲುಜಾರಿ ಬಿದ್ದಂತೆ ಬಿದ್ದು ಕೊಚ್ಚಿಕೊಂಡು ಹೋಯಿತು. ದೇವರು ಬದುಕಿನುದ್ದಕ್ಕೂ ನಮ್ಮ ಮನೆ ಮನಸ್ಸನ್ನು ಆಳುವ ಶಕ್ತಿ. ಬಯದಿಂದಲೊ, ಬಕ್ತಿಯಿಂದಲೊ, ದೈರ‍್ಯಗೆಟ್ಟ ಮನಸ್ಸಿನ ಸಾಂತ್ವನಕ್ಕೊ, ಮೌಡ್ಯದಿಂದಲೊ ದೇವರನ್ನು ಸ್ಮರಿಸದ ದಿನವಿಲ್ಲ, ಕ್ಶಣವೂ ಇಲ್ಲ.

ನಾನು ಕೂಡ ದೇವರಿಂದ ಪ್ರಬಾವಿತ. ದೇವರು ಎಂದಾಗ ಶತ್ರುತ್ವವೂ ದೂರಾಗಿ ಒಂದಾಗುವ ಕಾಲ ಒಂದಿತ್ತು. ದೇವರ ಪ್ರಸಾದಕ್ಕೂ ವಿಶ ಹಾಕುವ ಕಾಲ ಈಗಿದೆ. ದೇವರೂ ಕಾಲಕ್ರಮೇಣ ಜನಮಾನಸದ ಬದಲಾದ ದ್ರುಶ್ಟಿಕೋನಗಳ ನಡುವೆ ತನ್ನ ಪ್ರಬಾವ ಬೀರುವಲ್ಲಿ ಸೋಲುತ್ತಿದ್ದಾನೋ..ಸೋತಂತೆ ನಟಿಸಿ ಕಲ್ಲಾದನೊ…ಮೊದಲಿಂದ ಆತ ಕಲ್ಲೇ ಆಗಿದ್ದನೊ ಇದು ಅರಿಯದ, ಅರಿಯಲಾಗದ ಯಕ್ಶಪ್ರಶ್ನೆ. ಆದರೂ ಬಾಲ್ಯದಲ್ಲಿ ನಡೆದ ಒಂದು ಗಟನೆ ನನಗೆ ದೇವರನ್ನು ತೋರಿಸಿತು.

ಅದು 1994ರ ಸೆಪ್ಟಂಬರ್ ತಿಂಗಳಿರಬಹುದು. ಕೊಡಗಿನ ಸೋಮವಾರ ಪೇಟೆಯ ಐಗೂರು ಗ್ರಾಮಕ್ಕೆ ಎರಡು ತಿಂಗಳ ಹಿಂದಶ್ಟೆ ನನ್ನ ತಂದೆಯವರಿಗೆ ವರ‍್ಗವಾಗಿದ್ದರಿಂದ ಚಿಕ್ಕಮಗಳೂರಿನ ಕೊಪ್ಪದಿಂದ ನಮ್ಮ ವಾಸ್ತವ್ಯ ಸ್ತಳಾಂತರವಾಗಿತ್ತು‌. ಊರಿಗೆ ಕಾಲಿಟ್ಟಾಗ ಸುಂದರವಾದ ಪ್ರಕ್ರುತಿ ಸೌಂದರ‍್ಯದಿಂದ ಮನ ಪುಳಕಗೊಂಡಿತ್ತು. ಎಡೆಬಿಡದೆ ಸುರಿಯುವ ಮಳೆ , ಹಸಿರು ಗುಡ್ಡ, ಕಾಪಿತೋಟದ ಗಮ್ಮತ್ತು ಮತ್ತು ತರಿಸುತಿತ್ತು.

ಶಾಲೆಗೆ ಹೋಗೊ ದಾರಿಯಲ್ಲಿ ಒಂದು ಹೊಳೆಯಿತ್ತು‌. ಈ ನದಿ ಗ್ರಾಮದ ಸೌಂದರ‍್ಯಕ್ಕೆ ಕಳಶವಿಟ್ಟಂತಿತ್ತು. ಕಲ್ಲುಬಂಡೆಗಳ ನಡುವೆ ನುಸುಳಿ ಹರಿಯುವ ಚೋರನ ಹೊಳೆ ಮನಸೂರೆಗೊಳ್ಳುವಂತದ್ದು. ಈ ಹೊಳೆಗೆ ಅಡ್ಡಲಾಗಿ ಕಟ್ಟಿರುವ ಬ್ರಿಟೀಶರ ಕಾಲದ ಸೇತುವೆಯಿಂದ ಈ ಗ್ರಾಮ “ಕಬ್ಬಿಣ ಸೇತುವೆ” ಎಂಬ ಹೆಸರಿನಿಂದಲೆ ಪ್ರಸಿದ್ದವಾಗಿದೆ. ಪ್ರತಿದಿನ ಈ ಸೇತುವೆ ಮೂಲಕವೆ ಶಾಲೆಗೆ ಹೋಗುತ್ತಿದ್ದೆವು. ಬೇಸಿಗೆಯಲ್ಲಿ ಹೊಳೆಯಲ್ಲಿ ನೀರು ಬತ್ತುತ್ತಿದ್ದರಿಂದ ಮಕ್ಕಳು ಹೊಳೆ ದಾಟಿದರೆ 2 ಕಿ.ಮೀ ನಡಿಗೆ ಕಡಿಮೆ ಮಾಡಿಕೊಂಡು ಬೇಗ ಮನೆ ಸೇರುತ್ತಿದ್ದರು.

ನಾನು 4ನೆ ತರಗತಿಯಲ್ಲಿ ಓದುತ್ತಿದ್ದೆ. ನನ್ನನ್ನು ಊರಿಗೆ ಹೊಸದಾಗಿ ಬಂದದ್ದರಿಂದ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಲು ಪರಿಚಯಸ್ತರ ಮಗಳು ಚಿತ್ರ ಎಂಬ 7ನೆ ತರಗತಿಯಲ್ಲಿ ಓದುತ್ತಿದ್ದಾಕೆ ಬರುತ್ತಿದ್ದಳು. ಮಳೆ ಕೆಲದಿನಗಳಿಂದ ತನ್ನ ಆರ‍್ಬಟ ಕಡಿಮೆ ಮಾಡಿತ್ತು. ಸೂರ‍್ಯ ಆಗಸದಿ ನಗುತ್ತಿದ್ದ. ಹಾಗೆಯೇ ಚೋರನ ಹೊಳೆಯು ಸ್ವಲ್ಪ ಶಾಂತಚಿತ್ತದಿಂದ ಹರಿಯುತ್ತಿತ್ತು. ನೀರು ತಿಳಿಯಾಗಿ ಪಾಚಿಗಟ್ಟಿದ್ದ ಕಲ್ಲುಗಳ ಮೇಲೆ ಸ್ಪಟಿಕದಂತೆ ಹೊಳೆಯುತ್ತ ನಗುತ್ತ ಕಣ್ಮನ ಸೆಳೆಯುತಿತ್ತು.

ಆ ದಿನ ಶನಿವಾರವಿರಬೇಕು. ಅದೇನು ಅನಿಸಿತೊ ಚಿತ್ರ ಮದ್ಯಾಹ್ನ ಶಾಲೆ ಬಿಟ್ಟಾಗ ಹೊಳೆ ದಾಟಿ ಹೋಗುವ, ಬೇಗ ಮನೆ ಸೇರಬಹುದು ಅಂದಳು. ನನಗೂ ನೀರಿನಲ್ಲಿ ಆಟವಾಡುತ್ತ ಹೋಗುವ ಸಂತಸದಲ್ಲಿ ಒಪ್ಪಿಕೊಂಡೆ. ಕಾಲಿನ ಬೂಟು ಮತ್ತು ಕಾಲು ಚೀಲ ಕೈಯಲ್ಲಿ ಹಿಡಿದು ಶಾಲಾ ಚೀಲದೊಂದಿಗೆ ಕಲ್ಲಿನಿಂದ ಕಲ್ಲಿಗೆ ಹಾರುತ್ತ ಇನ್ನೇನೂ ಕೆಲವೆ ಹೆಜ್ಜೆಯಲ್ಲಿ ಆ ತೀರ ತಲುಪ ಬೇಕು ಅನ್ನುವಶ್ಟರಲ್ಲಿ ಅನಾಹುತ ಸಂಬವಿಸಿಯೇ ಬಿಟ್ಟಿತ್ತು.

ನನ್ನ ಕೈ ಹಿಡಿದು ಮುಂದೆ ನಡೆಯುತ್ತಿದ್ದಳು ಚಿತ್ರ. ನಾನು ಅವಳನ್ನು ಹಿಂಬಾಲಿಸುತ್ತಿದ್ದೆ. ನಾನು ಕಾಲಿಟ್ಟ ಕಲ್ಲು ಪಾಚಿ ಗಟ್ಟಿದ್ದರಿಂದ ಕಾಲು ಜಾರಿ ನೀರಿಗೆ ಬಿದ್ದೆ, ಹಟಾತ್ ಆಗಿ ನಡೆದ ಗಟನೆಯಿಂದ ಹೆದರಿದ ಚಿತ್ರ ತಾನು ನೀರಿಗೆ ಬಿದ್ದಳು. ನೋಡಲು ಶಾಂತವಾಗಿದ್ದ ಹೊಳೆ ತನ್ನೊಡಲಿನ ರೋಶ ನಮ್ಮ ಮೇಲೆ ತೋರಲಾರಂಬಿಸಿತು. ನಾವು ಮುಳುಗುತ್ತಾ ತೇಲುತ್ತಾ ಬಂಡೆಗಳ ನಡುವೆ ಇನ್ನೇನೋ ಜೀವ ಹೋಗಿಯೇ ಬಿಡ್ತು ಅಂತ ಕಿರುಚುತ್ತಿದ್ದೆವು. ಅತ್ತ ದಂಡೆಯಲ್ಲಿ ಶಾಲಾ ಹುಡುಗರು ಕೆಲವರು ಕೇಕೆ ಹಾಕಿದರೆ, ಕೆಲವರು ಹೆದರಿ ದೊಡ್ಡವರನ್ನು ಕರೆಯುತ್ತಿದ್ದರು. ದಡದಲ್ಲಿ ಜನಸ್ತೋಮವೇ ಸೇರಿತ್ತು. ಆದರೂ ಕಾಪಾಡಲು ಯಾರು ಮುಂದೆ ಬರಲಿಲ್ಲ.

ಜೀವ ಹೋಗೇ ಬಿಟ್ಟಿತೇನೊ ಅನ್ನುವಾಗ ಆತ ಬಂದ. ನನ್ನ ಪಾಲಿಗೆ ಅವನೇ ಬಗವಂತ. ನೀರಿಗಿಳಿದು ದೊಡ್ಡ ಕೋಲನ್ನು ನನ್ನೆಡೆಗೆ ಚಾಚಿ ಹಿಡಿಯುವಂತೆ ಹೇಳಿ ನನ್ನನ್ನು ದಡಕ್ಕೆ ತಂದ. ಹಾಗೆ ಚಿತ್ರಳನ್ನು ದಡ ಸೇರಿಸಿದ. ಪ್ರತಮ ಚಿಕಿತ್ಸೆಯ ನಂತರ ತನ್ನ ಸೈಕಲ್ಲಿನಲಿ ಕೂರಿಸಿ, ನನ್ನ ಒದ್ದೆಯಾದ ಚೀಲದೊಂದಿಗೆ ಮನೆಗೆ ಕರೆತಂದ. ಮನೆಯಲ್ಲಿ ಅಮ್ಮ, ಅಪ್ಪ ಗಾಬರಿಯಿಂದ ಮೂಕರಾಗಿದ್ದರು. ನಡೆದ ಗಟನೆ ವಿವರಿಸಿದಾಗ ಅವನಿಗೆ ದನ್ಯವಾದ ತಿಳಿಸಿ ಕಳುಹಿಸಿದರು‌. ಅಂದಿನಿಂದ ಆ ಹುಡುಗನೆಂದರೆ ಏನೋ ಗೌರವ, ಅಬಿಮಾನ ನನ್ನಲ್ಲಿ. ಆತ ಕೂಲಿ ಕಾರ‍್ಮಿಕ ಗಣೇಶ್ ರವರ ಮಗ ಬಾಲಕ್ರಿಶ್ಣ. ನನ್ನ ಪಾಲಿನ ಬಗವಂತ.

ದೇವರು ಇದ್ದಾನೋ, ಇಲ್ಲವೋ ಯೋಚಿಸುವುದು ಅಪ್ರಬುದ್ದತೆ ಎಂಬುದು ನನ್ನ ಅನಿಸಿಕೆ. ಸಿದ್ದಾರ‍್ತ ಬುದ್ದನಾಗಲು ಗ್ನಾನೋದಯವಾದಾಗ, ಆತ ದೇವರನ್ನು ಕಾಣಲಿಲ್ಲ. ಬದಲಾಗಿ ಆತ್ಮ ಸಾಕ್ಶಾತ್ಕಾರ ಮಾಡಿಕೊಂಡ. ನಮ್ಮ ಯೋಚನೆ, ಆತ್ಮಶಕ್ತಿ ನಮಗೆ ದೇವರ ಇರುವಿಕೆಯಂತೆ ಗೋಚರಿಸುತ್ತದೆ. ನಾವು ಸಾದಿಸುವ ಚಲದಿಂದ ಹೋರಾಡಿದಾಗ ನಮ್ಮ ಗೆಲುವಿಗೆ ದಾರಿ ತೋರುವವನೆ ನಮ್ಮ ಪಾಲಿನ ಬಗವಂತ. ಆ ಬಗವಂತ ಮತ್ತಾರೂ ಅಲ್ಲ, ನಮ್ಮ ಮನಸ್ಸಿನ ದ್ರುಡತೆ ಮತ್ತು ನಂಬಿಕೆ. ನಂಬಿಕೆಯೇ ದೇವರು. ಅಂದು ನಾನು ಬದುಕುವೆನೆಂಬ ನಂಬಿಕೆ ಬಾಲಕ್ರಿಶ್ಣನಿಂದ ನನ್ನ ಮನದಲ್ಲಿ ಮೂಡಿತ್ತು, ನನ್ನ ಪಾಲಿನ ದೇವರು ಬಾಲಕ್ರಿಶ್ಣನಾದ.

ದೇವರನ್ನು ಗುಡಿ, ಕಾಡು, ಮೇಡಲ್ಲಿ ಹುಡುಕುವವರು ನಮ್ಮ ನಡುವೆ ಇದ್ದಾರೆ. ದೇವರನ್ನು ನಮ್ಮೊಳಗೆ ಮತ್ತು ಮನುಜರಲ್ಲಿಅಮೂರ‍್ತ ಸ್ವರೂಪದಲ್ಲೂ ಹಾಗೂ  ಪ್ರಾಣಿ-ಪಕ್ಶಿಗಳಲ್ಲಿ ಮೂರ‍್ತ ಸ್ವರೂಪದಲ್ಲೂ ನೋಡಿ ನಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದರೆ, ಮೋಕ್ಶದೆಡೆಗೆ ಹೆಜ್ಜೆ ಇಡಬಹುದು. ನಾಡನ್ನು ದೇವಲೋಕವಾಗಿಸಬಹುದು!

ಚಿತ್ರ ಸೆಲೆ:  mindfulmuscle.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: